ವೈದ್ಯರು, ಸಿಬ್ಬಂದಿ ಕೊರತೆಯಿಂದ ಹೈನುಗಾರರಿಗೆ ಸಂಕಷ್ಟ

ಕೃಷಿ ಹಾಗೂ ಹೈನುಗಾರಿಕೆಯನ್ನೇ ಪ್ರಮುಖ ಜೀವನಾಧಾರವಾಗಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಶುಪಾಲನಾ ಇಲಾಖೆ ಸಿಬ್ಬಂದಿ ಕೊರತೆಯಿಂದಾಗಿ ತತ್ತರಿಸುತ್ತಿದೆ. ಹಿರಿಯ ಪಶುವೈದ್ಯ ನಿರೀಕ್ಷಕರು, ಪಶುವೈದ್ಯ ನಿರೀಕ್ಷಕರು, ಕಿರಿಯ ಪಶುವೈದ್ಯಾಧಿಕಾರಿಗಳು ಹಾಗೂ ಡಿ-ಗ್ರೂಪ್ ನೌಕರರ ಹುದ್ದೆಗಳು ದೊಡ್ಡ ಪ್ರಮಾಣದಲ್ಲಿ ಖಾಲಿ ಉಳಿದಿದ್ದು, ಇರುವ ಬೆರಳೆಣಿಕೆಯ ಸಿಬ್ಬಂದಿಯ ಮೇಲೆಯೇ ಇಡೀ ಜಿಲ್ಲೆಯ ಜವಾಬ್ದಾರಿ ಬಿದ್ದಿದೆ.

ಜಿಲ್ಲೆಯ ನಾಲ್ಕೂ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಸಾವಿರಾರು ರೈತರು ಹೈನುಗಾರಿಕೆ, ಕುರಿ ಹಾಗೂ ಮೇಕೆ ಸಾಕಣೆಯನ್ನೇ ಅವಲಂಬಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಪಶುವೈದ್ಯಕೀಯ ಸಿಬ್ಬಂದಿ ಕೊರತೆ ನೇರವಾಗಿ ರೈತರ ಮೇಲೆ ಪರಿಣಾಮ ಬೀರುತ್ತಿದ್ದು, ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದ ಸ್ಥಿತಿ ನಿರ್ಮಾಣವಾಗಿದೆ.

ಶೇ.50ಕ್ಕೂ ಅಧಿಕ ಹುದ್ದೆಗಳು ಖಾಲಿ: ಜಿಲ್ಲಾ ಪಶುಪಾಲನಾ ಇಲಾಖೆಯಲ್ಲಿ 58 ಹಿರಿಯ ಪಶುವೈದ್ಯ ನಿರೀಕ್ಷಕರ ಹುದ್ದೆಗಳ ಪೈಕಿ 46 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, 12 ಹುದ್ದೆಗಳು ಖಾಲಿ ಇವೆ. 32 ಪಶುವೈದ್ಯ ನಿರೀಕ್ಷಕರ ಹುದ್ದೆಗಳ ಪೈಕಿ 14 ಹುದ್ದೆಗಳು ಖಾಲಿ ಉಳಿದಿವೆ. ಅದೇ ರೀತಿ 62 ಕಿರಿಯ ಪಶುವೈದ್ಯಾಧಿಕಾರಿ ಹುದ್ದೆಗಳಲ್ಲಿ 30 ಹುದ್ದೆಗಳು ಖಾಲಿ ಇವೆ. ಇಲಾಖೆಯ ಕೆಳಹಂತದ ಪ್ರಮುಖ ಸಿಬ್ಬಂದಿಯಾದ ಡಿ-ಗ್ರೂಪ್ ನೌಕರರ ಕೊರತೆ ಮತ್ತಷ್ಟು ಗಂಭೀರವಾಗಿದೆ. 158 ಹುದ್ದೆಗಳ ಪೈಕಿ ಕೇವಲ 23 ಮಂದಿ ಮಾತ್ರ ಕರ್ತವ್ಯದಲ್ಲಿದ್ದು, ಬರೋಬ್ಬರಿ 135 ಹುದ್ದೆಗಳು ಖಾಲಿ ಇವೆ. ವೈದ್ಯಕೀಯ ಸಿಬ್ಬಂದಿ ಮಾತ್ರವಲ್ಲದೆ, ಸಹಾಯಕ ಸಿಬ್ಬಂದಿಯ ಕೊರತೆಯೂ ಇಲಾಖೆಯ ದೈನಂದಿನ ಕಾರ್ಯನಿರ್ವಹಣೆಗೆ ತೀವ್ರ ಹೊಡೆತ ನೀಡುತ್ತಿದೆ.

1.41 ಲಕ್ಷ ಜಾನುವಾರುಗಳಿಗೆ ಬೆರಳೆಣಿಕೆಯ ವೈದ್ಯರು: ಕೃಷಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದರೂ, ರೈತರ ಆರ್ಥಿಕತೆಯಲ್ಲಿ ಹೈನುಗಾರಿಕೆಯ ಪಾತ್ರವೂ ಮಹತ್ವದ್ದಾಗಿದೆ. ಹಸು, ಎಮ್ಮೆ ಸೇರಿದಂತೆ ಕುರಿ-ಮೇಕೆ ಸಾಕಾಣಿಕೆಯನ್ನೂ ಗ್ರಾಮೀಣ ಭಾಗದ ರೈತರು ಅವಲಂಬಿಸಿದ್ದಾರೆ. ಪ್ರಸಕ್ತ ಜಾನುವಾರು ಗಣತಿಯ ಅಂದಾಜಿನಂತೆ ಜಿಲ್ಲೆಯಲ್ಲಿ 1,41,370 ಜಾನುವಾರುಗಳಿದ್ದು, ಸುಮಾರು 2,72,367 ಕುರಿ ಹಾಗೂ ಮೇಕೆಗಳಿವೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಬಹುಪಾಲು ರೈತರು ಕೃಷಿಯ ಜೊತೆಗೆ ಹೈನುಗಾರಿಕೆ ಹಾಗೂ ಕುರಿ-ಮೇಕೆ ಸಾಕಾಣಿಕೆಯನ್ನು ಅವಲಂಬಿಸಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದ ಜಾನುವಾರು ಸಂಪತ್ತಿರುವ ಜಿಲ್ಲೆಯಲ್ಲಿ ಪಶುವೈದ್ಯ ಸಿಬ್ಬಂದಿಯ ಕೊರತೆ ದಿನದಿಂದ ದಿನಕ್ಕೆ ಸಮಸ್ಯೆಯನ್ನು ಉಲ್ಬಣಗೊಳಿಸುತ್ತಿದೆ.

ಅಧಿಕಾರಿಗಳಿಗೆ ‘ಮುಳ್ಳಿನ ಮೇಲಿನ ನಡಿಗೆ’: ನಾಲ್ಕೂ ತಾಲೂಕುಗಳ ವ್ಯಾಪ್ತಿಯಲ್ಲಿರುವ ಪಶುಚಿಕಿತ್ಸಾ ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ತುರ್ತು ಕರೆಗಳಿಗೆ ಇರುವ ಸಿಬ್ಬಂದಿಯೇ ಸ್ಪಂದಿಸಬೇಕಾಗಿದೆ. ಪರಿಣಾಮವಾಗಿ ಒಬ್ಬ ವೈದ್ಯಾಧಿಕಾರಿ ಹಲವು ಕೇಂದ್ರಗಳ ಜವಾಬ್ದಾರಿ ನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ರಜೆ ಪಡೆಯುವುದಕ್ಕೂ ಕಷ್ಟವಾಗುವಷ್ಟು ಕೆಲಸದ ಒತ್ತಡವಿದ್ದು, ಸರ್ಕಾರಿ ರಜೆ ದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಇಲಾಖೆಯ ವಿವಿಧ ಸರ್ಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಕೂಡ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

ವೈದ್ಯರ ದಾರಿ ಕಾಯುವುದೇ ರೈತರ ಕೆಲಸ!: ಗ್ರಾಮೀಣ ಭಾಗದ ಹಲವು ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಒಬ್ಬ ವೈದ್ಯಾಧಿಕಾರಿ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ವೈದ್ಯರು ಜಾನುವಾರುಗಳ ತುರ್ತು ಚಿಕಿತ್ಸೆಗೆ ಗ್ರಾಮಗಳಿಗೆ ತೆರಳಿದ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ಬಾಗಿಲು ಮುಚ್ಚುವಂತಾಗುತ್ತದೆ. ಆಸ್ಪತ್ರೆಗೆ ಜಾನುವಾರುಗಳನ್ನು ಕರೆತರುವ ರೈತರು ವೈದ್ಯರಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಒಂದೇ ದಿನ ಹಲವು ಗ್ರಾಮಗಳಿಂದ ತುರ್ತು ಕರೆಗಳು ಬಂದಾಗ ಎಲ್ಲೆಡೆ ಒಂದೇ ಸಮಯದಲ್ಲಿ ತೆರಳಿ ಚಿಕಿತ್ಸೆ ನೀಡುವುದು ಸಾಧ್ಯವಾಗುತ್ತಿಲ್ಲ.

ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಜಾನುವಾರುಗಳ ಆರೋಗ್ಯ ಸ್ಥಿತಿ ಹದಗೆಡುವ ಪ್ರಕರಣಗಳೂ ಎದುರಾಗುತ್ತಿದ್ದು, ಇದರಿಂದ ರೈತರು ಹಾಗೂ ಪಶುವೈದ್ಯ ಸಿಬ್ಬಂದಿ ನಡುವೆ ಅಸಮಾಧಾನ ಉಂಟಾಗುತ್ತಿದೆ.

ಸಿಬ್ಬಂದಿ ಕೊರತೆಗೆ ನೇಮಕಾತಿ ವಿಳಂಬವೇ ಕಾರಣ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾತ್ರವಲ್ಲ, ರಾಜ್ಯದ ಬಹುತೇಕ ಜಿಲ್ಲೆಗಳ ಪಶುಪಾಲನಾ ಇಲಾಖೆಯಲ್ಲಿಯೂ ಸಿಬ್ಬಂದಿ ಕೊರತೆಯಿದೆ. ಹಲವು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿರುವುದು ಪ್ರಮುಖ ಕಾರಣ. ಇತ್ತೀಚಿನ ನೇಮಕಾತಿ ಅಕ್ರಮಗಳ ಆರೋಪಗಳು ಹಾಗೂ ಸಂಬಂಧಿತ ಬೆಳವಣಿಗೆಗಳಿಂದ ಪ್ರಕ್ರಿಯೆ ಮತ್ತಷ್ಟು ಜಟಿಲವಾಗಿದೆ. ಸಿಬ್ಬಂದಿ ಕೊರತೆಯ ಸಮಸ್ಯೆ ಸರ್ಕಾರದ ಗಮನದಲ್ಲಿದ್ದರೂ, ಅಗತ್ಯ ಕ್ರಮ ಕೈಗೊಳ್ಳದಿರುವುದು ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಪಶುವೈದ್ಯ ಸಿಬ್ಬಂದಿ ಹೇಳಿದ್ದಾರೆ.

ಜಿಲ್ಲೆಯಲ್ಲಿನ ಕೆಲವು ಪಶುವೈದ್ಯಕೀಯ ಆಸ್ಪತ್ರೆಗಳು ಸದಾ ಬಾಗಿಲು ಹಾಕಿಕೊಂಡಿರುವಂತೆ ಕಾಣುತ್ತವೆ. ಪ್ರಶ್ನಿಸಿದರೆ ವೈದ್ಯರು ಹಾಗೂ ಸಿಬ್ಬಂದಿ ಜಾನುವಾರುಗಳ ಚಿಕಿತ್ಸೆಗೆ ಹೊರಗೆ ಹೋಗಿದ್ದಾರೆ ಎಂಬ ಉತ್ತರ ಸಿಗುತ್ತದೆ. ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ತಿಳಿಸಿದರೂ ಕೆಲವೊಮ್ಮೆ ಸೂಕ್ತ ಪ್ರತಿಕ್ರಿಯೆ ಸಿಗುವುದಿಲ್ಲ. ಸಿಬ್ಬಂದಿ ಕೊರತೆಯಿಂದ ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೇವನಹಳ್ಳಿ ರಾಮಾಂಜಿನಪ್ಪ ತಿಳಿಸಿದ್ದಾರೆ.

ಸರ್ಕಾರದ ತುರ್ತು ಗಮನ ಅಗತ್ಯ

ಜಿಲ್ಲೆಯ ಹೈನುಗಾರಿಕೆ ಹಾಗೂ ಪಶುಸಂಗೋಪನಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು ಎಂಬುದು ರೈತರು ಹಾಗೂ ಹೈನುಗಾರರ ಒತ್ತಾಯವಾಗಿದೆ. ಕನಿಷ್ಠ ತುರ್ತು ಸೇವೆಗಳಿಗೆ ಅಗತ್ಯವಿರುವಷ್ಟು ವೈದ್ಯರು ಮತ್ತು ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಗ್ರಾಮೀಣ ಭಾಗದ ಪಶುಚಿಕಿತ್ಸಾ ಕೇಂದ್ರಗಳು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕಿದೆ. ರೈತರ ಆರ್ಥಿಕತೆಯ ಪ್ರಮುಖ ಆಧಾರವಾಗಿರುವ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಇಲಾಖೆಯೇ ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವುದು ವಿಪರ್ಯಾಸ. ಸರ್ಕಾರ ತುರ್ತು ಕ್ರಮ ಕೈಗೊಳ್ಳದಿದ್ದರೆ ಇದರ ನೇರ ಹೊರೆ ಹೈನುಗಾರರ ಮೇಲೆಯೇ ಬೀಳುವ ಆತಂಕವಿದೆ.

Ramesh Babu

Journalist

Recent Posts

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆ

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್‌ (MIL)…

42 minutes ago

ಸ್ಟಿಂಗ್ ಆಪರೇಷನ್ ವಿವಾದ: ಸಿದ್ದರಾಮಯ್ಯನವರದ್ದು ಕುಮಾರಸ್ವಾಮಿ ತರಹದ ಚರಿತ್ರೆಯಲ್ಲ: ಎಚ್.ಡಿ.ಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ

ಸ್ಟಿಂಗ್ ಆಪರೇಷನ್ ಮಾಡಿಸುವುದಕ್ಕೆ ಮುಖ್ಯಮಂತ್ರಿಗಳಿಗೆ ತಲೆ ಕೆಟ್ಟಿದೆಯೇ? ಪದೇಪದೇ ಈ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಎಳೆದು ತರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ…

13 hours ago

ರಾಜಾನುಕುಂಟೆ ಬಳಿ ರೈಲು ಬೋಗಿಗಳಿಗೆ ಬೆಂಕಿ: ಎರಡು ಬೋಗಿಗಳು ಸುಟ್ಟು ಭಸ್ಮ

ದೊಡ್ಡಬಳ್ಳಾಪುರ: ಯಲಹಂಕ ಸಮೀಪದ ರಾಜಾನುಕುಂಟೆ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ನಿಲ್ಲಿಸಿದ್ದ ಎರಡು ರೈಲು ಬೋಗಿಗಳಿಗೆ ಬೆಂಕಿ…

18 hours ago

ಮಧುರೆ ಕೆರೆಯಲ್ಲಿ ಮಣ್ಣು ದಂಧೆ ಆರೋಪ: ಸುಮಾರು 35 ಟ್ರ್ಯಾಕ್ಟರ್, 5 ಜೆಸಿಬಿಗಳ ಅಬ್ಬರ; ಮಣ್ಣು ತೆಗೆಯುವುದಕ್ಕೆ ಗ್ರಾಮಸ್ಥರ ಬ್ರೇಕ್!

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸುಮಾರು 35 ಟ್ರ್ಯಾಕ್ಟರ್‌ಗಳು…

19 hours ago

ನಮ್ಮ ತೆರಿಗೆ ನಮ್ಮ ಹಕ್ಕು…

ನಮ್ಮ ತೆರಿಗೆ ನಮ್ಮ ಹಕ್ಕು, ಈ ವಿಷಯದಲ್ಲಿ ರಾಜಕೀಯ ಮೀರಿ ವೈಜ್ಞಾನಿಕ ಸಮತೋಲನ ಸಾಧಿಸಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ..... ಕೇಂದ್ರದ…

1 day ago

ದೇವನಹಳ್ಳಿ ಬಳಿ ಭೀಕರ ಅಪಘಾತ: ಓರ್ವ ಸಾವು: ಹಲವರಿಗೆ ಗಾಯ

ದೇವನಹಳ್ಳಿ: ನಿಧಾನವಾಗಿ ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ರೇಂಜ್ ರೋವರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಮೊಳಕಾಲ್ಮೂರು ಕ್ಷೇತ್ರದ…

1 day ago