
ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಅವರ ಕಾರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೆಂಬಲಿಗರು ಮುತ್ತಿಗೆ ಹಾಕಿದ ಘಟನೆ ಶನಿವಾರ ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದ ಬಳಿ ನಡೆದಿದೆ.
ಕಾರಿನಲ್ಲಿ ಸನ್ರೂಫ್ ಮೂಲಕ ಹೊರಬಂದು ಬೆಂಬಲಿಗರತ್ತ ಕೈಬೀಸುತ್ತಿದ್ದ ವೇಳೆ ಕೆಲವರು ಪ್ರತಿಭಟನೆ ನಡೆಸಿ, ಶಾಸಕನ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಕೆಲ ಬೆಂಬಲಿಗರು ‘ಹುಚ್ಚ, ಹುಚ್ಚ’ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.

ಪ್ರತಿಭಟನಾಕಾರರ ವರ್ತನೆಗೆ ಪ್ರತಿಕ್ರಿಯಿಸಿದ ಶಾಸಕ ಪ್ರದೀಪ್ ಈಶ್ವರ್ ಅವರು ಕಾರಿನ ಮೇಲೆಯೇ ನಿಂತು ಮೀಸೆ ತಿರುವಿ ತೊಡೆ ತಟ್ಟುವ ಮೂಲಕ ಸವಾಲಿನ ಭಂಗಿ ಪ್ರದರ್ಶಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಮೆರವಣಿಗೆ ಸಾಗುತ್ತಿದ್ದ ವೇಳೆ ಕೆಲವರು ಶಾಸಕನ ಕಾರಿನತ್ತ ಚಪ್ಪಲಿ ಎಸೆದಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಒದಗಿಸಿದರು. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.