Categories: ಲೇಖನ

ಪ್ರೀತಿಯ ಆಳದ ಹುಡುಕಾಟ………

ಪ್ರೀತಿ……

ಪ್ರೀತಿಯ ಆಳದ ಹುಡುಕಾಟ………

ಪ್ರೀತಿಯ ಸೆಳೆತದ ಕೆಲವು ಉದಾಹರಣೆಗಳನ್ನು ನೋಡಿ…….

ತಾಯಿಯ ಕರುಳ ಬಳ್ಳಿಯ ಸಂಬಂಧ, ತಂದೆ ತಾಯಿ ಅಣ್ಣ ತಂಗಿ ಅಕ್ಕ ತಮ್ಮ ಅಜ್ಜ ಅಜ್ಜಿ ಮುಂತಾದ ದೀರ್ಘಕಾಲದ ರಕ್ತ ಸಂಬಂಧಗಳನ್ನು ಮೀರಿ ಕೇವಲ ಒಂದೋ ಎರಡೋ ವರ್ಷದ ಪ್ರೀತಿಗಾಗಿ, ರೈಲಿಗೆ ತಲೆ ಕೊಡಲು, ಕುತ್ತಿಗೆಗೆ ನೇಣು ಬಿಗಿದುಕೊಳ್ಳಲು, ವಿಷ ಕುಡಿಯಲು, ಬೆಂಕಿ ಹಚ್ಚಿಕೊಳ್ಳಲು, ಎತ್ತರದಿಂದ ಜಿಗಿಯಲು, ನೀರಿಗೆ ಹಾರಲು ಮನಸ್ಸನ್ನು ಪ್ರೀತಿ ಪ್ರೇರೇಪಿಸುತ್ತದೆ ಎಂದರೆ ಅದರ ತೀವ್ರತೆ ಎಷ್ಟಿರಬಹುದು.

ಈ ಪ್ರೀತಿ ಕಾಲದ ಪರಿವೆಯೇ ಇಲ್ಲದೆ ಅನಾದಿ ಕಾಲದಿಂದ ಈ ಕ್ಷಣದವರೆಗೂ ಅದೇ ಉತ್ಕಟತೆಯನ್ನು ಉಳಿಸಿಕೊಂಡಿದೆ.

ಪ್ರೀತಿಗಾಗಿ ಎಷ್ಟೋ ರಾಜ್ಯಗಳೂ ಉರುಳಿವೆ, ಹಾಗೆ ಪ್ರೀತಿಗಾಗಿ ಎಷ್ಟೋ ಅಧಿಕಾರ ತ್ಯಾಗಗಳೂ ಆಗಿವೆ.

ಒಮ್ಮೆ ಪ್ರೇಮಿಗಳಲ್ಲಿ ಪ್ರೀತಿಯ ಭಾವ ಮೊಳಕೆ ಒಡೆದು ಹೆಮ್ಮರವಾದರೆ ಮುಗಿಯುತು. ಯಾವ ಅಡ್ಡಿ ಆತಂಕಗಳೂ ಅವರನ್ನು ಬೇರ್ಪಡಿಸುವುದು ಸಾಧ್ಯವಿಲ್ಲ. ಅದಕ್ಕೆ ಅಡ್ಡಿಯಾದವರನ್ನು ಕೊಲ್ಲುತ್ತಾರೆ ಅಥವಾ ಸ್ವತಃ ತಾವೇ ಸಾವಿಗೆ ಶರಣಾಗುತ್ತಾರೆ.

ಪ್ರೀತಿಗೆ ಜಾತಿ ವಯಸ್ಸು ಲಿಂಗ ಭಾಷೆ ಪ್ರದೇಶಗಳ ಹಂಗು ಇರುವುದಿಲ್ಲ. ಅಷ್ಟೇ ಏಕೆ ನೈತಿಕತೆಯ ಮೂಗುದಾರವೂ ಇರುವುದಿಲ್ಲ.
( ಕಾಮ ಪ್ರೀತಿಯ ಒಂದು ಭಾಗವೇ ಹೊರತು ಕಾಮವೇ ಪ್ರಧಾನವಾದಾಗ ಅದನ್ನು ಪ್ರೀತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. )
ನಾನು ಹೇಳುತ್ತಿರುವುದು ನಿಜ ಪ್ರೀತಿಯ ಬಗ್ಗೆ ಮಾತ್ರ.

ಪ್ರೀತಿಯ ಇನ್ನೊಂದು ಅತಿರೇಕವೆಂದರೆ, ಪ್ರೀತಿಗೆ ಯಾವುದೇ ಕಾರಣದಿಂದ ಧಕ್ಕೆಯಾದರೆ ಅದರ ರೂಪ ವೈರಾಗ್ಯ ಅಥವಾ ದ್ವೇಷದ ರೂಪ ತಾಳುತ್ತದೆ. ಅದರಲ್ಲೂ ಹದಿಹರೆಯದಲ್ಲಿ ಅದು ತೀವ್ರ ದ್ವೇಷಕ್ಕೆ ತಿರುಗುತ್ತದೆ. ನನಗೆ ಸಿಕ್ಕದ ಆ ಪ್ರೇಮಿ ಯಾರಿಗೂ ಸಿಗಬಾರದು ಎಂಬ ಭಾವನೆ ಬಲವಾಗಿ ಅದು ಬರ್ಬರ ಕೊಲೆ ಮಾಡಿಸುತ್ತದೆ. ಹೆಣ್ಣು ಗಂಡು ಇಬ್ಬರಲ್ಲೂ ಈ ದ್ವೇಷ ಸಮ ಪ್ರಮಾಣದಲ್ಲಿ ಇದ್ದರೂ ನಮ್ಮ ಸಾಮಾಜಿಕ ವ್ಯವಸ್ಥೆಯ ಕಾರಣಕ್ಕಾಗಿ ಯುವಕರೇ ಅತಿಹೆಚ್ಚು ನೇರ ಕೊಲೆಯಂತ ಕ್ರಮಕ್ಕೆ ಮುಂದಾಗುತ್ತಾರೆ.

ಪ್ರೀತಿ ಬದುಕಿಗೆ ಅಮೃತದಷ್ಟೇ ಮಹತ್ವ ಹೊಂದಿದೆ. ಹಾಗೆಯೇ ಅದು ಬಹಳಷ್ಟು ಸಲ ಅಫೀಮಿನ ಅಮಲಿನಂತೆ ನಮ್ಮಿಂದ ತಪ್ಪು ಮಾಡಿಸುತ್ತದೆ.

ಪ್ರೀತಿಯ ಮಡಿಲಿನಲ್ಲಿ ಭೂಮಿಯೇ ಸ್ವರ್ಗ, ವಿರಹದ ತಾಪದಲ್ಲಿ ಈ ನಿಂತ ನೆಲವೇ ನರಕ.

ಯಾವ ತತ್ವಜ್ಞಾನವೂ, ಯಾವ ವೇದಾಂತವೂ, ಯಾವ ಹಿತನುಡಿಗಳೂ ಪ್ರೀತಿಗೆ ಸರಿಸಾಟಿಯಲ್ಲ.

ನಮ್ಮ ದೇಹಕ್ಕಿಂತ ಪ್ರೀತಿಸಿದವರ ದೇಹ ಮನಸ್ಸುಗಳು ಮೇಲೆಯೇ ಹೆಚ್ಚಿನ ಅಭಿಮಾನ, ಮೋಹ, ನನ್ನದೆಂಬ ಸ್ವಾರ್ಥ ಮತ್ತು ನಿಯಂತ್ರಣ ಹೊಂದಲು ಪ್ರೀತಿ ತಹತಹಿಸುತ್ತದೆ. ಅದರ ಪರಿಣಾಮವೇ ಹಿಂಸೆ.

ಪ್ರೀತಿಯ ಆಳಕ್ಕೆ ಇಳಿದವರಿಗೆ ಮಾತ್ರ ಇದು ಅನ್ವಯಿಸುತ್ತದೆ. ಪ್ರೀತಿಯ ದಾರಿಯಲ್ಲಿ ಸ್ವಲ್ಪ ದೂರ ಸಾಗಿ ಅದರಿಂದ ವಿಮುಖರಾದವರಿಗೆ ಇದು ಅಷ್ಟಾಗಿ ಅರ್ಥವಾಗುವುದಿಲ್ಲ.
ತಾಯಿ – ಮಗುವಿನ, ಅಣ್ಣ – ತಂಗಿಯ, ಅಕ್ಕ – ತಮ್ಮನ, ಗಂಡ – ಹೆಂಡತಿಯ ಪ್ರೀತಿಯನ್ನು ಇದಕ್ಕೆ ಹೋಲಿಸಲಾಗುವುದಿಲ್ಲ. ಏಕೆಂದರೆ ಇಲ್ಲಿ ಸ್ವಾರ್ಥ, ಅವಲಂಬನೆ, ಅವಕಾಶ, ಜವಾಬ್ದಾರಿ, ಸಾಮಾಜಿಕ ಕಟ್ಟಳೆ ಇರುತ್ತದೆ.

ಆದರೆ,
ಪ್ರೀತಿಯ ಉತ್ಕಟತೆಯಲ್ಲಿ,

ಪ್ರೀತಿ ನಿರಂತರತೆಯನ್ನು ಬೇಡುತ್ತದೆ.
ಪ್ರೀತಿ ಏರಿಕೆಯ ರೂಪದ ಸ್ಪಂದನೆಯನ್ನು ಬಯಸುತ್ತದೆ.
ಪ್ರೀತಿ ಮುಖವಾಡವನ್ನು ಬಯಲು ಮಾಡಿ ಸಹಜತೆಯನ್ನು ತೋರಿಸುತ್ತದೆ.

ಸಿಕ್ಕರೆ ಅಮೃತ,
ಸಿಗದಿದ್ದರೆ ವಿಷ,
ಯಶಸ್ವಿಯಾದರೆ ಸ್ವರ್ಗ,
ವಿಫಲವಾದರೆ ನರಕ….

ಹೇಳಿದಷ್ಟೂ ಇನ್ನೂ ಉದ್ದವಾಗುವ ಮುಗಿಯದ ಅಕ್ಷಯ ಪಾತ್ರೆ ಈ ಪ್ರೀತಿ‌……

ಪ್ರೀತಿ ಮತ್ತು ಜಾತಿ,
ಸಂಸ್ಕಾರ ಮತ್ತು ಬೆತ್ತಲೆ….

ಇಲ್ಲಿ ಯೋಚಿಸಬೇಕಾದ ವಿಷಯ ತುಂಬಾ ಇದೆ. ನಮ್ಮ ಮಕ್ಕಳು ನಮ್ಮ ಮನಸ್ಸಿಗೆ ವಿರುದ್ಧವಾಗಿ ಅತ್ಯಂತ ಬೇಜವಾಬ್ದಾರಿಯಿಂದ ಚಿಕ್ಕ ವಯಸ್ಸಿನಲ್ಲಿಯೇ ಪ್ರೀತಿಯ ಮೋಹಕ್ಕೆ ಬಲಿಯಾಗಿ ಮದುವೆ ಎಂಬ ಬಂಧನಕ್ಕೆ ಒಳಗಾಗುವ ಸನ್ನಿವೇಶದಲ್ಲಿ ಮಕ್ಕಳ ಮೇಲಿನ ಅತಿಯಾದ ಕಾಳಜಿಯಿಂದ ಪೋಷಕರಿಗೆ ನೋವಾಗುವುದು, ಬೇಸರವಾಗುವುದು, ಕೋಪ ಬರುವುದು ಭಾರತೀಯ ಸಾಂಪ್ರದಾಯಿಕ ಶೈಲಿಯ ವ್ಯವಸ್ಥೆಯಲ್ಲಿ ಸಹಜ ಸ್ವಭಾವವಾಗಿದೆ. ಅದನ್ನು ಒಪ್ಪಿಕೊಳ್ಳುತ್ತಾ…..

ಹಾಗೊಂದು ವೇಳೆ ನಮ್ಮ ಸ್ವಂತ ಮಕ್ಕಳು ಈ ರೀತಿಯ ಪ್ರೇಮ ಪಾಶಕ್ಕೆ ಸಿಲುಕಿದಾಗ ಪೋಷಕರ ಪ್ರತಿಕ್ರಿಯೆ ಹೇಗಿರಬೇಕು ಎಂಬ ವಾಸ್ತವ ಪ್ರಜ್ಞೆಯ ಹುಡುಕಾಟದಲ್ಲಿ……

ಪ್ರೀತಿ ಎಂಬ ಭಾವ ಅತ್ಯಂತ ಆಪ್ತವಾದುದು ಮತ್ತು ಆಳವಾದುದು. ಅದರ ಬಗ್ಗೆ ಗೌರವ, ಅಭಿಮಾನ ಇರಬೇಕು. ವಯಸ್ಕ ಗಂಡು ಹೆಣ್ಣಿನ ನಡುವಿನ ಈ ಪ್ರೀತಿ ಕ್ರಮೇಣ ಪ್ರೇಮವಾಗಿ ಮಾರ್ಪಡುತ್ತದೆ. ಅದು ಅಕ್ಷೇಪಾರ್ಹವೇನು ಅಲ್ಲ. ಆದರೆ ಸಮಯ, ಸಂದರ್ಭ, ಸನ್ನಿವೇಶ, ವಯಸ್ಸು ಇತ್ಯಾದಿಗಳು ಇಲ್ಲಿ ಸಾಮಾಜಿಕವಾಗಿ ಮುಖ್ಯವಾಗುತ್ತದೆ. ಜೊತೆಗೆ ದೇಹ ಮತ್ತು ಮನಸ್ಸುಗಳು ಸಹ ಸಹಜವಾಗಿ ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸುತ್ತವೆ. ಜಗತ್ತಿನ ಎಲ್ಲಾ ಮಾನವ ಜೀವಿಗಳಲ್ಲಿ ಇದು ಬಹುತೇಕ ಒಂದೇ ರೀತಿಯಲ್ಲಿ ಇರುತ್ತದೆ……

ಭಾರತದಲ್ಲಿ ಪ್ರೀತಿಯ ಜೊತೆಗೆ ಜಾತಿ ಸಹ ಒಂದು ಬಹುಮುಖ್ಯ ಅಂಶವಾಗಿದೆ. ಯಾರು ಏನೇ ಹೇಳಿದರು ಎಷ್ಟೇ ತಡೆದರು ಹದಿಹರೆಯದವರಲ್ಲಿ ಪ್ರೀತಿ ಮೊಳಕೆ ಒಡೆಯುವುದು ಅತ್ಯಂತ ಸಹಜ ಪ್ರಕ್ರಿಯೆ. ಆದರೆ ಕೆಲವರು ಅದನ್ನು ನಿಯಂತ್ರಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಅದನ್ನು ನಿಯಂತ್ರಿಸಿಕೊಳ್ಳಲಾಗದೆ ಅದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುತ್ತಾರೆ……

ಹಾಗೆ ಜಾರಿಗೊಳಿಸುವವರು ನಮ್ಮ ಮಕ್ಕಳೂ‌ ಆಗಿರಬಹುದು. ಆಗ ಭಾರತೀಯ ಸಮಾಜದಲ್ಲಿ ಜಾತಿ, ಧರ್ಮ, ಭಾಷೆ, ಹಣ, ಅಂತಸ್ತು, ಪ್ರದೇಶ, ಅಧಿಕಾರ ಮುಂತಾದ ಅನೇಕ ಅಡೆತಡೆಗಳು ಅಡ್ಡಿ ಬರುತ್ತವೆ. ಅದನ್ನು ನಾವು ಹೇಗೆ ನಿಭಾಯಿಸಬೇಕು ಎಂಬುದೇ ಬಹುದೊಡ್ಡ ಸವಾಲು ನಮ್ಮ ಮುಂದಿರುತ್ತದೆ. ಇಲ್ಲಿ ನಮ್ಮ ವೈಯಕ್ತಿಕ ಅಭಿಪ್ರಾಯಕ್ಕಿಂತ ಸಮಾಜದ ಮನಸ್ಥಿತಿ ಮತ್ತು ಪ್ರತಿಕ್ರಿಯೆ ನಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ……

ನಮ್ಮ ಮುಂದೆ ಪ್ರೀತಿಸುವ – ದ್ವೇಷಿಸುವ, ಸ್ವೀಕರಿಸುವ – ತಿರಸ್ಕರಿಸುವ, ಮೌನವಾಗುವ – ಹಿಂಸಾತ್ಮಕವಾಗುವ, ಕ್ಷಮಿಸುವ – ದ್ವೇಷಿಸುವ, ತ್ಯಾಗದ – ಸ್ವಾರ್ಥದ,
ಹೊಡೆದಾಡುವ – ಕಾನೂನಾತ್ಮಕ ಹೋರಾಡುವ, ಹೀಗೆ ನಾನಾ ಆಯ್ಕೆಗಳು ನಮ್ಮ ಮುಂದಿರುತ್ತವೆ. ನಾವು ಯಾವುದನ್ನು ಆಯ್ಕೆ ಮಾಡಿ, ಯಾವ ರೀತಿಯ ಪ್ರತಿಕ್ರಿಯೆ ನೀಡಬೇಕು ಎಂಬುದೇ ನಮ್ಮ ಸಂಸ್ಕಾರ, ಸಮಾಜ, ಧರ್ಮ , ವಿವೇಚನೆ ಮತ್ತು ಪ್ರಬುದ್ಧತೆ ಅವಲಂಬಿಸಿರುತ್ತದೆ……

ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಪ್ರೀತಿ ಸಹಜವಾಗಿಯೂ, ಮಧ್ಯಪ್ರಾಚ್ಯದ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಬಹುತೇಕ ಇದು ನಿಷೇಧವಾಗಿಯೂ, ಬೌದ್ದ ಧರ್ಮದ ರಾಷ್ಟ್ರಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯೂ ಇದನ್ನು ಪರಿಗಣಿಸಲಾಗಿದೆ. ಭಾರತದಲ್ಲಿ ಮಾತ್ರ ಇದು ಮಾತು ಮತ್ತು ಕೃತಿಯಲ್ಲಿ ಸಾಕಷ್ಟು ಗೊಂದಲ ಮತ್ತು ವ್ಯತ್ಯಾಸವಾಗಿದೆ…

ಪ್ರೇಮವೆಂಬುದು ಗಂಡು ಹೆಣ್ಣಿನ ನಡುವಿನ ಭಾವ ಸೆಳೆತ ಅಥವಾ ಆಕರ್ಷಣೆ. ‌ಬಹುತೇಕ ಪ್ರಾಕೃತಿಕ ನಿರ್ಮಾಣ. ಸೃಷ್ಟಿಯ ನಿರಂತರ ಚಲನೆಗಾಗಿ ಅನಿವಾರ್ಯ ಕೂಡ…

ಸಾಮಾನ್ಯವಾಗಿ 18 ರಿಂದ 28 ರ ನಡುವಿನ ವಯೋಮಾನದ ಗಂಡು ಹೆಣ್ಣಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಪರಿಣಾಮ ಈ ಪ್ರೇಮ ಭಾವದ ಉತ್ಕಟತೆ ಉಂಟಾಗುತ್ತದೆ. ( ಇದಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ ಎಂಬುದು ನಿಜವಾದರೂ ಪ್ರೇಮದ ತೀವ್ರತೆಯ ದೃಷ್ಟಿಯಿಂದ ಈ ವಯಸ್ಸನ್ನು ಕೇಂದ್ರ ಬಿಂದುವಾಗಿ ಇಟ್ಟುಕೊಳ್ಳಲಾಗಿದೆ )

ನಾಗರಿಕ ಸಮಾಜ ಸೃಷ್ಟಿಯಾಗಿ, ಅನುಭವಗಳು ಸಂಪ್ರದಾಯಗಳಾಗಿ, ಧಾರ್ಮಿಕ ನೀತಿ ನಿಯಮಗಳು ಸಮಾಜವನ್ನು ನಿಯಂತ್ರಿಸಿ ಕಾನೂನುಗಳು ಜಾರಿಯಾದ ಮೇಲೆ ಪ್ರೇಮ ಮತ್ತು ಲೈಂಗಿಕತೆ ಕೌಟುಂಬಿಕ ಚೌಕಟ್ಟಿನಲ್ಲಿ ಬಂಧಿಯಾಯಿತು. ನೈತಿಕತೆ – ಜವಾಬ್ದಾರಿ ಮತ್ತು ವಯೋಮಾನದ ಮಿತಿ ಹೇರಲಾಯಿತು…..

ಭಾರತೀಯ ಸಂಪ್ರದಾಯವಾದಿಗಳ ಮುಖ್ಯ ಆಕ್ಷೇಪಣೆ ಪ್ರೇಮ, ಕಾಮ, ಪ್ರಣಯ ಎಲ್ಲವೂ ಕೌಟುಂಬಿಕ ಚೌಕಟ್ಟಿನಲ್ಲಿ ಇರಬೇಕಾದ ಕ್ರಿಯೆಗಳು, ಮುಖ್ಯವಾಗಿ ಮಹಿಳೆ ಪೂಜನೀಯಳು ಮತ್ತು ಭೋಗದ ಸಂಪನ್ಮೂಲ, ಮಹಿಳೆಯರು ಅಬಲೆಯರು, ಈ ವಿಷಯದಲ್ಲಿ ಹೆಚ್ಚು ಮುಕ್ತವಾದರೆ ಪುರುಷರಿಂದ ವಂಚನೆಗೆ ಒಳಗಾಗುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಮುಕ್ತ ಸ್ವಾತಂತ್ರ್ಯ ಬೇಡ ಮುಂತಾದ ಕಾರಣಗಳನ್ನು ಹೇಳುತ್ತಾರೆ. ಸಿನಿಮಾ – ಸಾಹಿತ್ಯ ಪ್ರಕಾರಗಳಲ್ಲೂ ಹೆಣ್ಣಿನ ಶೀಲ ರಕ್ಷಣೆಯೇ ಜೀವನದ ಪರಮೋದ್ದೇಶ ಎಂದು ಬಿಂಬಿಸಲಾಗುತ್ತದೆ…..

ಹಾಗೆಯೇ ಪ್ರಗತಿಪರ ಚಿಂತಕರು ಪ್ರೀತಿಗೆ ನಿಷೇಧ ಬೇಡ. ಹೆಣ್ಣು ಕೂಡ ಈ ಪ್ರಕೃತಿಯ ಸಹಜ ಪ್ರಾಣಿ. ಗಂಡಿನಷ್ಟೇ ಸಮ ಪ್ರಮಾಣದ ಸ್ವಾತಂತ್ರ್ಯ ಸಮಾನತೆಗೆ ಹಕ್ಕುದಾರಳು. ಆಕೆಯನ್ನು ಅನಾವಶ್ಯಕವಾಗಿ ವಿಶೇಷ ದೈವಿಕ ಮಹತ್ವ ನೀಡಿ ವೈಭವೀಕರಿಸಿ ಆಕೆಯನ್ನು ನಿಯಂತ್ರಿಸುವ ಹುನ್ನಾರ ಬೇಡ. ಆಕೆ ಪೂಜನೀಯಳು ಅಲ್ಲ. ಭೋಗದ ವಸ್ತುವೂ ಅಲ್ಲ. ಒಂದು ಸಹಜ ಜೀವಿ ಮಾತ್ರ. ಜೊತೆಗೆ ಪ್ರೇಮವೆಂಬುದು ಪ್ರಕೃತಿಯ ಸಹಜ ನಿಯಮ. ಅದು ಕಾನೂನಿನ ವ್ಯಾಪ್ತಿಯಲ್ಲಿ ಸಂಭವಿಸಲಿ ಬಿಡಿ ಎನ್ನುವ ವಾದ ಮಂಡಿಸುತ್ತಾರೆ…

ಈ ವಿಷಯದಲ್ಲಿ ಸಾಮಾನ್ಯ ಜನರದು ಬಹುತೇಕ ದ್ವಂದ್ವ ನಿಲುವು ಕಂಡುಬರುತ್ತದೆ. ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಸಿನಿಮಾ, ಸಾಹಿತ್ಯ, ಧಾರವಾಹಿ, ಉದ್ಯಮಿಗಳು ಮುಂತಾದ ಜನಪ್ರಿಯರ ವಿಷಯದಲ್ಲಿ ಮುಕ್ತ ಸ್ವಾತಂತ್ರ್ಯವನ್ನು ಖುಷಿಯಿಂದ ಅನುಭವಿಸುತ್ತಾರೆ ಮತ್ತು ಒಪ್ಪಿಕೊಳ್ಳುತ್ತಾರೆ. ವಿಚ್ಚೇದನ ವಿಷಯದಲ್ಲೂ ಅವರ ಬಗ್ಗೆ ಸಹಾನುಭೂತಿ ಹೊಂದಿರುತ್ತಾರೆ. ಆದರೆ ತಮ್ಮ ಮನೆಯಲ್ಲಿ ಅಥವಾ ತಮ್ಮ ಪರಿಚಯದವರಲ್ಲಿ ಈ ರೀತಿಯ ಮುಕ್ತತೆಯನ್ನು ಅನೈತಿಕ ಎಂಬುದಾಗಿ ಭಾವಿಸುತ್ತಾರೆ ಮತ್ತು ತಿರಸ್ಕರಿಸುತ್ತಾರೆ ಹಾಗು ಕೆಲವೊಮ್ಮೆ ದ್ವೇಷಿಸುತ್ತಾರೆ ಸಾಧ್ಯವಾದರೆ ಬಹಿಷ್ಕರಿಸುತ್ತಾರೆ ಮತ್ತು ಹಿಂಸಿಸುತ್ತಾರೆ. ಎಷ್ಟೊಂದು ಆತ್ಮವಂಚನೆಯಲ್ಲವೇ…..

ಯಾರೋ ಅಪರಿಚಿತ ನಾಯಕ ನಾಯಕಿಯರ ಮುತ್ತುಗಳು ಸಹನೀಯ. ನಮ್ಮ ಹತ್ತಿರದವರ ಈ ನಡವಳಿಕೆ ಅನೈತಿಕ…..

ಈ ಎಲ್ಲದರ ಸಮೀಕರಣದ ನಂತರ ಇಂದಿನ ಆಧುನಿಕ ಸಮಾಜದಲ್ಲಿ……..

ಹಿಂದಿನ ಕೆಲವು ದಶಕಗಳ ಹಿಂದೆ ಇದ್ದ ಗಂಡು ಹೆಣ್ಣಿನ ಭಾವ ತೀವ್ರತೆ ಈಗ ಉಳಿದಿಲ್ಲ. ಹೆಣ್ಣು ಗಂಡನಿಷ್ಟೇ ಉದ್ಯೋಗಸ್ಥೆಯಾದ ಬಳಿಕ ಎಲ್ಲಾ ಕಡೆ ಮುಕ್ತ ಓಡಾಟ ಇರುವುದರಿಂದ ಹೆಣ್ಣಿನ ಬಗ್ಗೆ ಇದ್ದ ಕುತೂಹಲ ಸಹ ಕಡಿಮೆಯಾಗಿದೆ. ಪ್ರೇಮ ನಿವೇದನೆ ಗಂಡಿನ ಜವಾಬ್ದಾರಿ ಎನ್ನುವ ಪರಿಕಲ್ಪನೆ ಈಗ ಉಳಿದಿಲ್ಲ. ಅದರಲ್ಲೂ ನಗರೀಕರಣದ ನಂತರ ಹೆಣ್ಣಿನ ಪ್ರಭಾವವೇ ಹೆಚ್ಚಾಗಿರುವ ಅನುಭವವಾಗುತ್ತಿದೆ. ಟಿವಿ ಮಾಧ್ಯಮಗಳ ಮನರಂಜನಾ ಉದ್ಯಮದಲ್ಲಿ ಹಾಸ್ಯ ಸನ್ನಿವೇಶಗಳಲ್ಲಿ ಬಹುತೇಕ ಹೆಣ್ಣು ಗಂಡಿನ ಮೇಲೆ ನಿಯಂತ್ರಣ ಸಾಧಿಸಿರುವುದೇ ವಿಷಯವಾಗಿರುವುದನ್ನು ಗಮನಿಸಬಹುದು….

ಆದ್ದರಿಂದ ಈಗ ಅಂತಹ ಭಯಪಡುವ ಅವಶ್ಯಕತೆ ಇಲ್ಲ. ಈ ಬಗ್ಗೆ ಗಂಭೀರವಾಗಿ ಯೋಚಿಸುವ ಅವಶ್ಯಕತೆಯೂ ಇಲ್ಲ. ಇದು ಸಹಜವಾಗಿ ನಡೆಯುತ್ತದೆ.
ಎಂದಿನಂತೆ ಸಂಪ್ರದಾಯವಾದಿ ಪೋಷಕರು ತಮ್ಮ ಮಕ್ಕಳ ನಡವಳಿಕೆಯ ಬಗ್ಗೆ ತಿಳಿವಳಿಕೆ ಮೂಡಿಸಲಿ……

ಇಡೀ ಸಮಾಜ ಉತ್ತಮ ವಾತಾವರಣದಲ್ಲಿ, ಒಳ್ಳೆಯ ನಂಬಿಕೆಯ ಪರಿಸ್ಥಿತಿಯಲ್ಲಿ ಇದ್ದರೆ ಯಾವ ಪ್ರೀತಿ ಪ್ರೇಮಗಳು ಸಮಸ್ಯೆಯಲ್ಲ. ಆದರೆ ವಂಚಕರು, ಮೋಸಗಾರರೇ ಹೆಚ್ಚಾದರೆ ಧಾರ್ಮಿಕ ಹಬ್ಬಗಳನ್ನು ಸಹ ಎಚ್ಚರಿಕೆಯಿಂದ ಆಚರಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಮೊದಲು ಒಳ್ಳೆಯ ವ್ಯಕ್ತಿತ್ವಗಳನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಪ್ರಯತ್ನಿಸೋಣ. ಇಲ್ಲದಿದ್ದರೆ ಕಳ್ಳರ ಸಂತೆಯಲ್ಲಿ ಎಲ್ಲರೂ ಅನುಮಾ,ನ ಅವಮಾನದಲ್ಲಿ ಬದುಕಬೇಕಾಗುತ್ತದೆ…….

ಆದ್ದರಿಂದ ದಯವಿಟ್ಟು ಯುವಕ ಯುವತಿಯರ ಪ್ರೀತಿ ಪ್ರೇಮದ ವಿಷಯದಲ್ಲಿ ಸ್ವಲ್ಪ ಉದಾರವಾದಿಗಳಾಗಿ. ಅದನ್ನು ಪ್ರೋತ್ಸಾಹಿಸುವುದು ಬೇಡ, ತಿರಸ್ಕರಿಸುವುದು ಬೇಡ, ಅವಮಾನ ಎಂದು ಭಾವಿಸುವುದು ಬೇಡ, ಹಿಂಸಾತ್ಮಕವಾಗಿ ವರ್ತಿಸುವುದು ಬೇಡ. ಅದೊಂದು ಸಹಜ ಕ್ರಿಯೆ. ಪರಿಸ್ಥಿತಿಯನ್ನು ಅವಲಂಬಿಸಿ ತಾಳ್ಮೆಯಿಂದ ನಿರ್ವಹಿಸೋಣ. ಯಾವುದೇ ಜಾತಿ, ಧರ್ಮ, ಹಣ, ಅಧಿಕಾರದ ಅಹಂಕಾರಕ್ಕೆ ಬಲಿಯಾಗಿ ಅನಾಗರಿಕವಾಗಿ ಪ್ರತಿಕ್ರಯಿಸದಿರೋಣ. ಇನ್ನೊಬ್ಬರ ಬಗ್ಗೆ ಕೆಟ್ಟದ್ದಾಗಿ ಮಾತನಾಡದಿರೋಣ. ನಮ್ಮ ಮನೆಯಲ್ಲಿಯೂ ಇದು ಸಂಭವಿಸುಬಹುದು ಎಂಬ ಪ್ರಜ್ಞೆಯಲ್ಲಿ ಇರೋಣ……

ನಮ್ಮ ಮಕ್ಕಳೇನು ನೀತಿಗೆಟ್ಟವರಲ್ಲ. ಸಂಪ್ರದಾಯವಾಗಿ ಮದುವೆಯಾದವರು ಸಹ ಎಷ್ಟೋ ಜನ ವಿಚ್ಛೇದಿತರಾಗುತ್ತಿದ್ದಾರೆ. ಆದ್ದರಿಂದ ಇದು ವೈಯಕ್ತಿಕ ಸಮಸ್ಯೆಯಲ್ಲ. ಒಟ್ಟು ಸಮಾಜದ ಬದಲಾವಣೆಯ ಮನಸ್ಥಿತಿ ಎಂದು ಅರಿತು ವಿವೇಚನೆ ಬೆಳೆಸಿಕೊಳ್ಳೋಣ. ಇಡೀ ಸಮಾಜವನ್ನು ಉತ್ತಮ ಪರಿಸ್ಥಿತಿಯಲ್ಲಿ ಇಡೋಣ….
ಧನ್ಯವಾದಗಳು…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಮಾ.6ರಂದು ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ: ಸರ್ಕಾರ ಬಾಕಿ ಉಳಿಸಿಕೊಂಡಿರುವ ಗುತ್ತಿಗೆದಾರರ 38 ಸಾವಿರ ಕೋಟಿ ಬಿಲ್‌ಗಾಗಿ ಆಗ್ರಹ

ಕಳೆದ ಎರಡ್ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಗುತ್ತಿಗೆದಾರರ 38 ಸಾವಿರ ಕೋಟಿ ಬಿಲ್‌ಗಾಗಿ ಆಗ್ರಹಿಸಿ ಮಾ.6ರಂದು ಬೆಂಗಳೂರಿನ…

2 hours ago

ಅಗಸ್ತ್ಯ ಅಂತರರಾಷ್ಟ್ರೀಯ ಸಂಸ್ಥೆ ವತಿಯಿಂದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ: ವಿಜೇತರಿಗೆ ಬಹುಮಾನ ವಿತರಣೆ

ಫೆ.24ರಂದು ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ಅಗಸ್ತ್ಯ ಅಂತರರಾಷ್ಟ್ರೀಯ ಸಂಸ್ಥೆಯ ವತಿಯಿಂದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ…

5 hours ago

ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ: ಚಿಕಿ*ತ್ಸೆ ಫಲಕಾರಿಯಾಗದೆ ಸಾವು: ಪ್ರತಿಭಟನೆ ಮತ್ತು ಪ್ರಕರಣ ದಾಖಲು

ಹಾಸನ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯೊಬ್ಬರು ಚಿಕಿ*ತ್ಸೆ ಫಲಕಾರಿಯಾಗದೆ ಮೃ*ಪಟ್ಟ ಘಟನೆ ಹಾಸನ ನಗರದ ಹಿಮ್ಸ್ (HIMS) ಆಸ್ಪತ್ರೆಯಲ್ಲಿ ನಡೆದಿದೆ.…

17 hours ago

ತೂಬಗೆರೆಯ ದೊಡ್ಡಮ್ಮ ದೇವಾಲಯದಲ್ಲಿ ಕಳ್ಳತನ: ಹುಂಡಿ, ತಾಳಿ, ಆಭರಣ ಕಳವು

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮದ ದೊಡ್ಡಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮಂಗಳವಾರ ಬೆಳಿಗ್ಗೆ ದೇವಾಲಯದ ಬಾಗಿಲಿನ ಬೀಗ…

17 hours ago

ಸಂಬಳಕ್ಕಾಗಿ ಕಾರ್ಮಿಕರಿಂದ ಕಾರ್ಖಾನೆ ಮುಂದೆ ಪ್ರತಿಭಟನೆ

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆ(ಶೈಲೇಂದ್ರ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್)ಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ…

18 hours ago

ನೆಲಮಂಗಲ ನಗರಸಭೆಯ ಏಳು ಸದಸ್ಯರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಎಬಿ ಬಸವರಾಜು ಆದೇಶ

ಕರ್ನಾಟಕ ಸ್ಥಳೀಯ ಸಂಸ್ಥೆಗಳ(ಪಕ್ಷಾಂತರ ನಿಷೇಧ) ಅಧಿನಿಯಮ 4(2)(|||) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ನೆಲಮಂಗಲ ನಗರಸಭೆಯ ಏಳು ಸದಸ್ಯರನ್ನು ಅನರ್ಹಗೊಳಿಸಿ…

20 hours ago