ಬಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ, ಲೇಸರ್ ಗಳ ಯುಗದಲ್ಲಿ ಪಟಾಕಿಗೇನು ಕೆಲಸ…..?

ಪಟಾಕಿ ದುರಂತಕ್ಕೆ ಯಾರು ಹೊಣೆ….

ಬಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ, ಲೇಸರ್ ಗಳ ಯುಗದಲ್ಲಿ ಪಟಾಕಿಗೇನು ಕೆಲಸ…..

ಲೇಸರ್ ಗಳ ಯುಗದಲ್ಲಿ ಪಟಾಕಿಗಳಿಗಾಗಿ ಜೀವ ತೆರುತ್ತಿರುವ ಸಮಾಜದಲ್ಲಿ ನಾವಿದ್ದೇವೆ ಎಂದರೆ ಎಷ್ಟು ಅನಾಗರಿಕ ಸಮಾಜ ನಮ್ಮದು ಎಂದು ಊಹಿಸಿ. ಒಂದರ ಹಿಂದೆ ಒಂದು ಪಟಾಕಿ ದುರಂತಗಳು ದೇಶದಾದ್ಯಂತ ಸುದ್ದಿಯಾಗುತ್ತಿವೆ. ಅದನ್ನು ಕೇಳಿ ಕರುಳು ಹಿಂಡಿದಂತಾಗುತ್ತಿದೆ. ಬಹುತೇಕ ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ನಿಸ್ಸಂಶಯವಾಗಿ ಕರೆಯಬಹುದು.

ಹಿಂದೆ ವಿದ್ಯುತ್ ಇಲ್ಲದಿದ್ದಾಗ ಬೆಳಕೆಂಬುದು ಅಪ್ಯಾಯಮಾನ ಆನಂದವನ್ನು ನೀಡುತ್ತಿತ್ತು. ಆಕಾಶದಲ್ಲಿಯ ಹುಣ್ಣಿಮೆಯ ಚಂದ್ರ, ಆ ಮಿಂಚಿನ ನಕ್ಷತ್ರಗಳು ನಮಲ್ಲಿ ನವೋಲ್ಲಾಸ ತುಂಬುತ್ತಿದ್ದವು. ಮನಸ್ಸು ಚೇತೋಹಾರಿ ಆಗಿರುತ್ತಿತ್ತು. ತದನಂತರ ಒಂದಷ್ಟು ರಾತ್ರಿಯ ಫೈರ್ ಕ್ಯಾಂಪ್ ಗಳು, ಬುಡ್ಡಿ ದೀಪಗಳು, ಕ್ಯಾಂಡಲ್ ಗಳು ನಮಗೆ ಬೆಳಕಿನ ಸುಂದರ ಅನುಭವ ನೀಡುತ್ತಿದ್ದವು

ಅನಂತರ ವಿದ್ಯುತ್ ಸಂಶೋಧನೆಯಾಯಿತು. ನಿಧಾನವಾಗಿ ನಗರದಿಂದ ಗ್ರಾಮೀಣ ಭಾಗ, ತದನಂತರ ಅತ್ಯಂತ ನಿರ್ಜನ ಪ್ರದೇಶಕ್ಕೂ ವಿದ್ಯುತ್ ಪೂರೈಕೆಯಾಗಿ ದೀಪಗಳು ಬೆಳಗತೊಡಗಿದವು. ದಿನ ಕಳೆದಂತೆ ಆ ವಿದ್ಯುತ್ ದ್ವೀಪಗಳ ಜಗತ್ತೇ ಅನಾವರಣಗೊಂಡಿತು. ಎಂತೆಂತಹ ಅದ್ಭುತ ದೀಪಗಳು ಅಲಂಕಾರಿಕ ಬಲ್ಬುಗಳು ಮನೆಮನೆಗೂ ತಲುಪಿದವು. ದೊಡ್ಡ ದೊಡ್ಡ ಅರಮನೆಯಂತ ಭವ್ಯ ಬಂಗಲೆಗಳಲ್ಲಿ ವಿದ್ಯುತ್ ದೀಪ ಅಲಂಕಾರ ನೋಡುವುದೇ ಒಂದು ಆನಂದ.

ಮೈಸೂರಿನ ದಸರಾ ಸಂದರ್ಭದಲ್ಲಿ ಇಡೀ ಮೈಸೂರಿಗೆ ಮತ್ತು ರಾಜಸ್ಥಾನದ ಜೈಪುರದ ಅರಮನೆಗೆ ವಿದ್ಯುತ್ ಅಲಂಕಾರ ಮಾಡಲಾಗುತ್ತದೆ. ಅದನ್ನು ನೋಡುವುದೇ ಕಣ್ಣಿಗೆ ಹಬ್ಬ. ಲಕ್ಷಾಂತರ ಪ್ರವಾಸಿಗರು ಅದಕ್ಕಾಗಿಯೇ ಬರುತ್ತಾರೆ. ಈಗ ಅದರ ಮುಂದುವರಿದ ಭಾಗವಾಗಿ ಲೇಸರ್ ಕಿರಣಗಳು, ಅದರ ಪ್ರದರ್ಶನ ನಿಧಾನವಾಗಿ ಎಲ್ಲೆಡೆ ವ್ಯಾಪಿಸುತ್ತಿದೆ. ಈ ನೆರಳು ಬೆಳಕಿನಾಟ ಇಡೀ ವಿಶ್ವವನ್ನೇ ಮರು ಸೃಷ್ಟಿ ಮಾಡಿದಂತೆ ವಿನ್ಯಾಸಗೊಳಿಸಲಾಗಿದೆ. ಅಂದರೆ ಈ ಬೆಳಕಿನ ವಿಷಯದಲ್ಲಿ ಜಗತ್ತು ಅದ್ಭುತ ಪ್ರಯೋಗಗಳಿಂದ ಮನಸೂರೆಗೊಳ್ಳುತ್ತಿದೆ.

ಇಂತಹ ಸಂದರ್ಭದಲ್ಲಿ ಅತ್ಯಂತ ಅಪಾಯಕಾರಿಯಾದ ಸಣ್ಣ ಮಟ್ಟದ ಬೆಳಕಿನ ಆಟಕ್ಕೆ ಸಾವಿರಾರು ಬಡಜೀವಗಳು ಪ್ರತಿ ವರ್ಷವೂ ಸಾಯುವುದು ಯಾವ ನ್ಯಾಯ.

ಏನೋ ಬಹಳ ಹಿಂದೆ ಇಡೀ ದೇಶದಲ್ಲಿ ಕಾಡುಮೇಡುಗಳೇ ತುಂಬಿರುವಾಗ, ಗಿಡಮರಗಳು ಆಕ್ರಮಿಸಿರುವಾಗ, ಜನಸಂಖ್ಯೆ ತುಂಬಾ ಕಡಿಮೆ ಇದ್ದಾಗ, ಪರಿಸರ ಇನ್ನೂ ಶುದ್ಧತೆಯನ್ನು ಕಾಪಾಡಿಕೊಂಡಿದ್ದಾಗ ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳಿಗೆ ಒಂದು ಅರ್ಥವಿರುತ್ತಿತ್ತು, ಸಂಭ್ರಮವಿರುತ್ತಿತ್ತು, ಸಂತೋಷ ಇರುತ್ತಿತ್ತು. ಆದರೆ ಈಗ ಇಡೀ ವಾತಾವರಣವೇ ನೈರ್ಮಲ್ಯವಾಗಿ, ರಸ್ತೆಗಳೆಲ್ಲ ವಿದ್ಯುತ್ ಮಯವಾಗಿ ಆ ಪಟಾಕಿಯ ಬೆಳಕಿಗೆ ಬೆಲೆಯೇ ಇಲ್ಲದಂತಾಗಿರುವಾಗ, ಇನ್ನೂ ನಿಷೇಧ ಮಾಡದೆ ಬಡಜೀವಗಳ ಜೊತೆ ಆಟವಾಡುತ್ತಿರುವ ಸರ್ಕಾರ, ಅದು ಯಾರದೇ ಪಕ್ಷದ್ದಾಗಿರಲಿ ಅವರಿಗೆ ನಮ್ಮ ಹೃದಯಾಂತರಾಳದಿಂದ, ಆಕ್ರೋಶದ ದಿಕ್ಕಾರ.

ಮನುಷ್ಯ ಇಷ್ಟೊಂದು ಅಸೂಕ್ಷ್ಮ, ಭಂಡ ಆಗಬಾರದು. ಕನಿಷ್ಠ ಪ್ರಜ್ಞೆ ಇಲ್ಲದ ಮತಿಹೀನ ಸ್ಥಿತಿ ತಲುಪಬಾರದು. ಪಟಾಕಿ ದುರಂತಗಳು ಒಂದು ರೀತಿ ಸರ್ಕಾರಿ ಪ್ರಾಯೋಜಿತ ಕೊಲೆಗಳೇ.

ಪಟಾಕಿ ನಿಷೇಧಿಸುವ ಅಧಿಕಾರ ಯಾರಿಗೆ ಇದೆಯೋ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಇಲ್ಲವೇ ತಕ್ಷಣವೇ ಅದನ್ನು ನಿಷೇಧಿಸಬೇಕು. ಇದು ಜಾತ್ಯಾತೀತ, ಧರ್ಮಾತೀತ, ಪಕ್ಷಾತೀತ, ಪರಿಸರ, ದೇಶ ಮತ್ತು ಜನರ ಹಿತಾಸಕ್ತಿಯ ದೃಷ್ಟಿಯಿಂದ ಯಾವುದೇ ರೀತಿಯ ಪಟಾಕಿಗಳನ್ನು, ಯಾವುದೇ ಸಂದರ್ಭದಲ್ಲಿ, ಯಾರದೇ ಕಾರ್ಯಕ್ರಮದಲ್ಲಿ ಉಪಯೋಗಿಸುವುದು ಶಿಕ್ಷಾರ್ಹ ಅಪರಾಧವಾಗಬೇಕು. ಇಡೀ ಪಟಾಕಿ ಕಂಪೆನಿಗಳನ್ನೇ ನಿಷೇಧ ಮಾಡಬೇಕು. ಅಲ್ಲಿರುವ ಉದ್ಯೋಗಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅವರಿಗೂ ಜೀವನ ಭದ್ರತೆ ಒದಗಿಸಬೇಕು. ಬಡವರ ಜೀವಕ್ಕೆ ಬೆಲೆ ಕೊಡಬೇಕು. ಹೊಟ್ಟೆಪಾಡಿಗಾಗಿ ತನ್ನ ಜೀವವನ್ನೇ ಬಲಿಕೊಡುವ ಪರಿಸ್ಥಿತಿ ಅವರಿಗೆ ಬರಬಾರದು.

ಇದು ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲ ವರ್ಷದ ಎಲ್ಲಾ ಹಬ್ಬಗಳಿಗೂ, ಎಲ್ಲಾ ಧಾರ್ಮಿಕ, ರಾಜಕೀಯ, ಖಾಸಗಿ ಕಾರ್ಯಕ್ರಮಗಳಿಗೂ ಏಕಪ್ರಕಾರವಾಗಿ ಅನ್ವಯಿಸಬೇಕು. ಇದಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಆಮದು, ರಫ್ತು ಸಹ ನಿಷೇಧ ಮಾಡಬೇಕು.

ಹಿಂದೆ ಪಟಾಕಿ ಒಂದು ಉತ್ತಮ, ಮನಸ್ಸಿಗೆ ಉಲ್ಲಾಸ ನೀಡುವ ಬೆಳಕಿನ ಆಚರಣೆಯಾಗಿತ್ತು. ಆ ವಿವಿಧ ಬಗೆಯ ಬೆಳಕಿನ ಚಿತ್ತಾರಗಳು ಬಾನಂಗಳದಲ್ಲಿ ಮೂಡಿ ಮುದ ನೀಡುತ್ತಿದ್ದವು. ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದವು. ಯಾರಿಂದಲೂ ಯಾವ ತಕರಾರು ಇರಲಿಲ್ಲ. ಆದರೆ ಯಾವಾಗ ಜನಸಂಖ್ಯೆಯ ಸ್ಫೋಟ ಎಲ್ಲಾ ಮಿತಿಗಳನ್ನು ಮೀರಿ ಬೆಳೆಯತೊಡಗಿತೋ, ಅವರ ಮ‌ೂಲಭೂತ ಸೌಕರ್ಯಗಳ ಅವಶ್ಯಕತೆಗಾಗಿ ಕೈಗಾರಿಕೀಕರಣ ಅಭಿವೃದ್ಧಿಯಾಯಿತೋ ಆಗ ಪರಿಸರದ ಮೇಲೆ ಬಹುದೊಡ್ಡ ಒತ್ತಡ ಬೀಳತೊಡಗಿತು. ಅದು ಎಷ್ಟರಮಟ್ಟಿಗೆ ಎಂದರೆ ವಾಯುಮಾಲಿನ್ಯದಿಂದ ಭಾರತದ ರಾಜಧಾನಿ ದೆಹಲಿ ಸೇರಿ ಕೆಲವು ನಗರಗಳು ಅಪಾಯಕಾರಿ ಹಂತಕ್ಕೆ ತಲುಪಿ ವಾಸಿಸಲು ಯೋಗ್ಯವಲ್ಲದ ನಗರಗಳಾದವು. ಗಾಳಿಯಲ್ಲಿನ ದೂಳಿನ ಕಣಗಳು ಉಸಿರಾಟದ ತೊಂದರೆಗೆ
ಕಾರಣವಾದವು.

ಈಗ ಮನುಷ್ಯನ ಆರೋಗ್ಯ ಮತ್ತು ಅಸ್ತಿತ್ವದ ದೃಷ್ಟಿಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸಬೇಕಿದೆ. ಆರೋಗ್ಯವೇ ಭಾಗ್ಯ ಎಂಬುದನ್ನು ನೆನಪಿಸಿಕೊಳ್ಳಬೇಕಿದೆ. ಮುಖ್ಯವಾಗಿ ಪಟಾಕಿ ದೀಪಾವಳಿ ಹಬ್ಬದ ಪ್ರಮುಖ ಸಂಪ್ರದಾಯ. ಆ ಸಂದರ್ಭದಲ್ಲಿ ಅತಿಹೆಚ್ಚು ಮಾಲಿನ್ಯ ಉಂಟಾಗುತ್ತದೆ. ಇದನ್ನು ಕೇವಲ ಈ ಹಬ್ಬದಲ್ಲಿ ಮಾತ್ರವಲ್ಲ ಅದರ ಸಂಪೂರ್ಣ ಉತ್ಪಾದನೆಯನ್ನೇ ನಿಷೇಧಿಸಬೇಕು. ಯಾವ ಕಾರಣಕ್ಕೂ ಇದಕ್ಕೆ ಧಾರ್ಮಿಕ ಬಣ್ಣ ನೀಡಬಾರದು.

ಮಣ್ಣಿನ ದೀಪದ ರೀತಿಯ ಹಣತೆ ಬೆಳಗುವುದಕ್ಕೆ ಹೆಚ್ಚು ಪ್ರಚಾರ ಮತ್ತು ಪ್ರೋತ್ಸಾಹ ನೀಡಬೇಕು. ಈಗ ಹಸಿರು ಪಟಾಕಿಗಳ ಬಗ್ಗೆ ಕೇಳಿ ಬರುತ್ತಿದೆ. ಇದು ಕಡಿಮೆ ಅಪಾಯಕಾರಿ ಎಂದು ಹೇಳಲಾಗುತ್ತದೆ. ಪರಿಸರ ಎಷ್ಟು ಹಾಳಾಗಿದೆ ಎಂದರೆ ಸಣ್ಣ ಪ್ರಮಾಣದ ಹಾನಿ ಸಹ ತುಂಬಾ ತೊಂದರೆ ಕೊಡಬಹುದು. ಆಹಾರ ಕಲಬೆರಕೆ, ನೀರಿನ ಗುಣಮಟ್ಟ ತುಂಬಾ ಹಾಳಾಗಿರುವಾಗ, ಜೀವನಾವಶ್ಯಕ ಗಾಳಿಯನ್ನು ನಾವು ಸ್ವತಃ ಮಾಲಿನ್ಯ ಮಾಡುವುದು ಮುಂದಿನ ಜನಾಂಗ ನಮ್ಮನ್ನು ಕ್ಷಮಿಸಲಾರದ ತಪ್ಪು ಮಾಡಿದಂತಾಗುತ್ತದೆ.

ನ್ಯೆಸರ್ಗಿಕವಾಗಿ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಪಟಾಕಿ………..

ನ್ಯೆತಿಕವಾಗಿ ಅನಧಿಕೃತ ಕೊಲೆಗಡುಕನಂತೆ ಕೆಲಸ ಮಾಡುತ್ತದೆ ಪಟಾಕಿ…….

ಅತಿ ಹೆಚ್ಚು ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವ ಉದ್ಯಮ ಪಟಾಕಿ,……

ಭಯಂಕರ ರೋಗಗಳಿಗಿಂತ ಬೇಗ ಅನಿರೀಕ್ಷಿತ ಸಾವು ತರುತ್ತದೆ ಪಟಾಕಿ,…….

ಸಿಡಿಮದ್ದು ಸಿಡಿಸಿ, ಪರಿಸರ ನಾಶಪಡಿಸಿ, ಸಂಭ್ರಮಿಸಿ ಮಾಡಿಕೊಳ್ಳವ ಪರೋಕ್ಷ ಆತ್ಮಹತ್ಯೆ ಪಟಾಕಿ,…..

ಬಗಲಲ್ಲಿ ಸಿಡಿಮದ್ದು ಇಟ್ಟುಕೊಂಡು, ಸುರಕ್ಷತೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ, ನಾಟಕ ಮಾಡುವ, ಆತ್ಮ ವಂಚನೆ ಮಾಡಿಸುತ್ತದೆ ಪಟಾಕಿ,……..

ಚಿಕ್ಕಮಕ್ಕಳನ್ನು ಹೆದರಿಸುತ್ತದೆ, ವಯಸ್ಸಾದವರಿಗೆ ಕಿರಿಕಿರಿ ಮಾಡುತ್ತದೆ, ಮಹಿಳೆಯರಿಗೆ
ಇಷ್ಟವಾಗುವುದಿಲ್ಲ.
ಮೂಕ ಪ್ರಾಣಿಗಳನ್ನು ಓಡಿಸುತ್ತದೆ,
ಪಕ್ಷಿಗಳಿಗೆ ಪ್ರಾಣಭಯ ಉಂಟು ಮಾಡುತ್ತದೆ ಪಟಾಕಿ,……….

ಕ್ಷಣಮಾತ್ರದಲ್ಲಿ ಯಾವುದೇ ಉಪಯೋಗವಿಲ್ಲದೆ ಕೋಟ್ಯಾಂತರ ಹಣ ನೀರ ಮೇಲಿನ ಹೋಮದಂತೆ ಕರಗಿಸಿ ಹೊಗೆ ಉಗುಳುವ ಶಕ್ತಿ ಇರುವುದೇ ಪಟಾಕಿ,……..

ಪುಂಡ ಪೋಕರಿಗಳ ಚೆಲ್ಲಾಟಕ್ಕೆ ಬೇಕು ಪಟಾಕಿ, ಪುಢಾರಿಗಳ, ಬಕೆಟ್ ರಾಜಕಾರಣಿಗಳ ಪ್ರದರ್ಶನಕ್ಕೆ ಬೇಕು ಪಟಾಕಿ, ಹಬ್ಬ, ಉತ್ಸವ, ಕ್ರಿಕೆಟ್ ನ ಅಂಧಾಭಿಮಾನಿಗಳಿಗೆ ಬೇಕು ಪಟಾಕಿ,……….

ಬಡತನ, ಶೋಷಣೆ, ಬೂಟಾಟಿಕೆಯ ಸಂಕೇತ ಪಟಾಕಿ,
ಶಾಸ್ತ್ರ, ಸಂಪ್ರದಾಯ, ಸಂಸ್ಕೃತಿ ಹೆಸರಿನ ದುರುಪಯೋಗ ಪಟಾಕಿ,
ಮೌಢ್ಯ, ಅಜ್ಞಾನ, ಡಾಂಬಿಕತನ, ಉಢಾಪೆಗಳ ಪ್ರದರ್ಶನ ಪಟಾಕಿ,….

ಕೇವಲ ಕೆಲವು ಜನರಿಗೆ ಉದ್ಯೋಗ ನೀಡಿದೆ ಮತ್ತು ಅವರ ಆರ್ಥಿಕ ಚ್ಯೆತನ್ಯಕ್ಕೆ ದಾರಿ ಮಾಡಿಕೊಟ್ಟಿದೆ ಎಂಬ ಒಂದು ಒಳ್ಳೆಯ ಅಂಶ ಬಿಟ್ಟರೆ, ಅತ್ಯಂತ ಅಪಾಯಕಾರಿ ಆಚರಣೆ ಈ ಪಟಾಕಿ ಸುಡುವುದು……

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಸ್ಪತ್ರೆ ಗಳಲ್ಲಿ ,ಇದಕ್ಕಾಗಿ ವಿಶೇಷ ಹೆಚ್ಚುವರಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಎಂದರೆ ಇದರ ಭಯಂಕರ ಹಾವಳಿ ಊಹಿಸಿ, ಮಕ್ಕಳು ಕಣ್ಣು ಕಳೆದುಕೊಳ್ಳುವ, ದೇಹ ಸುಟ್ಟುಕೊಳ್ಳುವ ದೃಶ್ಯ ನೆನಪಿಸಿಕೊಳ್ಳಿ………

ಪಟಾಕಿ ವಿಷಯದಲ್ಲಿ ಸುರಕ್ಷತೆ ಎಂಬುದು ಸದ್ಯಕ್ಕೆ ನಮ್ಮ ದೇಶದಲ್ಲಿ ಭ್ರಮೆ ಅಷ್ಟೆ,
ಈ ಪಟಾಕಿ ಸಾವು ನಿನ್ನೆ ಮೊನ್ನೆಯದಲ್ಲ, ನಮ್ಮ ಮೂರ್ಖ ಸಂಭ್ರಮಕ್ಕೆ‌ ಕಾರ್ಮಿಕರ ಬಲಿದಾನ ಪ್ರತಿವರ್ಷ ನಿರಂತರ,……

ಮಾನವೀಯ ದೃಷ್ಟಿಯಿಂದ ಪಟಾಕಿ ಅವಲಂಬಿತರಿಗೆ ಪರಿಹಾರ ನೀಡಿ ಇದನ್ನು ನಿಲ್ಲಿಸಿ,
ಸತ್ತ ಮೇಲೆ ಪರಿಹಾರ ನೀಡುವ ಪರಿಪಾಠ ನಿಲ್ಲಿಸಿ……..

ಪಟಾಕಿಗೆ ಅನುಕೂಲಕರ ಪರ್ಯಾಯ ಮಾರ್ಗ ಹುಡುಕೋಣ.
ಇದು ಧರ್ಮದ, ಸಂಪ್ರದಾಯದ ವಿಷಯ ಅಲ್ಲ. ನಮ್ಮದೇ ಪ್ರಕೃತಿಯ ರಕ್ಷಣೆಯ ವಿಷಯ……..

ಇತರೆ ಧರ್ಮದ ಕೆಲವು ಆಚರಣೆಗಳು ಪರಿಸರ ನಾಶ ಎಂದಾದರೆ ಮುಲಾಜಿಲ್ಲದೆ ಅದನ್ನು ನಿಷೇಧಿಸಬೇಕು.
ಪರಿಸರ ರಕ್ಷಣೆಯ ವಿಷಯ ಧರ್ಮ ರಕ್ಷಣೆಗಿಂತ ಬಹುಮಖ್ಯ……..

ನಾವು ಆರೋಗ್ಯವಾಗಿದ್ದರೆ ಮಾತ್ರ ಉಳಿದದ್ದೆಲ್ಲ ಅಲ್ಲವೇ………………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *

error: Content is protected !!