
ಕೋಲಾರ : ಬರ ಹಾಗೂ ಬಿಸಿಲಿನ ತಾಪದಿಂದ ರೈತರ ಬೆಳೆಗಳು ಒಣಗುತ್ತಿರುವ ಸಂದರ್ಭದಲ್ಲಿ ಸಮರ್ಪಕ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ವಿಫಲವಾಗಿರುವ ಬೆಸ್ಕಾಂ ಇಲಾಖೆಯ ವಿರುದ್ಧ ಸೆ.9ರಂದು ಬೆಸ್ಕಾಂ ಕಚೇರಿ ಮುಂದೆ ಒಣ ಮೆಣಸಿನಕಾಯಿ ಹೊಗೆ ಹಾಕುವ ಮೂಲಕ ಹೋರಾಟ ನಡೆಸಲು ರೈತರು ತೀರ್ಮಾನಿಸಿದ್ದಾರೆ.
ಕೋಲಾರದ ರೈತನ ತೋಟದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿ, ಮಳೆ ಕೊರತೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಿರುವ ಬೆಳೆಗಳಿಗೆ ನೀರು ಹಾಯಿಸಲು ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ. ಕಳೆದ ಮೂರು ದಿನಗಳಿಂದ ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಕಡಿಮೆ ಅವಧಿಗೆ ವಿದ್ಯುತ್ ನೀಡಲಾಗುತ್ತಿದ್ದು, ಇದರಿಂದ ಬೆಳೆಗಳು ಕಣ್ಣುಮುಂದೆಯೇ ಒಣಗುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲವೆಂದು ಇಂಧನ ಇಲಾಖೆ ಮಾಹಿತಿ ನೀಡಿದ್ದರೂ ಸ್ಥಳೀಯ ಬೆಸ್ಕಾಂ ಅಧಿಕಾರಿಗಳು ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ರೈತರು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಬೆಳೆ ಬೆಳೆದಿದ್ದು, ವಿದ್ಯುತ್ ಕಡಿತದಿಂದ ಬೆಳೆ ನಷ್ಟವಾದರೆ ರೈತರ ಗತಿ ಏನು ಎಂದು ಪ್ರಶ್ನಿಸಿದರು.
ಕಡಿಮೆ ಗುಣಮಟ್ಟದ ವಿದ್ಯುತ್ ಪೂರೈಕೆಯಿಂದ ಕೊಳವೆಬಾವಿಗಳ ಪಂಪ್‌ಸೆಟ್‌ಗಳು ಹಾನಿಗೊಳಗಾಗುತ್ತಿವೆ. ಸಮಸ್ಯೆ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ರೈತರ ಮೇಲೆಯೇ ದಬ್ಬಾಳಿಕೆ ಮಾಡಲಾಗುತ್ತಿದೆ. ರೈತರು ರಾತ್ರಿ ವೇಳೆ ಕೊಳವೆಬಾವಿಗಳ ಬಳಿ ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಾವು, ಚೇಳು ಸೇರಿದಂತೆ ವಿಷಜಂತುಗಳ ಭಯದಲ್ಲಿಯೇ ಜೀವನ ನಡೆಸಬೇಕಾಗಿದೆ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ವಿದ್ಯುತ್ ಬೇಡಿಕೆ ಹೆಚ್ಚಿದೆ ಎಂಬ ನೆಪದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ ಬೆಳೆಗಳು ನಷ್ಟವಾಗುತ್ತಿದ್ದರೂ ಬೆಸ್ಕಾಂ ಅಧಿಕಾರಿಗಳಿಗೆ ಕರುಣೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
24 ಗಂಟೆಯೊಳಗೆ ವಿದ್ಯುತ್ ಸಮಸ್ಯೆ ಬಗೆಹರಿಸಿ ಗುಣಮಟ್ಟದ ಕನಿಷ್ಠ 8 ಗಂಟೆ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ಸೆ.9ರಂದು ಬೆಸ್ಕಾಂ ಕಚೇರಿ ಮುಂದೆ ನಷ್ಟವಾಗಿರುವ ಬೆಳೆ ಹಾಗೂ ಒಣ ಮೆಣಸಿನಕಾಯಿಗಳೊಂದಿಗೆ ಪ್ರತಿಭಟನೆ ನಡೆಸಿ, ಹೊಗೆ ಹಾಕುವ ಮೂಲಕ ರೈತ ವಿರೋಧಿ ಧೋರಣೆಗೆ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಹಾಗೂ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ರೈತರು ಆಗ್ರಹಿಸಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ, ಚಂದ್ರಪ್ಪ, ಅಪ್ಪೋಜಿರಾವ್, ಯಲ್ಲಣ್ಣ, ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.