ಪ್ರತಿವರ್ಷ ರೈತರಿಗಾಗಿ 20 ಕೋಟಿ ವಿನಿಯೋಗ- ಬಮೂಲ್ ನೇಮಕಾತಿಯಲ್ಲಿ ರೈತರ ಮಕ್ಕಳಿಗೆ ಶೇ.30ರಷ್ಟು ಮೀಸಲಾತಿ ಜಾರಿ- ಬಮುಲ್ ಅಧ್ಯಕ್ಷ ಡಿ.ಕೆ ಸುರೇಶ್

ಹಾಲು ಉತ್ಪಾದಕ ರೈತರು ಮಕ್ಕಳ ವಿದೇಶ ವ್ಯಾಸಂಗ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳಿಗೆ ಬಮುಲ್ ಟ್ರಸ್ಟ್ ನಿಂದ ಪ್ರತಿವರ್ಷ 20 ಕೋಟಿ ರೂ. ವಿನಿಯೋಗ ಮಾಡಲಾಗುತ್ತಿದೆ. ಬಮುಲ್ ಆಡಳಿತ ಮಂಡಳಿಯ ಎಲ್ಲಾ ಯೋಜನೆಗಳಿಗೆ ಒಕ್ಕೂಟದ 14 ಜನ ನಿರ್ದೇಶಕರು ಪಕ್ಷಾತೀತವಾಗಿ ಸಂಪೂರ್ಣವಾದ ಬೆಂಬಲ ನೀಡುತ್ತಿದ್ದಾರೆ. ಈ ಮೂಲಕ ರೈತರ ಅಭ್ಯುದೇಯಕ್ಕೆ ಶ್ರಮಿಸಲಾಗುತ್ತಿದೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ ಸುರೇಶ್ ಹೇಳಿದರು.

ನಗರದ ಒಕ್ಕಲಿಗರ ಭವನದಲ್ಲಿ ಬಮುಲ್ ವತಿಯಿಂದ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಮುಲ್ ನೇಮಕಾತಿಯಲ್ಲಿ ರೈತರ ಮಕ್ಕಳಿಗೆ ಉದ್ಯೋಗವನ್ನು ನೀಡುವ ನಿಟ್ಟಿನಲ್ಲಿ ಶೇ.30 ರಷ್ಟು ಮೀಸಲಾತಿಯನ್ನು ಜಾರಿಗೆ ಮಾಡುವ ತೀರ್ಮಾನವನ್ನು ಆಡಳಿತ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಬಿಡಿಸಿಸಿ ಬ್ಯಾಂಕ್ ನಿಂದ ಮಿನಿ ಡೇರಿಗೆ 15 ಲಕ್ಷ, ಎರಡು ಹಸುಗಳಿಗೆ 1.80 ಲಕ್ಷ ರೂ.ಗಳನ್ನು ಶೇ.3 ರಷ್ಡು ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯನ್ನು ಜಾರಿ ಮಾಡಲಾಗಿದೆ. ಹಸುಗಳು ಸಾವನ್ನಪ್ಪಿದ್ದಾಗ ರೈತರಿಗೆ ವಿಮೆ ಹಣ ನೀಡಲು 6 ತಿಂಗಳು ಸಮಯವಾಗುತ್ತಿತ್ತು. ಈ ಸಮಯವನ್ನ ಕಡಿಮೆ ಮಾಡಲು ಬಮುಲ್ ವತಿಯಿಂದಲೇ ವಿಮೆ ಯೋಜನೆ ಜಾರಿ ಮಾಡಿ ಕೇವಲ 15 ದಿನಗಳಲ್ಲಿ ಪರಿಹಾರ ಹಣ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ರೈತರು ಗುಣಮಟ್ಟದ ಹಾಲನ್ನು ಡೇರಿಗೆ ನೀಡಿದರೆ. ನಾವು ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ. ಬಮುಲ್ ನಲ್ಲಿ ನಮ್ಮ ಆಡಳಿತ ಮಂಡಳಿ ಜಾರಿಗೆ ಬಂದಾಗ 14 ಕೋಟಿ ನಷ್ಟದಲ್ಲಿತ್ತು. ಕೇವಲ 11 ತಿಂಗಳಲ್ಲಿ 70 ಕೋಟಿ ರೂ. ಲಾಭಾಂಶ ಮಾಡಿದೆ. ತಿರುಪತಿಗೆ ಬಮುಲ್ ನಿಂದ 2 ಸಾವಿರ ಟನ್ ತುಪ್ಪದ ಪೂರೈಕೆಗೆ ಒಪ್ಪಂದ ಮಾಡಿಕೊಂಡಿದೆ ಇದಕ್ಕೆಲ್ಲಾ ರೈತರ ಸಹಕಾರ ಕಾರಣವಾಗಿದೆ ಎಂದರು.

ಬಮುಲ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ಮಾತನಾಡಿ, ತಂದೆ-ತಾಯಯಂದಿರಿಗೆ ಮೋಸ ಮಾಡದೆ ಮಕ್ಕಳು ಬದುಕಿದರೆ ಅದೇ ಅವರಿಗೆ ನೀಡುವ ದೊಡ್ಡ ಗೌರವ. ಬಮುಲ್ ನೇಮಕಾತಿಯಲ್ಲಿ ರೈತರ ಮಕ್ಕಳಿಗೆ ಶೇ.30 ರಷ್ಟು ಮೀಸಲಾತಿಗೆ ಅವಕಾಶ ಮಾಡಿಕೊಡಲಾಗಿದೆ. ತಾಲ್ಲೂಕಿನಲ್ಲಿ ಮೀಸಲಿಟ್ಟಿರುವ ೧೫ ಎಕರೆ ಜಮೀನುನಲ್ಲಿ ಬಮುಲ್ ನ ಯಾವುದಾದರು ಒಂದು ಯೋಜನೆ ಜಾರಿ ಮಾಡಿ ಎಂದು ಡಿಕೆ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಶಿಬಿರ ಕಚೇರಿಯಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವವರಿಗೆ ಗೃಹಪಯೋಗಿ ಸಾಮಾನುಗಳನ್ನ ವಿತರಣೆ ಮಾಡಲಾಯಿತು.

ಈ ವೇಳೆ ಮುನಿರಾಜು, ಹರೀಶ್ ಕುಮಾರ್, ಸತೀಶ್, ಟಿಎಪಿಎಂಸಿಎಸ್ ಅಧ್ಯಕ್ಷ ಡಿ. ಸಿದ್ದರಾಮಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಿವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು, ಬೆಂಗಳೂರು ಸಹಕಾರ ಒಕ್ಕೂಟದ ನಿರ್ದೇಶಕ ಬಿಟಿ ಶ್ರೀನಿವಾಸಮೂರ್ತಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ಟಿಎಪಿಎಂಸಿಎಸ್ ನಿರ್ದೇಶಕರಾದ ಕೆಂಪೇಗೌಡ, ವಿಶ್ವಾಸ್ ಗೌಡ ಮತ್ತಿತ್ತರರು ಇದ್ದರು.

Leave a Reply

Your email address will not be published. Required fields are marked *

error: Content is protected !!