Categories: ಲೇಖನ

ಮಾಧ್ಯಮ, ವೀಕ್ಷಕರು ಮತ್ತು ಓದುಗರ ಗುಣಮಟ್ಟ…..

ಮಾಧ್ಯಮ, ವೀಕ್ಷಕರು ಮತ್ತು ಓದುಗರ ಗುಣಮಟ್ಟ…..ಒಂದು ಆತ್ಮಾವಲೋಕನ……

ಪ್ರೀತಿಯ ಮಾಧ್ಯಮ ಮಿತ್ರರೇ,

ಭಾರತ ಸಂಸದೀಯ ಪ್ರಜಾಪ್ರಭುತ್ವದ, ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆಯ, ಸಂವಿಧಾನಾತ್ಮಕ ಮಾಧ್ಯಮ ಸ್ವಾತಂತ್ರ್ಯವನ್ನು ಗೌರವಿಸುತ್ತಾ…..

ನಿಮ್ಮಲ್ಲಿ ನಮ್ಮದೊಂದು ಪ್ರೀತಿ ಪೂರ್ವಕ ಕಳಕಳಿಯ ಮನವಿ.

ಆಧುನಿಕ ತಂತ್ರಜ್ಞಾನದ ಸಹಾಯದಿಂದ ಟೆಲಿವಿಷನ್ ಸುದ್ದಿ ಮಾಧ್ಯಮಗಳು ಇಂದು ಅತ್ಯಂತ ಪ್ರಭಾವಶಾಲಿಯಾಗಿ ಬೆಳೆದಿವೆ. ಅದಕ್ಕೆ ಅಭಿನಂದನೆಗಳು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದೇ ಮಾಧ್ಯಮಗಳು ಒಟ್ಟು ಸುದ್ದಿ ಪ್ರಸಾರದ ಗುಣಮಟ್ಟದಲ್ಲಿ ಅತಿರೇಕದ ವರ್ತನೆ ಪ್ರದರ್ಶಿಸುತ್ತಿವೆ ಎಂಬ ಭಾವನೆ ಜನ ಸಾಮಾನ್ಯರಲ್ಲಿ ಮೂಡುತ್ತಿದೆ. ಇದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ದಯವಿಟ್ಟು ಇದರ ಬಗ್ಗೆ ಒಂದು ಸಮಗ್ರ ಆತ್ಮಾವಲೋಕನ ಮಾಡಿಕೊಳ್ಳಬೇಕೆಂಬುದು ನಮ್ಮ ಮನವಿ….

ಅತ್ಯಂತ ಗಹನವಾದ ಮತ್ತು ಮಹತ್ತರವಾದ ಸಾರ್ವಜನಿಕ ಅಭಿಪ್ರಾಯ ರೂಪಿಸುವ ವಿಷಯಗಳಲ್ಲಿ ನೀವು ಏರ್ಪಡಿಸುವ ಚರ್ಚೆಗಳ ಗುಣಮಟ್ಟ ದಿನದಿಂದ ದಿನಕ್ಕೆ ತೀರಾ ಕೆಳಹಂತಕ್ಕೆ ಇಳಿಯುತ್ತಿದೆ. ಕೂಗಾಟ, ಹಾರಾಟ, ಚೀರಾಟ, ವಕೀಲಿಕೆ, ವಾದ ವಿವಾದ, ತಾಳ್ಮೆಗೆಟ್ಟ ಜೋರು ಧ್ವನಿ, ಸುಳ್ಳು ಮಾಹಿತಿಗಳ ಸಮರ್ಥನೆ ವಿಜೃಂಭಿಸಿ ಜನರ ಯೋಚನಾ ಶಕ್ತಿಯೇ ಮಲಿನವಾಗುತ್ತಿರುವ ಮನಸ್ಥಿತಿ ನಮ್ಮ ಗಮನಕ್ಕೆ ಬಂದಿದೆ. ಚರ್ಚೆಗಳೆಂದರೆ ವಾಗ್ಯುದ್ದಗಳು ಎಂಬ ತಪ್ಪು ಅಭಿಪ್ರಾಯ ಮೂಡುತ್ತಿದೆ. ಇದರಲ್ಲಿ ಭಾಗವಹಿಸುವ ವಿಷಯ ತಜ್ಞರ ಗುಣಮಟ್ಟ ಸಹ ಸಮಾಧಾನಕರವಾಗಿಲ್ಲ. ದಯವಿಟ್ಟು ಈ ಬಗ್ಗೆ ಗಂಭೀರ ಆತ್ಮಾವಲೋಕನಕ್ಕೆ ನಮ್ಮ ಮನವಿ…..

ವೇಗ ಮತ್ತು ಸ್ಪರ್ಧೆಗೆ ಮಹತ್ವ ನೀಡುವ ಭರದಲ್ಲಿ ಸುದ್ದಿಯ ನಿಖರತೆ ಮತ್ತು ವಾಸ್ತವತೆಗೆ ಧಕ್ಕೆಯಾಗುತ್ತಿರುವ ಸಾಧ್ಯತೆ ಕಾಣುತ್ತಿದೆ. ಅನೇಕ ರಾಜಕಾರಣಿಗಳು ಮತ್ತು ಸಮಾಜದ ಜನಪ್ರಿಯ ವ್ಯಕ್ತಿಗಳು ಇದನ್ನು ಮನಗಂಡು ಮಾಧ್ಯಮಗಳನ್ನೇ ದಿಕ್ಕು ತಪ್ಪಿಸಿ ತಮ್ಮ ಲಾಭಕ್ಕಾಗಿ ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಸಾಕಷ್ಟು ಒಳಮರ್ಮ ನಮ್ಮ ಗಮನಕ್ಕೆ ಬಂದಿದೆ. ಒಮ್ಮೆ ಮಾಧ್ಯಮಗಳ ನಂಬಿಕೆಯ ಮೇಲೆ ಅನುಮಾನ ಪ್ರಾರಂಭವಾದರೆ ಅದು ಅವಸಾನದ ಮೊದಲ ಸೂಚನೆ. ದಯವಿಟ್ಟು ಇದನ್ನು ನಿರ್ಲಕ್ಷಿಸದೆ ಒಮ್ಮೆ ದೀರ್ಘವಾಗಿ ಪರಾಮರ್ಶಿಸಬೇಕಾಗಿ ವಿನಂತಿ….

ವೈಚಾರಿಕತೆಗೆ ಬದಲಾಗಿ ಮೌಢ್ಯಕ್ಕೆ, ತಾಳ್ಮೆಗೆ ಬದಲಾಗಿ ಆಕ್ರೋಶಕ್ಕೆ, ಪ್ರೀತಿಗೆ ಬದಲಾಗಿ ದ್ವೇಷಕ್ಕೆ, ತ್ಯಾಗಿಗಳಿಗೆ ಬದಲಾಗಿ ಸ್ವಾರ್ಥಿಗಳಿಗೆ, ಶಾಂತಿಗೆ ಬದಲಾಗಿ ಅಶಾಂತಿಗೆ, ವಿವೇಚನೆಗೆ ಬದಲಾಗಿ ತತ್ತಕ್ಷಣದ ಗ್ರಹಿಕೆಗೆ, ಒಳ್ಳೆಯದರ ಬದಲು ವಿಕೃತ ಸುದ್ದಿಗಳಿಗೆ ಹೆಚ್ಚು ಮಹತ್ವ ಮತ್ತು ಆದ್ಯತೆ ಕಲ್ಪಿಸುತ್ತಿರುವ ಭಾವನೆ ನಮ್ಮಲ್ಲಿ ಮೂಡುತ್ತಿದೆ. ” ರವಿ ಕಾಣದ್ದನ್ನ ಕವಿ ಕಂಡ. ಕವಿ ಕಾಣದ್ದನ್ನ ಪತ್ರಕರ್ತ ಕಂಡ ” ಎಂಬ ಅತ್ಯಂತ ಸೂಕ್ಷ್ಮ ಸಂವೇದನೆಯ ಪತ್ರಿಕಾ ಆಶಯಕ್ಕೆ ಇದು ಸಂಪೂರ್ಣ ವಿರೋಧದ ನಿಲುವು. ಮಾಧ್ಯಮ ಲೋಕದ ಸ್ಪರ್ಧೆ ಎಷ್ಟೇ ತೀವ್ರವಾಗಿದ್ದರೂ ಈ ಸಮಾಜ ಮತ್ತು ಸಂವಿಧಾನ ವಿರೋಧಿ ನಿಲುವುಗಳು ಭವಿಷ್ಯದಲ್ಲಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಪಟ್ಟ ಭದ್ರ ಹಿತಾಸಕ್ತಿಗಳು ದಾಳವಾಗಿ ಉಪಯೋಗಿಸಿಕೊಳ್ಳಬಹುದು. ದಯವಿಟ್ಟು ಎಚ್ಚರಿಕೆ ವಹಿಸಬೇಕೆಂದು ಒಂದು ಸವಿನಯ ಪ್ರಾರ್ಥನೆ….

ಮಾನವೀಯ ಮೌಲ್ಯಗಳನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾಹಿಸಬೇಕಾದ ಬಹುದೊಡ್ಡ ಜವಾಬ್ದಾರಿ ಶಿಕ್ಷಣದ ನಂತರ ಮಾಧ್ಯಮ ಕ್ಷೇತ್ರಕ್ಕೆ ಇದೆ. ಆದರೆ ಅದರಲ್ಲಿ ‌ಟೆಲಿವಿಷನ್ ಸುದ್ದಿ ಮಾಧ್ಯಮಗಳು ಸಂಪೂರ್ಣ ವಿಫಲವಾಗಿವೆ ಮತ್ತು ವಿರುದ್ಧ ಮೌಲ್ಯಗಳಿಗೆ ಹೆಚ್ಚಿನ ಮಾನ್ಯತೆ ಕೊಡುತ್ತಿವೆ ಎಂಬ ಗಂಭೀರ ಆರೋಪ ನಮ್ಮೆಲ್ಲರದಾಗಿದೆ. ಇದನ್ನು ದಯವಿಟ್ಟು ಸಾವಕಾಶವಾಗಿ ಪರಿಶೀಲಿಸಿ. ಮೌಲ್ಯಗಳ ನಾಶಕ್ಕೆ ಮಾಧ್ಯಮಗಳೂ ಕಾರಣ ಎಂದು ಮುಂದಿನ ಜನಾಂಗ ಶಪಿಸದಿರಲಿ ಎಂಬ ಕಾಳಜಿಯಿಂದ ಈ ಮನವಿ….

ಬಹುತೇಕ ಎಲ್ಲಾ ಕ್ಷೇತ್ರಗಳು ಕಲ್ಮಶವಾಗುತ್ತಿರುವ – ಎಲ್ಲಾ ಕ್ಷೇತ್ರಗಳು ವ್ಯಾಪಾರಿಕರಣವಾಗುತ್ತಿರುವ ಸಂದರ್ಭದಲ್ಲಿ ಸಾಮಾನ್ಯ ಜನರ ಆಶಾಕಿರಣ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಮಾಧ್ಯಮ ರಂಗ. ಇದನ್ನು ಸಮಾಜದ ಕಾವಲುಗಾರ ಎಂದೇ ಕರೆಯಲಾಗುತ್ತದೆ. ಕಾವಲುಗಾರರೇ ಎಚ್ಚರ ತಪ್ಪಿದರೆ ಅಥವಾ ಕಾವಲುಗಾರರೇ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡರೆ ಅಥವಾ ಕಾವಲುಗಾರರೇ ತಮ್ಮ ವೃತ್ತಿ ಮತ್ತು ವೈಯಕ್ತಿಕ ಬದುಕಿಗಾಗಿ ಮೂಲ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಇಡೀ ಸಮಾಜ ಅಧೋಗತಿಯತ್ತ ಸಾಗುವುದು ನಿಶ್ಚಿತ. ಈಗ ಆ ಪ್ರಕ್ರಿಯೆ ಪ್ರಾರಂಭವಾಗಿದೆ ಎಂಬ ಭಯ ನಮ್ಮನ್ನು ಕಾಡಲಾರಂಭಿಸಿದೆ. ದಯವಿಟ್ಟು ನಿರ್ಲಕ್ಷಿಸದೆ ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ ಎಂಬ ಸವಿನಯ ಪ್ರಾರ್ಥನೆ.

ಮಾಧ್ಯಮಗಳು ಮಾಹಿತಿಯ ಕಣಜಗಳು, ಮಾಧ್ಯಮಗಳು ಶೈಕ್ಷಣಿಕ ಕೇಂದ್ರಗಳು, ಮಾಧ್ಯಮಗಳು ಜ್ಞಾನ ವಿಕಾಸದ ಸಾಧನಗಳು, ಮಾಧ್ಯಮಗಳು ಸಂಸ್ಕೃತಿಯ ವಾಹಕಗಳು, ಮಾಧ್ಯಮಗಳು ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳು, ಮಾಧ್ಯಮಗಳು ಶೋಷಿತರ ಧ್ವನಿ ತರಂಗಗಳು.
ಮಾಧ್ಯಮ ಮಿತ್ರರೇ ದಯವಿಟ್ಟು ಸಾಮಾನ್ಯ ಜನರಾದ ನಮ್ಮ ಮನವಿಯನ್ನು ನಿರ್ಲಕ್ಷಿಸದೆ ಒಮ್ಮೆ ಪರಿಶೀಲಿಸಿ ಆತ್ಮಾವಲೋಕನ ಮಾಡಿಕೊಳ್ಳಿ.

ಹೌದು, ಇದು ಯಾರೋ ಒಬ್ಬರಿಂದ ಅಥವಾ ಒಂದು ವಾಹಿನಿಯಿಂದ ಸಾಧ್ಯವಿಲ್ಲ. ಕನಿಷ್ಠ ಕರ್ನಾಟಕದ ಎಲ್ಲಾ ಪ್ರಮುಖ ಟೆಲಿವಿಷನ್ ಸುದ್ದಿ ಮಾಧ್ಯಮಗಳ ಮುಖ್ಯಸ್ಥರು, ಸಂಪಾದಕರು, ವರದಿಗಾರರು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲರೂ
ಒಟ್ಟಾಗಿ ಒಂದು ಸಭೆ ಸೇರಿ ವೇಗ ಮತ್ತು ಸ್ಪರ್ಧೆಯ ನಡುವೆಯೂ ಮಾಧ್ಯಮ ಸಂಯಮಕ್ಕಾಗಿ ಪಾಲಿಸಬೇಕಾದ ಕೆಲವು ಅಂಶಗಳನ್ನು ಗುರುತಿಸಿ ಅನುಷ್ಠಾನಕ್ಕೆ ತರುವ ಪ್ರಯತ್ನಗಳು ನಡೆಯಲಿ. ಮಾಧ್ಯಮದ ಪಾವಿತ್ರ್ಯತೆ ಮುಂದೆಯೂ ಉಳಿಯಲಿ ಎಂಬ ಸದಾಶಯ ನಮ್ಮದು. ದಯವಿಟ್ಟು ಅನ್ಯಥಾ ಭಾವಿಸದೆ ಈ ಬಗ್ಗೆ ಗಮನಹರಿಸಬೇಕೆಂದು ನಮ್ಮ ಮನವಿ……..

ಮಾನ್ಯ ವೀಕ್ಷಿಕರೇ ಮತ್ತು ಓದುಗರೇ……

ಸುದ್ದಿ ಮೂಲಗಳನ್ನು ವಿವೇಚಿಸುವ ಪ್ರಬುದ್ಧತೆ ನಮಗಿರಲಿ……..

ಪತ್ರಿಕೆ ಮತ್ತು ಟೆಲಿವಿಷನ್ ಮಾಧ್ಯಮಗಳಲ್ಲಿ ಮುದ್ರಿತವಾಗುವ ಮತ್ತು ಪ್ರಸಾರವಾಗುವ ಸುದ್ದಿಗಳನ್ನು ನಾವು ಹೇಗೆ ಗ್ರಹಿಸಬೇಕು ?

ಯಾವುದು ನಿಜ ?
ಯಾವುದು ಸುಳ್ಳು ?
ಯಾವುದು ಇರಬಹುದು ಎಂಬ ಅನುಮಾನ ?
ಯಾವುದು ಸರಿ ಅಥವಾ ತಪ್ಪು ಎಂಬ ಪ್ರಶ್ನೆ ?
ಯಾವುದನ್ನು ಒಪ್ಪಬೇಕು ?
ಯಾವುದನ್ನು ನಿರ್ಲಕ್ಷಿಸಬೇಕು ?
ಯಾವುದನ್ನು ತಿರಸ್ಕರಿಸಬೇಕು ?

ಇದೊಂದು ಸವಾಲಿನ ವಿಷಯವಾದರೂ ಒಂದು ಹಂತಕ್ಕೆ ಇದು ತುಂಬಾ ಸರಳವೂ ಆಗಿದೆ. ಕೆಲವು ಮೂಲ ಅಂಶಗಳು ಮತ್ತು ಅನುಭವದ ಆಧಾರದ ಮೇಲೆ ಇದನ್ನು ಅರ್ಥಮಾಡಿಕೊಳ್ಳಬಹುದು.

ಸುದ್ದಿಗಳು ಅಪಘಾತ, ಅವಘಡ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಇದ್ದರೆ ಸಾಮಾನ್ಯವಾಗಿ ಸಾವು ನೋವುಗಳು ಬಗ್ಗೆ ಬರುವ ವರದಿಗಳನ್ನು – ಅಂಕಿಅಂಶಗಳನ್ನು ಸಂಪೂರ್ಣ ಸತ್ಯ ಎಂದು ಭಾವಿಸಬಹುದು. ಸರ್ಕಾರದ ವೈಧ್ಯಕೀಯ ಸಿಬ್ಬಂದಿ ಮತ್ತು ಪೋಲೀಸರು ಹೇಳಿಕೆ ಆಧರಿಸಿ ಪ್ರಸಾರ ಮಾಡಿದರೆ ಇನ್ನೂ ಹೆಚ್ಚು ನಿಖರ ಎಂದು ಅರ್ಥಮಾಡಿಕೊಳ್ಳಬಹುದು. ಆದರೆ ಇದಕ್ಕೆ ಕಾರಣಗಳನ್ನು ಪತ್ರಕರ್ತರು ಊಹಿಸಿ ಅಥವಾ ತಮಗೆ ದೊರೆತ ಸಾಕ್ಷ್ಯವನ್ನು ಪರಿಶೀಲಿಸಿ, ಅತಿರಂಜಿಸಿ ವರದಿ ಮಾಡಿದರೆ ಅದನ್ನು ನಾವು ಮತ್ತೊಮ್ಮೆ ನಮ್ಮ ಅನುಭವದ ಆಧಾರದ ಮೇಲೆ ವಿವೇಚಿಸಿ ತೀರ್ಮಾನ ಕೈಗೊಳ್ಳಬೇಕೆ ಹೊರತು ಸಂಪೂರ್ಣ ಪತ್ರಕರ್ತರ ವರದಿಯನ್ನು ನಂಬಬಾರದು.

ರಾಜಕೀಯಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಹಲವಾರು ರೀತಿಗಳು ಇವೆ. ಕೆಲವು ಅಧೀಕೃತ ಮಾಹಿತಿಗಳನ್ನು ಸಹಜವಾಗಿ ಒಪ್ಪಿಕೊಳ್ಳಬಹುದು. ಆದರೆ ರಾಜಕೀಯ ನಾಯಕರ ಹೇಳಿಕೆಗಳ ಆಧಾರದ ಮೇಲೆ ರೂಪಿತವಾಗುವ ಕಾರ್ಯಕ್ರಮ ಅಥವಾ ಬರಹಗಳನ್ನು ಒಪ್ಪಿಕೊಳ್ಳುವ ಮೊದಲು ಹಲವಾರು ಬಾರಿ ಯೋಚಿಸಬೇಕು. ಅದಕ್ಕೆ ಇರುವ ಎಲ್ಲಾ ಆಯಾಮಗಳನ್ನು ಸ್ವತಃ ನಾವು ವಿವೇಚಿಸಬೇಕು.

ರಾಜಕೀಯ ಏರಿಳಿತಗಳ ಬಗ್ಗೆ ಪತ್ರಕರ್ತರಿಗೆ ಕೆಲವು ಸುದ್ದಿ ಮೂಲಗಳ ಮೂಲಕ ಒಂದಷ್ಟು ಮಾಹಿತಿ ಸಿಗುತ್ತದೆ. ಅದನ್ನು ಅತ್ಯುತ್ಸಾಹದಿಂದ ಬ್ರೇಕಿಂಗ್ ನ್ಯೂಸ್ ಎಂದು ವರದಿ ಮಾಡಲಾಗುತ್ತದೆ. ಇದರಲ್ಲಿ ಎಲ್ಲವೂ ನಿಜ ಎಂದು ನಂಬಬಾರದು. ಕೇವಲ ಸಾಧ್ಯತೆಗಳು ಮಾತ್ರ ಎಂದು ಭಾವಿಸಬೇಕು. ಏಕೆಂದರೆ ಕೆಲವೊಮ್ಮೆ ಸುದ್ದಿ ಮೂಲಗಳು ಜನರನ್ನು ದಾರಿ ತಪ್ಪಿಸಲು ಸುಳ್ಳುಗಳನ್ನು ಹರಿಯಬಿಡುತ್ತಾರೆ.

ಕೆಲವು ಅತಿಸೂಕ್ಷ್ಮ ಮನಸ್ಥಿತಿಯ ಬರಹಗಾರರು ರಾಜಕೀಯ ಮುನ್ನೋಟವನ್ನು ನಮ್ಮ ಮುಂದೆ ಇಡುತ್ತಾರೆ. ಅಂತಹ ಸಂದರ್ಭದಲ್ಲಿ ಅದನ್ನು ಒಂದಷ್ಟು ಒಪ್ಪಿಕೊಳ್ಳಬಹುದು.

ಇನ್ನು ಕೆಲವು ಅರೆಬೆಂದ ಅಂಕಣಕಾರರು ತಾವು ಸಾವಿರಾರು ವರ್ಷಗಳಿಂದ ಎಲ್ಲವನ್ನೂ ಕಣ್ಣಾರೆ ನೋಡಿದವರಂತೆ ಇಡೀ ಇತಿಹಾಸವನ್ನು ತಮಗೆ ತೋಚಿದಂತೆ ಚಿತ್ರಿಸುತ್ತಾರೆ. ಯಾವ ಅನುಭವವೂ ಇಲ್ಲದೆ ಕೇವಲ ಅಕ್ಷರಗಳ ಜ್ಞಾನದಿಂದ ಅನುಭವದ ರೂಪ ನೀಡುತ್ತಾರೆ. ಇದು ಅತ್ಯಂತ ಅಪಾಯಕಾರಿ. ಇದನ್ನು ಗುರುತಿಸುವುದು ನಮ್ಮ ಜವಾಬ್ದಾರಿ.

ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಕಣ್ಣಿಗೆ ಕಾಣುವ ದೃಶ್ಯಗಳ ಜೊತೆಗೆ ಅತಿರಂಜಿತ, ಅತಿರೇಕದ ಸುದ್ದಿಗಳನ್ನು ಸಿನಿಮಾ ಸಂಗೀತದೊಂದಿಗೆ ಬೆರೆಸಿ ಪ್ರಸಾರ ಮಾಡುತ್ತಾರೆ. ಇನ್ನೂ ಕೆಲವೊಮ್ಮೆ ತಾವೇ ಸಣ್ಣ ಘಟನೆಯನ್ನು ದೊಡ್ಡದಾಗಿ ಬಿಂಬಿಸಿ ತಾವು ಹೆಚ್ಚು ಕೆಲಸ ಮಾಡುತ್ತಿರುವುದಾಗಿ ಮುಖ್ಯ ಸಂಪಾದಕರಿಗೆ ತಿಳಿಸಲು ಮಾಡುವ ಕೃತಕ ಸುದ್ದಿಗಳೂ ಇರುತ್ತವೆ. ಅದರ ಬಗ್ಗೆ ಒಂದು ಅನುಮಾನದ ಎಳೆ ಇರಬೇಕಾಗುತ್ತದೆ.

ಜಾಹೀರಾತುಗಳ ಹೆಸರಿನಲ್ಲಿ ಪ್ರಸಾರವಾಗುವ ವೈದ್ಯಕೀಯ, ಅರೆ ವೈದ್ಯಕೀಯ, ರಿಯಲ್ ಎಸ್ಟೇಟ್, ಚಿನ್ನದ ಅಡಮಾನ, ಸಂಕಷ್ಟ ಪರಿಹಾರದ ಜೈ ಹನುಮಾನ್ ಯಂತ್ರಗಳು ಮುಂತಾದ ಅನೇಕ ವಿಷಯಗಳನ್ನು ಮತ್ತೆ ಮತ್ತೆ ಸರ್ಕಾರದ ಅಧೀಕೃತ ಸಂಸ್ಥೆಗಳಿಂದ ದೃಢಪಡಿಸಿಕೊಂಡು ಮುಂದುವರಿಯಬೇಕು. ಮಾಧ್ಯಮಗಳ ಆ ಸುದ್ದಿಗೆ ಮರುಳಾಗಬಾರದು. ಹಣದ ಕಾರಣಕ್ಕಾಗಿ ಅವರು ವಿಶ್ವಾಸಾರ್ಹವಲ್ಲದ ವಿಷಯಗಳನ್ನು ಪ್ರಸಾರ ಮಾಡುತ್ತಾರೆ ಎಂಬುದು ಗಮನದಲ್ಲಿರಬೇಕು.

ಇನ್ನು ಕೌಟುಂಬಿಕ ಜಗಳಗಳನ್ನು ಯಾವುದೇ ವಿವೇಚನೆ, ಸೂಕ್ಷ್ಮತೆ ಇಲ್ಲದೆ ಹಸಿಹಸಿಯಾಗಿ ಸಿನಿಮೀಯ ರೀತಿಯಲ್ಲಿ ಪ್ರಸಾರ ಮಾಡುತ್ತಾರೆ. ವೀಕ್ಷಕರ ಕುತೂಹಲವೇ ಇವರ ಟಾರ್ಗೆಟ್. ಅಂತಹ‌ ಸುದ್ದಿಗಳನ್ನು ನಿರ್ಲಕ್ಷಿಸುವುದು ಒಳಿತು. ಎಲ್ಲರ ಮನೆಯ ದೋಸೆಯೂ ತೂತು ಎಂಬ ನಾಣ್ಣುಡಿಯನ್ನು ಅರ್ಥಮಾಡಿಕೊಳ್ಳುವುದು ಒಳಿತು.

ಸುದ್ದಿಗಳು ಮಾಧ್ಯಮಗಳಿಗೆ ತಲುಪುವ ಮೊದಲು ಸಾಮಾನ್ಯವಾಗಿ ಹಲವಾರು ಹಂತಗಳನ್ನು ದಾಟಿರುತ್ತದೆ. ಆದರೆ ಪತ್ರಕರ್ತರು ಅದನ್ನು ತಾವೇ ಮೊದಲು ನೋಡಿದ್ದು, ತಮಗೆ ಎಲ್ಲವೂ ತಿಳಿದಿದೆ ಎಂಬ ರೀತಿಯಲ್ಲಿ ಬ್ರೇಕಿಂಗ್ ನ್ಯೂಸ್‌ ಮಾಡುತ್ತಾರೆ. ಇದರ ಬಗ್ಗೆ ಎಚ್ಚರವಿರಲಿ.

ಕೆಲವರು ಬೇಕಂತಲೇ ಪ್ರಖ್ಯಾತರಾಗಲು ಅಥವಾ ಪ್ರಚಾರ ಪಡೆಯಲು ಗಿಮಿಕ್ ಮಾಡುತ್ತಾರೆ. ಆದರೆ ಪತ್ರಕರ್ತರು ಆ ಸೂಕ್ಷ್ಮ ಗ್ರಹಿಸದೆ ಅತ್ಯುತ್ಸಾಹದಿಂದ ಅದನ್ನು ಪ್ರಸಾರ ಮಾಡುತ್ತಾರೆ. ಅದನ್ನು ನಾವು ಪರಶೀಲಿಸಿ ಅರ್ಥಮಾಡಿಕೊಳ್ಳಬೇಕು.

ಇದು ಕೆಲವು ಉದಾಹರಣೆಗಳು ಮಾತ್ರ. ಸುದ್ದಿಗಳನ್ನು ನೈಜ, ವಾಸ್ತವ, ಕಲ್ಪಿತ, ಸೂಕ್ಷ್ಮ, ದೂರದೃಷ್ಟಿಯ, ಭ್ರಮಾತ್ಮಕತೆಯ, ಉಡಾಪೆ, ಅತಿರಂಜಿತ, ಅತಿರೇಕದ, ಅತ್ಯುತ್ತಮ ಒಳನೋಟದ, ಸ್ಪೂರ್ತಿದಾಯಕ ಮುಂತಾದ ಅನೇಕ ಆಯಾಮಗಳಿಂದ ವಿವೇಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.

ಸಾಮಾಜಿಕ ಜಾಲತಾಣಗಳಿಗೂ ಇದು ಅನ್ವಯ. ಅನೇಕ ಜನರು, ಸಂಸ್ಥೆಗಳು, ಸಮಾಜ ದ್ರೋಹಿಗಳು ಸುಳ್ಳು ಸುದ್ದಿಗಳನ್ನು ಸೃಷ್ಟಿಸುವುದನ್ನೇ ಒಂದು ದಂಧೆಯಾಗಿ ಮಾಡಿಕೊಂಡಿದ್ದಾರೆ. ಸುಲಭವಾಗಿ ಇದನ್ನು ಹರಿಯಬಿಡುತ್ತಾರೆ.
ಜನರು ಅದಕ್ಕೆ ಮರುಳಾಗುವುದನ್ನು ಕಾಣುತ್ತಿದ್ದೇವೆ.

ಓದುವ, ವೀಕ್ಷಿಸುವ ವರ್ಗ ಒಂದು ಪ್ರಬುದ್ಧ ಮನಸ್ಥಿತಿಯ ವಿವೇಚನಾಯುಕ್ತ ಗುಣಮಟ್ಟ ರೂಪಿಸಿಕೊಂಡರೆ ಇವರ ಆಟಗಳು ನಡೆಯುವುದಿಲ್ಲ. ದಯವಿಟ್ಟು ಈ ಬಗ್ಗೆ ಗಮನಹರಿಸಲು ಕಳಕಳಿಯ ಮನವಿ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ವಿಶ್ವದ ಅತಿಮುಖ್ಯ ನಗರ, ಭಾರತದ ಆಡಳಿತ ಶಕ್ತಿ ಕೇಂದ್ರ ದೆಹಲಿಯಲ್ಲಿ ವಾಯು ಮಾಲಿನ್ಯ….

ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…

5 hours ago

ಸಿದ್ದೇನಾಯಕನಹಳ್ಳಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ: ಸಚಿವ ಕೆ.ಎಚ್ ಮುನಿಯಪ್ಪ ಭಾಗಿ

ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…

17 hours ago

ಬಾಶೆಟ್ಟಿಹಳ್ಳಿ ಪಪಂ ಚುನಾವಣೆ: ಶೇ.78ರಷ್ಟು ಮತದಾನ: ನಕಲಿ ಮತದಾನಕ್ಕೆ ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು: ಕುಡಿದು ಚುನಾವಣೆ ಕೆಲಸಕ್ಕೆ ಬಂದ ಶಿಕ್ಷಕ

ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…

18 hours ago

ಒಂಟಿ ಮನೆ ಸುತ್ತಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು: ಗಾಬರಿಗೊಂಡ ಮಹಿಳೆ: ಗ್ರಾಮಸ್ಥರ ಕೈಗೆ ಸಿಕ್ಕ ಆಸಾಮಿಗಳು, ಸದ್ಯ ವಶಕ್ಕೆ ಪಡೆದ ಪೊಲೀಸರು

ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…

18 hours ago

ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎಸಿ ಗೋವಿಂದಪ್ಪ ಅವಿರೋಧ ಆಯ್ಕೆ

ಯಲಹಂಕ ತಾಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಸಿ. ಗೋವಿಂದಪ್ಪ ಅವಿರೋಧವಾಗಿ…

19 hours ago

ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ: ಜಿಲ್ಲೆಯ 99,828 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ- ಸಚಿವ ಕೆ.ಎಚ್ ಮುನಿಯಪ್ಪ

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಮಾಡೋಣ…

1 day ago