ನೆಲಮಂಗಲ–ದೊಡ್ಡಬಳ್ಳಾಪುರ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಳ: ಫ್ಲೈಓವರ್, ರಸ್ತೆ ವಿಸ್ತರಣೆ, ಬಸ್ ನಿಲ್ದಾಣ ನಿರ್ಮಾಣಕ್ಕೆ ಆಗ್ರಹ

ದೊಡ್ಡಬಳ್ಳಾಪುರ: ದಾಬಸ್ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಹುಲಿಕುಂಟೆ ಟೋಲ್‌ಪ್ಲಾಜಾದಲ್ಲಿ ಶುಲ್ಕ ಪಾವತಿಸುವುದನ್ನು ತಪ್ಪಿಸಲು ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ನೆಲಮಂಗಲ–ದೊಡ್ಡಬಳ್ಳಾಪುರ ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಬಳಸುತ್ತಿವೆ. ಇದರಿಂದ ಈ ರಸ್ತೆಯಲ್ಲಿರುವ ಅರಳು ಮಲ್ಲಿಗೆ, ಮಧುರೆ ಕ್ರಾಸ್, ಗೊಲ್ಲಹಳ್ಳಿ, ಕಾಡನೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚಾರ ದಟ್ಟಣೆ ತೀವ್ರಗೊಂಡಿದ್ದು, ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಅರಳು ಮಲ್ಲಿಗೆ ಗ್ರಾಮದಲ್ಲಿ ರಸ್ತೆ ಅತ್ಯಂತ ಕಿರಿದಾಗಿರುವುದರಿಂದ ಎರಡು ಭಾರೀ ವಾಹನಗಳು ಎದುರುಬಂದರೆ ವಾಹನಗಳ ಸಾಲು ಹಲವಾರು ನೂರು ಮೀಟರ್‌ಗಳವರೆಗೆ ನಿರ್ಮಾಣವಾಗುತ್ತಿದೆ. ಶಾಲಾ ಮಕ್ಕಳು, ಹಿರಿಯ ನಾಗರಿಕರು ಹಾಗೂ ದ್ವಿಚಕ್ರ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಭಾರೀ ವಾಹನಗಳ ನಿರಂತರ ಸಂಚಾರದಿಂದ ರಸ್ತೆ ಹಾಳಾಗುತ್ತಲೇ ಇರುತ್ತದೆ, ಹಲವೆಡೆ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಮಳೆ ಬಂದಾಗ ಈ ಗುಂಡಿಗಳು ನೀರಿನಿಂದ ತುಂಬಿ ಕಾಣಿಸದ ಕಾರಣ ಅಪಘಾತದ ಅಪಾಯ ಮತ್ತಷ್ಟು ಹೆಚ್ಚುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಲ್ಲೇ ಹಲವು ಅಪಘಾತಗಳು ಸಂಭವಿಸಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.

ಗೊಲ್ಲಹಳ್ಳಿ ರೈಲ್ವೆ ಫ್ಲೈಓವರ್ ನಿರ್ಮಾಣಕ್ಕೆ ಒತ್ತಾಯ:

ಗೊಲ್ಲಹಳ್ಳಿ ರೈಲ್ವೆ ಗೇಟ್‌ನಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಫ್ಲೈಓವರ್ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿದೆ.

ಮಧುರೆ ಕ್ರಾಸ್‌ನಲ್ಲಿ ಬಸ್ ನಿಲ್ದಾಣದ ಕೊರತೆ:

ಮಧುರೆ ಕ್ರಾಸ್ ಹಾಗೂ ಮಧುರೆ ದೇವಾಲಯದ ಬಳಿ ಸಮರ್ಪಕ ಬಸ್ ನಿಲ್ದಾಣವಿಲ್ಲದ ಕಾರಣ ಪ್ರಯಾಣಿಕರು ಹೆದ್ದಾರಿಯ ಅಂಚಿನಲ್ಲೇ ಬಸ್‌ಗಾಗಿ ಕಾಯಬೇಕಾಗಿದೆ. ಇದೇ ವೇಳೆ ವಾಹನಗಳು ಅತಿವೇಗದಲ್ಲಿ ಸಂಚರಿಸುತ್ತಿರುವುದರಿಂದ ಅಪಘಾತದ ಭೀತಿ ಹೆಚ್ಚಾಗಿದೆ.

 ದೇವಾಲಯಕ್ಕೆ ಬರುವ ಭಕ್ತರು,ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸುರಕ್ಷಿತವಾಗಿ ಬಸ್ ಏರಿಳಿಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ರಸ್ತೆ ವಿಸ್ತರಣೆ ಮತ್ತು ಅತಿಕ್ರಮಣ ತೆರವಿಗೆ ಒತ್ತಾಯ

 ಮಧುರೆ ದೇವಾಲಯದ ಸಮೀಪ ರಸ್ತೆ ಕಿರಿದಾಗಿರುವುದರ ಜೊತೆಗೆ ರಸ್ತೆ ಅಂಚಿನಲ್ಲೇ ಅಂಗಡಿಗಳು ನಿರ್ಮಾಣವಾಗಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ರಸ್ತೆ ವಿಸ್ತರಣೆ ಮಾಡಿ, ಅತಿಕ್ರಮಣ ಮಾಡಿಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಾಡನೂರು ಕೈಮರ ಬಸ್ ನಿಲ್ದಾಣದ ಮುಂಭಾಗದಲ್ಲಿಯೂ ಅಂಗಡಿಗಳು ನಿರ್ಮಾಣವಾಗಿದ್ದು, ಬಸ್ ನಿಲ್ದಾಣ ಇದ್ದರೂ ಸಾರ್ವಜನಿಕರು ಸಮರ್ಪಕವಾಗಿ ಬಳಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಪ್ರಯಾಣಿಕರು ರಸ್ತೆ ಮೇಲೆಯೇ ನಿಂತು ಬಸ್ ಏರಿಳಿಯಬೇಕಾದ ಪರಿಸ್ಥಿತಿ ಎದುರಾಗಿದೆ.

ಟೋಲ್ ತಪ್ಪಿಸುವ ವಾಹನಗಳ ಮೇಲೆ ನಿಯಂತ್ರಣ ಅಗತ್ಯ

ಸ್ಥಳೀಯರ ಪ್ರಕಾರ, ಟೋಲ್ ಶುಲ್ಕ ತಪ್ಪಿಸಲು ಭಾರೀ ವಾಹನಗಳು ಗ್ರಾಮೀಣ ರಸ್ತೆಯನ್ನು ಹೆಚ್ಚಾಗಿ ಬಳಸುತ್ತಿರುವುದೇ ಇಂದಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಗ್ರಾಮ ರಸ್ತೆಗಳು ಇಂತಹ ಭಾರೀ ವಾಹನಗಳ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಪರಿಣಾಮ ರಸ್ತೆಗಳು ಶೀಘ್ರವಾಗಿ ಹಾಳಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆ ಪ್ರಶ್ನಾರ್ಹವಾಗಿದೆ.

ಗೊಲ್ಲಹಳ್ಳಿ ರೈಲ್ವೆ ಫ್ಲೈಓವರ್‌ ನಿರ್ಮಾಣವಾಗಲಿ

ಗೊಲ್ಲಹಳ್ಳಿ ರೈಲ್ವೆ ಫ್ಲೈಓವರ್‌ನ್ನು ತುರ್ತಾಗಿ ನಿರ್ಮಿಸಬೇಕು, ನೆಲಮಂಗಲ–ದೊಡ್ಡಬಳ್ಳಾಪುರ ರಸ್ತೆಯನ್ನು ನಾಲ್ಕು ಪಥ ಅಥವಾ ವಿಸ್ತರಣೆ ಮಾಡಬೇಕು, ಅರಳು ಮಲ್ಲಿಗೆ ಗ್ರಾಮದ ಕಿರಿದಾದ ರಸ್ತೆಯನ್ನು ವಿಸ್ತರಿಸಿ ಕೆರೆ ಏರಿ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು, ಮಧುರೆ ಕ್ರಾಸ್ ಹಾಗೂ ಮಧುರೆ ದೇವಾಲಯದ ಬಳಿ ಬಸ್ ನಿಲ್ದಾಣ ನಿರ್ಮಿಸಬೇಕು. ರಸ್ತೆ ಅಂಚಿನ ಅತಿಕ್ರಮಣ ಅಂಗಡಿಗಳನ್ನು ತೆರವುಗೊಳಿಸಬೇಕು. ಕಾಡನೂರು ಕೈಮರ ಬಸ್ ನಿಲ್ದಾಣವನ್ನು ಸಾರ್ವಜನಿಕ ಬಳಕೆಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಬೇಕು. ರಸ್ತೆ ಗುಂಡಿಗಳನ್ನು ಶಾಶ್ವತವಾಗಿ ಮುಚ್ಚಿ ಸುರಕ್ಷಿತ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಗ್ರಾಮ ರಸ್ತೆಯಲ್ಲಿ ಅನಗತ್ಯವಾಗಿ ಸಂಚರಿಸುವ ಭಾರೀ ವಾಹನಗಳಿಗೆ ನಿರ್ಬಂಧ ವಿಧಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕಿದೆ

ಸ್ಥಳೀಯರ ಅಭಿಪ್ರಾಯದಂತೆ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರೈಲ್ವೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ಶೀಘ್ರ ಕ್ರಮ ಕೈಗೊಂಡರೆ ಮಾತ್ರ ಈ ಭಾಗದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಇಲ್ಲವಾದರೆ ಟೋಲ್ ತಪ್ಪಿಸುವ ವಾಹನಗಳ ಒತ್ತಡ ಮತ್ತಷ್ಟು ಹೆಚ್ಚಾಗಿ ಅಪಘಾತಗಳು ಮತ್ತು ಜೀವಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಲಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸ್ಥಳೀಯರಿಂದ ಬಲವಾಗಿ ಕೇಳಿಬರುತ್ತಿದೆ.

ಪ್ರಮುಖ ವೃತ್ತಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಬೇಕು. ರಸ್ತೆ ತಿರುವುಗಳಲ್ಲಿ ಸೂಚನಾ ಫಲಕಗಳನ್ನು ಸ್ಥಾಪಿಸುವುದರ ಜೊತೆಗೆ, ಅಗತ್ಯವಿರುವ ಕಡೆ ಬಸ್ ತಂಗುದಾಣಗಳು ಮತ್ತು ಸ್ಪೀಡ್ ಬ್ರೇಕರ್‌ಗಳನ್ನು ನಿರ್ಮಿಸಬೇಕು. ಈ ಮೂಲಸೌಕರ್ಯಗಳ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಸೌಭಾಗ್ಯಮ್ಮ ಹೇಳಿದ್ದಾರೆ.

ಕಾಡನೂರು ಕೈಮರ ಸರ್ಕಲ್ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಪ್ರತಿದಿನ ಸುಮಾರು 2 ಸಾವಿರ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಅಂಗಡಿ-ಹೋಟೆಲ್‌ಗಳ ಅತಿಕ್ರಮಣ, ಭಾರೀ ವಾಹನಗಳ ಸಂಚಾರ ಹಾಗೂ ರಸ್ತೆ ಬದಿಯಲ್ಲಿ ಕೋಳಿ ತ್ಯಾಜ್ಯ ಸುರಿಯುವುದರಿಂದ ನಾಯಿಗಳ ಕಾಟ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ಈ ಸಮಸ್ಯೆಗಳ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮುನಿರಾಜು ಹೇಳಿದ್ದಾರೆ.

ರಸ್ತೆ ದಾಟಲು ಪಾದಚಾರಿಗಳಿಗೆ ಸುರಕ್ಷಿತ ವ್ಯವಸ್ಥೆ ಕಲ್ಪಿಸಬೇಕು. ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ರಸ್ತೆ ತಿರುವುಗಳನ್ನು ಸರಿಪಡಿಸಬೇಕು. ಅರಳು ಮಲ್ಲಿಗೆ ಕೆರೆ ಏರಿ ರಸ್ತೆಯನ್ನು ಅಗಲೀಕರಣಗೊಳಿಸಬೇಕು. ಟೋಲ್ ತಪ್ಪಿಸಲು ಒಳರಸ್ತೆಗಳನ್ನು ಬಳಸುವ ವಾಹನಗಳಿಗೆ ಕಡಿವಾಣ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಚೆನ್ನದೇವಿ ಅಗ್ರಹಾರ ನಿವಾಸಿ ರಂಗಸ್ವಾಮಿ ತಿಳಿಸಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!