Categories: ಲೇಖನ

ರಕ್ಷಾ ಬಂಧನ ಮತ್ತು ಮದರ್ ತೆರೇಸಾ

ಮದರ್‌ ತೆರೇಸಾ –
ಆಗಸ್ಟ್ 26, 1910…..

ರಸ್ತೆ ಬದಿಯ ಹರಕಲು ಬಟ್ಟೆಯ ಭಿಕ್ಷುಕರನ್ನು ನೋಡಲೇ ಅಸಹ್ಯಪಡುವ ಪರಿಸ್ಥಿತಿ ಇರುವಾಗ ಕೊಲ್ಕತ್ತಾದ ಕುಷ್ಠರೋಗ, ಕ್ಷಯರೋಗ, ಚರ್ಮರೋಗ ಇನ್ನೂ ಏನೇನೋ ಖಾಯಿಲೆಯಿಂದ ಬಳಲುತ್ತಿದ್ದ ಅನಾಥರುಗಳನ್ನು ತಮ್ಮ ಕೈಯ್ಯಾರೆ ಉಪಚರಿಸಿ ಅವರ ಸೇವೆಗಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟ ಮಾನವೀಯತೆಯ ಶಿಖರ ಮದರ್ ತೆರೆಸಾ………‌..‌..

ಬಿಲ್ ಗೇಟ್ಸ್, ಅಜೀಂ ಪ್ರೇಮ್ಜಿ, ಅಂಬಾನಿ, ಮಾರ್ಕ್ ಜುಕರ್ ಬರ್ಗ್ ಮುಂತಾದವರು ತಮ್ಮ ಸಂಪತ್ತಿನ ಸ್ವಲ್ಪ ಭಾಗವನ್ನು ದಾನ ಮಾಡಿದ್ದಾರೆ. ಅದೂ ಸಹ ಅತ್ಯುತ್ತಮ ಸೇವೆಯೇ ನಿಜ. ಆದರೆ ತಾವೇ ಖುದ್ದು ಮುಂದೆ ನಿಂತು ಇಡೀ ವ್ಯವಸ್ಥೆಯೇ ಅಸಹ್ಯಪಟ್ಟುಕೊಳ್ಳುವ ಜನರನ್ನು ತಮ್ಮ ಜೊತೆಗೇ ಇಟ್ಟುಕೊಂಡು ಅವರ ಸೇವೆ ಮಾಡುತ್ತಾ ತಮ್ಮ ಜೀವನ ಸವೆಸಿದ ಆ ಮಹಾತಾಯಿಯ ತೂಕವೇ ಬೇರೆ……‌.‌

ಎಷ್ಟೋ ಜನ ತಮ್ಮ ಕಲೆಗಾಗಿ, ಸಾಹಿತ್ಯಕ್ಕಾಗಿ, ಕ್ರೀಡೆಗಾಗಿ, ಸೇವೆಗಾಗಿ ಭಾರತ ರತ್ನ ಪಡೆದಿದ್ದಾರೆ. ಅದು ಕೂಡ ಮಹಾನ್ ಸಾಧನೆಯೇ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈ ರೀತಿಯ ಸಮಾಜದ ಕಟ್ಟ ಕಡೆಯ ಜನರಿಗಾಗಿ ಬದುಕನ್ನೇ ಮೀಸಲಿರಿಸಿದ ಆ ಅಮ್ಮ ನಿಜವಾದ ಭಾರತ ರತ್ನ…..

ಒಂದು ಹಂತಕ್ಕೆ ಅವರು ಬೆಳೆದು ನೊಬೆಲ್ ಪ್ರಶಸ್ತಿಯ ನಂತರ ಆಕೆಯ ಪರಿಸ್ಥಿತಿ ಸಹಜವಾಗಿಯೇ ಉತ್ತಮವಾಗಿರುತ್ತದೆ. ಆದರೆ ಪ್ರಾರಂಭದ ಹಂತದಲ್ಲಿ ಅನಾಗರಿಕ ಸಾಮಾಜಿಕ, ಆರ್ಥಿಕ ವ್ಯವಸ್ಥೆಯೇ ಇದ್ದು ಬಡತನವೆಂಬುದು ದಟ್ಟ ದರಿದ್ರ ಎಂಬ ಸಂದರ್ಭದಲ್ಲಿ ಆಕೆ ಈ ಸೇವೆಯನ್ನು ತನ್ನ ಕರ್ತವ್ಯ ಎಂದು ಸ್ವಯಂ ಪ್ರೇರಿತವಾಗಿ ಒಪ್ಪಿಕೊಂಡು ಮಾಡಿದ ರೀತಿ ಇದೆಯಲ್ಲಾ ಅದು ಊಹಿಸಲೂ ಅಸಾಧ್ಯ……..

ಪ್ರವಚನ, ಕಲೆ, ಸಾಹಿತ್ಯ, ಸಂಗೀತ, ಬುದ್ದಿಮಾತು ಇವೆಲ್ಲಾ ನಮ್ಮ ನಿಮ್ಮ ಆಂತರಿಕ ಪ್ರತಿಭೆಯನ್ನು ಅವಲಂಬಿಸಿರುತ್ತದೆ. ಆದರೆ ನತದೃಷ್ಟ ರೋಗಿಗಳ ಉಚಿತ ಸೇವೆ ಇದೆಯಲ್ಲ ಆದು ಎಲ್ಲವನ್ನು ಮೀರಿದ್ದು.
ಅದಕ್ಕಾಗಿಯೇ ಆ ಮಾತೆ ಸರ್ವ ಶ್ರೇಷ್ಠವಾಗಿ ನಿಲ್ಲುತ್ತಾಳೆ……..

ಇನ್ನು ಅವರ ಹೆಸರಿನಲ್ಲಿ ನಡೆದ ಪವಾಡ, ಆಕೆಗೆ ನೀಡಿದ ಸಂತ ಪದವಿ ಎಲ್ಲವೂ ಎಂದಿನಂತೆ ಮೌಢ್ಯದ ಮತ್ತೊಂದು ರೂಪ. ಅವರು ಕೂಡ ನಮ್ಮ ನಿಮ್ಮಂತೆ ಮೂಳೆ, ಮಾಂಸ, ರಕ್ತ ಮತ್ತು ಚರ್ಮದ ಹೊದಿಕೆ. ಯಾವ ದೈವಶಕ್ತಿಯೂ ಇಲ್ಲ. ಜೀವಂತವಿದ್ದಾಗ ಮಾಡಿದ ಪರೋಪಕಾರವೇ ನಮ್ಮೆಲ್ಲರ ಪಾಲಿಗೆ ಸ್ಪೂರ್ತಿಯ ಮಹಾನ್ ಶಕ್ತಿ…….

ಸಮಾಜ ಸೇವಾ ಹೆಸರಿನ ಬಹಳಷ್ಟು ಆತ್ಮವಂಚಕ ಮನಸ್ಸುಗಳಿಗೆ ಪ್ರಜಾಸೇವೆಯಲ್ಲಿ ಆಕೆ ಮಾದರಿಯಾಗಲಿ. ಕಪಟ ನಾಟಕಗಳು ನಿಲ್ಲಲಿ ಎಂದು ಆಶಿಸುತ್ತಾ…….

ರಕ್ಷಾ ಬಂಧನವೆಂಬ ಪವಿತ್ರ ಪದ್ದತಿ ಮತ್ತು ನಮ್ಮ ಕೊಳಕು ಮನಸುಗಳು…….
ಆಗಸ್ಟ್ 28……

ಇತ್ತೀಚೆಗಷ್ಟೇ ಒಂದು ಹೆಣ್ಣು ಮಗಳು ಇದ್ದಕ್ಕಿದ್ದಂತೆ ಕಾಲ್ ಮಾಡಿ ಚಿಕ್ಕ ಮಗುವಿನಂತೆ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದರು. ಕಾರಣ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಯಾವುದೇ ಕಾರಣವಿಲ್ಲದೆ ಕೇವಲ ಒಂದು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ಮಾತ್ರಕ್ಕೆ ಎಷ್ಟೊಂದು ನಿಂದನೆಯ ಬರಹಗಳೆಂದರೆ ಅದನ್ನು ವರ್ಣಿಸಲು ಸಾಧ್ಯವಿಲ್ಲ. ಹೆಣ್ಣನ್ನು ನಿಂದಿಸಬಹುದಾದ ಎಲ್ಲಾ ಪದಗಳಿಂದಲೂ ವಾಕ್ಯ ರಚನೆ ಮಾಡಲಾಗಿತ್ತು ಅದೂ ಬಹಿರಂಗವಾಗಿ………

ಇದು ಒಂದು ಸಾಂಕೇತಿಕ ಘಟನೆ ಮಾತ್ರ. ಈ ರೀತಿಯ ಅನೇಕ ಘಟನೆಗಳು ದಿನನಿತ್ಯ ಎಲ್ಲಾ ಕಡೆಗಳಲ್ಲೂ ನಡೆಯುತ್ತಿದೆ. ಮಹಿಳೆಯರು ಸಾರ್ವಜನಿಕ ಜೀವನ ಪ್ರವೇಶಿಸಲು ಇರುವ ಬಹುದೊಡ್ಡ ಆತಂಕ ಈ ವಿಕೃತ ಮನಸ್ಸುಗಳದು. ಅದೇ ಕಾರಣದಿಂದ ಕುಟುಂಬದ ಹೆಣ್ಣುಮಕ್ಕಳು ಸಾರ್ವಜನಿಕ ಕ್ಷೇತ್ರಕ್ಕೆ ಬರಲು ಹಿಂಜರಿಯುತ್ತಾರೆ.

ಬಹಳ ಜನ ಕೊಚ್ಚಿಕೊಳ್ಳುತ್ತಾರೆ,
ಓ ಭಾರತದಲ್ಲಿ ಮಹಿಳೆಯರಿಗೆ ಇರುವ ಗೌರವ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ.

ಬೇಕೆ ಉದಾಹರಣೆಗಳು,
ಕೇಳಿ ನೋಡಿ ವಿಧವೆ – ವಿಚ್ಛೇದಿತ ಮಹಿಳೆಯರನ್ನು, ಕೇಳಿ ನೋಡಿ ಒಂಟಿಯಾಗಿ ರಸ್ತೆ, ಬಸ್ಸು, ರೈಲುಗಳಲ್ಲಿ ಓಡಾಡುವ ಮಹಿಳೆಯರನ್ನು, ಕೇಳಿ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಮಹಿಳೆಯರನ್ನು, ಕೇಳಿ ನೋಡಿ ಉದ್ಯೋಗ ಪಡೆಯಲು ಸಂದರ್ಶಕ್ಕೆ ಹಾಜರಾಗುವ ಮಹಿಳೆಯರನ್ನು, ಅಷ್ಟೇ ಏಕೆ ತಮ್ಮ ಮನೆಯ ಯುವ ಮಹಿಳೆಯರನ್ನು ಹೊರಗೆ ಕಳಿಸಲು ಎಷ್ಟು ತಂದೆ ತಾಯಿಗಳ ಮನಸ್ಸು ತಳಮಳಗೊಳ್ಳುತ್ತದೆ ಎಂದು……..
( ಒಂದು ವೇಳೆ ಯಾರಾದರೂ ಹೆಣ್ಣು ಮಗಳು ನಾನು ಹೊರ ಸಮಾಜದಲ್ಲಿ ಚಟುವಟಿಕೆಯಿಂದ ಇರುವಾಗಲೂ ಪುರುಷರಿಂದ ಯಾವುದೇ ಕೆಟ್ಟ ನಡವಳಿಕೆ ಕಂಡುಬಂದಿಲ್ಲ. ಅದಕ್ಕೆ ಬದಲಾಗಿ ಒಳ್ಳೆಯ ಅನುಭವ ಆಗಿದೆ ಎಂದಾದರೆ, ನೀವು ಅದೃಷ್ಟವಂತರು ಮತ್ತು ಅದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತಾ…. ಕೇವಲ ಕೆಟ್ಟ ಅನುಭವದ ಮಹಿಳೆಯರ ಬಗ್ಗೆ ಮಾತ್ರ ಈ ಲೇಖನ ….. )

ರಕ್ಷಾ ಬಂಧನ ಕೇವಲ ಒಂದು ಬಣ್ಣಬಣ್ಣದ ದಾರದ ಗಂಟಲ್ಲ, ಅದು ಒಂದು ಭಾವನಾತ್ಮಕ ಸಂಬಂಧ. ಅದು ಕೇವಲ ಈ ಕ್ಷಣದಲ್ಲಿ ಮಾತ್ರ ಇರುವುದಲ್ಲ, ಅದು ಮಕ್ಕಳಾಟವಲ್ಲ, ಅದು ತೋರಿಕೆಯ ಪ್ರದರ್ಶನವಲ್ಲ, ಅದು ನಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಂಡ ಪದ್ದತಿಯಲ್ಲ, ಅದು ನಮ್ಮ ಇಡೀ ಬದುಕಿನಲ್ಲಿ ನಮ್ಮ ವ್ಯಕ್ತಿತ್ವದ ಭಾಗವಾಗಿರುವಂತಹುದು. ಅದು ವ್ಯಕ್ತಿ ಸ್ವಾತಂತ್ರ್ಯದ ಪ್ರತೀಕ.

ನಾವು ಎಲ್ಲವನ್ನೂ, ಎಲ್ಲರನ್ನೂ ಗೌರವಿಸುವ, ಇತರರ ಘನತೆಗೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳುವ ಸ್ವಭಾವದವರಾದರೆ ರಕ್ಷಾ ಬಂಧನದ ಅವಶ್ಯಕತೆಯೇ ಇರುವುದಿಲ್ಲ.
ತಾಯಿಯಾದರೇನು, ತಂಗಿಯಾದರೇನು ? ಅಕ್ಕನಾದರೇನು ?
ಮಗಳಾದರೇನು ? ಸೊಸೆಯಾದರೇನು ?
ಪ್ರೇಯಸಿಯಾದರೇನು ?
ಹೆಂಡತಿಯಾದರೇನು ?
ನೆರೆ ಮನೆಯವರಾದರೇನು?
ಸಹಪಾಠಿಗಳಾದರೇನು ?
ಪರಿಚಿತರಾದರೇನು ?
ಅಪರಿಚಿತರಾದರೇನು ?……

ಎಲ್ಲರನ್ನೂ ಆ ಸಂದರ್ಭ ಸನ್ನಿವೇಶ ಸಂಬಂಧಕ್ಕೆ ತಕ್ಕಂತೆ ನಾವು ಗೌರವಿಸಿ ಹಾಗೆಯೇ ವರ್ತಿಸಬೇಕಲ್ಲವೇ ? ಕೇವಲ ಭಾರತ ಮಾತ್ರವಲ್ಲ ವಿಶ್ವದ ಎಲ್ಲಾ ಕಡೆಯ ಕೌಟುಂಬಿಕ ವ್ಯವಸ್ಥೆ ಇರುವುದೇ ಹೀಗೆ. ತಾಯಿ – ಹೆಂಡತಿ ಸಂಬಂಧ ಬೇರೆ ಇರಬಹುದು. ಆದರೆ ವ್ಯಕ್ತಿ ಸ್ವಾತಂತ್ರ್ಯದ ಗೌರವ ಒಂದೇ….

ಅಪರಿಚಿತ ಮಹಿಳೆ ಎಂದ ಮಾತ್ರಕ್ಕೆ ಅಥವಾ ಪಕ್ಕದ ಮನೆಯ ಅಸಹಾಯಕ ಹೆಣ್ಣು ಎಂದ ಮಾತ್ರಕ್ಕೆ ನಾವು ಕೆಟ್ಟದ್ದಾಗಿ ವರ್ತಿಸುವುದು ಉಚಿತವೇ ? ತಂಗಿ ಅಥವಾ ಅಕ್ಕ ಆದ ಮಾತ್ರಕ್ಕೆ ಒಳ್ಳೆಯ ವರ್ತನೆ, ಪರಸ್ತ್ರೀಯಾದರೆ ಕೆಟ್ಟ ವರ್ತನೆ ತೋರಲು ಅನುಮತಿ ಎಂದು ಭಾವಿಸಬೇಕೆ.? ವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಎಲ್ಲರಿಗೂ ಅವರವರ ಗೌರವ ನೀಡಬೇಕಲ್ಲವೇ ?

ಹಿಂದೆ ರಾಜಪ್ರಭುತ್ವದ ಅನಾಗರಿಕ, ಕ್ರೂರ ದಾಳಿಕೋರರಿಂದ ರಕ್ಷಿಸಲು ಈ ರಕ್ಷಾ ಬಂಧನ ಪದ್ದತಿಯನ್ನು ಆಚರಣೆಗೆ ತರಲಾಯಿತು ಎಂದು ಹೇಳಲಾಗುತ್ತದೆ. ಹೆಣ್ಣನ್ನು ಭೋಗದ ವಸ್ತು ಎಂದು ಪರಿಗಣಿಸಲಾಗಿದ್ದ ಸಮಯದಲ್ಲಿ ಇದು ಆಚರಣೆಗೆ ಬಂದಿದೆ ಎಂಬುದು ನೆನಪಿರಲಿ. ಈಗ ಇರುವುದು ಪ್ರಜಾಪ್ರಭುತ್ವ ಮತ್ತು ಸಮಾನ ಹಕ್ಕುಗಳ ಸ್ವಾತಂತ್ರ್ಯವಿರುವ ದೇಶ.

ಈಗ ಪ್ರಾಣಿ ಪಕ್ಷಿಗಳಿಗೂ ಒಂದಷ್ಟು ಸ್ವಾತಂತ್ರ್ಯ ಮತ್ತು ಪ್ರಾಣ ರಕ್ಷಣೆಯ ನಿಯಮಗಳನ್ನು ರೂಪಿಸಲಾಗಿದೆ.

ಇದರ ಅರ್ಥ ರಕ್ಷಾ ಬಂಧನ ಎಂಬ ಹಬ್ಬ ಅಥವಾ ಪದ್ದತಿಯನ್ನು ವಿರೋಧಿಸುವುದಲ್ಲ. ಅದರ ಮೂಲ ಆಶಯದಂತೆ ಪ್ರತಿ ಹೆಣ್ಣು ಗೌರವಾರ್ಹಳು ಮತ್ತು ಸ್ವಾತಂತ್ರ್ಯಕ್ಕೆ ಅರ್ಹಳು. ಕೇವಲ ತಂಗಿ ಅಥವಾ ಅಕ್ಕ ಮಾತ್ರವಲ್ಲ…..

ಹಬ್ಬಗಳು, ಪದ್ದತಿಗಳು, ನಂಬಿಕೆಗಳು ಕೇವಲ ಆಚರಣೆಗಳಾಗದೆ ಅವು ಅನುಸರಣೆಗಳಾದಾಗ ಮಾತ್ರ ಅದು ದೀರ್ಘಕಾಲ ಮಹತ್ವ ಪಡೆಯುತ್ತದೆ. ಇಲ್ಲದಿದ್ದರೆ ರಕ್ಷಾ ಬಂಧನ ಅಪಹಾಸ್ಯದ ಪದ್ದತಿಯಾಗಿ ಸಿನಿಮಾ ರಂಗದ ಕಾಮಿಡಿ ದೃಶ್ಯಗಳಲ್ಲಿ ತೋರಿಸುವಂತೆ ಅನುಕೂಲಕ್ಕೆ ತಕ್ಕಂತೆ ಬದಲಾಗುವ ಹೆಣ್ಣು – ಗಂಡುಗಳ ಆಟವಾಗುತ್ತದೆ.

ಇದು ಈ ಸಮಾಜದಲ್ಲಿ ಇರುವ, ಮಹಿಳೆಯರ ಬಗ್ಗೆ ಕೊಳಕು ಮನಸ್ಥಿತಿ ಹೊಂದಿರುವವರ ಮನಃ ಪರಿವರ್ತನೆಗಾಗಿ ಮಾತ್ರ. ಇತರರಿಗೆ ಇದು ಅನ್ವಯಿಸುವುದಿಲ್ಲ….

ರಕ್ಷಾ ಬಂಧನ ಎಲ್ಲಾ ಮಹಿಳೆಯರ ಗೌರವ ರಕ್ಷಿಸುವ ಮತ್ತು ಪುರಷರೊಂದಿಗೆ ಭಾವನಾತ್ಮಕ ಪ್ರೀತಿಯ ಸಂಬಂಧ ಬೆಸೆಯುವ ಪದ್ದತಿ, ರಾಖಿ ಕಟ್ಟುವ ಸಾಂಕೇತಿಕ ಆಚರಣೆಯಿಂದ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಸರ್ಕಾರಿ ಗೋಮಾಳ ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಕ್ರಮ: ನಕಲಿ ಭೂದಾಖಲೆ ಸೃಷ್ಟಿ ಹಾಗೂ ಅಕ್ರಮ ಖಾತೆ ಬದಲಾವಣೆ ಕಂಡುಬಂದರೆ ಕಠಿಣ ಕ್ರಮ- ಕಂದಾಯ ಸಚಿವ ಡಾ.ಜಿ ಪರಮೇಶ್ವರ್

ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ…

58 minutes ago

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಅ.07-10-2026: ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ, ಚೆಕ್‌-ಇನ್ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ 942 ಗ್ರಾಂ…

5 hours ago

ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಸಚಿವ ಜಿ. ಪರಮೇಶ್ವರ್ ದಿಢೀರ್ ಭೇಟಿ

ದೇವನಹಳ್ಳಿ: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ…

6 hours ago

ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲು ನಿಲ್ದಾಣದ ರೈಲ್ವೆ ಯಾರ್ಡ್‌ನಲ್ಲಿ ರೈಲಿಗೆ ಸಿಲುಕಿ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ…

12 hours ago

ದಸರಾ….

ಮೈಸೂರು ದಸರಾ, ಮಹಿಷಾ ದಸರಾ, ಚಾಮುಂಡಿ ದಸರಾ..... ವಿಜಯ ದಶಮಿ - ಆಯುಧ ಪೂಜೆ..... ದುಷ್ಟ ಶಕ್ತಿಗಳ ವಿರುದ್ಧ ವಿಜಯದ…

12 hours ago

ವೃದ್ಧ ದಂಪತಿಗೆ ‘ವಾತ್ಸಲ್ಯ’ ಮನೆ ಹಸ್ತಾಂತರ

ದೊಡ್ಡಬಳ್ಳಾಪುರ: ತಾಲೂಕಿನ ಮೆಣಸಿ ಗ್ರಾಮದಲ್ಲಿ ವಯೋವೃದ್ಧ ದಂಪತಿ ಕೆಂಪಮ್ಮ ಮತ್ತು ಪಾಪಪಿಲ್ಲಪ್ಪ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ…

1 day ago