Categories: ಲೇಖನ

ನ್ಯಾಯಾಂಗ ಮತ್ತು ಮಾಧ್ಯಮ ಲೋಕದ ಎರಡು ಸುದ್ದಿಗಳು…

ಪ್ರಖ್ಯಾತ ಸಿನಿಮಾ ನಟನೊಬ್ಬನನ್ನು ಕೊಲೆ ಆರೋಪದ ಖಚಿತ ಆಧಾರದ ಮೇಲೆ ಪಂಚತಾರಾ ಹೋಟೆಲ್ಲಿನ ವ್ಯಾಯಾಮ ಶಾಲೆಯಿಂದ ಬಂಧಿಸಿ ಕರೆತರಲಾಗುತ್ತದೆ. ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತದೆ. ಮಾಧ್ಯಮ ಲೋಕ ಪೊಲೀಸ್ ತನಿಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತದೆ.

ಕೊಲೆ ಆರೋಪಿ ಯಾವ ರೀತಿ ಕೊಲೆ ಮಾಡಿದ ಎಂಬುದನ್ನು ಬಹುತೇಕ ಮಾಧ್ಯಮಗಳು ತಮಗೆ ತೋಚಿದಂತೆ ಹೇಳುತ್ತವೆ. ಪೋಲಿಸ್ ತನಿಖಾ ವರದಿ ತುಂಬಾ ಸ್ಪಷ್ಟವಾಗಿ ದಾಖಲೆಗಳ ಸಮೇತ ನ್ಯಾಯಾಲಯಕ್ಕೆ ಸಲ್ಲಿಸುತ್ತದೆ. ಆದರೂ ಆರೋಪಿಯ ಪರ ವಕೀಲರ ಚಾಣಾಕ್ಷತೆಯಿಂದ ಕಾನೂನಿನ ಇತಿಮಿತಿಗಳನ್ನು ಮೀರಿ ಸುಮಾರು ಆರು ತಿಂಗಳು ಮುಗಿಯುವ ಮೊದಲೇ ಆರೋಪಿಯು ಬೆನ್ನು ನೋವಿನ ಸಮಸ್ಯೆ, ಅದರಿಂದ ಅವರ ಆರೋಗ್ಯದ ಮೇಲೆ ತುಂಬಾ ಗಂಭೀರ ಮಾರಣಾಂತಿಕ ಪರಿಣಾಮ ಬೀರುತ್ತದೆ ಎಂಬ ಕಲ್ಪಿತ ವೈದ್ಯಕೀಯ ಆಧಾರದ ಮೇಲೆ ನಿಜಕ್ಕೂ ಸಾಮಾನ್ಯ ಜನರಿಗೆ ಸಿಗದಂತಹ ವಿಶೇಷ ಸವಲತ್ತು ಸಿಕ್ಕಿ ಶಸ್ತ್ರ ಚಿಕಿತ್ಸೆಗೆಂದು ಆರೋಪಿಗೆ ಜಾಮೀನು ಸಿಗುತ್ತದೆ.

ಆದರೆ ಆ ಆರೋಪಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದೇ ಇಲ್ಲ. ಹಾಗೆಯೇ ಸಾಮಾನ್ಯ ಜಾಮೀನು ಮಂಜೂರಾಗುತ್ತದೆ. ವೈಧ್ಯಕೀಯ ಸರ್ಟಿಫಿಕೇಟ್ ಸುಳ್ಳಾಗುತ್ತದೆ. ಸ್ವಲ್ಪ ದಿನದ ನಂತರ ಇಡೀ ರಾಜ್ಯದಲ್ಲಿ ಓಡಾಡುವ ಸೌಕರ್ಯ ಪಡೆಯುತ್ತಾರೆ. ತದನಂತರ ಆರೋಪಿ ಸಿನಿಮಾ ಶೂಟಿಂಗ್ನಲ್ಲೂ ಭಾಗವಹಿಸುತ್ತಾರೆ, ಪಾರ್ಟಿಗಳಲ್ಲೂ ನೃತ್ಯ ಮಾಡುತ್ತಾರೆ. ಇದೀಗ ವಿದೇಶದಲ್ಲಿ ಚಿತ್ರೀಕರಣಕ್ಕೆಂದು ಅನುಮತಿ ಕೇಳಿದಾಗ ಅಂತಹ ಕೊಲೆ ಆರೋಪಿಗೆ ಘನ ನ್ಯಾಯ ಧಾರಾಳವಾಗಿ ಅನುಮತಿಯನ್ನೂ ನೀಡುತ್ತದೆ.

ಒಂದು ವರ್ಷ ಕಳೆಯುವುದರೊಳಗೆ ಆರೋಪಿ ಕೇಳಿದ ಎಲ್ಲಾ ಸೌಕರ್ಯಗಳನ್ನು, ಮನವಿಗಳನ್ನು ನ್ಯಾಯಾಲಯ ಒಪ್ಪುತ್ತದೆ ಮತ್ತು ಅನುಮತಿ ನೀಡುತ್ತದೆ. ಇದೊಂದು ವಿಷಾದನೀಯ ಸಂಗತಿಯಲ್ಲವೇ. ಒಬ್ಬ ಜನಪ್ರಿಯ ವ್ಯಕ್ತಿ ಕೊಲೆ ಆರೋಪಿ ಮತ್ತು ಇಡೀ ಕರ್ನಾಟಕದ ಜನತೆ ಇದನ್ನು ವಿಶೇಷವಾಗಿ ಗಮನಿಸುತ್ತಿರುವಾಗ ಕೊಲೆ ಆರೋಪಿಯ ಪರವಾಗಿ ನ್ಯಾಯಾಲಯವೇ ಇಷ್ಟೊಂದು ಉದಾರತೆಯನ್ನು ತೋರಿದರೆ ಸಾಮಾನ್ಯ ಜನ ಇದನ್ನು ಹೇಗೆ ಗ್ರಹಿಸಬಹುದು. ತಾವು ಮಾಡಬಹುದಾದ ಅಪರಾಧಗಳ ವಿಷಯದಲ್ಲಿ ಅವರ ವರ್ತನೆ ಹೇಗಿರಬಹುದು. ಇದು ಎಚ್ಚರಿಕೆಯೋ, ಪ್ರೇರಣೆಯೋ ಎಂಬುದನ್ನು ನಿರ್ಧರಿಸಬೇಕಾಗುತ್ತದೆ.

ನ್ಯಾಯಾಲಯಕ್ಕೆ ಸ್ವಲ್ಪಮಟ್ಟಿಗೆ ವಿವೇಚನಾ ಅಧಿಕಾರವಿರುತ್ತದೆ. ಎಲ್ಲಾ ದಾಖಲೆಗಳನ್ನು, ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರವೂ ನ್ಯಾಯಾಧೀಶರು ತೀರ್ಮಾನ ನೀಡುವಾಗ ಸಾಮಾಜಿಕ ವ್ಯವಸ್ಥೆಯ ಜವಾಬ್ದಾರಿ ಅವರ ಮನಸ್ಸಿನಲ್ಲಿ ಇರಬೇಕಲ್ಲವೇ. ಒಬ್ಬ ವ್ಯಕ್ತಿಯ ಜೀವ ತೆಗೆದ ಆರೋಪಿಗೆ ಇಷ್ಟೊಂದು ಉದಾರತೆಯಿಂದ ಕೇಳಿದ್ದನ್ನೆಲ್ಲಾ ವರ ನೀಡುವಂತೆ ನೀಡಿದರೆ ಕ್ರಿಮಿನಲ್ ಅಪರಾಧಗಳಿಗೆ ಕೊನೆ ಎಂದು.

ಹಣ, ಅಧಿಕಾರ, ವಕೀಲಿಕೆಯ ಚಾಣಾಕ್ಷತನದಿಂದ ಕೊಲೆಯಂತ ಅಪರಾಧವನ್ನೇ ಕಾನೂನಿನ ನೆರಳಿನಿಂದ ಸುಲಭವಾಗಿ ದಕ್ಕಿಸಿಕೊಳ್ಳುವ ಸಾಧ್ಯತೆ ಸಮಾಜಕ್ಕೆ ಮನವರಿಕೆಯಾದರೆ ಮುಂದಿನ ಗತಿಯೇನು. ನ್ಯಾಯಾಲಯಗಳಿಗೂ ಸಹ ಈ ದೇಶದ ಸಾಂವಿಧಾನಿಕ ಮೌಲ್ಯಗಳನ್ನು, ಮಾನವೀಯ ಮೌಲ್ಯಗಳನ್ನು ರಕ್ಷಿಸಬೇಕಾದ ಜವಾಬ್ದಾರಿ ಇರುತ್ತದೆ.

ಇದು ಕೇವಲ ಆ ಸಿನಿಮಾ ನಟನ ವಿಷಯಕ್ಕೆ ಮಾತ್ರವಲ್ಲ. ಇದು ಸಾಂಕೇತಿಕ. ಇಲ್ಲಿ ನಮ್ಮ ಆರೋಪಗಳು ಆ ಆರೋಪಿಯ ವಿರುದ್ಧವೂ ಅಲ್ಲ. ಏಕೆಂದರೆ ಸಹಜವಾಗಿಯೇ ಆರೋಪಿ ತಾನು ನಿರಪರಾಧಿ ಎಂದು ನಿರೂಪಿಸಲು, ತನಗೆ ಅನುಕೂಲ ಮಾಡಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾನೆ. ಅದು ಆತನ ಸ್ವಾತಂತ್ರ್ಯ ಮತ್ತು ಅನಿವಾರ್ಯತೆ. ಆದರೆ ನಮ್ಮ ಆರೋಪ ಖಂಡಿತವಾಗಲೂ ನ್ಯಾಯಾಂಗ ವ್ಯವಸ್ಥೆಯ ಹುಳುಕುಗಳ ಬಗ್ಗೆ ಮಾತ್ರ.

ಈ ಅಭಿಪ್ರಾಯ ಏಕೆಂದರೆ ಆ ನಟನಿಗಿಂತ ಇನ್ನೂ ವೇಗವಾಗಿಯೇ ಎಷ್ಟೋ ಕೊಲೆ ಆರೋಪಿಗಳು ಬಿಡುಗಡೆಯಾಗುತ್ತಿರುವುದನ್ನು ದಿನನಿತ್ಯ ಕಾಣುತ್ತಿದ್ದೇವೆ. ಹಾಗಾದರೆ ದೋಷವಿರುವುದು ತನಿಖೆಯಲ್ಲೋ, ನ್ಯಾಯಾಂಗ ವ್ಯವಸ್ಥೆಯೆಲ್ಲೋ ಯೋಚಿಸಬೇಕಾಗಿದೆ.

ಇನ್ನೊಂದು ಮುಖ್ಯ ವಿಷಯವೆಂದರೆ, ಇತ್ತೀಚೆಗೆ ಕಮಲ್ ಹಾಸನ್ ನೀಡಿದ ಹೇಳಿಕೆಯ ವಿರುದ್ಧ ಕನ್ನಡ ಮಾಧ್ಯಮ ಲೋಕ, ಸಾಮಾಜಿಕ ಜಾಲತಾಣಗಳು ಮತ್ತು ಕನ್ನಡ ಹೋರಾಟಗಾರರು ಹಾಗೂ ಸಾಮಾನ್ಯ ಜನರು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆತನ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ಆಗುತ್ತಿವೆ. ಕಮಲ್ ಹಾಸನ್ ಕ್ಷಮೆ ಕೇಳದೆ ಉದ್ಧಟತನ ತೋರಿಸುತ್ತಿದ್ದಾರೆ.

ಅದೆಲ್ಲವೂ ನಿಜ, ಅವರ ಕೆಲವು ಮಾತುಗಳು ಕನ್ನಡಿಗರ ಟೀಕೆಗೆ ಅರ್ಹ. ಆದರೆ ಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕರಾದ
ಶ್ರೀ ಎಚ್. ಆರ್. ರಂಗನಾಥ್ ಅವರು ಕಮಲ್ ಹಾಸನ್ ಆವರನ್ನು ನಿಂದಿಸಿದ ರೀತಿ ಮಾತ್ರ ಅತ್ಯಂತ ನೀಚವಾಗಿತ್ತು. ಒಬ್ಬ ಪ್ರಬುದ್ಧ ಪತ್ರಕರ್ತ, ಜನಪ್ರಿಯ ಪತ್ರಕರ್ತ ತನ್ನ ಮನಸ್ಸು, ಮಾತು, ಭಾಷೆಯ ಮೇಲೆ ನಿಯಂತ್ರಣವನ್ನೇ ಕಳೆದುಕೊಂಡು ಏಕವಚನದಲ್ಲಿ ಕಮಲ್ ಹಾಸನ್ ಅವರ ಕೌಟುಂಬಿಕ ವಿಷಯವನ್ನು ಪ್ರ‌ಸ್ತಾಪಿಸಿ ನಿಂದಿಸಿದರು. ಆತನಿಗೆ ಸಂಸಾರ ಮಾಡುವ ಯೋಗ್ಯತೆಯೇ ಇಲ್ಲ, ಆದ್ದರಿಂದ ಬೇರೆ ವಿಷಯದಲ್ಲಿ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಮೂದಲಿಸಿ, ನೀಚತನ ಮೆರೆದರು.

ಇಲ್ಲಿ ಸಮಸ್ಯೆ ಬಗ್ಗೆ ಮಾತನಾಡಬೇಕಾಗಿರುವುದು ಕನ್ನಡ ಭಾಷೆಯ ಗೌರವಕ್ಕೆ ಧಕ್ಕೆಯಾಗಿರುವ ವಿಷಯವೇ ಹೊರತು ಅದಕ್ಕೂ ಕಮಲ್ ಹಾಸನ್ ಅವರ ಕೌಟುಂಬಿಕ ಸಮಸ್ಯೆಗೂ ಸಂಬಂಧವೇ ಇಲ್ಲ. ಕುಟುಂಬವೆಂದರೆ ಗಂಡ ಹೆಂಡತಿಯ ನಡುವಿನ ಸಂಬಂಧ. ಒಂದು ವೇಳೆ ಕಮಲ್ ಹಾಸನ್ ಕುಟುಂಬದಲ್ಲಿ ಬಿರುಕುಂಟಾಗಿದ್ದರೆ ಸಹಜವಾಗಿಯೇ ಕಾನೂನಾತ್ಮಕವಾಗಿ ಬೇರ್ಪಟ್ಟಿರುತ್ತಾರೆ. ಇನ್ನೊಂದು ಮದುವೆಯಾಗಬಹುದು ಅಥವಾ ಮತ್ತೊಂದು ಮದುವೆಯೂ ಆಗಬಹುದು. ಅದು ಅವರವರ ಇಚ್ಚೆಗೆ ಬಿಟ್ಟದ್ದು.

ಸಂಸಾರದ ವಿಫಲತೆಗೆ ಕೇವಲ ಗಂಡು ಅಥವಾ ಕೇವಲ ಹೆಣ್ಣು ಮಾತ್ರ ಕಾರಣವಲ್ಲ. ಒಟ್ಟಾರೆ ಅವರಿಬ್ಬರ ನಡುವೆ ಹೊಂದಾಣಿಕೆ ಸಾಧ್ಯವಾಗದಿದ್ದರೆ ವಿಚ್ಛೇದನವೇ ಒಂದು ಪ್ರಮುಖ ಮಾರ್ಗ. ಅದು ಅವರವರ ಸ್ವಾತಂತ್ರ್ಯ. ಅದನ್ನು ಕೇಳುವ ಹಕ್ಕು ಮತ್ತು ನೈತಿಕತೆಯೂ ನಮಗಿಲ್ಲ. ಇದೇ ರಂಗನಾಥ್ ಅವರ ಕುಟುಂಬದ ಬಗ್ಗೆಯೋ, ಅವರ ಕಚೇರಿಯ ಹೆಣ್ಣು ಮಕ್ಕಳ ಬಗ್ಗೆಯೂ ಮತ್ತೇನೋ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಅದು ನೀಚತನವಲ್ಲವೇ. ಹಾಗೆಯೇ ಇನ್ನೊಬ್ಬರ ಬಗ್ಗೆ, ಅವರ ಕುಟುಂಬದ ಬಗ್ಗೆ ಮಾತನಾಡುವ ಅರ್ಹತೆ ಇನ್ಯಾರಿಗೂ ಇಲ್ಲ.

ಸಾರ್ವಜನಿಕವಾಗಿ ಕಮಲ್ ಹಾಸನ್ ಅವರನ್ನು ಟೀಕಿಸಲಿ, ಅವರ ಭಾಷಾ ದುರಭಿಮಾನವನ್ನು ಖಂಡಿಸಲಿ, ಅವರ ವಿರುದ್ಧ ಶಿಕ್ಷೆಗೆ, ಬಹಿಷ್ಕಾರಕ್ಕೆ ಆಗ್ರಹಿಸಲಿ. ಆದರೆ ಅವರ ಕೌಟುಂಬಿಕ ವಿಷಯವನ್ನು ಪತ್ರಕರ್ತರೊಬ್ಬರು ಬೀದಿಯಲ್ಲಿ ಹರಾಜು ಹಾಕುವುದು ಖಂಡಿತ ಒಪ್ಪೋ ವಿಷಯವಲ್ಲ.

ಸಂಸಾರದ ವೈಫಲ್ಯವೇ ಬದುಕಿನ ವೈಫಲ್ಯ ಎಂದು ನಿರ್ಧರಿಸಿದರೆ ಅದು ಒಳ್ಳೆಯ ಬೆಳವಣಿಗೆಯಲ್ಲ. ಹಾಗೆಲ್ಲಾ ಮಾತನಾಡಬಾರದು. ಬದುಕೆಂಬುದು ಕುಟುಂಬ ವ್ಯವಸ್ಥೆಯ ಒಂದು ಭಾಗವೇ ಹೊರತು ಬದುಕಿರುವುದೇ ಕುಟುಂಬಕ್ಕಾಗಿ ಅಲ್ಲ. ಎಲ್ಲಿಯವರೆಗೆ ಕುಟುಂಬದ ಗಂಡ ಹೆಂಡತಿ ಸಂಬಂಧ ಸರಿ ಇರುತ್ತದೆಯೋ ಅಲ್ಲಿಯವರೆಗೂ ಅದು ಉತ್ತಮ ನಿರ್ಧಾರ. ಒಂದು ವೇಳೆ ಹೊಂದಾಣಿಕೆ ಸಾಧ್ಯವಾಗದಿದ್ದರೆ ಕಾನೂನಾತ್ಮಕವಾಗಿ ಬೇರ್ಪಡುವುದು ಕೂಡ ಅಷ್ಟೇ ಉತ್ತಮ ನಿರ್ಧಾರ. ಅದು ಅವರವರ ಖಾಸಗಿ ವಿಷಯಕ್ಕೆ ಸಂಬಂಧಪಟ್ಟ ವಿಚಾರ.
ಜೀವನಪೂರ್ತಿ ಇಬ್ಬರೂ ಒಟ್ಟಿಗೆ ಇದ್ದರೆ ಅದು ಅತ್ಯುತ್ತಮ.

ಏನೇ ಆಗಲಿ ರಂಗನಾಥ್ ಅವರಂತ ಪತ್ರಕರ್ತರು ಈ ರೀತಿ ನೀಚತನದಿಂದ ಇನ್ನೊಬ್ಬ ವ್ಯಕ್ತಿಯನ್ನು ನಿಂದಿಸುವುದು ಖಂಡಿತ ತಪ್ಪು. ಮಾಧ್ಯಮ ಧರ್ಮಕ್ಕೆ ವಿರುದ್ಧ. ಅವರು ಈ ವಿಷಯದಲ್ಲಿ ಕ್ಷಮೆ ಕೇಳಿ ಮನಃಪರಿವರ್ತನೆ ಮಾಡಿಕೊಂಡು ಪತ್ರಿಕಾ ಧರ್ಮವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಅದರ ಘನತೆಯನ್ನು ಎತ್ತಿ ಹಿಡಿಯಲಿ ಎಂದು ಆಶಿಸುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಗಜಮುಖನ ಆರಾಧನೆಯಲ್ಲಿ ಮಿಂದೆದ್ದ ದೊಡ್ಡಬಳ್ಳಾಪುರ: ಬೆಸ್ತರಪೇಟೆಯಲ್ಲಿ 14 ಅಡಿ ಎತ್ತರದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ: 7ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ಮೆರುಗು

ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ದೊಡ್ಡಬಳ್ಳಾಪುರ ನಗರದಲ್ಲೂ ಗಣೇಶೋತ್ಸವದ ಕಳೆ ಹೆಚ್ಚಾಗಿದೆ. ನಗರದ ವಿವಿಧೆಡೆ ಗಣೇಶ…

25 minutes ago

ಗಣೇಶ ವಿಸರ್ಜನೆಗೆ ಗುಂಡಮಗೆರೆ ಕೆರೆ ಬಳಿ ವಿಶೇಷ ವ್ಯವಸ್ಥೆ

ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ…

2 hours ago

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ತೂಬಗೆರೆಯಲ್ಲೂ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಆಚರಣೆ: 20 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…

6 hours ago

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

12 hours ago

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

1 day ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

1 day ago