
ದೊಡ್ಡಬಳ್ಳಾಪುರ: ನಗರದ ರೈಲ್ವೆ ನಿಲ್ದಾಣದ ಸಮೀಪದ ಆಂಜನೇಯ ದೇವಾಲಯದ ಪಕ್ಕದಲ್ಲಿ ಹೂತುಹಾಕಲಾಗಿದ್ದ ನವಜಾತ ಶಿಶುವಿನ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪ್ರಾಣಿಗಳು ಮಣ್ಣು ತೋಡಿದ ಪರಿಣಾಮ ಶಿಶುವಿನ ಮೃತದೇಹ ಮೇಲಕ್ಕೆ ಬಂದಿದ್ದು, ವಿಷಯ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮುತ್ತುರಾಜ್ ಎಚ್ ಹಾಗೂ ಡಿವೈಎಸ್ಪಿ ಪಾಂಡುರಂಗ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನಾ ಸ್ಥಳದಲ್ಲಿ ಅಗತ್ಯ ಮಾಹಿತಿ ಸಂಗ್ರಹಿಸಿ ತನಿಖೆ ಆರಂಭಿಸಲಾಗಿದೆ. ಯಾರೋ ಅಪರಿಚಿತರು ನವಜಾತ ಶಿಶುವಿನ ಮೃತದೇಹವನ್ನು ತಂದು ಅಲ್ಲೇ ಹೂತುಹಾಕಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸದ್ಯ ಶಿಶುವಿನ ತಾಯಿ ಯಾರು, ಯಾವ ಸಂದರ್ಭದಲ್ಲಿದು ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಘಟನಾ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಕ್ಕಳ ಸಹಾಯವಾಣಿ ಅಧಿಕಾರಿಗಳೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನಾ ಸ್ಥಳದ ಸಮೀಪವೇ ಪಿಜಿ (ಪೇಯಿಂಗ್ ಗೆಸ್ಟ್) ವಸತಿ ಗೃಹಗಳಿರುವ ಹಿನ್ನೆಲೆಯಲ್ಲಿ, ಆರೋಪಿಗಳ ಸುಳಿವು ಪತ್ತೆಹಚ್ಚುವ ಉದ್ದೇಶದಿಂದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಘಟನೆಯ ಕುರಿತು ಸಮಗ್ರ ತನಿಖೆ ಮುಂದುವರಿದಿದ್ದು, ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಲು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.