ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ….

ಪರಿವರ್ತನೆಯ ಹಾದಿಯಲ್ಲಿ……..

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ.
ಮಾಧ್ಯಮಗಳಲ್ಲೂ, ಅನೇಕ ವೇದಿಕೆಗಳಲ್ಲೂ ಇದೇ ಬಹು ಚರ್ಚಿತ ವಿಷಯ……

ಅಂದರೆ ಬಹಳಷ್ಟು ದೊಡ್ಡವರಲ್ಲಿಲ್ಲದ , ಸಮಾಜದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಅಥವಾ ಮುಖವಾಡಗಳಾಗಿ ಬದಲಾಗುತ್ತಿರುವ ನಿಜವಾದ ಮೌಲ್ಯಗಳನ್ನು ಅದರ ಮೂಲ ಸ್ವರೂಪದಲ್ಲಿಯೇ ಮಕ್ಕಳಲ್ಲಿ ಕಾಣಬೇಕೆಂಬ ಹಂಬಲ ಪೋಷಕರದು.ಇದರಿಂದಾಗಿ ಅವರಲ್ಲಿ ಒಳ್ಳೆಯ ಭವಿಷ್ಯ ರೂಪಗೊಳ್ಳುತ್ತದೆ ಎಂದು ಆಸೆಪಡುತ್ತಿದ್ದಾರೆ……

ಆಪೇಕ್ಷೆ ಏನೋ ಒಳ್ಳೆಯದು.
ಆದರೆ ವಾಸ್ತವ.

ವಿಚಿತ್ರವೆಂದರೆ,
ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿಯೇ ಯಾವ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಕೆಟ್ಟದ್ದನ್ನು ಹೇಳಿಕೊಡುವುದಿಲ್ಲ. ತಾವು ಕಳ್ಳರಾದರೂ ತಮ್ಮ ಮಕ್ಕಳು ಮಾತ್ರ ಉತ್ತಮ ದಾರಿ ಹಿಡಿಯಲಿ ಎಂದೇ ಇಚ್ಚಿಸುತ್ತಾರೆ……..

ಆದರೆ ಬಹಳಷ್ಟು ಮಕ್ಕಳು ತಮ್ಮ ನಡವಳಿಕೆಗಳಲ್ಲಿ ನಾವು ಹೇಳುವುದನ್ನು ಮಾಡುವುದು ಕಡಿಮೆ ಅಥವಾ ಮಾಡಿದಂತೆ ನಟಿಸುತ್ತಾರೆ.
ವಾಸ್ತವದಲ್ಲಿ ಅವರು ಗ್ರಹಿಸುವುದು ನಾವು ಹೇಳುವುದನ್ನಲ್ಲ ಮಾಡುವುದನ್ನು.
ದೊಡ್ಡವರನ್ನು ಅನುಕರಿಸುವುದೇ ಅವರ ಮೊದಲ ಮತ್ತು ಸುಲಭ ಆಯ್ಕೆ…….

ಮನೆಯಲ್ಲಿ ನಾವು ಹಾಡು ಹೇಳಿದರೆ, ನೃತ್ಯ ಮಾಡಿದರೆ, ಯೋಗ, ವ್ಯಾಯಾಮ ಮಾಡಿದರೆ, ಸಿಗರೇಟ್ ಸೇದಿದರೆ ಅದನ್ನು ಅನುಕರಿಸಲು ಪ್ರಯತ್ನಿಸುತ್ತಾರೆ.
ನಾವು ಮೊಬ್ಯೆಲ್ ನಲ್ಲಿ ಮಾತನಾಡುವಾಗ ಯಾರನ್ನಾದರು ಕೆಟ್ಟ ಮಾತಿನಲ್ಲಿ ಬೈದರೆ ಅಥವಾ ಕಾಣುವಂತ ಸುಳ್ಳು ಹೇಳಿದರೆ ತಕ್ಷಣಕ್ಕಲ್ಲದಿದ್ದರೂ ಅವಶ್ಯಕತೆ ಒದಗಿ ಬಂದಾಗ ಅದನ್ನು ಶಾಲೆಯೋ ಅಥವಾ ಇನ್ನೆಲ್ಲಾದರೂ ಪ್ರಯೋಗಿಸುತ್ತಾರೆ……

ಅವರನ್ನು ಶಾಲೆಗೆ ಕರೆದೊಯ್ಯುವ ಬಸ್ಸು, ಆಟೋ, ವ್ಯಾನುಗಳ ಡ್ರೈವರುಗಳ, ಆಯಾಗಳ ಮಾತು, ಚಟುವಟಿಕೆ ಅವರನ್ನು ಹೆಚ್ಚು ಸೆಳೆಯುತ್ತದೆ.
ಶಾಲೆ ಮತ್ತು ಮನೆಯ ಸುತ್ತುಮುತ್ತಲಿನ ವಾತಾವರಣ, ಅದರಲ್ಲೂ ಆಕ್ರಮಣಕಾರಿ ವರ್ತನೆಗಳು ಅವರನ್ನು ಬೇಗ ಆಕರ್ಷಿಸುತ್ತದೆ. ಇನ್ನು ಟಿವಿ, ಸಿನಿಮಾ, ಇಂಟರ್ನೆಟ್ ಗಳ ಅತಿರೇಕದ ಪ್ರಭಾವದಿಂದ ಅವರು ತಪ್ಪಸಿಕೊಳ್ಳುವುದು ಕಷ್ಟ……..

ಇದರ ಅರ್ಥ,
ಮೂಲಭತವಾಗಿ ಸಂಸ್ಕಾರಗಳನ್ನು ಹೇಳಿಕೊಡುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ.
ವಾಹನ ಚಲಾಯಿಸುವುದನ್ನು ಪುಸ್ತಕದಲ್ಲಿ ನೋಡಿ ಕಲಿತಷ್ಟೇ ಪ್ರಯೋಜನ. ಆದರೆ ನಿಜವಾದ ಪರಿಣಾಮ ಸಮಾಜದ ಈಗಿನ ನಡವಳಿಕೆಗಳೇ ಅವರನ್ನು ರೂಪಿಸುತ್ತವೆ.
ನಮ್ಮಂತ ದೊಡ್ಡವರಿಗೇ ಇನ್ನೂ ಸರಿಯಾದ ಸಂಸ್ಕಾರ ಇಲ್ಲದಿರುವಾಗ ಪುಟ್ಟ ಮಕ್ಕಳಿಗೆ ಅದನ್ನು ಕಲಿಸುವುದು ಹೇಗೆ…..

ನಿಜವಾದ ಸಂಸ್ಕಾರ ಬೇಕಾಗಿರುವುದು ದೊಡ್ಡವರಿಗೆ.
ಏಕೆಂದರೆ, 0/15 ವರ್ಷದ ಮಕ್ಕಳು ದೊಡ್ಡ ತಪ್ಪು ಮಾಡುವುದು ತುಂಬಾ ಕಡಿಮೆ. 18/20 ತುಂಬುತ್ತಿದ್ದಂತೆ ಸಮಾಜಕ್ಕೆ ತೆರೆದುಕೊಳ್ಳುವ ಅವರು ತಮ್ಮ ವಯೋಸಹಜ ಬದಲಾವಣೆಗಳಿಂದ ಇಲ್ಲಿನ ನಡವಳಿಕೆಗಳನ್ನೇ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ…..

ಒಂದು ವೇಳೆ ಸಮಾಜದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ಸಮಾನತೆ ಇದ್ದರೆ, ಕುಡಿತದ ಬಗ್ಗೆ ಅಸಹ್ಯವಿದ್ದರೆ,
ಲಂಚದ ಬಗ್ಗೆ ಕೆಟ್ಟ ಅಭಿಪ್ರಾಯವಿದ್ದರೆ, ಶ್ರಮ ಸಂಸ್ಕೃತಿಯ ಬಗ್ಗೆ ಗೌರವವಿದ್ದರೆ, ಒಳ್ಳೆಯತನಕ್ಕೆ ಬೆಲೆಯಿದ್ದರೆ,
ಪ್ರತಿಭೆಗೆ ತಕ್ಕ ಮಾನ್ಯತೆ ಇದ್ದರೆ,
ಳಮಕ್ಕಳೂ ಅದನ್ನೇ ಒಪ್ಪಿಕೊಳ್ಳಲು, ಅನುಸರಿಸಲು ಪ್ರಯತ್ನಿಸುತ್ತಾರೆ……

ಅಥವಾ,

ಇಲ್ಲಿ ಹೆಂಗಸರನ್ನು ಚುಡಾಯಿಸುವವನು ಮಹಾನ್ ಗಂಡಸೆಂತಲೂ,
ಬೈಕ್ ವೀಲಿಂಗ್ ಮಾಡುವವನನ್ನು
ಧೀರನೆಂತಲೂ,
ಕಾನೂನು ಉಲ್ಲಂಘಿಸುವವನನ್ನು ಶೂರನೆಂತಲೂ,
ಮೋಸದಿಂದಾರೂ ಹಣ ಮಾಡುವವನನ್ನು ಯಶಸ್ವಿ ವ್ಯಕ್ತಿಯಂತಲೂ ಬಿಂಬಿಸಿದರೆ ಮಕ್ಕಳೂ ಇದೇ ಪ್ರಭಾವಕ್ಕೆ ಒಳಗಾಗುತ್ತಾರೆ………

ಆದ್ದರಿಂದ,
ಬದಲಾಗಬೇಕಾಗಿರುವುದು ಏನೂ ಅರಿಯದ ಮಕ್ಕಳಲ್ಲ. ಎಲ್ಲವನ್ನೂ ಅರಿತಿದ್ದೇವೆಂದು ಭಾವಿಸಿರುವ ನಾವುಗಳಾದ ಜವಾಬ್ದಾರಿಯುತ ನಾಗರಿಕರು. ನೆಪಗಳನ್ನು ಹುಡುಕದೇ ಈ ಕ್ಷಣವೇ ಕನಿಷ್ಠ ಮಟ್ಟದ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳೋಣ. ಇದೇನು ಬಾರಿ ಬಾರಿ ಕಷ್ಟವಲ್ಲ.
ಮನಸ್ಸು ಮಾಡಿದರೆ ಸುಲಭ ಮತ್ತು ಸರಳ………

ಸಾರ್ವಜನಿಕ ಬದುಕು ಮತ್ತು ನಮ್ಮ ವ್ಯಕ್ತಿತ್ವ……

ಶುದ್ಧತೆಗೆ ಒಂದು ಶಕ್ತಿಯಿದೆ – ಸಾಮರ್ಥ್ಯವಿದೆ – ಮಹತ್ವವಿದೆ – ಉದ್ದೇಶವಿದೆ – ಗುರಿಯಿದೆ –

ಶುದ್ಧತೆ ಸಾಧನೆಯ ಒಂದು ಅತ್ಯುತ್ತಮ ಮಾರ್ಗವೂ ಹೌದು, ಹಾಗೆಯೇ ಶುದ್ಧತೆ ಒಂದು ಸುಂದರ ಅನುಭವ ಸಹ……

ವಾಸ್ತವ ಬದುಕಿನ ಶುದ್ಧತೆ ಮತ್ತು ಸಾರ್ವಜನಿಕ ಅಭಿಪ್ರಾಯಗಳ ಒಂದು ಅವಲೋಕನ……

ಆ ವ್ಯಕ್ತಿಯ ವೈಯಕ್ತಿಕ ನಡವಳಿಕೆ ಸರಿಯಿಲ್ಲ ಆದರೆ ಆತ ಅತ್ಯುತ್ತಮ ಕಲಾವಿದ,

ಈ ವ್ಯಕ್ತಿಯ ವೈಯಕ್ತಿಕ ವರ್ತನೆ ಕೆಟ್ಟದಾಗಿ ಇರುತ್ತದೆ. ಆದರೆ ಆತ ತುಂಬಾ ಒಳ್ಳೆಯ ಪತ್ರಕರ್ತ,

ಅವರೊಬ್ಬ ನೀಚ ಮನೋಭಾವದ ವ್ಯಕ್ತಿ. ಆದರೆ ಅವರು ಬಹುದೊಡ್ಡ ಬರಹಗಾರರು,

ಇವರೊಬ್ಬರು ವೈಯಕ್ತಿಕವಾಗಿ ಸಹಿಸಲಸಾಧ್ಯ ಗುಣದವರು. ಆದರೆ ಸಮಾಜ ಸೇವೆಯಲ್ಲಿ ಹೆಸರು ಮಾಡಿದ್ದಾರೆ,

ಮತ್ತೊಬ್ಬರು ಹೆಣ್ಣು ಬಾಕ. ಆದರೆ ಆತ ಅತ್ಯುತ್ತಮ ಸಾಹಿತಿ,

ಅವನೊಬ್ಬ ಭ್ರಷ್ಟ ವ್ಯಕ್ತಿ. ಆದರೆ ಉತ್ತಮ ಕೆಲಸಗಾರ,

ಇನ್ನೊಬ್ಬ ವಿಚಿತ್ರ ಅಸಹಜ ನಡವಳಿಕೆಯ ವ್ಯಕ್ತಿ. ಆದರೆ ಪ್ರತಿಭಾವಂತ ವಿಜ್ಞಾನಿ,

ಹೀಗೆ ಅನೇಕ ಪ್ರಖ್ಯಾತರು, ಸಾಧಕರು, ಆದರ್ಶ ವ್ಯಕ್ತಿಗಳ ಬಗ್ಗೆ ಬಹಳಷ್ಟು ಜನ ಆಗಾಗ ಮಾತನಾಡಿಕೊಳ್ಳುವುದನ್ನು ಕೇಳಿದ್ದೇವೆ.

ಹಾಗಾದರೆ,
ಆ ವ್ಯಕ್ತಿಗಳ ಸಾಧನೆ, ಜನಪ್ರಿಯತೆ, ಪ್ರಶಸ್ತಿ, ಅಧಿಕಾರದ ಮುಂದೆ ಆ ವೈಯಕ್ತಿಕ ಬದುಕಿನ ಕೆಟ್ಟ ವರ್ತನೆಗಳನ್ನು ಮರೆಯಬೇಕೆ ? ಅಥವಾ ಕ್ಷಮಿಸಿಬೆಡಬೇಕೆ ? ಎಂಬ ಪ್ರಶ್ನೆ ಕೆಲವೊಮ್ಮೆ ಕಾಡುತ್ತದೆ.

ಒಬ್ಬ ವ್ಯಕ್ತಿಯ ಒಟ್ಟು ವ್ಯಕ್ತಿತ್ವವನ್ನು ಕೇವಲ ಆತನ ಸಾಧನೆ ಜನಪ್ರಿಯತೆಯ ಆಧಾರದಲ್ಲಿ ಮಾತ್ರ ಪರಿಗಣಿಸಬೇಕೆ. ಆತನ ಇತರ ದೌರ್ಬಲ್ಯಗಳನ್ನು ನಿರ್ಲಕ್ಷಿಸಬೇಕೆ. ವ್ಯಕ್ತಿತ್ವ ಎಂದರೆ ಕೇವಲ ಮಾತು ಭಾಷಣಗಳಿಗೆ ಮಾತ್ರ ಸೀಮಿತವೇ ? ಇವರನ್ನು ಆದರ್ಶ ವ್ಯಕ್ತಿಗಳಾಗಿ ಪರಿಗಣಿಸಿ ಯುವ ಜನಾಂಗಕ್ಕೆ ಪರಿಚಯಿಸುವಾಗ ವೈಯಕ್ತಿಕ ನಡವಳಿಕೆಗಳನ್ನು ಮರೆ ಮಾಚಬೇಕೆ.

ವ್ಯಕ್ತಿತ್ವ ಇಷ್ಟೊಂದು ಸರಳವೇ ?

ಒಬ್ಬ ವ್ಯಕ್ತಿಯ ವ್ಯಕ್ತಿತ್ವವೆಂದರೆ, ಅದು ಅವನ ಹುಟ್ಟು ಸಾವಿನ ನಡುವಿನ ಅವಧಿಯಲ್ಲಿ, ಅವನ ಬದುಕಿನ ಒಟ್ಟು ರೀತಿ ನೀತಿಯ ಮೊತ್ತ. ಸಾಧನೆ ಮತ್ತು ವ್ಯಕ್ತಿತ್ವ ಒಂದೇ ನಾಣ್ಯದ ಎರಡು ಮುಖಗಳು.

ಅನೇಕ ಜನರನ್ನು ಗಮನಿಸಿದ್ದೇನೆ. ಅವರುಗಳು ಜನಪ್ರಿಯನಾದ ವ್ಯಕ್ತಿ, ಆತನ ಜಾತಿಯ, ಪರಿಚಯದ, ಪ್ರದೇಶ ಮುಂತಾದ ಅಂಶಗಳನ್ನು ಗಮನಿಸಿ ಆತ ಅವರಿಗೆ ಹತ್ತಿರದವನಾಗಿದ್ದರೆ ಆತನ ಎಲ್ಲಾ ದೌರ್ಬಲ್ಯಗಳನ್ನು ಮರೆಮಾಚಿ ಆತನನ್ನು ಮಹಾನ್ ವ್ಯಕ್ತಿಯಂತೆ ಚಿತ್ರಿಸುತ್ತಾರೆ.

ಒಬ್ಬ ಧಾರ್ಮಿಕ ನಾಯಕ, ಆಧ್ಯಾತ್ಮಿಕ ಚಿಂತಕ, ಒಬ್ಬ ಸಿನಿಮಾ ನಟ, ರಾಜಕಾರಣಿ, ಸಾಹಿತಿ, ಪತ್ರಕರ್ತ, ಕ್ರೀಡಾ ಪಟು, ವಿಜ್ಞಾನಿ ಅಥವಾ ಇನ್ಯಾವುದೇ ಕ್ಷೇತ್ರದ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಉತ್ತಮ ಸಾಧನೆ ಮಾಡಿ ವೈಯಕ್ತಿಕ ಬದುಕಿನಲ್ಲಿ ಅಸಹಜ ನಡವಳಿಕೆ ರೂಪಿಸಿಕೊಂಡಿದ್ದರೆ ಆತನನ್ನು ನಾವು ಆದರ್ಶ ವ್ಯಕ್ತಿ ಎಂದು ಪರಿಗಣಿಸಲು ಕಷ್ಟವಾಗುತ್ತದೆಯಲ್ಲವೇ ? ಆತ್ಮ ಶುದ್ದವಿಲ್ಲದ, ಕೇವಲ ತನ್ನ ಶ್ರಮ, ಪ್ರತಿಭೆ, ಅದೃಷ್ಟದಿಂದ ಪ್ರಖ್ಯಾತನಾದ ಮಾತ್ರಕ್ಕೆ ಆತನನ್ನು ದೈವತ್ವಕ್ಕೆ ಏರಿಸುವ ನಮ್ಮ ಮನೋಭಾವ ಸ್ವಲ್ಪ ಬದಲಾಯಿಸಿಕೊಳ್ಳಬೇಕಿದೆ.

ವೈಯಕ್ತಿಕ ಬದುಕು ಮತ್ತು ಸಾರ್ವಜನಿಕ ಜೀವನದ ಸಮ್ಮಿಲನದಿಂದ ಮೂಡುವ ವ್ಯಕ್ತಿತ್ವವೇ ನಿಜವಾದ ಆದರ್ಶ. ಇಲ್ಲದಿದ್ದರೆ ಯುವ ಪೀಳಿಗೆಗೆ ಕೇವಲ ಬಾಹ್ಯದಲ್ಲಿ ಯಶಸ್ವಿಯಾದ ವ್ಯಕ್ತಿಗಳ ವ್ಯಕ್ತಿತ್ವವೇ ಮುಖ್ಯವಾದರೆ ಮುಂದೆ ಮಾನವೀಯ ಮೌಲ್ಯಗಳು ಬೆಲೆ ಕಳೆದುಕೊಳ್ಳುವ ಎಲ್ಲಾ ಸಾಧ್ಯತೆ ಇದೆ.

ಈ ಬಗ್ಗೆ ನಮ್ಮ ಪ್ರತಿಕ್ರಿಯೆಗಳು ಹೆಚ್ಚು ವಾಸ್ತವಿಕ ನೆಲೆಯಲ್ಲಿ ನಿಜ ವ್ಯಕ್ತಿತ್ವದ ಗುರುತಿಸುವಿಕೆಯತ್ತ ಇರಲಿ.

ಇಲ್ಲದಿದ್ದರೆ ಕಳ್ಳರು, ಮುಖವಾಡದ ಸ್ವಾಮಿಗಳು, ಸಾಹಿತಿಗಳು, ಪತ್ರಕರ್ತರು, ಪ್ರವಚನಕಾರರು, ನಟರು, ರಾಜಕಾರಣಿಗಳು ಮುಂತಾದ ನಕಲಿಗಳು ಯಾವುದೇ ವ್ಯಕ್ತಿತ್ವ ಇಲ್ಲದೇ ಕೇವಲ ಮೇಲ್ನೋಟದ ಒಣ ಬುದ್ದಿವಂತಿಕೆಯಿಂದ ಸಮಾಜದ ಮೇಲೆ ನಿಯಂತ್ರಣ ಪಡೆದು, ನಿಜ ವ್ಯಕ್ತಿತ್ವದವರು ಹಿನ್ನೆಲೆಗೆ ಸರಿಯಬೇಕಾಗುತ್ತದೆ. ಅದು ಯುವ ಜನಾಂಗಕ್ಕೆ ನಾವು ಮಾಡುವ ವಂಚನೆಯಾಗುತ್ತದೆ. ಎಚ್ಚರವಿರಲಿ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *

error: Content is protected !!