ಸೆ.16 ಮಧ್ಯ ರಾತ್ರಿ ದೊಡ್ಡಬಳ್ಳಾಪುರ ತಾಲೂಕಿನ ನಿಜಗಲ್ ಲೇಔಟ್, ನಂದಿನಿ ಲೇಔಟ್, ಟಿ.ಬಿ ನಾರಾಯಣಪ್ಪ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಖಕ್ಕೆ ಮಾಸ್ಕ್, ತಲೆಗೆ ಟೋಪಿ, ಕೈಗಳಿಗೆ ಗ್ಲೌಸ್ ಹಾಕಿಕೊಂಡು, ಕದ್ದ ವಸ್ತುಗಳನ್ನು ತುಂಬಿಕೊಳ್ಳಲು ಬೆನ್ನಿಗೆ ಒಂದು ಬ್ಯಾಗ್ ತಗಲಾಕೊಂಡು, ಕೈಗಳಲ್ಲಿ ಲಾಂಗ್, ಮಚ್ಚು, ಕಬ್ಬಿಣದ ರಾಡ್, ಕಲ್ಲುಗಳನ್ನು ಹಿಡಿದುಕೊಂಡು ಅಲ್ಲಲ್ಲಿ ಸಿಸಿಟಿವಿ ಇದ್ರುನೂ ಕ್ಯಾರೆ ಎನ್ನದೆ ರಾಜಾರೋಷವಾಗಿ ಮನೆಗಳ ಗೇಟ್ ತೆಗೆಯೋದು, ಕಾಂಪೌಡ್ ಹತ್ತೋದು, ಕಿಟಕಿಗಳಲ್ಲಿ ಬಗ್ಗಿ ನೋಡೋದು, ಒಂದು ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಲ್ಲಿ ನೇರವಾಗಿ ಮನೆ ಬೀಗ ಹೊಡೆದು ಒಳ ಹೋಗಿ ಕೈಗೆ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದ ಕಳ್ಳರ ಗ್ಯಾಂಗ್ ನ್ನು ಹೆಡೆಮುರಿಕಟ್ಟುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
A1 ಪುರುಷೋತ್ತಮ, A2 ಚಂದ್ರು, A3 ದರ್ಶನ್, A4 ಸೌಭಾಗ್ಯ ಬಂಧಿತ ಆರೋಪಿಗಳು.
ಆರೋಪಿಗಳ ವಿವರ:
1) A1 ಪುರುಷೋತ್ತಮ (ವಯಸ್ಸು 22 ವರ್ಷ): ಮೂಲತಹ ದಾವಣಗೆರೆ ಜಿಲ್ಲೆಯ ನಾಗರಕಟ್ಟೆ ಗ್ರಾಮದವನು. ಎಸ್ ಎಸ್ ಎಲ್ ಸಿ ಓದಿದ್ದ ಇವನು, ಬೆಂಗಳೂರಿನ ಕೂಡ್ಲೂ ಗೇಟ್ ಬಳಿ ಬಾಡಿಗೆ ಮನೆ ಮಾಡಿಕೊಂಡು ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ. ಈತನ ಮೇಲೆ 8 ಕಳ್ಳತನ ಪ್ರಕರಣ, ಒಂದು ಕೊಲೆ ಪ್ರಕರಣ ಸೇರಿದಂತೆ ಇತರೆ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.
2) A2 ಚಂದ್ರು (ವಯಸ್ಸು 24 ವರ್ಷ): ಮೂಲತಹ ದಾವಣಗೆರೆ ಜಿಲ್ಲೆಯ ಬಸವನಾಳ್ ಗೊಲ್ಲರಹಟ್ಟಿಯವನು. ಎಸ್ ಎಸ್ ಎಲ್ ಸಿ ಓದಿದ್ದ ಇವನು, ಬೆಂಗಳೂರಿನ ಕೂಡ್ಲೂ ಗೇಟ್ ಬಳಿ ಬಾಡಿಗೆ ಮನೆ ಮಾಡಿಕೊಂಡು ಆಟೋ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ. ಈತನ ಮೇಲೆ ವಿವಿಧ ಠಾಣೆಗಳಲ್ಲಿ 6 ಪ್ರಕರಣಗಳು ದಾಖಲಾಗಿವೆ.
3) A3 ದರ್ಶನ್ (ವಯಸ್ಸು 20 ವರ್ಷ): ಮೂಲತಹ ದಾವಣಗೆರೆ ಜಿಲ್ಲೆಯ ಆದೋಡಿ ಗ್ರಾಮದವನು.. ಬಿಬಿಎ ಓದಿದ್ದ ಇವನು, ಬೆಂಗಳೂರಿನ ಕೂಡ್ಲೂ ಗೇಟ್ ಬಳಿ ಬಾಡಿಗೆ ಮನೆ ಮಾಡಿಕೊಂಡು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈತನ ಮೇಲೆ ವಿವಿಧ ಠಾಣೆಗಳಲ್ಲಿ 4 ಕೇಸ್ ದಾಖಲಾಗಿವೆ.
ಹೀಗೆ ಈ ಮೂವರು ಆರೋಪಿಗಳು ಬೆಂಗಳೂರಿನ ಕೂಡ್ಲೂ ಗೇಟ್ ಬಳಿ ಬಾಡಿಗೆ ಮನೆ ಮಾಡಿಕೊಂಡು ಒಂದೇ ರೂಮಿನಲ್ಲಿದ್ದುಕೊಂಡು ವಿವಿಧ ಕೆಲಸಗಳಿಗೆ ಹೋಗುತ್ತಾ.. ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಈ ಮೂವರು ಆರೋಪಿಗಳಿಗೆ ಸೌಭಾಗ್ಯ ಎಂಬಾಕೆ ಪರೋಕ್ಷವಾಗಿ ಸಾಥ್ ನೀಡುತ್ತಿದ್ದಳು ಎಂದು ತನಿಖೆ ವೇಳೆ ತಿಳಿದುಬಂದಿದೆ.
ದಾವಣಗೆರೆ, ಕೊಪ್ಪಳ, ತುಮಕೂರು ಸೇರಿದಂತೆ ಐದಾರು ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಇವರ ಮೇಲೆ ಪ್ರಕರಣಗಳು ದಾಖಲಾಗಿದ್ದರು. ಇವುಗಳಿಗೆ ಯಾವುದಕ್ಕೂ ಕ್ಯಾರೆ ಎನ್ನದೇ ತುಮಕೂರಿನಲ್ಲಿ ಕಳ್ಳತನ ಕೇಸ್ ನಲ್ಲಿ ಬಂಧನವಾಗಿ, ಜೈಲಿನಿಂದ ಬಿಡುಗಡೆಯಾದನಂತರ ಕಳ್ಳತನ ಮಾಡಿದ್ದ ಸುಮಾರು 12 ಲಕ್ಷ ಹಣವನ್ನು ಬರೀ ಮೋಜುಮಸ್ತಿಗೆ ಖರ್ಚು ಮಾಡಿದ್ದರು. ಹಣ ಖರ್ಚಾದ ಕೂಡಲೇ ದೊಡ್ಡಬಳ್ಳಾಪುರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ನಡೆದ ಘಟನೆ ವಿವರ
ಸೆ.16ರ ಮಧ್ಯರಾತ್ರಿ ದೊಡ್ಡಬಳ್ಳಾಪುರ ತಾಲೂಕಿನ ನಿಜಗಲ್ ಲೇಔಟ್, ನಂದಿನಿ ಲೇಔಟ್, ಟಿ.ಬಿ ನಾರಾಯಣಪ್ಪ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮನೆ ಕಳ್ಳತನಕ್ಕೆ ಇಳಿದಿದ್ದ ಈ ಖದೀಮರು, ಟಿ.ಬಿ ನಾರಾಯಣಪ್ಪ ಬಡಾವಣೆಯಲ್ಲಿರುವ ಬಾಡಿಗೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ಪತ್ತೆ ಹಚ್ಚಿ, ಆ ಮನೆಗೆ ಎಂಟ್ರಿ ಕೊಟ್ಟು ಸ್ಕ್ರೂ ಡ್ರೈವರ್ ನಿಂದ ಮನೆಗೆ ಅಳವಡಿಸಿದ್ದ ಲಾಕ್ ನ ಸ್ಕ್ರೂಗಳು ಉದುರಿಸಿ ಮನೆ ಒಳಗೆ ಹೋಗಿ ಮನೆಯಲ್ಲಿನ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ, ಕಬೋರ್ಡ್ ನ ಬೀಗವನ್ನು ಮುರಿದು ಒಳಗೆ ಇದ್ದ 32 ಗ್ರಾಂನ ನೆಕ್ಲೇಸ್, 15 ಗ್ರಾಂನ ಬ್ರಾಸ್ಲೈಟ್, 20 ಗ್ರಾಂನ 2 ಜೊತೆ ಜುಮುಕಿ, 1 ಗ್ರಾಂನ ತಾಳಿ, 11 ಗ್ರಾಂನ ಉಂಗುರ, 20 ಗ್ರಾಂನ ಫ್ಯಾನ್ಸಿ ಚೈನು, 10 ಗ್ರಾಂನ ಕತ್ತಿನ ಚೈನು, 4 ಗ್ರಾಂನ ಮಹಿಳೆಯ ಬ್ರಾಸ್ಲೈಟ್, ಬೆಳ್ಳಿಯ ಕಾಲು ಚೈನು ಒಂದು ಜೊತೆ, ಆಪಲ್ ಏರ್‌ಪಾಡ್ಸ್ (AirPods ವೈರ್‌ಲೆಸ್ ಬ್ಲೂಟೂತ್ ಇಯರ್‌ಬಡ್‌ಗಳು) ಸೇರಿದಂತೆ ಒಟ್ಟು 115 ಗ್ರಾಂ ಚಿನ್ನದ ಒಡವೆಗಳನ್ನು ಕದ್ದು ಪರಾರಿಯಾಗಿದ್ದರು.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು, ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಚಂದ್ರಕಲಾ ಹಾಗೂ ಸಿಬ್ಬಂದಿಯವರಾದ ಸುನಿಲ್ ಬಾಸಗಿ, ಫೈರೋಜ್ ಕೆ, ಪ್ರವೀಣ್, ಸಚಿನ್ ಉಪ್ಪಾರ್, ಹರೀಶ್ ತಂಡವು, ಸೆ.21ರ ಭಾನುವಾರದಂದು ದೊಡ್ಡಬಳ್ಳಾಪುರ ತಾಲೂಕಿನ ರೈಲ್ವೆ ನಿಲ್ದಾಣ ಸಮೀಪದ ಸ್ಕೌಟ್ ಕ್ಯಾಂಪ್ ಬಳಿ ಕಳ್ಳರ ಜಾಡನ್ನು ಪತ್ತೆ ಮಾಡಿ ಪುರುಷೋತ್ತಮ, ಚಂದ್ರು, ದರ್ಶನ್, ಸೌಭಾಗ್ಯ ಎಂಬ ಆರೋಪಿಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಖರ್ನಾಕ್ ಕಳ್ಳರು ಕಳ್ಳತನದಲ್ಲಿ ನಿಪುಣತೆ ಹೊಂದಿರುತ್ತಾರೆ. ಕಳ್ಳತನಕ್ಕೆ ಇಳಿಯುವುದಕ್ಕೂ ಮುನ್ನ ಟ್ರೈನಿನಲ್ಲಿ ಬರುತ್ತಾರೆ. ಟ್ರೈನ್ ಇಳಿಯುತ್ತಿದ್ದಂತೆ ಮೊಬೈಲ್ ಗಳನ್ನು ಇಂಟರ್ ನೆಟ್ ಬಳಸದೇ ಆಫ್ ಲೈನ್ ಗೆ ಹೋಗುತ್ತಾರೆ. ರೈಲಿನಿಂದ ಇಳಿದು ಸುಮಾರು ಮೂರಕ್ಕು ಹೆಚ್ಚು ಕಿಲೋ ಮೀಟರ್ ದೂರದಷ್ಟು ಟ್ರ್ಯಾಕ್ ನಲ್ಲೇ ನಡೆದುಕೊಂಡು ಹೋಗುತ್ತಾರೆ. ಕಳ್ಳತನ್ನಕ್ಕೆ ಸ್ಕೆಚ್ ಹಾಕುತ್ತಾರೆ. ಕಳ್ಳತನ ಮಾಡುವ ಮನೆಯ ಬಳಿ ಚಪ್ಪಲಿ ಹಾಕಿಕೊಂಡು ಹೋಗುವುದಿಲ್ಲ. ಅಮಾವಸ್ಯೆ ಹಿಂದಿನ ದಿನ ಹಾಗೂ ಮುಂದಿನ ದಿನದಂದು ಕಪ್ಪುಬಟ್ಟೆ ಧರಿಸಿ ಕಳ್ಳತನಕ್ಕೆ ಇಳಿಯುತ್ತಾರೆ. ಮನೆ ಕಳ್ಳತನದಲ್ಲಿ ಕೇವಲ ಚಿನ್ನ, ನಗದು ಮಾತ್ರ ಕದಿಯುತ್ತಾರೆ. ಬೆಳ್ಳಿ ಮುಟ್ಟುವುದಿಲ್ಲ.
ಇಬ್ಬರು ಆರೋಪಿಗಳು ತಮ್ಮ ಎದೆ ಭಾಗದಲ್ಲಿ “Teach The Peace” ಎಂಬ ಬರಹವಿರುವ ಟ್ಯಾಟೋವನ್ನು ಹಾಕಿಸಿಕೊಂಡಿರುತ್ತಾರೆ.
ಈ ಕಳ್ಳರ ಗ್ಯಾಂಗ್ ಗೆ ಪರೋಕ್ಷವಾಗಿ ಸಹಕರಿಸುತ್ತಿದ್ದ ಸೌಭಾಗ್ಯ ಎಂಬ ಯುವತಿಯನ್ನು ಕೂಡ ಬಂಧನ ಮಾಡಲಾಗುತ್ತದೆ. ಈ ಯುವತಿಯನ್ನು ವಶಕ್ಕೆ ಪಡೆದು ಸಾಂತ್ವಾನ ಕೇಂದ್ರದಲ್ಲಿ ಇರಿಸಲಾಗುತ್ತದೆ. ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಯುವತಿ ಅಲ್ಲಿಂದ ನಾಪತ್ತೆಯಾಗುತ್ತಾಳೆ. ನಾಪತ್ತೆಯಾದ ಯುವತಿ ಬೆಂಗಳೂರಿನಲ್ಲಿರುವ ಎಸ್ಪಿ ಆಫೀಸ್ ಬಳಿ ಪ್ರತ್ಯಕ್ಷವಾಗಿ ಪೊಲೀಸರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಎಸ್ಪಿ ಅವರಿಗೆ ದೂರು ಹೇಳುತ್ತಾಳೆ. ಪೊಲೀಸರ ತನಿಖೆ ವೇಳೆ ಒಡವೆಗಳೆಲ್ಲಾ ನಂದೇ ಎಂದು ಸುಳ್ಳು ಹೇಳಿ, ಕಳ್ಳತನಕ್ಕೂ ನನಗೂ ಸಂಬಂಧವಿಲ್ಲ ಎಂಬ ನಾಟಕವಾಡುತ್ತಾಳೆ. ಸೂಕ್ತ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಒಟ್ಟಿನಲ್ಲಿ…..ಪೊಲೀಸರು, ಜನರು, ನಾಯಿಗಳು, ಸಿಸಿಟಿವಿಗಳ ಭಯವಿಲ್ಲದೇ ಇದು ನಮ್ದೆ ಏರಿಯಾ, ಮನೆ ಎಂದು ಭಾವಿಸಿ ನಿಶಬ್ಧವಾದ ರಾತ್ರಿ ವೇಳೆ ಹಾದಿಬೀದಿಗಳಲ್ಲಿ ಈ ಸ್ಮಗ್ಲಿಂಗ್ ಗ್ಯಾಂಗ್ ಓಡಾಡಿ ಜನರ ನಿದ್ದೆಕಡೆಸಿದ್ದರು. ಚೋರರ ಸಂಚಾರದಿಂದ ಎಲ್ಲರಲ್ಲಿ ಸಂಚಲನ ಸೃಷ್ಟಿಸಿತ್ತು. ಮಹಿಳೆಯರು, ಮಕ್ಕಳು, ಹೆಣ್ಣು ಮಕ್ಕಳು, ವೃದ್ಧರು ಮನೆಯಿಂದ ಹೊರಬರುವುದಕ್ಕೂ ಹೆದರುತ್ತಿದ್ದರು. ಕಳ್ಳಕಾಕರಿಂದ ನಮಗೆ ರಕ್ಷಣೆ ಬೇಕೆಂದು ಪೊಲೀಸರ ಮೊರೆ ಹೋಗಿದ್ದರು. ಇದೀಗ ಪೊಲೀಸರು ಕಳ್ಳರ ಹೆಡೆಮುರಿ ಕಟ್ಟಿ ಜನರ ಭಯ ಹೋಗಿಸಿದ್ದಾರೆ. ಕಳ್ಳರ ಬಂಧನದಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಈ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ……
ಪ್ರತಿಭಟನೆ - ಮುಷ್ಕರ - ಮುತ್ತಿಗೆ - ಚಳವಳಿ - ಬಂದ್ - ಸತ್ಯಾಗ್ರಹ - ಹರತಾಳ - ಅಮರಣಾಂತ…
‘ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಅವರು ಕೇಳಿದ ಕೆಲಸ ಮಾಡಿಕೊಡಬೇಕು, ವಿಳಂಬ ಮಾಡಬೇಡಿ’ ಎಂದು ಇಂಧನ ಸಚಿವ ಹಾಗೂ ಸರ್ವಜ್ಞ ನಗರ…
ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದ ಗೋದಾಮುಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 18 ಲಕ್ಷ ಮೌಲ್ಯದ 1296…
ಹೊಂಗೆ ಮರದಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ತಲೆ ಬುರುಡೆ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬ್ಯಾಂಕ್ ಸರ್ಕಲ್…
ಸಿದ್ದಾಪುರ: ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗಿನ್ ಮಠ ಕ್ರಾಸ್ ಬಳಿ ಜಲ್ಲಿ ತುಂಬಿದ ಲಾರಿಯೊಂದು ರಸ್ತೆಗೆ ಉರುಳಿದ ಪರಿಣಾಮ,…
ದೇವರಹಿಪ್ಪರಗಿ: ಪತ್ನಿಯನ್ನು ತಾನೇ ಕೊಂ*ದು ಶವವನ್ನು ಮನೆಯ ಆವರಣದಲ್ಲೇ ಹೂತುಹಾಕಿ ಆಕೆ ನಾಪತ್ತೆಯಾಗಿದ್ದಾಳೆ ಎಂದು ಕಥೆ ಕಟ್ಟಿದ್ದ ಆರೋಪಿಯನ್ನು ಬಂಧಿಸುವಲ್ಲಿ…