
ದೊಡ್ಡಬಳ್ಳಾಪುರ: ಮಕ್ಕಳು ಹಾಗೂ ಯುವಜನತೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಎಂ.ವಿ ಕರೆ ನೀಡಿದರು.
ನಗರದ ಜಾಲಪ್ಪ ಶಿಕ್ಷಣ ಸಂಸ್ಥೆಯಲ್ಲಿ ಮಾದಕ ವಸ್ತುಗಳ ವಿರೋಧಿ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ 5 ಕಿ.ಮೀ. ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚುತ್ತಿದ್ದು, ಡ್ರಗ್ ಮಾಫಿಯಾ ಮಕ್ಕಳು ಹಾಗೂ ದುಡಿಯುವ ವರ್ಗವನ್ನು ಗುರಿಯಾಗಿಸಿಕೊಂಡಿದೆ. ಈ ದುಷ್ಪ್ರವೃತ್ತಿಯನ್ನು ನಿಯಂತ್ರಿಸಲು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಾದಕ ವಸ್ತುಗಳ ಅಪಾಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಸಾಮಾಜಿಕ ಜಾಲತಾಣಗಳ ಮೂಲಕವೂ ಜಾಗೃತಿ ಹರಡಬೇಕು ಎಂದು ಹೇಳಿದರು.
‘ಮನೆಮನೆಗೆ ಪೊಲೀಸ್’ ಯೋಜನೆ
ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಮನೆಮನೆಗೆ ಪೊಲೀಸ್’ ಕಾರ್ಯಕ್ರಮದ ಮೂಲಕ ಪೊಲೀಸ್ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಒಂಟಿ ಮನೆಗಳ ಮಾಹಿತಿ ಸಂಗ್ರಹಿಸಿ, ಮಹಿಳೆಯರ ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ‘ಆಸರೆ’ ಯೋಜನೆಯಡಿ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರಿಗೆ ರಕ್ಷಣೆ ಒದಗಿಸುವ ಜೊತೆಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.
ಅಕ್ಕಪಕ್ಕದಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾದವರು ಅಥವಾ ಸಹಾಯದ ಅಗತ್ಯವಿರುವವರ ಮಾಹಿತಿ ದೊರೆತರೆ ಪೊಲೀಸರಿಗೆ ತಿಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಜಾಲಪ್ಪ ಅವರ ಸೇವೆ ಸ್ಮರಣೀಯ
ಜಾಲಪ್ಪ ಶಿಕ್ಷಣ ಸಂಸ್ಥೆಯ ಸ್ಥಾಪಕ ಆರ್.ಎಲ್. ಜಾಲಪ್ಪ ಅವರನ್ನು ಸ್ಮರಿಸಿದ ಎಸ್ಪಿ ಚಂದ್ರಕಾಂತ್, ಅವರು ದೂರದೃಷ್ಟಿಯ ನಾಯಕ ಹಾಗೂ ಹಿಂದುಳಿದ ವರ್ಗಗಳ ಧ್ವನಿಯಾಗಿದ್ದರು. ಶಿಕ್ಷಣವೇ ಸಮಾಜ ಪರಿವರ್ತನೆಯ ಶಕ್ತಿ ಎಂಬ ನಂಬಿಕೆಯಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಅವಕಾಶ ಕಲ್ಪಿಸಿದ್ದಾರೆ ಎಂದು ಪ್ರಶಂಸಿಸಿದರು.
ಯುವಕರೇ ದೇಶದ ಶಕ್ತಿ
ಕಾರ್ಯಕ್ರಮದಲ್ಲಿ ಮಾತನಾಡಿದ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಪಾಂಡುರಂಗ, ಮಾದಕ ವಸ್ತುಗಳ ಅಪಾಯದ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮ್ಯಾರಥಾನ್ ಆಯೋಜಿಸಲಾಗಿದೆ ಎಂದರು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಡಾ. ನವೀನ್ ಕುಮಾರ್ ಎಂ.ಬಿ ಮಾತನಾಡಿ, ಮಾದಕ ವಸ್ತುಗಳು ದೇಶದ ಭವಿಷ್ಯಕ್ಕೆ ಮಾರಕವಾಗಿವೆ. ಭಾರತ ಯುವಶಕ್ತಿಯ ರಾಷ್ಟ್ರವಾಗಿದ್ದು, ಯುವಕರು ಕೆಟ್ಟ ಚಟಗಳಿಗೆ ಬಲಿಯಾದರೆ ದೇಶದ ಅಭಿವೃದ್ಧಿಗೆ ಧಕ್ಕೆಯಾಗುತ್ತದೆ. ಮಕ್ಕಳು ಮತ್ತು ಯುವಜನತೆ ಯಾವುದೇ ದುಶ್ಚಟಗಳಿಗೆ ಒಳಗಾಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಜಾಲಪ್ಪ ಶಿಕ್ಷಣ ಸಂಸ್ಥೆಯಿಂದ ಆರಂಭವಾದ ಮ್ಯಾರಥಾನ್ ಭಗತ್ಸಿಂಗ್ ಕ್ರೀಡಾಂಗಣದವರೆಗೆ ನಡೆಯಿತು. ನೂರಾರು ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಮ್ಯಾರಥಾನ್ನಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಾಲಪ್ಪ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜೇಂದ್ರ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಅಮರೇಶ್ ಗೌಡ, ಕಲ್ಲಪ್ಪ, ಮುತ್ತುರಾಜ್, ಶ್ರೀನಿವಾಸ್, ಲಕ್ಷ್ಮಿನಾರಾಯಣ, ಶಬರೀಶ್ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.