Categories: ತುಮಕೂರು

ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ಎತ್ತಿನಹೊಳೆ ನೀರು-ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ

ರಾಜ್ಯದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಿಗೆ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಭೂತಪೂರ್ವ ವೇಗ ನೀಡಿದ್ದಾರೆ.
ಒಂದೆಡೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಶತಾಯಗತಾಯ ಪ್ರಯತ್ನಿಸುತ್ತಿರುವ ಬೆನ್ನಲ್ಲೇ, ಇದೀಗ ನವೆಂಬರ್ ಅಂತ್ಯದೊಳಗೆ ಎತ್ತಿನಹೊಳೆ ಯೋಜನೆಯ ಮೂಲಕ ತುಮಕೂರಿಗೆ ನೀರು ಹರಿಸಲು ಸಚಿವರು ಪಣತೊಟ್ಟಿದ್ದಾರೆ. ಇದರ ಭಾಗವಾಗಿ ತುಮಕೂರಿನ ಗುಬ್ಬಿ ತಾಲೂಕಿನ ಕಂಚಿಗಾನಹಳ್ಳಿಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ‘ಪ್ಯಾಕೇಜ್ 11’ರ ಕಾಮಗಾರಿ ಸ್ಥಳಕ್ಕೆ ಗುರುವಾರ ಖುದ್ದು ಭೇಟಿ ನೀಡಿ, ಸಮಗ್ರ ಪರಿಶೀಲನೆ ನಡೆಸಿದರು.

ಕಾಮಗಾರಿ ಸ್ಥಳದಲ್ಲಿ ಎದುರಾಗಿರುವ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಲು ಸಚಿವರು ತ್ವರಿತ ಹೆಜ್ಜೆ ಇಟ್ಟಿದ್ದಾರೆ. ಕಂಚಿಗಾನಹಳ್ಳಿಯ ಅರಣ್ಯ ಇಲಾಖೆಗೆ ಸೇರಿದ 1.9 ಕಿ.ಮೀ ಜಾಗವನ್ನು ಪರಿಶೀಲಿಸಿದ ಅವರು, ಯೋಜನೆಗೆ ಅಗತ್ಯವಿರುವ ಅರಣ್ಯ ಇಲಾಖೆಯ 2ನೇ ಹಂತದ (ಸ್ಟೇಜ್ 2) ಅನುಮತಿಗೆ ಸಂಬಂಧಿಸಿದ ಕಡತಗಳು ಈಗಾಗಲೇ ನವದೆಹಲಿಗೆ ತಲುಪಿವೆ ಎಂದು ಸ್ಪಷ್ಟಪಡಿಸಿದರು.

ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು (ACS) ದೆಹಲಿಗೆ ಅರ್ಜಿ ಸಲ್ಲಿಸಿದ್ದು, ಸತತ ಪ್ರಯತ್ನದ ಫಲವಾಗಿ ಇನ್ನೊಂದು ವಾರದಲ್ಲಿ ಕೇಂದ್ರದಿಂದ ಅಂತಿಮ ಒಪ್ಪಿಗೆ (ಕ್ಲಿಯರೆನ್ಸ್) ದೊರೆಯುವ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.

ಗುರುತ್ವಾಕರ್ಷಣಾ ಕಾಲುವೆ (ಗ್ರಾವಿಟಿ ಕೆನಾಲ್) ನಿರ್ಮಾಣದಲ್ಲಿ ಗುಣಮಟ್ಟಕ್ಕೆ ಅತ್ಯುನ್ನತ ಆದ್ಯತೆ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದರು.

ಕಾಮಗಾರಿ ಸ್ಥಳದಲ್ಲಿ 28 ಮೀಟರ್ ಆಳದ ಭೂಮಿಯನ್ನು ಅಗೆಯಬೇಕಾಗಿದ್ದು (ಡೀಪ್ ಕಟ್), ಇಲ್ಲಿ ಮಣ್ಣು ಕುಸಿಯದಂತೆ ಅತ್ಯಂತ ಎಚ್ಚರಿಕೆಯಿಂದ ‘ಕಟ್ ಅಂಡ್ ಕವರ್’ ತಂತ್ರಜ್ಞಾನದ ಮೂಲಕ ಗುಣಮಟ್ಟದ ಕೆಲಸ ನಡೆಯಬೇಕು ಎಂದು ನಿರ್ದೇಶಿಸಿದರು.

ಮಣ್ಣನ್ನು ತಾತ್ಕಾಲಿಕವಾಗಿ ಹೊರಹಾಕಲು ಹೆಚ್ಚುವರಿಯಾಗಿ ನೀಡಿರುವ 10 ಎಕರೆ ಜಾಗದಲ್ಲೇ ಹಾಕಿ, ತದನಂತರ ಅದೇ ಮಣ್ಣನ್ನು ಮರಳಿ ತುಂಬುವ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು.

ಎರಡು ಕಡೆ ಕಾಲುವೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಅಕ್ಟೋಬರ್ 15ರ ಒಳಗಾಗಿ ತುಮಕೂರು ಭಾಗದ ಕಾಮಗಾರಿ ಸಂಪೂರ್ಣಗೊಳ್ಳಲಿದೆ ಹಾಗೂ ಶೇಕಡಾ 100ರಷ್ಟು ನೀರು ಪೂರೈಸುವುದು ನಿಶ್ಚಿತ ಎಂದು ಅವರು ಭರವಸೆ ನೀಡಿದರು.

ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಎತ್ತಿನಹೊಳೆ ಯೋಜನೆಯು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಪ್ರಾರಂಭಗೊಂಡ ‘ಕನಸಿನ ಯೋಜನೆ’ ಎಂಬುದನ್ನು ಸ್ಮರಿಸಿದರು. ಆರಂಭದಲ್ಲಿ 8 ಸಾವಿರ ಕೋಟಿ ರೂಪಾಯಿಗಳಷ್ಟಿದ್ದ ಯೋಜನಾ ವೆಚ್ಚವು ಪ್ರಸ್ತುತ 23 ಸಾವಿರ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಆದಾಗ್ಯೂ, ರೈತರ ಹಿತದೃಷ್ಟಿಯಿಂದ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ. ಇದರ ಜೊತೆಗೆ, ಅನಿವಾರ್ಯ ಕಾರಣಗಳಿಂದ ವಿಳಂಬವಾಗಿದ್ದ ‘ಬಿಕ್ಕೆಗುಡ್ಡ ಯೋಜನೆ’ಯನ್ನೂ ಸಹ ಮುಂದಿನ ಎರಡು ತಿಂಗಳೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಪ್ರಕಟಿಸಿದರು.

ಹೇಮಾವತಿ ಲಿಂಕ್ ಕೆನಾಲ್ ಕೈಬಿಡುವಂತೆ ಬಂದಿರುವ ರೈತರ ಮನವಿ ಕುರಿತು ಅತ್ಯಂತ ಸೂಕ್ಷ್ಮವಾಗಿ ಹಾಗೂ ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸಿದ ಸಚಿವರು, “ತುಮಕೂರು ಮತ್ತು ರಾಮನಗರ ಎರಡೂ ಭಾಗದ ರೈತರು ನಮಗೆ ಸಮಾನರು. ಎಲ್ಲರೂ ನಮ್ಮವರೇ ಆಗಿರುವುದರಿಂದ, ಯಾರೊಬ್ಬರಿಗೂ ಅನ್ಯಾಯವಾಗದಂತೆ ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿ, ಎಲ್ಲರಿಗೂ ಒಳಿತಾಗುವ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.

ಇದೇ ವೇಳೆ ರೈತರ ಆರ್ಥಿಕ ಶೋಷಣೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ರೈತರು ಯಾವುದೇ ಕಾರಣಕ್ಕೂ ಮೈಕ್ರೋ ಫೈನಾನ್ಸ್ (ಕಿರು ಸಾಲ) ಮೊರೆ ಹೋಗಬಾರದು ಎಂದು ಕಳಕಳಿಯ ಕಿವಿಮಾತು ಹೇಳಿದರು. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದ ಬಗ್ಗೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ದೂರು ನೀಡುತ್ತಿದ್ದು, ಲಿಖಿತ ದೂರುಗಳಿಲ್ಲದೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸರ್ಕಾರಕ್ಕೆ ಕಷ್ಟಕರವಾಗುತ್ತದೆ. ಹೀಗಾಗಿ ರೈತರು ಇಂತಹ ಸಾಲದ ಸುಳಿಗೆ ಸಿಲುಕದೆ ಎಚ್ಚರಿಕೆಯಿಂದ ಇರಬೇಕು ಎಂದು ಸಚಿವರು ಮನವಿ ಮಾಡಿದರು.

ಈ ವೇಳೆ ಗುಬ್ಬಿ ಕ್ಷೇತ್ರದ ಶಾಸಕರೂ ಆದ ಕೆಎಸ್ ಆರ್ ಟಿಸಿ ನಿಗಮದ ಅಧ್ಯಕ್ಣ ಪಿ.ವಾಸು, ಇಲಾಖೆ ಅಧಿಕಾರಿಗಳು ಇದ್ದರು.

Ramesh Babu

Journalist

Recent Posts

ಎಸ್ ಐ ಆರ್…..

ನಾವು ಅಕ್ರಮ ವಲಸಿಗರಲ್ಲ, ವಂಚಕರಲ್ಲ, ಈ ಮಣ್ಣಿನ ಮೂಲ ನಿವಾಸಿಗಳು. ದಯವಿಟ್ಟು ನಮ್ಮ ಅಸ್ತಿತ್ವವನ್ನು, ಸ್ವಾಭಿಮಾನವನ್ನು ಪ್ರಶ್ನಿಸಬೇಡಿ. ನಾವು ಭಾರತೀಯರು......…

6 hours ago

ಮಾರ್ಖಂಡೇಯ ಜಲಾಶಯದ ನೀರು ಪೋಲು ತಡೆಗೆ ಚಲುವರಾಯಸ್ವಾಮಿ ಖಡಕ್ ಸೂಚನೆ

ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…

18 hours ago

ಪೊಲೀಸರೆಂದು ನಂಬಿಸಿ ವೃದ್ಧ ದಂಪತಿಗೆ ಚಿನ್ನಾಭರಣ ವಂಚನೆ: ಇಬ್ಬರು ಆರೋಪಿಗಳು ವಶಕ್ಕೆ: ದೂರುದಾರರಿಗೆ ಚಿನ್ನಾಭರಣ ಹಸ್ತಾಂತರ

ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…

22 hours ago

ಮಳೆ ಕೊರತೆ; ಮತ್ಸ್ಯ ಕೃಷಿಗೂ ಹೊಡೆತ!

ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…

1 day ago

ಬರಿದಾಗುತ್ತಿರುವ ಕರ್ನಾಟಕದ ಖಜಾನೆ…….

ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…

1 day ago

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

2 days ago