Categories: ಕೋಲಾರ

ವೈದ್ಯಕೀಯ ಕಾಲೇಜು ಸ್ಥಾಪನೆಗೆ ಡಿಪಿಆರ್ ತಯಾರಿಗೆ ಸೂಚನೆ ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಲೋಕೋಪಯೋಗಿ ಇಲಾಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್‌ ಹೇಳಿದರು.

ನಗರದಲ್ಲಿ ಬುಧವಾರ ಸೋಮೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಪಿಆರ್‌ಗೆ ಅಂದಾಜು ವೆಚ್ಚ ಸಿದ್ಧವಾಗುತ್ತಿದ್ದು, ಅದನ್ನು ಸದ್ಯದಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗುವುದು. ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಸ್ಯಾನಿಟೋರಿಯಂ ಜಾಗ ಸೇರಿದಂತೆ ಎರಡು ಕಡೆ ಸ್ಥಳ ಪರಿಶೀಲಿಸಿದ್ದೇವೆ. ಸದ್ಯದಲ್ಲೇ ಸೂಕ್ತ ಜಾಗ ಅಂತಿಮಗೊಳಿಸಲಾಗುವುದು ಎಂದರು.

ಕೋಲಾರ ನಗರದ ರಿಂಗ್‌ ರಸ್ತೆಗೆ ಡಿಪಿಆರ್‌ ಆಗಿದೆ. ಹೊಸ ಎಪಿಎಂಸಿ ಮಾರುಕಟ್ಟೆಗೆ 63 ಎಕರೆ ಜಾಗಕ್ಕೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಇನ್ನು 40 ಎಕರೆ ಜಾಗ ಕೊಡಲು ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕೂ ಸದ್ಯದಲ್ಲೇ ಒಪ್ಪಿಗೆ ಸಿಗಲಿದೆ. ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಅವರು 17 ಎಕರೆ ಜಾಗವನ್ನು ಗಿಡ ಬೆಳೆಸಲು ಅರಣ್ಯ ಇಲಾಖೆಗೆ ನೀಡಿದ್ದರು. ಅಗತ್ಯವಿದ್ದಾಗ ವಾಪಸ್‌ ಪಡೆಯುವ ಷರತ್ತು ಕೂಡ ವಿಧಿಸಿದ್ದರು. ಹೀಗಾಗಿ, ಆ ಜಾಗ ಪಡೆದು ಅರಣ್ಯ ಇಲಾಖೆಗೆ ಬೇರೆ ಜಾಗ ಕೊಡುತ್ತೇವೆ. ಈವರೆಗೆ ಯಾರ ಕೈಯಲ್ಲೂ ಎಪಿಎಂಸಿಗೆ ಜಾಗ ಕೊಡಿಸುವ ಕೆಲಸ ನಡೆದಿರಲಿಲ್ಲ. ಈಗ ನಮ್ಮ ಅವಧಿಯಲ್ಲಿ ಜಾಗ ಕೊಡುತ್ತಿದ್ದೇವೆ ಎಂದರು.

ಕೋಲಾರ ನಗರ ಹಾಗೂ ತಾಲ್ಲೂಕಿನಲ್ಲಿ ನಾವೇನು ಕೆಲಸ ಮಾಡುತ್ತಿದ್ದೇವೆ ಎಂದು ನಾವು ಹೇಳುವುದಿಕ್ಕಿಂತ ಜನರೇ ಮಾತನಾಡುತ್ತಿದ್ದಾರೆ. ವೈದ್ಯಕೀಯ ಕಾಲೇಜು, ರಿಂಗ್‌ ರಸ್ತೆ, ಎಪಿಎಂಸಿಗೆ ಜಾಗದ ಬಗ್ಗೆ ಆದ್ಯತೆ ನೀಡಿದ್ದೇವೆ. ಆರೋಗ್ಯ ಭಾಗ್ಯ, ರೈತರಿಗೆ ಉತ್ತಮ ಬೆಲೆ ದೊರಕಿಸಿಕೊಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿ, ಎರಡೂ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಹಿಂದೆಯೂ ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಚುನಾವಣೆ ಎಂದ ಮೇಲೆ ಗೊಂದಲ, ಜಗಳ ಸಹಜ ಎಂದು ನುಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲೂರಿಗೆ ಏಪ್ರಿಲ್‌ 1ಕ್ಕೆ ಬರಬೇಕಿತ್ತು. ಅದನ್ನು ಮುಂದೂಡಲಾಗಿದ್ದು, ಏ.15ರ ನಂತರ ಭೇಟಿ ನೀಡಲಿದ್ದಾರೆ. ಕೋಲಾರಕ್ಕೂ ನಂತರದ ದಿನಗಳಲ್ಲಿ ಬರಲಿದ್ದಾರೆ. ದೇವನಹಳ್ಳಿ, ವೇಮಗಲ್‌, ನರಸಾಪುರ, ಮಾಲೂರು, ಹೊಸೂರು ಹೆದ್ದಾರಿ ರಸ್ತೆಗೂ ಆಗ ಚಾಲನೆ ನೀಡಲಿದ್ದಾರೆ. ಈಗಾಗಲೇ ನಾಲ್ಕು ಪಥಗಳ ಈ ರಸ್ತೆಗೆ ಟೆಂಡರ್‌ ಆಗಿದ್ದು, 150 ಎಂಜಿನಿಯರ್‌ಗಳು ಸಮೀಕ್ಷೆಯಲ್ಲಿ ತೊಡಗಿದ್ದಾರೆ ಎಂದರು.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವುದಷ್ಟೇ ಕೆ.ಸಿ.ವ್ಯಾಲಿ ಯೋಜನೆಯ ಉದ್ದೇಶವಾಗಿದೆ. ಹಿಂದೆ ನಮ್ಮಲ್ಲಿ 2 ಸಾವಿರ ಅಡಿ ಕೊಳವೆ ಬಾವಿ ತೋಡಿದರೂ ನೀರು ಬರುತ್ತಿರಲಿಲ್ಲ. ಹೀಗಾಗಿ, ಎರಡನೇ ಹಂತದ ಶುದ್ಧೀಕರಣ ಮಾಡಿ ನೀರು ತಂದೆವು ಎಂದು ಹೇಳಿದರು.

ಅರಹಳ್ಳಿ ವಿವಿಧೋದ್ದೇಶದ ಪ್ರಾಥಮಿಕ ಕೃಷಿ ಗ್ರಾಮೀಣ ಸಂಘದ ಚುನಾವಣೆ ಇದೆ. ಕಾಂಗ್ರೆಸ್‌ ಬೆಂಬಲಿತ 12 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಸೋಮೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ. ಎಲ್ಲರೂ ಸೊಸೈಟಿ ನಿರ್ದೇಶಕರಾಗಲು ಅರ್ಹರಿದ್ದು, ಕೆಲಸ ಮಾಡುವಂಥವರು. ಇವರಿಗೆ ಷೇರುದಾರರು ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಹಾಗೂ ಜೆಡಿಎಸ್‌ನವರು ಕೂಡ ದೇವರ ಮೊರೆ ಹೋಗಿದ್ದಾರೆ ಎಂಬ ಪ್ರಶ್ನೆಗೆ, ಬಿಜೆಪಿ–ಜೆಡಿಎಸ್‌ನವರು ದೇವರ ಮೊರೆ ಹೋಗಿರುವುದು ಸಂತೋಷದ ವಿಚಾರ. ಆದರೆ, ದೇವರು ಷೇರುದಾರರಿಗೆ ಆಶೀರ್ವಾದ ಮಾಡಲಿದ್ದು, ಅವರು ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ಹಾಫ್ ಕಾಮ್ಸ್ ಮಾಜಿ ಅಧ್ಯಕ್ಷ ಅರಹಳ್ಳಿ ಗೋಪಾಲಕೃಷ್ಣ, ಸೊಸೈಟಿ ಹಾಲಿ ಅಧ್ಯಕ್ಷ ಶ್ರೀನಿವಾಸ್, ಕೋಲಾರ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಕಿಲಾರಿಪೇಟೆ ಮಣಿ, ಗಂಗಣ್ಣ, ಅಮರನಾಥ್, ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯನಗರ ಮಂಜುನಾಥ್‌ ಸೇರಿದಂತೆ ಅಭ್ಯರ್ಥಿಗಳು ಕಾಂಗ್ರೆಸ್ ಮುಖಂಡರು ಇದ್ದರು.

Ramesh Babu

Journalist

Recent Posts

ಗುತ್ತಿಗೆದಾರರಿಂದ ಲಂಚ ವಸೂಲಿ ಶಂಕೆ; ಎಂಜಿನಿಯರ್ ಬಳಿ 21.88 ಲಕ್ಷ ನಗದು ಪತ್ತೆ!

ಒಡಿಶಾ: ಗುತ್ತಿಗೆದಾರರಿಂದ ಲಂಚ ಪಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ,…

3 hours ago

ಕೆಲವು ಶಿಕ್ಷಕರ ಮತ ಮಾರಾಟ……

ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿಯೂ ಹಣದ ಹೊಳೆ ಹರಿಯುತ್ತಿದೆ. ಇದು ಹೊಸದೇನು…

8 hours ago

ಸಚಿವ ಜಾರ್ಜ್ ಜತೆ ಶಾರದೆಯ ದರ್ಶನ ಪಡೆದ ರಾಜ್ಯಪಾಲರಾದ ಡಾ. ಸುಧಾ ಯಾದವ್

ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ‌ ದಿನವೇ ಡಾ. ಸುಧಾ ಯಾದವ್ ಅವರು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್…

10 hours ago

ಯುವ ಸಂಸತ್ತು ಸ್ಪರ್ಧೆ: ಕೊಂಗಾಡಿಯಪ್ಪ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ: ರವಿಕುಮಾರ್‌ಗೆ ದ್ವಿತೀಯ ಸ್ಥಾನ; ಜಿಲ್ಲಾ ಮಟ್ಟಕ್ಕೆ ಆಯ್ಕೆ

ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಯುವ ಸಂಸತ್ತು ಅಣಕು ಸ್ಪರ್ಧೆಯಲ್ಲಿ ಶ್ರೀ ಕೊಂಗಾಡಿಯಪ್ಪ ಕಾನೂನು…

22 hours ago

ಗೀತಂ ವಿವಿ ಹಾಸ್ಟೆಲ್‌ನಲ್ಲಿ ದುರಂತ: 6ನೇ ಮಹಡಿಯಿಂದ ಬಿದ್ದು ಬಿ.ಟೆಕ್ ವಿದ್ಯಾರ್ಥಿನಿ ಸಾವು

ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿ ಸಮೀಪದ ಗೀತಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ತಡರಾತ್ರಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ…

1 day ago

ಮಳೆ ಕೊರತೆಯ ಹೊಡೆತಕ್ಕೆ ರಾಗಿ ಬೆಳೆ ಸಂಕಷ್ಟ: ರೈತರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಇಳುವರಿಗೆ ಹೊಡೆತ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಏರುಪೇರಿನಿಂದ ಮಳೆಯಾಶ್ರಿತ ಕೃಷಿ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಪ್ರಮುಖ ಆಹಾರ ಬೆಳೆಯಾದ ರಾಗಿಯನ್ನು…

1 day ago