Categories: ಲೇಖನ

15 ನೇ ಸೆಪ್ಟೆಂಬರ್ 2026, ವಿಶ್ವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ…

 

ಸಂವಿಧಾನದ ಆಶಯಗಳು ಇರುವುದು ಕೇವಲ ಓದುವುದಕ್ಕಾಗಿಯಲ್ಲ, ಅದನ್ನು ಕಾಯಾ ವಾಚಾ ಮನಸಾ ಅನುಸರಿಸಲಿಕ್ಕಾಗಿ.‌ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ ರಂಗದ ಎಷ್ಟು ಜನರಿಗೆ ಅದನ್ನು ಹೇಳುವ ಅರ್ಹತೆ, ಯೋಗ್ಯತೆ, ನೈತಿಕತೆ ಇದೆ ಎಂಬುದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪ್ರಶ್ನೆ…..

ಶೇಕಡಾ 80 % ರಾಜಕಾರಣಿಗಳು, ಶೇಕಡಾ 85% ಸರ್ಕಾರಿ ಅಧಿಕಾರಿಗಳು, ಶೇಕಡಾ 70% ಮತದಾರರು, ಶೇಕಡಾ 60% ವಿವಿಧ ವೃತ್ತಿಪರರು, ಶೇಕಡಾ 50% ಧಾರ್ಮಿಕ ಮುಖಂಡರು, ಶೇಕಡಾ 40% ನ್ಯಾಯಾಂಗ ವ್ಯವಸ್ಥೆ ಒಂದಲ್ಲ ಒಂದು ರೀತಿಯಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭ್ರಷ್ಟಾಚಾರ ಮಾಡುತ್ತಾರೆ. ಉಳಿದ ಕೆಲವರು ಆರ್ಥಿಕ ಭ್ರಷ್ಟಾಚಾರ ಮುಕ್ತವಾಗಿದ್ದರು ಧಾರ್ಮಿಕ, ಮೌಢ್ಯ, ಸುಳ್ಳುಗಳಂತ ಮಾನಸಿಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ….

ಸಂವಿಧಾನದ ಮೂಲ ಆಶಯವಾದ ವ್ಯಕ್ತಿ ಸ್ವಾತಂತ್ರ್ಯ, ದೇಶದ ಸಾರ್ವಭೌಮತ್ವ, ಜನಾಂಗೀಯ ಸೌಹಾರ್ದತೆ, ಧರ್ಮ ನಿರಪೇಕ್ಷತೆ, ವೈಜ್ಞಾನಿಕ ಮನೋಭಾವ ಇದಕ್ಕೆ ಬಹುತೇಕ ವಿರುದ್ಧವಾಗಿ ಬದುಕುತ್ತಿರುವವರೇ ಹೆಚ್ಚಾಗಿದ್ದಾರೆ. ‌ಇಂತಹ ಸಂದರ್ಭದಲ್ಲಿ ಎಲ್ಲಾ ದಿನಾಚರಣೆಗಳು ಒಂದು ಮನರಂಜನಾ ಪ್ರಹಸನದಂತೆ ಕಾಣುತ್ತಿದೆ……..

ಒಂದು ಟೇಬಲ್ ನಿಂದ ಇನ್ನೊಂದು ಟೇಬಲ್ ಗೆ ಫೈಲ್ ವರ್ಗಾವಣೆಯಾಗಲು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಧಿಕಾರಿಗಳು ವರ್ಗಾವಣೆಯಾಗಲು, ಉದ್ಯೋಗ, ಪ್ರಶಸ್ತಿ, ಅಧಿಕಾರ ಪಡೆಯಲು, ಹುಟ್ಟು ಸಾವಿನ ಸರ್ಟಿಫಿಕೇಟ್ ಪಡೆಯಲು ಹೀಗೆ ಪ್ರತಿ ನಿಮಿಷವೂ ಕೋಟಿಗಳ ಲೆಕ್ಕದಲ್ಲಿ ಲಂಚಾವತಾರದ ನಾಟಕ ನಡೆಯುತ್ತಿರುತ್ತದೆ…..

ಭಾರತದ ಶೇಕಡಾ 50 ಕ್ಕೂ ಹೆಚ್ಚು ಎಲ್ಲಾ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆಯಲ್ಲಿ ತಾತ, ಅಪ್ಪ, ಮಕ್ಕಳ ವಂಶಪಾರಂಪರ್ಯ ಆಡಳಿತ ಈಗಲೂ ಮುಂದುವರೆಯುತ್ತಿದೆ. ಆ ವಂಶಪಾರಂಪರ್ಯ ಆಯ್ಕೆಯಲ್ಲೂ ಶೇಕಡಾ 90 ರಷ್ಟು ಜಾತಿಯ ಪ್ರಭಾವವಿರುವುದು ಅಷ್ಟೇ ವಾಸ್ತವ……..

ಈ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಶೇಕಡಾ 80% ರಷ್ಟು ನ್ಯಾಯವು ಉಳ್ಳವರ ಪರವಾಗಿಯೇ ಇರುತ್ತದೆ. ಅದಕ್ಕೆ ಕಾರಣಗಳು ಏನೇ ಇರಲಿ ಆದರೆ ಅಪರಾಧಿಗಳಿಗೆ ಹೆಚ್ಚು ಅನುಕೂಲಕರ ನೆರಳನ್ನು ಒದಗಿಸುವುದು ನ್ಯಾಯಾಲಯಗಳು. ಅಪರಾಧಿಗಳಿಗೆ ಆಗುವ ಶಿಕ್ಷೆಯ ಪ್ರಮಾಣ ಮತ್ತು ನಿರಪರಾಧಿಗಳು ಅನುಭವಿಸುವ ಯಾತನೆಯ ಪ್ರಮಾಣವನ್ನು ಅನುಭವದ ಆಧಾರದ ಮೇಲೆ ಗ್ರಹಿಸುವ ಮೂಲಕ ಇದನ್ನು ದೃಢಪಡಿಸಬಹುದು….

ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಭಾರತದ ಪ್ರಜಾಪ್ರಭುತ್ವ ಯಶಸ್ಸಿನ ಹಾದಿಯಲ್ಲಿದೆ ಎಂದು ಹೇಳಬಹುದು. ಆದರೆ ಅದಕ್ಕೆ ಒಂದಷ್ಟು ರಿಪೇರಿ ಮಾಡಬೇಕಿದೆ. ಮುಖ್ಯವಾಗಿ ಸಮಗ್ರ ಚಿಂತನೆಯ ಜಾಗೃತ ಮನಸ್ಸಿನ ಮತದಾರರನ್ನು ಸೃಷ್ಟಿಸಬೇಕಿದೆ. ಆ ಮೂಲಕ ಒಳ್ಳೆಯ ಜನ ಪ್ರತಿನಿಧಿಗಳು ಆಯ್ಕೆಯಾದರೆ ಮೊದಲನೆಯ ಹಂತದ ಸುಧಾರಣೆ ಸಾಧ್ಯವಾಗುತ್ತದೆ. ಅದು ಸಾಧ್ಯವಾದಲ್ಲಿ ಕಾರ್ಯಾಂಗದ ಮೇಲೆ ಹಿಡಿತ ಸಾಧಿಸಬಹುದು. ಆಗ ಇತರೆ ಅಂಗಗಳು ಸರಿ ದಾರಿಗೆ ಬರುತ್ತದೆ……

ಮಾನವ ಇತಿಹಾಸದ ಎಲ್ಲಾ ಆಡಳಿತಾತ್ಮಕ ಪ್ರಯೋಗಗಳ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇರುವುದರಲ್ಲಿ ಇಂದಿಗೆ ಉತ್ತಮ ವ್ಯವಸ್ಥೆ ಎಂದು ಸಾಬೀತಾಗಿದೆ. ಆದರೆ ವಿವೇಚನೆ ಇರುವ ಮತದಾರರು ಇದ್ದಾಗ ಮಾತ್ರ ಈ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲದಿದ್ದರೆ ಪ್ರಜಾಪ್ರಭುತ್ವ ಹೆಸರಿನ ರಾಜಪ್ರಭುತ್ವ ಅಥವಾ ವಿವಿಧ ಶೋಷಣಾ ರೂಪದ ಸರ್ವಾಧಿಕಾರಿ ಆಡಳಿತವೇ ಪರೋಕ್ಷವಾಗಿ ನಮ್ಮನ್ನು ನಿಯಂತ್ರಿಸುತ್ತದೆ…..

ಗ್ರೀಕ್ ನ‌ ಅಥೆನ್ಸ್ ನಿಂದ ಭಾರತದ ದೆಹಲಿಯವರೆಗೆ ಪ್ರಜಾಪ್ರಭುತ್ವ ನಡೆದ ಹಾದಿ……….

ಭಾರತೀಯರಾದ ನಾವು…….

ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು ಪ್ರಜೆಗಳೇ ನಡೆಸುವ ಆಡಳಿತ ಪ್ರಜಾಪ್ರಭುತ್ವ. ಅದಕ್ಕೆ ಸಂವಿಧಾನವೆಂಬ ನೀತಿ ನಿಯಮಗಳ ಪುಸ್ತಕ ಮಾರ್ಗದರ್ಶನ ಮಾಡುತ್ತದೆ……..

ಅನಾಗರಿಕ ವ್ಯವಸ್ಥೆಯಿಂದ ಬಲಿಷ್ಠನೊಬ್ಬನ ನಾಯಕತ್ವ, ಪ್ರದೇಶದ ಒಡೆತನ, ಸಮುದಾಯಗಳ ಮುಖಂಡತ್ವ, ಧಾರ್ಮಿಕ ನಾಯಕತ್ವ, ರಾಜ ಪ್ರಭುತ್ವ, ಸರ್ವಾಧಿಕಾರ, ಸೈನಿಕ ಆಡಳಿತ, ಕಮ್ಯುನಿಸ್ಟ್ – ಸೋಷಿಯಲಿಸ್ಟ್ ಅಧಿಕಾರ, ಪ್ರಜಾಪ್ರಭುತ್ವ ಹೀಗೆ ಅನೇಕ ಪ್ರಯೋಗಗಳು ಮಾನವ ಇತಿಹಾಸದಲ್ಲಿ ಜನರ ಕಲ್ಯಾಣಕ್ಕಾಗಿ ಬೆಳೆದು ಬಂದಿದೆ. ಆ ಎಲ್ಲಾ ಪ್ರಯೋಗಗಳ ಫಲಿತಾಂಶಗಳ ಆಧಾರದ ಮೇಲೆ ಹೇಳುವುದಾದರೆ ನಾಗರಿಕ ಸಮಾಜಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇಲ್ಲಿಯವರೆಗಿನ ಅನುಭವದಲ್ಲಿ ಅತ್ಯಂತ ಉತ್ತಮ ಆಡಳಿತ ವಿಧಾನ. ಅದು ಇನ್ನಷ್ಟು ಸುಧಾರಿಸಬೇಕು ಎಂಬುದು ನಿಜ. ಪ್ರಜೆಗಳು ವಿವೇಚನಾ ಶೀಲರು ಮತ್ತು ಒಳ್ಳೆಯವರಾದರೆ ಪ್ರಜಾಪ್ರಭುತ್ವ ಮತ್ತಷ್ಟು ಆರೋಗ್ಯಕರವಾಗಿ ಬಲಗೊಳ್ಳುತ್ತದೆ……

ಗ್ರೀಕ್ ನ ಅಥೆನ್ಸ್ ನಗರದ ಒಂದು ಮೈದಾನದಲ್ಲಿ ಜನರೆಲ್ಲಾ ಸೇರಿ ಕೈ ಎತ್ತುವ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಮೂಲಕ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆ ಪ್ರಾರಂಭವಾಯಿತು ಎಂದು ಇತಿಹಾಸದಲ್ಲಿ ದಾಖಲಾಗಿದೆ…..

ಭಾರತದಲ್ಲಿ ನನಗೆ ಲಭ್ಯವಿರುವ ಮಾಹಿತಿಯ ಪ್ರಕಾರ 12 ನೆಯ ಶತಮಾನದಲ್ಲಿ ಬಸವಣ್ಣನವರು ಪ್ರಾರಂಭಿಸಿದ ಅನುಭವ ಮಂಟಪ ಪ್ರಜಾಪ್ರಭುತ್ವದ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತಿತ್ತು ಎಂದು ಹೇಳಲಾಗುತ್ತದೆ. ಅದು ಅನುಭವ ಮಂಟಪಕ್ಕೆ ಮಾತ್ರ ಸೀಮಿತವಾಗಿತ್ತು. ಬಿಜ್ಜಳನ ಆಡಳಿತ ರಾಜ ಪ್ರಭುತ್ವವನ್ನು ಹೊಂದಿತ್ತು…..

ಬ್ರಿಟೀಷರು ಭಾರತವನ್ನು ಸಂಪೂರ್ಣ ಆಕ್ರಮಿಸಿದ ನಂತರ ಅನೇಕ ಪ್ರಾಂತೀಯ ಒಕ್ಕೂಟಗಳನ್ನು ಒಗ್ಗೂಡಿಸಿ ಕೆಲವೊಂದು ಚುನಾವಣೆ ಮತ್ತು ನಾಮಕರಣದ ಮೂಲಕ ಜನ ಪ್ರಾತಿನಿಧ್ಯವನ್ನು ನೀಡುವ ನಿಯಂತ್ರಿತ ಪ್ರಜಾಪ್ರಭುತ್ವವನ್ನು ಭಾರತದಲ್ಲಿ ಜಾರಿಗೆ ತಂದರು……

1947 ಆಗಸ್ಟ್ 15 ರ ನಂತರ ಭಾರತ ಸ್ವಾತಂತ್ರ್ಯ ಪಡೆದರು ನಿಜವಾದ ಸಂವಿಧಾನಾತ್ಮಕ ಸಂಸದೀಯ ಪ್ರಜಾಪ್ರಭುತ್ವ ಜಾರಿಯಾಗಿದ್ದು ಜನವರಿ 26, 1950. ಹಾಗೆಯೇ ಪ್ರಜಾಪ್ರಭುತ್ವದ ಭದ್ರ ಬುನಾದಿಯಾದ ಸಾರ್ವತ್ರಿಕ ಚುನಾವಣೆ ನಡೆದದ್ದು 1951 /52……..

ಸುಮಾರು 77 ವರ್ಷಗಳಿಂದ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ. ಈ ಮಧ್ಯೆ ಭಾರತದ ಕರಾಳ ಇತಿಹಾಸದಲ್ಲಿ ಒಂದಾದ 1977 ರ ತುರ್ತುಪರಿಸ್ಥಿತಿಯನ್ನು ಸಹ ಇಲ್ಲಿ ನೆನಪಿಸಿಕೊಳ್ಳಬೇಕು. ಅದನ್ನು ಹೊರತುಪಡಿಸಿ ಬಹುತೇಕ ನಿಯಮಗಳ ಪ್ರಕಾರವೇ ಆಡಳಿತ ನಡೆಯುತ್ತಿದೆ. ಮೋಸ ವಂಚನೆ ಶಾಸಕರ ಕುದುರೆ ವ್ಯಾಪಾರ ಭ್ರಷ್ಟಾಚಾರ ಕೋಮುವಾದಗಳು ಇದ್ದರೂ ಸಹ ಅಂಕಿಅಂಶಗಳ ಪ್ರಕಾರ ಬಹುಮತ ಹೊಂದಿರುವವರೇ ಅಧಿಕಾರ ನಡೆಸುತ್ತಿದ್ದಾರೆ. ಆ ಮಟ್ಟಿಗೆ ಪ್ರಜಾಪ್ರಭುತ್ವ ಬಲಿಷ್ಠವಾಗಿದೆ. ಹಾಗೆಯೇ ಎಷ್ಟೇ ಬಲಿಷ್ಠ ಸರ್ಕಾರವಾದರು ನ್ಯಾಯಾಂಗ ವ್ಯವಸ್ಥೆಗೆ ಬಹುತೇಕ ಬೆಲೆ ಕೊಡುತ್ತದೆ. ಒಟ್ಟಿನಲ್ಲಿ ಭಾರತದ ಪ್ರಜಾಪ್ರಭುತ್ವ ವಿಶ್ವಕ್ಕೆ ಒಂದು ಮಾದರಿ……….

ತಾಂತ್ರಿಕವಾಗಿ ಒಂದು ಮಾದರಿ ಎಂಬುದು ನಿಜ. ಆದರೆ ವಾಸ್ತವದಲ್ಲಿ ತುಂಬಾ ಹೆಮ್ಮೆ ಪಡುವಂತೇನೂ ಇಲ್ಲ.
ಸುಮಾರು 60 ವರ್ಷಗಳ ಕಾಲ ಮತದಾರರು ಗುಲಾಮಿ ಮನಸ್ಥಿತಿಯ ಪ್ರಭಾವಕ್ಕೆ ಒಳಗಾಗಿದ್ದರೆ ಕಳೆದ 15 ವರ್ಷಗಳಲ್ಲಿ ಭಕ್ತ ಸಂಸ್ಕೃತಿ ತಲೆ ಎತ್ತಿದೆ. ಎರಡೂ ಒಂದೇ ನಾಣ್ಯದ ಎರಡು ಮುಖಗಳಷ್ಟೇ.‌ ಪ್ರತಿಯೊಂದನ್ನು ಒಪ್ಪಿಕೊಳ್ಳುತ್ತಾ, ಸಮರ್ಥಿಸುತ್ತಾ, ತಮ್ಮ ಅನುಕೂಲಕರ ವಾದ ಮಂಡಿಸಿ ಜನಪ್ರಿಯತೆ ಗಳಿಸುವ ಸ್ವಾರ್ಥ ಎದ್ದು ಕಾಣುತ್ತದೆ. ದೇಶ ಹಾಳಾದರೂ ಪರವಾಗಿಲ್ಲ ತನ್ನ ವಿಚಾರಧಾರೆಯ ಪಕ್ಷ ಅಧಿಕಾರಕ್ಕೆ ಬಂದರೆ ಸಾಕು ಅದಕ್ಕೆ ಯಾವ ಮಾರ್ಗವಾದರು ಸರಿ ಎಂಬ ಕೆಟ್ಟ ಮನಸ್ಥಿತಿ ಬೆಳವಣಿಗೆ ಹೊಂದಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿದೆ…..

ವಿಶ್ವ ಪ್ರಜಾಪ್ರಭುತ್ವ ದಿನದಂದು ಸಂವಿಧಾನ ಪೀಠಿಕೆ ಓದುವುದರ ಜೊತೆಗೆ ನಮ್ಮ ನಡವಳಿಕೆಗಳಲ್ಲಿ ಸಹ ಪ್ರಜಾಪ್ರಭುತ್ವದ ಅಂಶಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ‌ಮುಖ್ಯವಾಗಿ ಅತ್ಯಂತ ಸರಳವಾದ ಕೆಲವು ಗುಣಗಳನ್ನು ಅನುಸರಿಸಬೇಕು…..

ಜನ, ದೇಶ ಮತ್ತು ಸಂವಿಧಾನ ಅತ್ಯಂತ ಮಹತ್ವದ್ದು. ಅದಕ್ಕೆ ಗೌರವ ಪ್ರೀತಿ ಮಾನ್ಯತೆ ಮತ್ತು ಮೊದಲ ಆದ್ಯತೆ ನೀಡುತ್ತೇನೆ…..

ಸಂಯಮ, ಸಹಕಾರ, ಪ್ರೀತಿ, ಸಹಬಾಳ್ವೆ ಇವುಗಳು ದಿನನಿತ್ಯದ ಬದುಕಿನ ಚಟುವಟಿಕೆಗಳ ಭಾಗವಾಗಿರುವಂತೆ ನೋಡಿಕೊಳ್ಳುತ್ತೇನೆ…..

ಭ್ರಷ್ಟಾಚಾರ, ಜಾತಿ ವ್ಯವಸ್ಥೆ, ಸ್ತ್ರೀ ಶೋಷಣೆ, ಚುನಾವಣಾ ಅಕ್ರಮ ಇವುಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ವಹಿಸುತ್ತೇನೆ……..

ಗಾಳಿ, ನೀರು, ಆಹಾರ ಮಲಿನವಾಗಲು ಉದ್ದೇಶಪೂರ್ವಕವಾಗಿ ನಾನು ಕಾರಣನಾಗದಿರುವಂತೆ ಎಚ್ಚರಿಕೆ ವಹಿಸುತ್ತೇನೆ…..

ನನ್ನೊಳಗೆ ಮಾನವೀಯ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಸದಾ ಜಾಗೃತವಾಗಿರುವಂತೆ ಅರಿವಿನ ಅಂತರದಲ್ಲಿ ಸದಾ ಜೀವಿಸುತ್ತೇನೆ…..

” ಭಾರತದ ಪ್ರಜೆಯಾದ ನಾನು ಸಂವಿಧಾನದ ಪೀಠಿಕೆಯಲ್ಲಿರುವ ಆಶಯವನ್ನು ಓದುತ್ತೇನೆ ಮತ್ತು ಅರ್ಥಮಾಡಿಕೊಳ್ಳುತ್ತೇನೆ ಹಾಗು ಅದೇ ರೀತಿ ನನ್ನ ನಡವಳಿಕೆ ರೂಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ನನ್ನ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸದಾ ಜಾಗೃತನಾಗಿರುತ್ತೇನೆ. ನನಗೆ ದೊರೆತಿರುವ ಎಲ್ಲಾ ಸ್ವಾತಂತ್ರ್ಯವನ್ನು ಇನ್ನೊಬ್ಬರಿಗೆ ತೊಂದರೆಯಾಗದಂತೆ ನಿಯಂತ್ರಿತ ರೀತಿಯಲ್ಲಿ ಮತ್ತು ಪ್ರಜ್ಞಾಪೂರ್ವಕವಾಗಿ ಅನುಭವಿಸುತ್ತೇನೆ. ಈ ಜನ ಈ ದೇಶ ನನ್ನದು, ನಿಮ್ಮದು, ನಮ್ಮೆಲ್ಲರದು ಎಂಬ ಅರಿವನ್ನು ಸದಾ ಜಾಗೃತವಾಗಿಟ್ಟಿರುತ್ತೇನೆ. ಭಾರತದ ಪ್ರಜೆಗಳೆಲ್ಲರು ನನ್ನ ಸಹೋದರ, ಸಹೋದರಿಯರು ಎಂದೇ ಭಾವಿಸುತ್ತೇನೆ. ಯಾವುದೇ ಜಾತಿ, ಧರ್ಮ, ಭಾಷೆ, ಪ್ರದೇಶ ಸಿದ್ದಾಂತಕ್ಕಿಂತ ನನ್ನ ದೇಶದ ಸಂವಿಧಾನವೇ ನನಗೆ ಮುಖ್ಯ. ಅದಕ್ಕೆ ಸಂಪೂರ್ಣ ನಿಷ್ಠನಾಗಿರುತ್ತೇನೆ. ಆ ಮೂಲಕ ಈ ಮಣ್ಣಿನ ಋಣ ತೀರಿಸಿ ಜೀವನದ ಸಾರ್ಥಕತೆ ಹೊಂದುತ್ತೇನೆ ”

ದೇಶಕ್ಕೆ ಅತ್ಯಂತ ಮಾನವೀಯ ಮತ್ತು ಸಮಾನತೆಯ ಸಂವಿಧಾನ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸದಾ ನೆನೆಯುತ್ತಾ……

ವಿಶ್ವ ಮಾನವ ಪ್ರಜ್ಞೆಯೊಂದಿಗೆ
” ಮೇರಾ ಭಾರತ್ ಮಹಾನ್ ”

ಇದು ದೇಶಕ್ಕೆ ನಾನು ಕೊಡುವ ಒಂದು ಸಣ್ಣ ಕೊಡುಗೆ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಗಣೇಶ ಹಬ್ಬದ ಸಂಭ್ರಮದ ನಡುವೆ ಮಸಣವಾದ ಮನೆ: ಅಗ್ನಿ ದುರಂತಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ

ಬೆಳಗಾವಿ: ಗಣೇಶ ಚತುರ್ಥಿ ದಿನವೇ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿರುವ…

3 hours ago

ಗುಂಡಿ ರಸ್ತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳೇ ಬಲಿಪಶು: ಹದಗೆಟ್ಟ ರಸ್ತೆ–ನಿರ್ವಹಣೆ ಕೊರತೆ; ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುವ ಬಸ್‌ಗಳಿಂದ ಪ್ರಯಾಣಿಕರ ಪರದಾಟ

ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಕೆಎಸ್‌ಆರ್‌ಟಿಸಿ ಬಸ್‌ಗಳಿಂದಾಗಿ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.…

15 hours ago

ಗಜಮುಖನ ಆರಾಧನೆಯಲ್ಲಿ ಮಿಂದೆದ್ದ ದೊಡ್ಡಬಳ್ಳಾಪುರ: ಬೆಸ್ತರಪೇಟೆಯಲ್ಲಿ 14 ಅಡಿ ಎತ್ತರದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ: 7ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ಮೆರುಗು

ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ದೊಡ್ಡಬಳ್ಳಾಪುರ ನಗರದಲ್ಲೂ ಗಣೇಶೋತ್ಸವದ ಕಳೆ ಹೆಚ್ಚಾಗಿದೆ. ನಗರದ ವಿವಿಧೆಡೆ ಗಣೇಶ…

15 hours ago

ಗಣೇಶ ವಿಸರ್ಜನೆಗೆ ಗುಂಡಮಗೆರೆ ಕೆರೆ ಬಳಿ ವಿಶೇಷ ವ್ಯವಸ್ಥೆ

ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ…

17 hours ago

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ತೂಬಗೆರೆಯಲ್ಲೂ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಆಚರಣೆ: 20 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…

21 hours ago

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

1 day ago