
ದೇವನಹಳ್ಳಿ: ಕೆಂಪೇಗೌಡರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಕೆಲ ದಿನಗಳಲ್ಲಿ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಗಳಲ್ಲಿ ಮಾದಕ ವಸ್ತುಗಳು ಹಾಗೂ ಚಿನ್ನದ ಕಳ್ಳಸಾಗಣೆಯ ನಾಲ್ಕು ಪ್ರತ್ಯೇಕ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ₹4.33 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೂನ್ 17ರಂದು ಬ್ಯಾಂಕಾಕ್ನಿಂದ ಆಗಮಿಸಿದ್ದ ಇಬ್ಬರು ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದ ಅಧಿಕಾರಿಗಳು, ಅವರ ಕ್ಯಾಬಿನ್ ಬ್ಯಾಗೇಜ್ನಲ್ಲಿ ಅಡಗಿಸಿಟ್ಟಿದ್ದ 2.02 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು ₹70.7 ಲಕ್ಷ ಎಂದು ಅಂದಾಜಿಸಲಾಗಿದ್ದು, ಇಬ್ಬರನ್ನೂ 1985ರ ಎನ್ಡಿಪಿಎಸ್ (NDPS) ಕಾಯ್ದೆಯಡಿ ಬಂಧಿಸಲಾಗಿದೆ.
ಇದಾದ ಬಳಿಕ ಜೂನ್ 19ರಂದು ಬ್ಯಾಂಕಾಕ್ನಿಂದ ಬಂದ ಮತ್ತೋರ್ವ ಪ್ರಯಾಣಿಕನ ಚೆಕ್-ಇನ್ ಬ್ಯಾಗೇಜ್ನಲ್ಲಿ ಬಚ್ಚಿಟ್ಟಿದ್ದ 5.98 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ವಶಪಡಿಸಿಕೊಂಡ ಮಾದಕ ವಸ್ತುವಿನ ಮೌಲ್ಯ ಸುಮಾರು ₹2.09 ಕೋಟಿ ಎಂದು ತಿಳಿದುಬಂದಿದ್ದು, ಆರೋಪಿಯನ್ನು ಎನ್ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಗಿದೆ.
ಜೂನ್ 20ರಂದು ದುಬೈನಿಂದ ಆಗಮಿಸಿದ್ದ ಪ್ರಯಾಣಿಕನ ಬ್ಯಾಗೇಜ್ ತಪಾಸಣೆ ವೇಳೆ 575.6 ಗ್ರಾಂ ಚಿನ್ನ ಹಾಗೂ 32,000 ಸಿಗರೇಟ್ ಕಡ್ಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ₹89.40 ಲಕ್ಷ ಎಂದು ಅಂದಾಜಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಅದೇ ರೀತಿ ಜೂನ್ 21ರಂದು ಕೌಲಾಲಂಪುರದಿಂದ ಬಂದ ಪ್ರಯಾಣಿಕನ ಪ್ಯಾಂಟ್ ಜೇಬಿನಲ್ಲಿ ಬಚ್ಚಿಟ್ಟಿದ್ದ 427.67 ಗ್ರಾಂ ಚಿನ್ನದ ಆಭರಣಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ವಶಪಡಿಸಿಕೊಂಡ ಚಿನ್ನದ ಮೌಲ್ಯ ₹64 ಲಕ್ಷವಾಗಿದ್ದು, ಆರೋಪಿಯನ್ನು ಕಸ್ಟಮ್ಸ್ ಕಾಯ್ದೆಯಡಿ ಬಂಧಿಸಲಾಗಿದೆ.
ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ನಿರಂತರ ನಿಗಾ ಮತ್ತು ಕಟ್ಟುನಿಟ್ಟಿನ ತಪಾಸಣೆಯಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿದ್ದ ಕಳ್ಳಸಾಗಣೆ ಪ್ರಯತ್ನಗಳು ಒಂದರ ಹಿಂದೆ ಒಂದರಂತೆ ಬಯಲಾಗುತ್ತಿದ್ದು, ಆರೋಪಿಗಳ ವಿರುದ್ಧ ಕಾನೂನು