Categories: ಲೇಖನ

ಮಾಧ್ಯಮಗಳ ಬುರುಡೆ, ಸುಳ್ಳು, ಅತಿರೇಕದ, ಬಾಲಿಶ ಸುದ್ದಿಗಳಿಗೆ ಮತ್ತೊಂದು ಕಪಾಳಮೋಕ್ಷ ಸಾಕ್ಷಿ ಇಲ್ಲಿದೆ…..

ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ ಉಂಟಾಗಿ ಎಲ್ಲೆಲ್ಲೂ ಹಾಹಾಕಾರ ಉಂಟಾಗಿದೆ. ಮುಂದೆ ಕೆಲವು ತಿಂಗಳು ಮಳೆ ಬಾರದಿದ್ದರೆ ಬೆಂಗಳೂರಿನ ನೀರಿನ ಸ್ಥಿತಿ ಚಿಂತಾಜನಕ ಎಂದು ಕೆಲವು ಜನರನ್ನು, ಕೆಲವು ಏರಿಯಾಗಳಲ್ಲಿ ಮಾತನಾಡಿಸಿ ನೀರಿನ ಟ್ಯಾಂಕರ್ ನ ಬೆಲೆ ಏರಿಕೆ ಮತ್ತು ಮಾಫಿಯಾ ಬಗ್ಗೆ ಪುಂಖಾನುಪುಂಖವಾಗಿ  ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದಾರೆ……

ಆದರೆ ಬೆಂಗಳೂರು ಜಲಮಂಡಳಿಯ ಅಧ್ಯಕ್ಷರು ಪತ್ರಿಕಾಗೋಷ್ಠಿ ಕರೆದು ನೀರಿನ ಲಭ್ಯತೆಯ ಸಂಪೂರ್ಣ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಬೆಂಗಳೂರಿಗೆ ತಿಂಗಳಿಗೆ 1.54 ಟಿಎಂಸಿ ನೀರಿನ ಅವಶ್ಯಕತೆ ಇದೆ. ಆ ಲೆಕ್ಕದಲ್ಲಿ ಜುಲೈ ಅಂತ್ಯದವರೆಗೆ ಸುಮಾರು 8 ರಿಂದ 9 ಟಿಎಂಸಿ ನೀರು ಬೇಕಾಗುತ್ತದೆ. ಈಗ ಕೆ ಆರ್ ಎಸ್ ಡ್ಯಾಮ್ ನಲ್ಲಿ ಇರುವ ನೀರಿನ ಲಭ್ಯತೆ ಸುಮಾರು 33 ಟಿಎಂಸಿ. ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದ ಕೆಲವು ಭಾಗಗಳಿಗೆ ಸದ್ಯಕ್ಕೆ ನೀರಿನ ಯಾವುದೇ ಸಮಸ್ಯೆ ಇಲ್ಲ……

ಇಷ್ಟು ಸ್ಪಷ್ಟವಾಗಿ ಜಲ ಮಂಡಳಿಯ ಅಧ್ಯಕ್ಷರೇ ಹೇಳುತ್ತಿರುವಾಗ ಅನಾವಶ್ಯಕವಾಗಿ ಜನರಲ್ಲಿ ನೀರಿನ ಕ್ಷಾಮದ ಬಗ್ಗೆ ಭೀತಿ ಮೂಡಿಸಿ ಮಜಾ ನೋಡುತ್ತಿರುವ ಈ ಮಾಧ್ಯಮಗಳಿಗೆ ಏನೆನ್ನಬೇಕು…..?

ಹೌದು, ಒಂದಷ್ಟು ಸಮಸ್ಯೆಗಳು ಇರುತ್ತವೆ. ಆದರೆ ಅದನ್ನು ಜನರಿಗೆ ತಲುಪಿಸುವಾಗ ಅತ್ಯಂತ ವಿವೇಚನೆಯಿಂದ, ಪ್ರಬುದ್ಧತೆಯಿಂದ, ಜವಾಬ್ದಾರಿಯಿಂದ ಅವರ ಮನಸ್ಸುಗಳಿಗೆ ಹೆಚ್ಚು ಘಾಸಿಯಾಗದಂತೆ ಅರ್ಥಪೂರ್ಣವಾಗಿ ಸುದ್ದಿ ತಲುಪಿಸಿದರೆ ಎಷ್ಟೊಂದು ಒಳ್ಳೆಯ ಕೆಲಸ ಮಾಡಿದಂತಾಗುವುದಿಲ್ಲವೇ…..

ಕೇವಲ ಈ ವಿಷಯ ಮಾತ್ರವಲ್ಲ ಇನ್ನು ಅನೇಕ ವಿಷಯಗಳಲ್ಲಿ ಮಾಧ್ಯಮಗಳು ಅತಿರಂಜಿತ ಸುದ್ದಿಗಳನ್ನು ಪ್ರಸಾರ ಮಾಡಿ ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ. ಡಿಸೆಂಬರ್ ಜನವರಿಯ ಪ್ರಾರಂಭದಲ್ಲಿ ಮತ್ತೆ ಕೊರೋನ ಹಾವಳಿ ಎಂದು ಅತಿರೇಕದ ಸುದ್ದಿಗಳನ್ನು ಪ್ರಸಾರ ಮಾಡಿ ಜನರಲ್ಲಿ ಭೀತಿ ಉಂಟುಮಾಡಿದ್ದವು. ಕೊನೆಗೆ ಅದು ಅಂತಹ ಪರಿಣಾಮ ಬೀರಲಿಲ್ಲ. ಹಾಗೆಯೇ ಎಲ್ಲೋ ಯಾವುದೋ ಒಂದು ವೈರಸ್ ಮಾರಣಾಂತಿಕವಾಗಿದ್ದರೆ ಅದನ್ನೇ ಸಾಂಕ್ರಾಮಿಕವಾಗಿ ಇಡೀ ದೇಶ ಇಡೀ ನಗರ ನಾಶವಾಗುತ್ತದೆ ಎಂದು ಜನರ ಜೀವನೋತ್ಸಾಹವನ್ನೇ ಕುಗ್ಗಿಸುತ್ತವೆ…..

ಮಾಧ್ಯಮಗಳ ಈಗಿನ ಮನಸ್ಥಿತಿ ಹೇಗಾಗಿದೆ ಎಂದರೆ ಏನಾದರೂ ಭಯಂಕರ ಘಟನೆಗಳು ನಿರಂತರವಾಗಿ ನಡೆಯುತ್ತಿರಲೇಬೇಕು. ಅದು ಬಾಂಬ್ ಸ್ಫೋಟವೇ ಆಗಿರಲಿ, ರಾಜಕೀಯ ದೊಂಬರಾಟವೇ ಆಗಿರಲಿ, ಅಪಘಾತ ಆತ್ಮಹತ್ಯೆಗಳೇ ಆಗಿರಲಿ, ಭ್ರಷ್ಟಾಚಾರವೇ ಆಗಿರಲಿ, ಚಳುವಳಿಗಳೇ ಆಗಿರಲಿ, ಒಟ್ಟಿನಲ್ಲಿ ಜನರಿಗೆ ಕುತೂಹಲ ಮೂಡಿಸುವ ಉದ್ರೇಕಿಸುವ ಕಂಟೆಂಟ್ಗಳತ್ತ ಇವರ ಆಸಕ್ತಿ……

ಇದು ಜನಸಾಮಾನ್ಯರಲ್ಲಿ ಸಹ ಒಂದು ರೀತಿ ಅತೃಪ್ತ, ಅಸಮಾಧಾನಿತ, ಅಸಹನೀಯ ಮನೋಭಾವ ಬೆಳೆಯಲು ಕಾರಣವಾಗಿದೆ. ಜನರಲ್ಲಿಯು ಕೂಡ ಬ್ರೇಕಿಂಗ್ ನ್ಯೂಸ್ ಗಳ ಮಧ್ಯೆ ಸಮಗ್ರ ಚಿಂತನೆ ಇಲ್ಲವಾಗಿದೆ. ಒಂದು ವಿಷಯವನ್ನು ನಿಧಾನವಾಗಿ, ತಾಳ್ಮೆಯಿಂದ ಎಲ್ಲಾ ಮುನ್ನೂರು ಅರವತ್ತು ಡಿಗ್ರಿ ಕೋನಗಳಿಂದ ಸತ್ಯ ಮತ್ತು ವಾಸ್ತವದ ಪ್ರಜ್ಞೆಯಲ್ಲಿ ಯೋಚಿಸುವ ಶಕ್ತಿ ಮತ್ತು ವಿಧಾನವನ್ನೇ ಕಳೆದುಕೊಳ್ಳಲಾಗಿದೆ…..

ಕೆಲವೊಮ್ಮೆ ಅನಿಸುತ್ತದೆ ಇವರು ಪತ್ರಕರ್ತರೇ, ನಿರೂಪಕರೇ, ಸುದ್ದಿ ಮಾಧ್ಯಮಗಳ ನೌಕರರೇ, ಮಾಧ್ಯಮ ಕಾರ್ಯಕರ್ತರೇ, ದುರ್ಘಟನೆಗಳ ವಕ್ತಾರರೇ, ರಾಯಭಾರಿಗಳೇ, ಸುದ್ದಿಗಳ ಸೃಷ್ಟಿಕರ್ತರೇ, 24*7 ಕಾರಣದಿಂದ ಮಾಧ್ಯಮ ಲೋಕವನ್ನು ಹಳ್ಳ ಹಿಡಿಸುತ್ತಿರುವವರೇ ಒಂದೂ ಅರ್ಥವಾಗುತ್ತಿಲ್ಲ…..

ಮಾಧ್ಯಮಗಳು ಒಂದು ವಿಷಯದ ಬಗ್ಗೆ ಹೆಚ್ಚು ಗಮನಸೆಳೆದರೆ ಅದು ಸರ್ಕಾರಕ್ಕೆ ತಲುಪಿ ಆ ವಿಷಯದಲ್ಲಿ ಒಂದಷ್ಟು ಕಾರ್ಯ ಚಟುವಟಿಕೆಗಳು ನಡೆಯುತ್ತವೆ ಎಂಬುದು ನಿಜ. ಆದರೆ ಅವರು ನಿಜಕ್ಕೂ ಗಮನ ಸೆಳೆಯಬೇಕಾದ ಬಹು ಮುಖ್ಯ ವಿಷಯಗಳನ್ನು ಮರೆಮಾಚುತ್ತಾರೆ. ಎಲ್ಲೋ, ಯಾವುದೋ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿ ಅನೇಕ  ಆಕಾಂಕ್ಷಿಗಳು ಪ್ರಯತ್ನ ಪಡುತ್ತಿರುತ್ತಾರೆ. ಅದನ್ನೇ ದೊಡ್ಡ ವಿಷಯವೆಂಬಂತೆ ಸಾರ್ವಜನಿಕರಿಗೆ ಒಂದು ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರ ಮಾಡುತ್ತಾರೆ. ಇದು ಎಷ್ಟೊಂದು ಅನಾವಶ್ಯಕವಲ್ಲವೇ……

ಈ ಸಮಾಜದ ಎಷ್ಟೋ ಮಾನವೀಯ ಮೌಲ್ಯಗಳು ಅಧ:ತನವಾಗಿ ವಿನಾಶದ ಅಂಚಿನಲ್ಲಿವೆ. ಕನಿಷ್ಠ ಆಗಾಗ ಇವುಗಳ ಪುನರುತ್ಥಾನದ ಬಗ್ಗೆ ಕೆಲವು ಕಾರ್ಯಕ್ರಮಗಳನ್ನು ಮಾಡುವುದಾದರೆ ಅದು ಅವರ ನಿಜವಾದ ಸಂವೇದನಾಶೀಲ ಪತ್ರಕರ್ತರ ಜವಾಬ್ದಾರಿಯಾಗಿರುತ್ತದೆ. ಕೇವಲ ಕೆಟ್ಟ ಭ್ರಷ್ಟ ದುಷ್ಟ ಸುಳ್ಳು ಸುದ್ದಿಗಳೇ ಪ್ರಾಮುಖ್ಯತೆ ಪಡೆದಾಗ ಸಮಾಜ ಸಹ ಬಹುತೇಕ ಅದರ ಪ್ರಭಾವಕ್ಕೆ ಒಳಗಾಗಿ ಆ ನಿಟ್ಟಿನಲ್ಲಿಯೇ ಯೋಚಿಸುವಂತಾಗುತ್ತದೆ…….

ಒಂದು ಸುದ್ದಿ ಅಧಿಕೃತವಾಗಿ ಪ್ರಸಾರವಾಗಬೇಕಾದರೆ ಅದನ್ನು ಸಮಗ್ರವಾಗಿ ಚಿಂತಿಸಿ ಹೊರಗೆಡಹಬೇಕಾಗುತ್ತದೆ. ಕೇವಲ ತಮ್ಮ ಟಿ ಆರ್ ಪಿ  ಅಥವಾ ಜನರ ಆಕರ್ಷಣೆ ಮುಖ್ಯವಾಗುವುದಾದರೆ ಅದು ಮಾಧ್ಯಮ ಲೋಕದ, ಈ ಸಮಾಜದ ಸಾಂವಿಧಾನಿಕ ಮೌಲ್ಯಗಳ ದುರಂತ ಎಂದು ಕರೆಯಬೇಕಾಗುತ್ತದೆ.

ಈಗಿನ ಪರಿಸ್ಥಿತಿಯಲ್ಲಿ ಇದೇ ನಿಜ. ಕನಿಷ್ಠ ಇನ್ನಾದರೂ ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿದರೆ ನಾವೆಲ್ಲರೂ ನಿಮಗೆ ಕೃತಜ್ಞರಾಗಿರುತ್ತೇವೆ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

14 hours ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

21 hours ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

24 hours ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

1 day ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

1 day ago

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೊಂದಾಯಿಸಿ

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…

1 day ago