
ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರೌಡಿ ಶೀಟರ್ ಖಲೀಮ್ (35) ಹತ್ಯೆ ಪ್ರಕರಣಕ್ಕೆ ತನಿಖೆಯ ವೇಳೆ ಹೊಸ ತಿರುವು ಸಿಕ್ಕಿದೆ.
ಯುವತಿಯೊಬ್ಬಳ ಕುರಿತು ಅಪಪ್ರಚಾರ ನಡೆಸಿ ಕುಟುಂಬದ ಗೌರವಕ್ಕೆ ಧಕ್ಕೆ ತಂದಿದ್ದ ವಿಚಾರವೇ ಈ ಕೊಲೆಗೆ ಪ್ರಮುಖ ಕಾರಣ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜೂನ್ 7ರಂದು ಸೂಲಿಬೆಲೆ ಗ್ರಾಮದಲ್ಲಿ ಖಲೀಮ್‌ನನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸೂಲಿಬೆಲೆ ಪೊಲೀಸರು, ಆರೋಪಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದರು.
ತನಿಖೆಯಲ್ಲಿ ಹೊರಬಂದ ಮಾಹಿತಿ ಪ್ರಕಾರ, ಆರೋಪಿಗಳಲ್ಲೊಬ್ಬನ ತಂಗಿಗೆ ಮದುವೆ ಸಂಬಂಧಗಳು ಬರುತ್ತಿದ್ದ ಸಂದರ್ಭಗಳಲ್ಲಿ ಖಲೀಮ್ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದ ಎನ್ನಲಾಗಿದೆ.
ಅಲ್ಲದೆ, ಆಕೆ ಬೇರೆ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದು ವಿವಿಧೆಡೆ ಅಪಪ್ರಚಾರ ಮಾಡುತ್ತಿದ್ದನಂತೆ. ಇದರಿಂದ ಮದುವೆ ಸಂಬಂಧಗಳು ಕೈ ತಪ್ಪುತ್ತಿದ್ದವು ಎಂಬ ಆರೋಪ ಕೇಳಿಬಂದಿದೆ.
ಇದರ ಜೊತೆಗೆ, ಯುವತಿಯ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದ ಹಾಗೂ ಸಾರ್ವಜನಿಕವಾಗಿ ಅಗೌರವ ತೋರಿಸುತ್ತಿದ್ದನೆಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಈ ಬೆಳವಣಿಗೆಗಳಿಂದ ಆಕ್ರೋಶಗೊಂಡ ಆರೋಪಿಗಳು ಖಲೀಮ್ ವಿರುದ್ಧ ದ್ವೇಷ ಬೆಳೆಸಿಕೊಂಡು, ಪೂರ್ವಯೋಜಿತವಾಗಿ ತಂಡ ರಚಿಸಿ ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯ ದಿನ ಖಲೀಮ್ ಮೇಲೆ ಮಾರಕಾಸ್ತ್ರಗಳಿಂದ ಸುಮಾರು 8ರಿಂದ 10 ಬಾರಿ ಚುಚ್ಚಿ ದಾಳಿ ನಡೆಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಒಟ್ಟು ಏಳು ಮಂದಿ ಭಾಗಿಯಾಗಿದ್ದು, ಇದುವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಸಮೀರ್ ಬೇಗ್(31), ಆಯಾಜ್ ಪಾಷಾ(24), ಇಮ್ರಾನ್ ಬೇಗ್(28) ಅಲಿಯಾಸ್ ಅಡ್ಡು, ಅಬ್ದುಲ್ ಖಲೀಲ್(22) ಹಾಗೂ ಇಮ್ರಾನ್ ಬೇಗ್ (28) ಎಂದು ಗುರುತಿಸಲಾಗಿದೆ.
ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಸಂಶೀರ್ ಮತ್ತು ಸಾಖೀರ್ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಸೂಲಿಬೆಲೆ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಹತ್ಯೆಗೆ ಸಂಬಂಧಿಸಿದ ಇತರೆ ಆಯಾಮಗಳನ್ನೂ ಪರಿಶೀಲಿಸಲಾಗುತ್ತಿದೆ.