ವಿಶ್ವ ಮಾನವ ಹಕ್ಕುಗಳ ದಿನ ಡಿಸೆಂಬರ್ 10…….
ವಿಶ್ವಸಂಸ್ಥೆಯ ಸಾಮಾನ್ಯ ಸಭೆ 1948 ರಲ್ಲಿ ಈ ದಿನವನ್ನು ಮಾನವ ಹಕ್ಕುಗಳ ದಿನ ಎಂದು ಘೋಷಿಸಿ ಅಂದಿನಿಂದ ಇಂದಿನವರೆಗೂ ಆಚರಿಸಿಕೊಂಡು ಬರುತ್ತಿದೆ.
ಈ ವರ್ಷದ ಘೋಷಣೆ:
” Human Rights, Our Everyday Essentials”
” ಮಾನವ ಹಕ್ಕು ನಮ್ಮ ದಿನನಿತ್ಯದ ಅವಶ್ಯಕತೆ ಅಥವಾ ಅತ್ಯಗತ್ಯ “…
ಮಾನವ ಹಕ್ಕುಗಳ ಸಂರಕ್ಷಣಾ ಸಂಘ ಹಾಸನ,
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಸನ,
ಎಂ ಕೃಷ್ಣ ಕಾನೂನು ಕಾಲೇಜು ಹಾಸನ,
ಸರ್ಕಾರಿ ಕಾನೂನು ಕಾಲೇಜು ಹಾಸನ, ಇವರ ಸಂಯುಕ್ತ ಆಶ್ರಯದಲ್ಲಿ ಮಾನವ ಹಕ್ಕು ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಾನವ ಹಕ್ಕುಗಳ ಜಿಲ್ಲಾ ಘಟಕದ ಅಧ್ಯಕ್ಷರು, ಆತ್ಮೀಯ ಮಿತ್ರರು ಆದ ಶ್ರೀ ಅಬ್ದುಲ್ ಹಮೀದ್ ಅವರ ಪ್ರೀತಿಯ ಆಹ್ವಾನದ ಮೇರೆಗೆ ಮುಖ್ಯ ಅತಿಥಿಯಾಗಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.
ಇಂದು ಜಗತ್ತಿನಲ್ಲಿ ಅತಿ ಹೆಚ್ಚು
ಚರ್ಚಿಸಬೇಕಾಗಿರುವ ವಿಷಯ ಮಾನವ ಘನತೆಯಿಂದ ಬದುಕುವ ಹಕ್ಕು ಎಷ್ಟರಮಟ್ಟಿಗೆ ವಾಸ್ತವ ಜಗತ್ತಿನಲ್ಲಿ ಜಾರಿಯಾಗಿದೆ ಎಂಬುದು. ಈ ಪ್ರಶ್ನೆಯನ್ನು ಎಲ್ಲಾ ದೇಶಗಳು ತಮಗೆ ತಾವೇ ಕೇಳಿಕೊಳ್ಳಬೇಕಿದೆ. ಆಫ್ರಿಕಾದ ಕೆಲವು ದೇಶಗಳಲ್ಲಿ ಮನುಷ್ಯರೆಂಬ ಪ್ರಾಣಿಗಳು ಅತ್ಯಂತ ಕೆಟ್ಟ, ಹೀನಾಯ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ದಕ್ಷಿಣ ಅಮೆರಿಕಾದ ಕೆಲವು ದೇಶಗಳು, ಏಷ್ಯಾ ಖಂಡದ ಒಂದಷ್ಟು ದೇಶಗಳು, ಯುರೋಪಿನ ಮಧ್ಯಪ್ರಾಚ್ಯ ದೇಶಗಳಲ್ಲಿ ಮಾನವ ಹಕ್ಕುಗಳು ಸಾಮಾನ್ಯಕ್ಕಿಂತ ತೀರಾ ಕೆಳಮಟ್ಟದಲ್ಲಿದೆ.
ಇಷ್ಟೊಂದು ಆಧುನಿಕ ತಂತ್ರಜ್ಞಾನ, ಸೌಕರ್ಯಗಳು, ಆರ್ಥಿಕ ಅಭಿವೃದ್ಧಿ ಆಗುತ್ತಿದ್ದರೂ ಮನುಷ್ಯನ ಘನತೆಯ ಬದುಕಿನಲ್ಲಿ ಸುಧಾರಣೆಯನ್ನು ಕಾಣುತ್ತಿಲ್ಲ. ಕೆಲವೇ ಕೆಲವು ವರ್ಗದ ಜನ ಮಾತ್ರ ಅತ್ಯಂತ ಅಥವಾ ಅತಿರೇಕದ ಸ್ವಾತಂತ್ರ್ಯ, ಸ್ವೇಚ್ಛೆ ಸೇರಿ ಎಲ್ಲಾ ಸಂಪನ್ಮೂಲಗಳನ್ನು ಅನುಭವಿಸುತ್ತಿದ್ದಾರೆ. ಉಳಿದವರ ಸ್ಥಿತಿ ತೀರಾ ಅಧೋಗತಿ.
ಅನಾಗರಿಕತೆಯಿಂದ ನಾಗರಿಕ ಸಮಾಜ, ಯಾರೋ ಬಲಿಷ್ಠ ವ್ಯಕ್ತಿಯ ಮುಖಂಡತ್ವ, ಸಮುದಾಯಗಳ ಬೆಳವಣಿಗೆ, ಬುಡಕಟ್ಟುಗಳ ಉಗಮ, ರಾಜ ಪ್ರಭುತ್ವ, ಧರ್ಮ ಪ್ರಭುತ್ವ, ಸರ್ವಾಧಿಕಾರ, ಕಮ್ಯುನಿಸ್ಟ್ ಮತ್ತು ಪ್ರಜಾಪ್ರಭುತ್ವದ ಆಡಳಿತ ಹೀಗೆ ಅನೇಕ ರೀತಿಯ ಆಡಳಿತಾತ್ಮಕ ಪ್ರಯೋಗಗಳು ಈ ಜಗತ್ತಿನಲ್ಲಿ ನಡೆದಿದೆ. ಆ ಎಲ್ಲದರ ಅನುಭವಗಳ ಆಧಾರದ ಮೇಲೆ ಹೇಳುವುದಾದರೆ ನಿಜಕ್ಕೂ ಮಾನವ ಹಕ್ಕುಗಳ ಘನತೆಯನ್ನು ಸ್ವಲ್ಪಮಟ್ಟಿಗೆ ಕಾಪಾಡಿಕೊಂಡು ಬಂದಿರುವುದು ಪ್ರಜಾಪ್ರಭುತ್ವ ಮಾತ್ರ.
ಮಾನವನ ಘನತೆಯ ಹಕ್ಕು ಎಂದರೆ
ಆ ವ್ಯಕ್ತಿ ಯ ಮೂಲಭೂತ ಅವಶ್ಯಕತೆಗಳಾದ ಊಟ, ಬಟ್ಟೆ, ನೀರು, ವಸತಿ, ಆರೋಗ್ಯ, ಶಿಕ್ಷಣ ಜೊತೆಗೆ ಆತನ ದೈಹಿಕ ಮತ್ತು ಮಾನಸಿಕ ಸ್ವಾತಂತ್ರ್ಯ, ಅಭಿವ್ಯಕ್ತಿಗೆ ಒಂದಷ್ಟು ಭದ್ರತೆ ಅಥವಾ ರಕ್ಷಣೆ ಇರುವುದೇ ಮಾನವ ಹಕ್ಕು. ಈ ದೃಷ್ಟಿಯಲ್ಲಿ ಮಾನವ ಹಕ್ಕುಗಳು ಖಂಡಿತವಾಗಲೂ ಸಮ ಪ್ರಮಾಣದಲ್ಲಾಗಲಿ ಅಥವಾ ಅಧಿಕಾರಯುತವಾಗಲಿ ಹೆಚ್ಚು ಉಳಿದಿಲ್ಲ.
ಊಹೆಗೂ ಮೀರಿದ ಮಾನವ ಇತಿಹಾಸ….
ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂಧರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ………
ಬಹಳ ಹಿಂದೆ ಏನೂ ಅಲ್ಲ. ಕೆಲವೇ ಶತಮಾನಗಳ ಹಿಂದೆ ಕುರಿ, ಕೋಳಿ, ಹಸು, ನಾಯಿ, ಕತ್ತೆ, ಕುದುರೆಗಳ ರೀತಿಯಲ್ಲಿ ಮನುಷ್ಯನನ್ನು ಸಹ ಬೀದಿ ಬದಿಯಲ್ಲಿ ಮಾರಾಟಕ್ಕೆ ನಿಲ್ಲಿಸಲಾಗುತ್ತಿತ್ತು.
ನಮ್ಮ ಗ್ರಾಮೀಣ ಪ್ರದೇಶದ ದನಗಳ ಜಾತ್ರೆಯಲ್ಲಿ ಅವುಗಳನ್ನು ಕೊಳ್ಳುವವರು ಅದರ ಹಲ್ಲಿನಿಂದ ಹಿಡಿದು ದೇಹದ ಸಂಪೂರ್ಣ ಅಂಗಗಳನ್ನು ಪರಿಶೀಲಿಸಿ ಅದಕ್ಕೆ ಬೆಲೆ ಕಟ್ಟುತ್ತಾರೆ. ಮನುಷ್ಯರಲ್ಲೂ ಗಂಡು, ಹೆಣ್ಣು ಇಬ್ಬರನ್ನೂ ಇದೇ ರೀತಿ ಪರಿಶೀಲಿಸಿ ಅವರ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಬೆಲೆ ನಿಗದಿಪಡಿಸಿ ಗುಂಪುಗಳಾಗಿ ವ್ಯಾಪಾರ ಮಾಡಿ ಸಾಗಿಸಲಾಗುತ್ತಿತ್ತು.
ಬಲಿಷ್ಠವಾದ ದೇಹದವರನ್ನು ಭೇಟೆಯಾಡಿ, ಆಯುಧಗಳಿಂದ ಗಾಯ ಮಾಡಿ ಕಬ್ಬಿಣದ ಸರಪಳಿಗಳಿಂದ ಬಂಧಿಸಲಾಗುತ್ತಿತ್ತು.
ಹೀಗೆ ಬಂಧಿಸಿದ ನೂರಾರು ಜನರನ್ನು ವ್ಯಾಪಾರಿಗಳು ಖರೀದಿಸಿ ನಡೆಸಿಕೊಂಡು ಅಥವಾ ಹಡಗಿನಲ್ಲಿ ಕುರಿಗಳಂತೆ ತುಂಬಿ ತಿಂಗಳು ಗಟ್ಟಲೆ ಪ್ರಯಾಣ ಮಾಡಿ ದೂರದ ಪ್ರದೇಶಗಳಿಗೆ ಕರೆದೊಯ್ಯುತ್ತಿದ್ದರು. ಆಗಿನ ಕಾಲದ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ನೀಡುತ್ತಿದ್ದರು. ಆ ಗುಂಪಿನಲ್ಲಿ ಯಾರಾದರೂ ಅನಾರೋಗ್ಯದಿಂದ ಸಾವನ್ನಪ್ಪಿದರೆ ಸಮುದ್ರಕ್ಕೆ ಎಸೆಯುತ್ತಿದ್ದರು. ಅದು ಜಲಚರಗಳಿಗೆ ಆಹಾರವಾಗುತ್ತಿತ್ತು.
ಇವರನ್ನು ಗುಲಾಮರೆಂದು ಕರೆಯಲಾಗುತ್ತಿತ್ತು. ವಿಶ್ವದ ಕೆಲವು ಕಡೆ ಈ ರೀತಿಯ ವ್ಯವಸ್ಥೆ ಇದ್ದರೂ ಇದರ ಅತ್ಯಂತ ಹೆಚ್ಚು ಧಾರುಣ ಕಥೆಗಳು ಕಂಡುಬರುವುದು ಆಫ್ರಿಕಾ ಆದಿವಾಸಿಗಳಾದ ಕಪ್ಪು ಜನರಲ್ಲಿ. ಅವರನ್ನು ಮುಖ್ಯವಾಗಿ ಯೂರೋಪ್ ಮತ್ತು ಅಮೆರಿಕಾಗಳಿಗೆ ರಪ್ತು ಮಾಡಲಾಗುತ್ತಿತ್ತು.
ಯಾವ ಕಾನೂನು, ಮಾನವ ಹಕ್ಕುಗಳು, ದಯಾ ಸಂಘಟನೆಗಳು ಆಗ ಇರಲಿಲ್ಲ. ಇದ್ದರೂ ಕೇಳುವವರಾರು !!?
ಗೆಳೆಯರೆ,
ಈಗಿನ ಆಧುನಿಕ ಯುಗದಲ್ಲಿ ಸಮಾಜದಲ್ಲಿ ವಾಸಿಸುತ್ತಿರುವ ನಾವು ಒಮ್ಮೆ ಇದನ್ನು ನೆನಪಿಸಿಕೊಳ್ಳೋಣ.
ಮೈ ನಡುಗುತ್ತದೆ,
ಮನಸ್ಸು ಕದಡುತ್ತದೆ,
ಹೃದಯ ಕಲಕುತ್ತದೆ,
ರೋಷ ಉಕ್ಕುತ್ತದೆ.
ರಕ್ತ ಕುದಿಯುತ್ತದೆ.
ಈಗ ಇದು ಇತಿಹಾಸವೆಂಬುದು ನಿಜ. ಆದರೆ ಈ ಇತಿಹಾಸದ ಘಟನೆ ನಮಗೆ ಪಾಠವಾಗಬಾರದೆ……
ನಮ್ಮಲ್ಲಿ ವಿನಯ, ಸಭ್ಯತೆ, ಮಮತೆ, ತ್ಯಾಗ ಕರುಣೆ ಹುಟ್ಟಿಸಬಾರದೆ,
ಸಹಕಾರ, ಸಮನ್ವಯ, ಸಂಸ್ಕಾರ ಬೆಳೆಸಬಾರದೆ,
ಬಹುತೇಕ ಎಲ್ಲಾ ಅನುಕೂಲಗಳು, ಪೋಲೀಸ್, ಕಾನೂನು, ನ್ಯಾಯಾಲಯ, ಮಾಧ್ಯಮ, ಪ್ರಜಾಪ್ರಭುತ್ವ ಎಲ್ಲವೂ ನಮಗಾಗಿ ಇರುವಾಗ ಕನಿಷ್ಠ ಉತ್ತಮ ನಾಗರಿಕರಾಗಿ ಬಾಳಬಾರದೆ,
ಇಷ್ಟೊಂದು ಶಿಕ್ಷಣ, ಸಂಪರ್ಕ, ತಂತ್ರಜ್ಞಾನದ ಸೌಕರ್ಯಗಳು ಇದ್ದರೂ ನಾವುಗಳು ಇನ್ನೂ ಕೆಲಸಕ್ಕೆ ಬಾರದ ಏನೇನೂ ವಿಷಯಗಳಿಗೆ ಅಸಹನೆ ಅತೃಪ್ತಿ ವ್ಯಕ್ತಪಡಿಸುತ್ತಾ, ಒಬ್ಬರಿಗೊಬ್ಬರು ಅಸೂಯೆ ಪಡುತ್ತಾ, ಬೆನ್ನಿಗೆ, ಹೃದಯಕ್ಕೆ ಚೂರಿ ಹಾಕುತ್ತಾ ಅನಾಗರಿಕರಂತೆ ಬದುಕುತ್ತಿದ್ದೇವೆ. ಇದು ಸರಿಯೇ….????
ಗುಲಾಮಿತನದಿಂದ ಮತದಾರ ಪ್ರಭುವಾಗಿ ಬದಲಾಗಿರುವ ನಾವು ಇನ್ನಾದರೂ ವಿವೇಚನೆಯಿಂದ ಜೀವನ ಸಾಗಿಸೋಣ. ದಯವಿಟ್ಟು ಇಂದಿನಿಂದಲೇ ಸಾಧ್ಯವಾದಷ್ಟು ಒಳ್ಳೆಯ ನಡತೆಯ ನಾಗರಿಕರಾಗಿ ವರ್ತಿಸೋಣ. ಮಾನವ ಘನತೆಯಿಂದ ಜೀವಿಸುವ ಹಕ್ಕನ್ನು ಕಾಪಾಡೋಣ. ಪ್ರಜಾಪ್ರಭುತ್ವವನ್ನು ಉಳಿಸೋಣ.
ಅಂದಿನ ದಿನಗಳನ್ನು ನೆನೆದು ಇಂದಿನ ಪರಿಸ್ಥಿತಿಗೆ ಹೆಮ್ಮೆ ಪಡೋಣ.
ಪ್ರಜಾಪ್ರಭುತ್ವದ ಮಹತ್ವ ಸಾರುವ ಈ ಘಟನೆಯನ್ನು ಅರ್ಥಮಾಡಿಕೊಳ್ಳಿ….
ಯೂರೋಪ್ ನ ಹಂಗರಿ ದೇಶದ ಹಣ್ಣಿನ ಅಂಗಡಿಯ ಯುವತಿಯ ದೃಷ್ಟಿಯಲ್ಲಿ ಕಮ್ಯುನಿಸಮ್ ಮತ್ತು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಯಾವುದು ಉತ್ತಮ ಎಂಬ ಅಭಿಪ್ರಾಯ…….
ಯೂರೋಪ್ ನ ಹಂಗರಿ ದೇಶದ ರಾಜಧಾನಿ ಬುಡಾಪೆಸ್ಟ್ ನ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದೆ. 2 ಗಂಟೆಯ ಪ್ರಯಾಣದ ನಂತರ ಬಸ್ಸನ್ನು ಒಂದು ವಿಶ್ರಾಂತ ಸ್ಥಳದಲ್ಲಿ ಊಟಕ್ಕಾಗಿ ನಿಲ್ಲಿಸಲಾಗಿತ್ತು. ಅದು ಮಧ್ಯಾಹ್ನದ ಸಮಯ.
ನಾನು ಊಟ ಮಾಡದೆ ಅಲ್ಲಿಯೇ ಇದ್ದ ಹಣ್ಣಿನಂಗಡಿಯಲ್ಲಿ ಆಗ ಅಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಲಿಚ್ಚಿ ಮತ್ತು ಕಿವಿ ಹಣ್ಣುಗಳನ್ನು ಕೊಂಡು ಅಲ್ಲಿಯೇ ತಿನ್ನುತ್ತಿದ್ದೆ. ನನ್ನ ಗಮನ ಅಂಗಡಿಯ ಮಾಲೀಕ ಮಹಿಳೆಯ ಮೇಲೆ ಹರಿಯಿತು.
ಸುಮಾರು 30/35 ರ ಆಕೆಯೂ ಬುತ್ತಿ ಬಿಚ್ಚಿ ಬ್ರೆಡ್ಡಿನ ತರಹದ ತಿಂಡಿ ತಿನ್ನುತ್ತಿದ್ದಳು.
ಕುತೂಹಲಕ್ಕಾಗಿ ನಾನು ಆಕೆಯನ್ನು ಮಾತಿಗೆಳೆದೆ. ಮೊದಲು ಕಮ್ಯುನಿಸ್ಟ್ ಆಡಳಿತವಿದ್ದ ಹಂಗರಿ ಈಗ ಪ್ರಜಾಪ್ರಭುತ್ವದ ಆಡಳಿತವಾಗಿ ಬದಲಾಗಿದೆ. ನಾನು ಆ ಬಗ್ಗೆಯೇ ಆಕೆಯನ್ನು ಪ್ರಶ್ನಿಸಿದೆ. ಆಕೆ ಸ್ವಲ್ಪ ಯೋಚಿಸಿ ಹೇಳಿದಳು.
” ಕಮ್ಯುನಿಸಂನ ಆಡಳಿತದಲ್ಲಿ ನಮಗೆ ಶಿಕ್ಷಣ, ಆರೋಗ್ಯ ಮುಂತಾದ ಜೀವನಾವಶ್ಯಕ ಸೇವೆಗಳು ಉಚಿತವಾಗಿದ್ದವು. ನಮ್ಮ ಬಹುತೇಕ ಜವಾಬ್ದಾರಿ ಸರ್ಕಾರವೇ ನಿಭಾಯಿಸುತ್ತಿತ್ತು. ನಾವು ದಿನದ 8 ಗಂಟೆ ಕೆಲಸ ಮಾಡಿದ್ದರೆ ಸಾಕಿತ್ತು. ಬದುಕಿನಲ್ಲಿ ಅಂತಹ ವ್ಯತ್ಯಾಸಗಳೇನೂ ಇರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಬದಲಾದ ಮೇಲೆ ನಾನು ಕೆಲಸ ಕಳೆದುಕೊಂಡೆ. ಈಗ ನನ್ನ ಎಲ್ಲಾ ಖರ್ಚುವೆಚ್ಚ, ನನ್ನ ಇಬ್ಬರು ಮಕ್ಕಳ ಪಾಲನೆ ಪೋಷಣೆ ನಾನೇ ನಿಭಾಯಿಸಬೇಕಿದೆ. ಈ ಮಧ್ಯೆ ನನ್ನ ಗಂಡನೂ ನನ್ನನ್ನು ತೊರೆದ. ಈ ಅಂಗಡಿಯ ಆದಾಯವೇ ನನಗೆ ಆಧಾರ. ಹೇಗೋ ಬದುಕು
ಸಾಗುತ್ತಿದೆ. ”
ನನ್ನ ಪ್ರಶ್ನೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಯಾವುದು ಉತ್ತಮ.
ಆಕೆ,” ಕಮ್ಯುನಿಸ್ಟ್ ಆಡಳಿತದಲ್ಲಿ ಜೀವನ ಭದ್ರತೆ ಮತ್ತು ಸಮಾನತೆಯಿತ್ತು. ಅದು ಈಗ ಅಷ್ಟಾಗಿ ಇಲ್ಲ. ಆದರೆ ಈಗ ನನಗೆ ಸ್ವಾತಂತ್ರ್ಯವಿದೆ. ನನ್ನ ಸ್ವಂತ ಯೋಚನಾಶಕ್ತಿಯಿಂದ ಕನಸು ಕಾಣಬಹುದಾಗಿದೆ. ನನ್ನ ಮಕ್ಕಳಿಗೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬಹುದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹಣ ಗಳಿಸಬಹುದಾಗಿದೆ. ಆದ್ದರಿಂದ ಪ್ರಜಾಪ್ರಭುತ್ವವೇ ಉತ್ತಮ.”
ಆಕೆಯ ಉತ್ತರ ಸರಿ ಎನಿಸಿತು. ಸ್ವಾತಂತ್ರ್ಯವಿಲ್ಲದ ಬದುಕು ಬದುಕೇ ಅಲ್ಲ. ಭಾರತೀಯರಾದ ನಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಮತ್ತು ಅಧಿಕೃತವಾಗಿ ಸಂವಿಧಾನದ ಮೂಲಕ ಕಮ್ಯುನಿಸಂನ ಭದ್ರತೆ ಮತ್ತು ಸಮಾನತೆಯೂ ಇದೆ.
ಆದರೆ ಅನಧಿಕೃತವಾಗಿ ಮತ್ತು ಆಚರಣೆಯಲ್ಲಿ ಈ ಮೂರು ಸರಿಯಾಗಿ ಸಾಧ್ಯವಾಗಿಲ್ಲ. ಇವುಗಳ ಸಮ್ಮಿಲನದ ಅತ್ಯದ್ಭುತ ಭಾರತೀಯತೆಯನ್ನು ನಡುವಳಿಕೆಗಳಲ್ಲಿ ಅಳವಡಿಸಿಕೊಂಡರೆ ಅದೊಂದು ಸುಂದರ ಅನುಭವವಾಗುವುದರಲ್ಲಿ ಸಂದೇಹವೇ ಇಲ್ಲ.
ಇತಿಹಾಸದಿಂದ ಕಲಿಯಬಹುದಾದ ಒಳ್ಳೆಯ ಪಾಠಗಳೇ ನಮಗೆ ಮಾರ್ಗದರ್ಶನವಾಗಬಹುದು….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ ಎಚ್. ಕೆ
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…
ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…
ಯಲಹಂಕ ತಾಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಸಿ. ಗೋವಿಂದಪ್ಪ ಅವಿರೋಧವಾಗಿ…
ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಮಾಡೋಣ…