ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಶೇ. 87.37 ರಷ್ಟು ಹಣ ನೀಡುತ್ತಿದ್ದು, ಕೇಂದ್ರ ಸರ್ಕಾರದ ಪಾಲು ಕೇವಲ ಶೇ12.63 ರಷ್ಟು ಮಾತ್ರ- ಸಿಎಂ ಸಿದ್ದರಾಮಯ್ಯ

ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಶೇ. 87.37 ರಷ್ಟು ಹಣ ನೀಡುತ್ತಿದ್ದು, ಕೇಂದ್ರ ಸರ್ಕಾರದ ಪಾಲು ಕೇವಲ ಶೇ12.63 ರಷ್ಟಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವವೂ ಸಹ ಬೆಂಗಳೂರು ಮೆಟ್ರೋ ಯೋಜನೆಯ ಅನುಷ್ಠಾನಕ್ಕೆ ಕಾರಣವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ವಿವಿಧೆಡೆ ಆಯೋಜಿಸಿದ್ದ ಸಮಾರಂಭಗಳಲ್ಲಿ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿ, ನಮ್ಮ ಮೆಟ್ರೋ ಯೋಜನೆಯ ಹಳದಿ ಮಾರ್ಗವನ್ನು ಉದ್ಘಾಟಿಸಿ, ಮೆಟ್ರೋ 3ನೇ ಹಂತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಹಣಕಾಸು ಮತ್ತು ತಾಂತ್ರಿಕ ನೆರವು ಒದಗಿಸುತ್ತಿದೆ. ರಾಜ್ಯ ಸರ್ಕಾರ ಮೆಟ್ರೋ ಯೋಜನೆ ಹಂತ 1,2 ಮತ್ತು 2ಎ, 2ಬಿ ಮತ್ತು ಹಂತ 3 ಅನುಷ್ಠಾನಕ್ಕೆ ತನ್ನ ಪಾಲಿನ ರೂ. 25,387 ಕೋಟಿ ಒದಗಿಸಿದ್ದು, ಇದರೊಂದಿಗೆ ಹೆಚ್ಚುವರಿ ಹಣಕಾಸು ನೆರವಿನ ರೂಪದಲ್ಲಿ ಸಾಲ ಮರುಪಾವತಿಗಾಗಿ ರೂ.3,987 ಕೋಟಿ ಒದಗಿಸಿದೆ. ಮೆಟ್ರೋ ಯೋಜನೆಗಳಿಗಾಗಿ ಇದುವರೆಗೂ 59,139 ಕೋಟಿ ರೂ ಅನುದಾನವನ್ನು ವಿನಿಯೋಗಿಸಲಾಗಿದೆ. ರಾಜ್ಯ ಸರ್ಕಾರದ ಜವಾಬ್ಧಾರಿ ಶೇ. 87.37 ರಷ್ಟಿದೆ. ಕೇಂದ್ರ ಸರ್ಕಾರವು ತನ್ನ ಖಜಾನೆಯಿಂದ ಕೊಟ್ಟಿರುವುದು ಶೇ. 12.63 ರಷ್ಟು. ಕೇಂದ್ರ ಸರ್ಕಾರ ಒದಗಿಸಿರುವುದು 7,468.86 ಕೋಟಿ ರೂ.ಗಳು ಮಾತ್ರ ಎಂದು ಹೇಳಿದರು.

ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾಗಳು ಶೇ.50;50 ಅನುಪಾತದಲ್ಲಿ ಹೂಡಿಕೆ ಮಾಡಬೇಕೆಂದು ಒಪ್ಪಂದವಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಈಕ್ವಿಟಿಯ ಹೊರತಾಗಿ ಸಾಲದ ರೂಪದಲ್ಲಿ ಬಂದ ಹಣವನ್ನು ಬಡ್ಡಿ ಸಮೇತ ರಾಜ್ಯ ಸಕಾರ ಹಾಗೂ ಮೆಟ್ರೋ ಸಂಸ್ಥೆಗಳು ತೀರಿಸಬೇಕಾಗಿದೆ. ಇದರಿಂದ ರಾಜ್ಯದ ಮೇಲೆ, ನಮ್ಮ ಮೇಲೆ ಶೇ.87.37 ರಷ್ಟು ಭಾರವಿದೆ ಎಂದು ಮಾನ್ಯ ಪ್ರಧಾನಮಂತ್ರಿಗಳಿಗೆ ಮನವರಿಕೆ ಮಾಡಿಸಬಯಸುತ್ತೇನೆ ಎಂದು ತಿಳಿಸಿದರು.

ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಿ ಬೆಂಗಳೂರು ನಗರವನ್ನು ಜಾಗತಿಕ ಆಕರ್ಷಣೆಯ ನಗರವಾಗಿಸುವ ನಿಟ್ಟಿನಲ್ಲಿ ಮೆಟ್ರೋ ಯೋಜನೆ ಪ್ರಮುಖ ಹೆಜ್ಜೆಯಾಗಿದ್ದು, ನಮಗೆಲ್ಲರಿಗೂ ಇದು ಹೆಮ್ಮೆಯ ದಿನವಾಗಿದೆ ಎಂದು ಹೇಳಿದರು.

ಮೆಟ್ರೊ ಹಳದಿ ಮಾರ್ಗದ ಉದ್ಘಾಟನೆಯಿಂದ ಬೆಂಗಳೂರು ಮೆಟ್ರೋ ಒಟ್ಟು 96.10 ಕಿ.ಮೀ ಕಾರ್ಯಾಚರಣೆಯೊಂದಿಗೆ ದಕ್ಷಿಣ ಭಾರತದಲ್ಲಿಯೇ ಅತಿ ಉದ್ದದ ಮೆಟ್ರೊ ಜಾಲದ ಗೌರವಕ್ಕೆ ಪಾತ್ರವಾಗಿದೆ. ಇದು ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ಕ್ಷಣವಾಗಿದ್ದು, ಅಭಿವೃದ್ಧಿಯ ಕಡೆಗಿನ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

ಬೆಂಗಳೂರಿನ ಬೆಳವಣಿಗೆ ಮತ್ತು ರಾಷ್ಟ್ರದ ಅಭಿವೃದ್ಧಿಯ ದೃಷ್ಟಿಯಿಂದ ನಮ್ಮ ಮೆಟ್ರೋಗೆ ಹೆಚ್ಚಿನ ಅನುದಾನಗಳನ್ನು ಒದಗಿಸಬೇಕೆಂದು ವಿನಂತಿಸುತ್ತೇನೆ.
ನಾಗರಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪರಸ್ಪರ ಸಹಕಾರ, ಒಕ್ಕೂಟ ವ್ಯವಸ್ಥೆಯ ಬುನಾದಿಯನ್ನು ಇನ್ನಷ್ಟು ಬಲಪಡಿಸುವ ವಿಶ್ವಾಸ ನನಗಿದೆ ಎಂದು ಹೇಳಿದರು.

ಇಂದು ಲೋಕಾರ್ಪಣೆಗೊಂಡಿರುವ ರೂ.7,160 ಕೋಟಿ ವೆಚ್ಚದ ಹಳದಿ ಲೇನ್ ಬೆಂಗಳೂರಿನ ಪ್ರಮುಖ ಐಟಿ ಮತ್ತು ತಂತ್ರಜ್ಞಾನ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ವೃತ್ತಿಪರರಿಗೆ, ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ತ್ವರಿತ ಪ್ರಯಾಣವನ್ನು ಖಾತ್ರಿಪಡಿಸುತ್ತದೆ. ಪ್ರತಿನಿತ್ಯ ಸುಮಾರು 3.5 ಲಕ್ಷ ಪ್ರಯಾಣಿಕರು ಹಳದಿ ಮಾರ್ಗ ಬಳಸುವ ನಿರೀಕ್ಷೆಯಿದೆ. ಇದರಿಂದ ಮುಖ್ಯವಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಜಯದೇವ ಆಸ್ಪತ್ರೆ ಸುತ್ತಲಿನ ಭಾರೀ ಟ್ರಾಫಿಕ್ ಸಮಸ್ಯೆ ಸುಧಾರಿಸುವ ವಿಶ್ವಾಸ ಹೊಂದಿದ್ದೇವೆ ಎಂದು ತಿಳಿಸಿದರು.

ಇಂದು ಉದ್ಘಾಟನೆಗೊಂಡಿರುವ ಈ ಹಳದಿ ಮಾರ್ಗ ಪ್ರಮುಖ ಬಯೋಟೆಕ್ ಮತ್ತು ಐಟಿ ಹಬ್ ಗಳನ್ನು ಪರಸ್ಪರ ಜೋಡಿಸುತ್ತದೆ ಮಾತ್ರವಲ್ಲದೆ ಹಲವು ಪ್ರಮುಖ ಆಸ್ಪತ್ರೆಗಳು ಮತ್ತು ಕೈಗಾರಿಕಾ ವಲಯಗಳಿಗೂ ಸುಲಭದ ಸಂಪರ್ಕ ಸಾಧ್ಯವಾಗಿಸಿದೆ. ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾಗಿರುವ ಡಬಲ್ ಡೆಕ್ಕರ್ ಫ್ಲೈಓವರ್, ಬೆಂಗಳೂರಿನ ಅತ್ಯಂತ ಜನನಿಬಿಡ ಜಂಕ್ಷನ್‌ಗಳಲ್ಲಿನ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲಿದೆ ಎಂದು ಹೇಳಿದರು.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂಬುವುದಕ್ಕೆ ಇದು ನಿದರ್ಶನವಾಗಿದೆ.ಲ ಎಂದರು.

ಹೆಚ್ಚುತ್ತಿರುವ ನಗರೀಕರಣ ಮತ್ತು ಜನಸಂಖ್ಯೆ ನಗರದ ರಸ್ತೆಗಳ ಮೇಲೆ ವಿಪರೀತ ಒತ್ತಡವನ್ನು ಹೇರುತ್ತಿದೆ. ಪ್ರತಿದಿನ ಸುಮಾರು 9 ಲಕ್ಷ ಪ್ರಯಾಣಿಕರು ಬೆಂಗಳೂರು ಮೆಟ್ರೋ ಸೇವೆ ಬಳಸುತ್ತಿದ್ದಾರೆ. ಹಳದಿ ಮಾರ್ಗ ಸೇರ್ಪಡೆಯಿಂದ ಪ್ರಯಾಣಿಕರ ಸಂಖ್ಯೆ 12.5 ಲಕ್ಷ ದಾಟುವ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿದರು.

ಬೆಂಗಳೂರು ಮೆಟ್ರೋ ಹಾದಿಯಲ್ಲಿ ನಾವು ಸಾಗಬೇಕಾದ ದೂರ ಇನ್ನೂ ಬಹಳಷ್ಟಿದೆ. ಎರಡನೇ ಹಂತದ ಮಾರ್ಗದ ಕಾರ್ಯಾಚರಣೆಯೊಂದಿಗೆ, ನಾವು 117 ಕಿ.ಮೀ ಮೆಟ್ರೋ ಸಂಪರ್ಕ ಸಾಧಿಸಲಿದ್ದೇವೆ. ಇದರಿಂದ 15 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸಲು ಅವಕಾಶವಾಗಲಿದೆ ಎಂದು ತಿಳಿಸಿದರು.

ಮೆಟ್ರೋ 2ಎ ಮತ್ತು 2ಬಿ ಹಂತದಲ್ಲಿ ಹೊರ ವರ್ತುಲ ರಸ್ತೆ ಮತ್ತು ಏರ್ಪೋರ್ಟ್ ಸಂಪರ್ಕಿಸುವ 58 ಕಿ.ಮೀ ಉದ್ದದ ರೂ.15,131 ಕೋಟಿ ವೆಚ್ಚದ ಮಾರ್ಗ 2027ರ ಡಿಸೆಂಬರ್ ನಲ್ಲಿ ಪೂರ್ಣಗೊಳ್ಳಲಿದೆ. ಈ ಮಾರ್ಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ನಗರವನ್ನು ಜೋಡಿಸಲಿದೆ ಎಂದರು.

ಹಂತ-3ರ 44.65 ಕಿ.ಮೀ ಉದ್ದದ ರೂ.15,611 ಕೋಟಿ ಹೂಡಿಕೆಯ ಮಾರ್ಗ ಬೆಂಗಳೂರು ನಗರದ ಸಂಪರ್ಕ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲಿದೆ. ಇದರ ಸಿವಿಲ್ ಕಾಮಗಾರಿಗಳು ಸಧ್ಯದಲ್ಲಿಯೇ ಆರಂಭವಾಗಲಿದೆ ಎಂದು ಹೇಳಿದರು.

ಮೆಟ್ರೋ ಹಂತ 4ರಲ್ಲಿ 53 ಕಿ.ಮೀ ಉದ್ದದ ಡಬಲ್ ಡೆಕ್ಕರ್-ಕಂ-ಮೆಟ್ರೋ ಮಾರ್ಗ ನಿರ್ಮಾಣದ ಕಾರ್ಯಸಾಧ್ಯತಾ ವರದಿ (Feasibility Report) ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

2030ರ ವೇಳೆಗೆ ಬೆಂಗಳೂರು ನಗರದಲ್ಲಿ 220 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಪೂರ್ಣಗೊಳಿಸಿ, 30 ಲಕ್ಷ ಜನರು ಪ್ರಯಾಣಿಸಲು ಮೂಲಸೌಕರ್ಯ ಕಲ್ಪಿಸುವುದು ನಮ್ಮ ಬದ್ಧತೆಯಾಗಿದೆ ಎಂದರು.

ಮೆಟ್ರೋ ನಿಲ್ದಾಣಗಳ ನಿರ್ಮಾಣದಲ್ಲಿ ಇನ್ಫೋಸಿಸ್ ಫೌಂಡೇಶನ್, ಬಯೋಕಾನ್ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್‌ ನಂತಹ ಖಾಸಗಿ ಸಂಸ್ಥೆಗಳು ಕೈಜೋಡಿಸಿವೆ. ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ ಮುಂದಿನ ದಿನಗಳಲ್ಲಿ ಇನ್ನಷ್ಟು ಸದೃಢಗೊಳ್ಳುವ ವಿಶ್ವಾಸ ನನಗಿದೆ ಎಂದು ಹೇಳಿದರು.

ನಮ್ಮ ರಾಜ್ಯವು ದೇಶದ ಐಟಿ ರಫ್ತಿನಲ್ಲಿ ಶೇ.35-40 ರಷ್ಟು ಕೊಡುಗೆ ಕೊಡುತ್ತಿದೆ. ಇದರಲ್ಲಿ ಬೆಂಗಳೂರಿನ ಪಾಲು ದೊಡ್ಡದು. ಎಲೆಕ್ಟ್ರಾನಿಕ್ಸ್ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯ ರಫ್ತಿನಲ್ಲಿ ಶೇ.40 ಕ್ಕೂ ಹೆಚ್ಚಿನ ಪಾಲು ರಾಜ್ಯದ್ದಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು 1.35 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳನ್ನು ರೂಪಿಸಿ ಸಂಪನ್ಮೂಲಗಳನ್ನು ವಿನಿಯೋಗಿಸಿ ಬೆಂಗಳೂರನ್ನು ಮಾದರಿ ನಗರವನ್ನಾಗಿಸಲು ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ಅನೇಕ ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. ದೇಶದ ಆರ್ಥಿಕತೆಗೆ ಬೃಹತ್ ಕೊಡುಗೆ ಕೊಡುತ್ತಿರುವ ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರವೂ ಸಹ ಕೈ ಜೋಡಿಸಬೇಕೆಂದು ವಿನಂತಿಸುತ್ತೇನೆ ಎಂದು ತಿಳಿಸಿದರು.

Ramesh Babu

Journalist

Recent Posts

ಕುಸುಮ್ (ಸೌರ ವಿದ್ಯುತ್) ಯೋಜನೆ ಹೆಸರಲ್ಲಿ ದೇಶ ಕಾಯೋ ಯೋಧರ ಭೂಮಿಗೆ ಬೇಲಿ: ತಬ್ಬಿಬ್ಬಾದ ಯೋಧರ ಕುಟುಂಬ

ಕಳೆದ 10 ವರ್ಷಗಳಿಂದ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕನ್ನಮಂಗಲ ಗ್ರಾಮದ ಸರ್ವೇ ನಂಬರ್ 50ರ ಗೋಮಾಳದಲ್ಲಿ 53-57 ಅರ್ಜಿ…

9 hours ago

ಟೋಲ್ ರಸ್ತೆಯಲ್ಲಿ ಮಿತಿಮೀರಿದ ಅಪಘಾತ: ರಸ್ತೆ ಸುರಕ್ಷತೆ ಕಾಪಾಡದ ಸುಂಕವಸೂಲಿ(ಟೋಲ್) ಗುತ್ತಿಗೆದಾರರು: ಹೆದ್ದಾರಿಯಲ್ಲಿ ಕುಳಿತು ಟೋಲ್ ವಿರುದ್ಧ ಧಿಕ್ಕಾರ ಕೂಗಿದ ರೈತರು, ಸಂಘಟನೆಗಾರರು…

ರಸ್ತೆ ನಿಯಮಗಳನ್ನು ಪಾಲಿಸದೆ ವಾಹನಸವಾರರಿಗೆ ಸಮಸ್ಯೆ ಮಾಡುತ್ತಿರುವ ಟೋಲ್ ಸಿಬ್ಬಂದಿ ವಿರುದ್ದ ರಾಜ್ಯ ರೈತ ಸಂಘ ಮತ್ತು ವಿವಿಧ ಕನ್ನಡಪರ…

10 hours ago

ವಿಜಯಪುರದ ಬಸವ ಕಲ್ಯಾಣ ಮಠದಲ್ಲಿ 38ನೇ ವರ್ಷದ ಕಡ್ಲೆಕಾಯಿ ಪರಿಷೆ

ವಿಜಯಪುರ(ದೇವನಹಳ್ಳಿ): ಇಂದಿನ ಮಕ್ಕಳಿಗೆ ಶಿಕ್ಷಣದಷ್ಟೇ, ಆಚಾರ-ವಿಚಾರ ಒಳಗೊಂಡ ಸಂಸ್ಕಾರವನ್ನು ನೀಡುವುದು ಅವಶ್ಯವಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆತರುವ…

10 hours ago

ಸಾಸಲು ಹೋಬಳಿಯಲ್ಲಿ ಮಿತಿಮೀರಿದ ಕೃಷಿ ಬೋರ್ ವೆಲ್ ಕೇಬಲ್ ಕಳ್ಳರ ಹಾವಳಿ: ಒಂದೇ ದಿನ ಹಲವು ಕಡೆ ಕೇಬಲ್ ಕಟ್

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯಲ್ಲಿ ಬೋರ್ ವೆಲ್ ಗಳ ವಿದ್ಯುತ್ ಕೇಬಲ್ ಕಳ್ಳರ ಹಾವಳಿ ಮಿತಿಮೀರಿದೆ. ಕಳೆದ ರಾತ್ರಿ ಹತ್ತಾರು…

13 hours ago

ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ವಿದೇಶಗಳಿಂದ…

16 hours ago

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ: ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ ಗ್ರಾಪಂ ವಿಫಲ: ಸಿಡಿದ್ದೆದ್ದ ದಲಿತರು

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಏಕಿಷ್ಟು ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ. ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ…

18 hours ago