
ವಿಡಿ ಸತೀಶನ್ ಅವರು ಕೇರಳದ ನೂತನ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಆರ್.ವಿ. ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಸಿಎಂ ಸತೀಶನ್ ಸೇರಿದಂತೆ 20 ಮಂದಿ ಸಚಿವರಿಗೆ ಪ್ರಮಾಣವಚನ ಬೋಧಿಸಿದರು..

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ಡಿಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ರೇವಂತ್ ರೆಡ್ಡಿ, ಕೆಸಿ.ವೇಣುಗೋಪಾಲ್, ರಾಜೀವ್ ಚಂದ್ರಶೇಖರ್, ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಸತೀಶನ್ ಜೊತೆಗೆ 20 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ನಿಂದ 11 ಮಂದಿ, ಮುಸ್ಲಿಂ ಲೀಗ್ನ ಐವರು ಹಾಗೂ ಮಾನ್ಸ್ ಜೋಸೆಫ್ (ಕೇರಳ ಕಾಂಗ್ರೆಸ್-ಜೋಸೆಫ್), ಶಿಬು ಬೇಬಿ ಜಾನ್ (ಕ್ರಾಂತಿಕಾರಿ ಸಮಾಜವಾದಿ ಪಕ್ಷ), ಅನೂಪ್ ಜಾಕೋಬ್ (ಕೇರಳ ಕಾಂಗ್ರೆಸ್-ಜಾಕೋಬ್), ಮತ್ತು ಸಿಪಿ ಜಾನ್ (ಕಮ್ಯುನಿಸ್ಟ್ ಮಾರ್ಕ್ಸ್ ವಾದಿ ಪಕ್ಷ) ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಹೊಸ ಸರ್ಕಾರ ರಾಜ್ಯದ ಅಭಿವೃದ್ಧಿ, ಜನಪರ ಆಡಳಿತ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಿದೆ ಎಂದು ನೂತನ ಮುಖ್ಯಮಂತ್ರಿ ಸತೀಶನ್ ತಿಳಿಸಿದ್ದಾರೆ.