
ದೊಡ್ಡಬಳ್ಳಾಪುರ: ಶಾಸಕಿ ನಯನಾ ಮೋಟಮ್ಮ ಅವರು ಮಂಗಳವಾರ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ, ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು, ಪಕ್ಷದ ವರಿಷ್ಠರಿಗೆ ತಮ್ಮ ಮೇಲೆ ನಂಬಿಕೆ ಇದ್ದು ಸಚಿವ ಸ್ಥಾನ ನೀಡಿದರೆ ಸಂತೋಷವಾಗುತ್ತದೆ ಎಂದು ಹೇಳಿದರು.
ಹೊಸ ಮುಖಗಳಿಗೆ ಅವಕಾಶ ನೀಡಿದರೆ ಸರ್ಕಾರದಲ್ಲಿ ಹೊಸ ಚಾಪು ಮೂಡಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಾನು ಯಾವುದೇ ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡುತ್ತಿಲ್ಲ. ಮಹಿಳೆಯರಿಗೆ ಅವಕಾಶ ನೀಡಿದರೆ ಸಚಿವೆಯಾಗಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ತೋರಿಸುತ್ತೇನೆ ಎಂದು ನಯನ ಮೋಟಮ್ಮ ಹೇಳಿದರು.
ಸದ್ಯದಲ್ಲೇ ಸಚಿವರ ಪಟ್ಟಿ ಪ್ರಕಟವಾಗುವ ವಿಶ್ವಾಸವಿದೆ. ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಇನ್ನೂ ಸುಮಾರು ಇಪ್ಪತ್ತು ಇಲಾಖೆಗಳ ಜವಾಬ್ದಾರಿ ಹಂಚಿಕೆ ಬಾಕಿಯಿರುವುದರಿಂದ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದರು.