ಯುಕೆಪಿ-3 ಭೂಸ್ವಾಧೀನ ಪ್ರಕ್ರಿಯೆಗೆ ಚುರುಕು—ಮುಳುಗಡೆ ಸಂತ್ರಸ್ತರಿಗೆ ಆದ್ಯತೆಯ ಪರಿಹಾರ

ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಹಂತ-1 ಮತ್ತು 2ರ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಆದ್ಯತೆಯ ಮೇರೆಗೆ ಪರಿಹಾರ ನೀಡಬೇಕು ಹಾಗೂ ಹಂತ-3ರ ವ್ಯಾಪ್ತಿಯಲ್ಲಿ ನಿಯಮಾನುಸಾರ ಪ್ರೊಪೋರ್ಷನೇಟ್ ಆಧಾರದಲ್ಲಿ ಭೂಸ್ವಾಧೀನ ಕೈಗೊಳ್ಳಬೇಕೆಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟ ಸೂಚನೆ ನೀಡಿದರು.

ವಿಧಾನಸೌಧದ ಕೊಠಡಿ ಸಂಖ್ಯೆ 313ರಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ 184 ಗ್ರಾಮಗಳ ಜಮೀನು ಸ್ವಾಧೀನ ಕುರಿತು ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸಚಿವರು ಮಾತನಾಡಿದರು.

ಅಧಿಕಾರಿಗಳು ಮನಸೋಇಚ್ಛೆ ಕೆಲಸ ಮಾಡದೆ ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಯೋಜನೆ ವ್ಯಾಪ್ತಿಯ ಸಚಿವರು ಹಾಗೂ ಶಾಸಕರು ಭೂಸ್ವಾಧೀನದ ಹಂತಗಳ ಕುರಿತು ಪತ್ರದ ಮೂಲಕವೂ ಸಲಹೆಗಳನ್ನು ನೀಡಬಹುದು ಎಂದು ಸಚಿವರು ತಿಳಿಸಿದರು.

​ಕಳೆದ ವರ್ಷ ಹೊರಡಿಸಲಾದ ಸರ್ಕಾರಿ ಆದೇಶದನ್ವಯ (ಜಿಒ) ಪ್ರತಿ ಎಕರೆ ಭೂಮಿಗೆ ದರ ನಿಗದಿಯಾಗಿದ್ದು, ಕಟ್ಟಡಗಳ ಪರಿಹಾರ ದರ ನಿಗದಿಯಲ್ಲಿ ಗೊಂದಲಗಳಿದ್ದರೆ ಅಧಿಕಾರಿಗಳು ಇಲಾಖೆಗೆ ಪತ್ರ ಬರೆದು ಸ್ಪಷ್ಟತೆ ಪಡೆಯಬೇಕು. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಮಾರ್ಗಸೂಚಿ ಪ್ರಕಟಿಸಲಾಗುವುದು. ಪುನರ್ವಸತಿ ಕಲ್ಪಿಸಲು ಜಮೀನು ಗುರುತಿಸುವ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದ್ದು, ಪುನರ್ವಸತಿ ಕೇಂದ್ರಗಳಲ್ಲಿ ಕೆಲವರು ಕೋಟ್ಯಂತರ ರೂಪಾಯಿಗಳ ಮಾರಾಟ ಒಪ್ಪಂದ (ಸೇಲ್ ಅಗ್ರಿಮೆಂಟ್) ಮಾಡಿಕೊಂಡಿರುವ ಆರೋಪಗಳ ಕುರಿತು ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

*ಶೀಘ್ರದಲ್ಲೇ ಪ್ರತ್ಯೇಕ ಸಭೆ*

ಸಂತ್ರಸ್ತರ ಹಿತದೃಷ್ಟಿಯಿಂದ ಆರ್.ಸಿ. ಶೆಲ್ಟರ್ ಕುರಿತು ಪ್ರತ್ಯೇಕ ಸಭೆ ನಡೆಸುವ ತೀರ್ಮಾನವನ್ನೂ ಸಭೆಯಲ್ಲಿ ಪ್ರಕಟಿಸಿದರು.

​ಮುಳುಗಡೆಯಾಗಲಿರುವ 184 ಗ್ರಾಮಗಳ ಪೈಕಿ ವಿವಿಧ ಹಂತದ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ 79 ಗ್ರಾಮಗಳಿಗೆ ಆದ್ಯತೆ ನೀಡುವುದು, ಇನ್ನೂ ಅಧಿಸೂಚನೆ ಹೊರಡಿಸಬೇಕಿರುವ 87 ಗ್ರಾಮಗಳನ್ನು ಪ್ರವಾಹ ಬಾಧಿತ ಸ್ಥಿತಿಗತಿಯ ಆಧಾರದ ಮೇಲೆ ಸ್ವಾಧೀನಪಡಿಸಿಕೊಳ್ಳುವುದು ಹಾಗೂ ಕೊನೆಯ ಹಂತದ ಗ್ರಾಮಗಳನ್ನು ಅಂತಿಮವಾಗಿ ಪರಿಗಣಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಪ್ರಸಕ್ತ ವರ್ಷ ಒಟ್ಟು 75,563 ಎಕರೆ ಜಮೀನಿನ ಪೈಕಿ ಅಂದಾಜು 15,000 ಎಕರೆಗೆ ಪರಿಹಾರ ವಿತರಿಸುವ ಗುರಿಯಿದೆ. ಈ ಪೈಕಿ ಬಬಲೇಶ್ವರ ವ್ಯಾಪ್ತಿಯ 5,600 ಎಕರೆಯಲ್ಲಿ ಕನಿಷ್ಠ 1,000 ಎಕರೆಗಾದರೂ ತಕ್ಷಣವೇ ಪರಿಹಾರ ನೀಡಬೇಕು. ಈಗಾಗಲೇ 18 ಗ್ರಾಮಗಳಿಗೆ ಹಣ ಬಿಡುಗಡೆಯಾಗಿದ್ದರೂ ವಿಜಯಪುರ ಜಿಲ್ಲೆಯ ಗ್ರಾಮಗಳು ಅದರಲ್ಲಿ ಸೇರಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಪ್ರಸ್ತುತ ಪ್ರಸ್ತಾಪಿಸಲಾಗಿರುವ 3,000 ಕೋಟಿ ರೂ. ಮೊತ್ತದಲ್ಲಿ ಯೋಜನಾ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳಿಗೆ ತಲಾ 500 ಕೋಟಿ ರೂ. ಹಂಚಿಕೆ ಮಾಡುವ ಭರವಸೆ ನೀಡಿದರು.

*ಏನಿದು ಯೋಜನೆ*

​ಆಲಮಟ್ಟಿ ಅಣೆಕಟ್ಟಿನ ಗೇಟುಗಳ ಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಏರಿಸಿ 100 ಟಿಎಂಸಿ ಹೆಚ್ಚುವರಿ ನೀರು ಸಂಗ್ರಹಿಸುವುದು ಮತ್ತು 9 ಉಪ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಇದಕ್ಕಾಗಿ ಒಟ್ಟು 1,33,867 ಎಕರೆ ಭೂಸ್ವಾಧೀನದ ಅಗತ್ಯವಿದೆ. ಈ ಹಿಂದೆ ಎಕರೆಗೆ 2 ಲಕ್ಷ ರೂ. ಇದ್ದ ಪರಿಹಾರವನ್ನು, ಕಳೆದ ವರ್ಷ ನೀರಾವರಿ ಜಮೀನಿಗೆ 40 ಲಕ್ಷ ರೂ. ಹಾಗೂ ಒಣಭೂಮಿಗೆ 30 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಈಗಾಗಲೇ 18 ಗ್ರಾಮಗಳ ಭೂಸ್ವಾಧೀನ ಮುಕ್ತಾಯಗೊಂಡಿದ್ದು, ಉಳಿದ 166 ಗ್ರಾಮಗಳ 71,284 ಎಕರೆ ಪ್ರದೇಶದ ಸ್ವಾಧೀನ ಬಾಕಿಯಿದೆ. ಕೆಲವು ನ್ಯಾಯಾಲಯ ವ್ಯಾಜ್ಯಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗುತ್ತಿದೆ.

​ಈ ಉನ್ನತ ಮಟ್ಟದ ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಆರ್.ಬಿ. ತಿಮ್ಮಾಪುರ, ಶಾಸಕರಾದ ವಿಜಯಾನಂದ ಕಾಶಪ್ಪನವರ್, ಲಕ್ಷ್ಮಣ ಸವದಿ, ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ, ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್‌ಎಲ್) ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

*ಹಿನ್ನೀರಿನ ಭಾದೀತರೊಂದಿಗೆ ಸಭೆ*

ಯುಕೆಪಿ -3 ಸಭೆ ಬಳಿಕ ದೇವದುರ್ಗ ತಾಲೂಕಿನ ರಾಮದುರ್ಗ ಕೆರೆಯ ಹಿನ್ನೀರಿನಿಂದ ಭಾದೀತರಾಗಿರುವ ಗೋವಿಂದಪಲ್ಲಿ ಹಾಗೂ ಕರಡಿಗುಡ್ಡ ಗ್ರಾಮಗಳ ಜಮೀನುಗಳ ಭೂ ಸ್ವಾಧೀನ ಕುರಿತು ಸಭೆ ನಡೆಸಿದ ಸಚಿವರು, ಭಾದೀತ ರೈತರಿಗೆ ಪರಿಹಾರ ನೀಡುವ ಸಂಬಂಧ ಭರವಸೆ ನೀಡಿದರು.

ಭಾದೀತ 243.43 ಎಕರೆ ಭೂಮಿಗೆ ಪರಿಹಾರ ನೀಡವ ಸಲುವಾಗಿ ಹಿನ್ನೀರಿನಿಂದ ಸಮಸ್ಯೆಯಾಗಿರುವ ಗ್ರಾಮಗಳ ಬಗ್ಗೆ ಅಧ್ಯಯನ ನಡೆಸಿ, ಪರಿಹಾರ ನೀಡಲು ಸೂಕ್ತ ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

Ramesh Babu

Journalist

Recent Posts

ದರ ಏರಿಕೆಯನ್ನೇ ಮುಂದಿಟ್ಟುಕೊಂಡು ಬಿಜೆಪಿಯವರು ಟೀಕೆ ಮಾಡುತ್ತಿರುವುದು ಸರಿಯಲ್ಲ- ಡಿಸಿಎಂ ಡಾ.ಜಿ ಪರಮೇಶ್ವರ್

ನಾಡಿನ ಹೈನುಗಾರರು ಇಂದು ಮೇವು, ಪಶು ಆಹಾರ, ವೈದ್ಯಕೀಯ ಚಿಕಿತ್ಸೆ ಹಾಗೂ ನಿರ್ವಹಣಾ ವೆಚ್ಚದ ಹೆಚ್ಚಳದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.…

11 hours ago

ದ್ವಿಚಕ್ರ ವಾಹನ ಅಪಘಾತ: ಇಬ್ಬರಿಗೆ ಗಾಯ

ದೊಡ್ಡಬಳ್ಳಾಪುರ: ನಗರದ ದೊಡ್ಡ ಬೆಳವಂಗಲ ರಸ್ತೆಯ ಸಾಯಿ ಬೇಕರಿ ಸಮೀಪ ಪಾದಚಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ…

11 hours ago

ಯುವ ಕರ್ನಾಟಕ ವೇದಿಕೆ ದೊಡ್ಡಬಳ್ಳಾಪುರ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ

  ದೊಡ್ಡಬಳ್ಳಾಪುರ: ಯುವ ಕರ್ನಾಟಕ ವೇದಿಕೆಯ ದೊಡ್ಡಬಳ್ಳಾಪುರ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಘಟಕದ ಗೌರವ ಅಧ್ಯಕ್ಷರಾಗಿ…

12 hours ago

ದರಗಳ ಏರಿಕೆಯ ಮೂಲಕ ಜನರಿಂದ ಗಳಿಕೆ, ಕಾಂಗ್ರೆಸ್ ಸರ್ಕಾರಕ್ಕೆ ಕೆಲವೇ ದಿನಗಳ ಬಾಳಿಕೆ- ವಿಪಕ್ಷ ನಾಯಕ ಆರ್.ಅಶೋಕ್

ಹಾಲು ದರ ಏರಿಕೆ, ಮೊಸರು ದರ ಏರಿಕೆಯ ನಂತರ ಬಸ್ ಟಿಕೆಟ್ ದರ ಏರಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ,…

13 hours ago

ನ. 6ರಂದು ದೊಡ್ಡಬಳ್ಳಾಪುರದಲ್ಲಿ ನೈಟಿಂಗೇಲ್ಸ್ ಸ್ಮೃತಿ ಗ್ರಾಮ ಲೋಕಾರ್ಪಣೆ

ದೊಡ್ಡಬಳ್ಳಾಪುರ: ಹಿರಿಯ ನಾಗರಿಕರ ಕಲ್ಯಾಣ ಹಾಗೂ ಡಿಮೆನ್ಷಿಯಾ (ಮರೆವಿನ ಕಾಯಿಲೆ) ಆರೈಕೆಯಲ್ಲಿ ಸುಮಾರು 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ…

13 hours ago

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾಮಾನ್ಯ ಬಸ್, ವೇಗದೂತ, ವಜ್ರ ಸೇವೆಗಳ ಪರಿಷ್ಕೃತ ದರ ಪ್ರಕಟ..!!

ಬೆಂಗಳೂರು: ದೀಪಾವಳಿ ಹಬ್ಬಕ್ಕೂ ಮುನ್ನವೇ ರಾಜ್ಯದ ಜನರಿಗೆ ಸರ್ಕಾರ ಮತ್ತೊಂದು ದರ ಏರಿಕೆಯ ಬಿಸಿ ಮುಟ್ಟಿಸಿದೆ. ರಾಜ್ಯದ ನಾಲ್ಕು ರಸ್ತೆ…

18 hours ago