ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದ ಕಾರ್ಮಿಕರ ಶಾಲೆ: ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಕಾರ್ಮಿಕರಿಗಾಗಿಯೇ ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶಾಲೆ ತೆರೆಯಲು ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ನಾಗಮಂಗಲ ಪುರಸಭೆ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪೌರಕಾರ್ಮಿಕರ ಅನುಕೂಲಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಕಾರ್ಮಿಕರ ಏನೇ ಸಮಸ್ಯೆಗಳಿದ್ದರೂ ಸ್ಥಳದಲ್ಲೇ ಪರಿಹರಿಸಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ವೇದಿಕೆಯಲ್ಲಿಯೇ ಸೂಚಿಸಿದ ಸಚಿವರು, ಶ್ರಮಿಕ ವರ್ಗದಿಂದಲೇ ಸಮಾಜದ ಶ್ರೇಯಸ್ಸು ಹಾಗೂ ಅಭಿವೃದ್ಧಿ ಸಾಧ್ಯ ಎಂದರು.

ವಾಸ್ತವದಲ್ಲಿ ಪೌರಕಾರ್ಮಿಕರು ನಮ್ಮ ಸಮಾಜದ ‘ಆರೋಗ್ಯ ರಕ್ಷಕರು’. ಗಡಿಯಲ್ಲಿ ಸೈನಿಕರು ದೇಶವನ್ನು ಕಾಯುವಂತೆ, ನೀವು ನಮ್ಮೂರಿನ ಬೀದಿಗಳಲ್ಲಿ ನಿಂತು ರೋಗರುಜಿನಗಳು ಹರಡದಂತೆ ನಮ್ಮನ್ನು ಕಾಯುತ್ತಿದ್ದೀರಿ. ನಿಮ್ಮ ಈ ನಿಸ್ವಾರ್ಥ ಹಾಗೂ ಶ್ರಮದಾಯಕ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ತ್ಯಾಗಕ್ಕೆ ಇಡೀ ಸಮಾಜ ಸದಾ ಚಿರಋಣಿಯಾಗಿದೆ. ನಿಮ್ಮೆಲ್ಲರ ಬದುಕಿನಲ್ಲಿ ಸದಾ ನೆಮ್ಮದಿ ಇರಲಿ, ನಿಮ್ಮ ಕುಟುಂಬಗಳು ಸುಖವಾಗಿರಲಿ ಎಂದು ಸಚಿವರು ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪವಿಭಾಗಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಅಶೋಕ್, ತಾಪಂ ಇಒ ಸತೀಶ್, ಪುರಸಭೆ ಸಿಇಒ ವೀಣಾ ಇದ್ದರು.

ಇದೇ ವೇಳೆ ಶಾಸಕರ ಸ್ಥಳೀಯಾಭಿವೃದ್ಧಿ ನಿಧಿಯಿಂದ ಅಂಗವಿಕಲರಿಗಾಗಿ ಖರೀದಿಸಿದ್ದ ತ್ರಿಚಕ್ರ ವಾಹನ (ಸ್ಕೂಟರ್) ಸಚಿವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಉಪ್ಪಾರಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯದ ನೆಲದ ಕಾಮಗಾರಿ, ಮುದ್ದೇಗೌಡನಕೊಪ್ಪಲು ಗ್ರಾಮದಲ್ಲಿ ಬಹುಪಯೋಗಿ ಕಟ್ಟಡ ಕಾಮಗಾರಿ ಹಾಗೂ ಪಡವಲಪಟ್ಟಣ ಗ್ರಾಮದ ರಸ್ತೆ ಕಾಮಗಾರಿಗಳಿಗೆ ಸಚಿವರು ಗುದ್ದಲಿ ಪೂಜೆ ನೆರವೇರಿಸಿದರು.

Leave a Reply

Your email address will not be published. Required fields are marked *

error: Content is protected !!