
ದೇವನಹಳ್ಳಿ: ತೋಟಕ್ಕೆ ನೀರು ಬಿಡುವ ವಿಚಾರವಾಗಿ ಉಂಟಾದ ಕುಟುಂಬ ಕಲಹ ಗುಂಡಿನ ದಾಳಿಗೆ ತಿರುಗಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಶೆಟ್ಟೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ತೋಟಕ್ಕೆ ನೀರು ಹರಿಸುವ ವಿಚಾರವಾಗಿ ಸಹೋದರರಾದ ಚಂದ್ರು ಮತ್ತು ಚೇತನ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿದ ವೇಳೆ ಅಣ್ಣ ಚಂದ್ರು ತಮ್ಮ ಚೇತನ್ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಘಟನೆಯಲ್ಲಿ ಗಾಯಗೊಂಡ ಚೇತನ್ ಅವರನ್ನು ತಕ್ಷಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಪಾಂಡುರಂಗ ಅವರು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಘಟನೆಯ ಹಿನ್ನೆಲೆ ಹಾಗೂ ಗುಂಡಿನ ದಾಳಿಗೆ ಬಳಸಿದ ಶಸ್ತ್ರಾಸ್ತ್ರದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಎಸ್ಪಿ ವೆಂಕಟೇಶ್ ಪ್ರಸನ್ನ ಮಾತನಾಡಿ, ಇಂದು ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ತಮ್ಮನ ಮೇಲೆ ಅಣ್ಣನು ಸಿಂಗಲ್ ಬ್ಯಾರಲ್ ಬ್ರೀಚ್ ಲೋಡ್ ಗನ್ ನಿಂದ ಫೈರ್ ಮಾಡಿದ್ದಾನೆ. ಸುಮಾರು ಮೂರ್ನಾಲ್ಕು ಸೀಸದ ಗುಂಡುಗಳು(ಪ್ಯಾಲೆಟ್ಸ್) ತಗುಲಿವೆ. ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸ್ಥಳಕ್ಕೆ ಸೋಕೋ ತಂಡ ಬಂದು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಸೆರೆಗೆ ತಂಡ ರಚನೆ ಮಾಡಲಾಗಿದೆ. ಕೂಡಲೇ ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ, ಹೆಚ್ಚಿನ ತನಿಖೆ ಮುಂದುವರಿದಿದೆ.