
ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಗ್ರಾಮಸ್ಥರು ವಿಜೃಂಭಣೆಯಿಂದ ಆಚರಿಸಿದರು.
ಹಬ್ಬದ ಅಂಗವಾಗಿ ತಮಟೆ ವಾದ್ಯದ ನಾದದ ನಡುವೆ ಗ್ರಾಮದ ಪ್ರತಿಯೊಂದು ಮನೆಯಿಂದ ಯುವತಿಯರು, ಮಹಿಳೆಯರು ಹಾಗೂ ಪುಟಾಣಿ ಮಕ್ಕಳು ತಂಬಿಟ್ಟಿನ ಆರತಿ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಿದರು. ಬಳಿಕ ಗ್ರಾಮದ ಹೊರವಲಯದಲ್ಲಿರುವ ನೆಲೆದೇವರಾದ ಶ್ರೀ ಮುತ್ತುರಾಯಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮದ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.

ಪೂಜೆ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಪಟಾಕಿ ಸಿಡಿಸುವ ಮೂಲಕ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಾಯಿತು. ಗ್ರಾಮಸ್ಥರ ಪ್ರಕಾರ, ಆಷಾಡ ಏಕಾದಶಿಯನ್ನು ಗ್ರಾಮ ಜಾತ್ರೆಯ ಮಾದರಿಯಲ್ಲಿ ಆಚರಿಸುವ ಸಂಪ್ರದಾಯವಿದ್ದು, ಈ ದಿನ ನೆಂಟರು ಹಾಗೂ ಹಿತೈಷಿಗಳನ್ನು ಮನೆಗಳಿಗೆ ಆಹ್ವಾನಿಸಿ ಸಾಂಪ್ರದಾಯಿಕ ಹಬ್ಬದ ಊಟ ಬಡಿಸುವ ಪದ್ಧತಿ ಇಂದಿಗೂ ಮುಂದುವರಿದಿದೆ.
ಮಧುರನಹೊಸಹಳ್ಳಿ ಗ್ರಾಮದಲ್ಲಿ ಆಷಾಡ ಏಕಾದಶಿ ಆಚರಣೆಗೆ ವಿಶೇಷ ಮಹತ್ವವಿದ್ದು, ಪ್ರತಿವರ್ಷ ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಪಾಲ್ಗೊಂಡು ಸಂಪ್ರದಾಯವನ್ನು ಜೀವಂತವಾಗಿರಿಸಿಕೊಂಡು ಬರುತ್ತಿದ್ದಾರೆ. ಹಬ್ಬದಲ್ಲಿ ಗ್ರಾಮಸ್ಥರು, ಹಿರಿಯರು, ಯುವಕರು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಕ್ತಿಭಾವದಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.