Categories: ಲೇಖನ

ನಾವೆಲ್ಲಾ ಸತ್ಯದ ಹುಡುಕಾಟದ ಒಂದೇ ದೋಣಿಯ ಪಯಣಿಗರಾಗೋಣ…

ಸ್ವತಂತ್ರ ಚಿಂತನೆ…….

” ನಾನು ನನ್ನ ಇಲ್ಲಿಯವರೆಗಿನ ಅನುಭವದ ಆಧಾರದ ಮೇಲೆ ಅರ್ಥಮಾಡಿಕೊಂಡ ಸತ್ಯವನ್ನು ಹೇಳುತ್ತಿದ್ದೇನೆ. ಮುಂದೆ ನಿಮ್ಮ ಅನುಭವದಲ್ಲಿ ಇದಕ್ಕಿಂತ ಉತ್ತಮ ಸತ್ಯ ಅರ್ಥವಾದರೆ ಇದನ್ನು ತಿರಸ್ಕರಿಸಿ ನಿಮ್ಮ ಅನುಭವವನ್ನೇ ಸರಿ ಎಂದು ಸ್ವೀಕರಿಸಬಹುದು ”
……….ಗೌತಮ ಬುದ್ಧ…….

ಸಮೂಹ ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ಈ ಮಾತುಗಳು ಎಲ್ಲರೊಳಗೂ ಮೊಳಗಬೇಕಿದೆ. ಆದರೆ ಸತ್ಯ ಕಂಡುಕೊಳ್ಳಲು ಅನುಸರಿಸುವ ಮಾರ್ಗಗಳು, ಶ್ರಮ ಬಹಳ ಮುಖ್ಯವಾಗಬೇಕು.

ಬುದ್ದ ಐಹಿಕ ಸುಖ ಭೋಗಗಳನ್ನು ತ್ಯಜಿಸಿ ದೇಹ ಮತ್ತು ಮನಸ್ಸನ್ನು ದಂಡಿಸಿ ಪಡೆದ ಸತ್ಯಕ್ಕಿಂತ ಮಹತ್ವದ ಸತ್ಯ ಅರಿವಾಗಬೇಕಾದರೆ ನಾವು ಸಹ ಬುದ್ದತ್ವದೆಡಗೆ ಸಾಗಬೇಕಾಗುತ್ತದೆ. ಇಲ್ಲದಿದ್ದರೆ ಸುಳ್ಳಗಳೇ ಸತ್ಯವಾಗಬಹುದು ಮತ್ತು ಮುಖವಾಡಗಳು ಪ್ರಾಮುಖ್ಯತೆ ಪಡೆಯಬಹುದು.

ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಜನ ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಅದರಲ್ಲಿ ‌ಸಾಕಷ್ಟು ವೈವಿಧ್ಯತೆ ಇರುತ್ತದೆ.

ಕೆಲವರು ಯಾವುದೇ ಪಂಗಡಗಳಿಗೆ ಸೇರದೆ ತಮ್ಮ ಅರಿವಿನ ಮಿತಿಯಲ್ಲಿ ತಮ್ಮದೇ ಶೈಲಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇನ್ನೂ ಕೆಲವರು ಒಂದು ನಿರ್ದಿಷ್ಟ ವಿಭಾಗದ ಪರವಾಗಿ ತಮ್ಮ ನಿಲುವುಗಳನ್ನು ಪ್ರಕಟಿಸುತ್ತಾರೆ. ಮತ್ತೆ ಕೆಲವರು ಹಣ ಪಡೆದು ಏಜೆಂಟುಗಳ ರೂಪದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇವುಗಳ ನಡುವೆ ಸಿಲುಕಿದ ಜನರ ಮಾನಸಿಕ ಸ್ಥಿತಿ ಗೊಂದಲದ ಗೂಡಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನಾವು ನಮಗೆ ಅರ್ಥವಾದ ಸತ್ಯವನ್ನು ಹೇಳುವುದು ಸಹ ಕಷ್ಟವಾಗುತ್ತದೆ. ನ್ಯಾಯಾಲಯದಲ್ಲಿನ ಕಕ್ಷಿದಾರರ ಪರವಾದ ವಕೀಲರ ವಾದಗಳಂತೆ ಸಮರ್ಥನೆಗಳು ಮಾತ್ರ ಸತ್ಯಗಳಾಗುವ ಅಪಾಯಕಾರಿ ಪರಿಸ್ಥಿತಿಯಲ್ಲಿ ನಾವಿದ್ದೇವೆ.

ಹೇಗೆ ಹೇಳುವುದು ಸತ್ಯವನ್ನು ಇನ್ನೊಬ್ಬರಿಗೆ ನೋವಾಗದ ಹಾಗೆ,……..

ಹೇಗೆ ಹೇಳುವುದು ನಿಜವನ್ನು ಮತ್ತೊಬ್ಬರ ಭಾವನೆಗೆ ಧಕ್ಕೆ ಆಗದ ಹಾಗೆ,…..

ಹೇಗೆ ಹೇಳುವುದು ಸರಿ ಯಾವುದೆಂದು ಜನರಿಗೆ ಬೇಸರವಾಗದ ಹಾಗೆ,…..

ಹೇಗೆ ಹೇಳುವುದು ವಾಸ್ತವವನ್ನು ಎಲ್ಲರೂ ಮೆಚ್ಚುವ ಹಾಗೆ,……..

ಭಗವದ್ಗೀತೆಯನ್ನು ಮೆಚ್ಚಿದರೆ ಬ್ರಾಹ್ಮಣನೆನ್ನುವಿರಿ……

ಅಂಬೇಡ್ಕರ್ ಅವರನ್ನು ಪ್ರೀತಿಸಿದರೆ ದಲಿತನೆನ್ನುವಿರಿ……

ಬಸವಣ್ಣನವರನ್ನು ಅನುಸರಿಸಿದರೆ ಲಿಂಗಾಯಿತನೆನ್ನುವಿರಿ……

ಕೆಂಪೇಗೌಡರನ್ನು ಹೊಗಳಿದರೆ ಒಕ್ಕಲಿಗನೆನ್ನುವಿರಿ…….

ಕನಕದಾಸರನ್ನು ಹಾಡಿದರೆ ಕುರುಬನೆನ್ನುವಿರಿ……

ವಾಲ್ಮೀಕಿಯನ್ನು ನೆನಪಿಸಿಕೊಂಡರೆ ಬೇಡನೆನ್ನುವಿರಿ……

ವಿಶ್ವಕರ್ಮರನ್ನು ಜ್ಞಾಪಿಸಿಕೊಂಡರೆ ಆಚಾರಿ ಎನ್ನುವಿರಿ…..

ವಚನಕಾರ ಮಾಚಯ್ಯನನ್ನು ಕೊಂಡಾಡಿದರೆ ಮಡಿವಾಳನೆನ್ನುವಿರಿ…..

ಬುದ್ಧರನ್ನು ಅಳವಡಿಸಿಕೊಂಡರೆ ಬೌದ್ಧನೆನ್ನುವಿರಿ…….

ಮಹಾವೀರರನ್ನು ಇಷ್ಟಪಟ್ಟರೆ ಜೈನನೆನ್ನುವಿರಿ……

ಗುರುನಾನಾಕ್ ರನ್ನು ವೈಭವೀಕರಿಸಿದರೆ ಸಿಖ್ಖರೆನ್ನುವಿರಿ…..

ಯೇಸುಕ್ರಿಸ್ತರನ್ನು ಅರ್ಥಮಾಡಿಕೊಂಡರೆ ಕ್ರಿಶ್ಚಿಯನ್‌ ಎನ್ನುವಿರಿ……

ಪೈಗಂಬರ್ ಅವರನ್ನು ನಂಬಿದರೆ ಮುಸ್ಲಿಂಮನೆನ್ನುವಿರಿ….

ಉದ್ದನಾಮಕ್ಕೊಂದು ಜಾತಿ, ಅಡ್ಡನಾಮಕ್ಕೊಂದು ಜಾತಿ…..

ವಿಭೂತಿಗೊಂದು ಜಾತಿ, ಕುಂಕುಮಕ್ಕೊಂದು ಜಾತಿ….

ಕತ್ತಿನಸರಕ್ಕೊಂದು ಜಾತಿ, ಸೊಂಟದಸರಕ್ಕೊಂದು ಜಾತಿ…..

ತುಪ್ಪ ತಿಂದರೆ ಒಂದು ಜಾತಿ,
ಮಾಂಸ ತಿಂದರೆ ಇನ್ನೊಂದು ಜಾತಿ…..

ಎರಡೂ ಕೈ ಜೋಡಿಸಿ ಮುಗಿದರೆ ಒಂದು ಧರ್ಮ,
ಎದೆಯ ಮೇಲೆ ಕೈಯಿಟ್ಟರೆ ಇನ್ನೊಂದು ಧರ್ಮ…..

ಬಗ್ಗಿದರೆ ಒಂದು ಧರ್ಮ, ಮಲಗಿದರೆ ಇನ್ನೊಂದು ಧರ್ಮ……

ಹಸು ತಿಂದರೆ ಒಂದು ಧರ್ಮ,
ಹಂದಿ ತಿಂದರೆ ಇನ್ನೊಂದು ಧರ್ಮ……

ಸೆರಗು ಮುಚ್ಚಿಕೊಂಡರೆ ಒಂದು ಧರ್ಮ,
ಮುಖ ಮುಚ್ಚಿಕೊಂಡರೆ ಇನ್ನೊಂದು ಧರ್ಮ….

ಎಲ್ಲರ ದೇಹವೂ ರಕ್ತ, ಮೂಳೆ, ಮಾಂಸ, ಚರ್ಮದ ಹೊದಿಕೆ……

ನಮ್ಮ ಬದುಕೇ ಶಾಶ್ವತವಲ್ಲ ….

ಏಳಿ ಎದ್ದೇಳಿ – ಜಾತಿ – ಧರ್ಮ ಪಂಥಗಳಿಗೆ ಗುಲಾಮರಾಗದಿರಿ…..

ಸ್ವತಂತ್ರವಾಗಿ – ಕ್ರಿಯಾತ್ಮಕವಾಗಿ ಚಿಂತಿಸಿ,
ಎಲ್ಲರೂ ಮಹಾನ್ ನಾಯಕರಾಗದಿದ್ದರು ಕನಿಷ್ಠ
ಉತ್ತಮ ವ್ಯಕ್ತಿತ್ವದ ಮಾನವರಾದರೂ ಆಗಬಹುದು…..

ಆ ಸಾಮರ್ಥ್ಯ ಶಕ್ತಿ ನಿಮಗಿದೆ…….

ಸಣ್ಣತನ ಅಳಿಯಲಿ ವಿಶಾಲತೆ ಮನೋಭಾವ ಬೆಳೆಯಲಿ…..

ಕೆಡವುವ ಮನಸ್ಸಿಗಿಂತ ಕಟ್ಟುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ……

ನಿಮ್ಮ ಚಿಂತನಾ ಶಕ್ತಿಯನ್ನು ಮೇಲ್ದರ್ಜೆಗೆ ಏರಿಸಿಕೊಂಡಲ್ಲಿ,
ಜೀವನಮಟ್ಟವೂ ಸುಧಾರಿಸುತ್ತದೆ…..

ಸರಳವಾಗಿ, ಸಹಜವಾಗಿ ಬದುಕೋಣ, ಸೃಷ್ಟಿಗೆ ನಿಯತ್ತಾಗಿ…..

ಎಲ್ಲರೂ ಸಾಧ್ಯವಾದಷ್ಟು ವಿಷಯಗಳನ್ನು ಸಮಚಿತ್ತದಿಂದ, ವಿಶಾಲ ಮನೋಭಾವದಿಂದ, ಆತ್ಮಸಾಕ್ಷಿಗೆ ಅನುಗುಣವಾಗಿ ಚಿಂತಿಸಿ, ಅರ್ಥಮಾಡಿಕೊಂಡು ಪ್ರತಿಕ್ರಿಯಿಸಿದರೆ ಪರಿಸ್ಥಿತಿ ಸುಧಾರಿಸಬಹುದು….

ಹೇಗೆ ಹೇಳುವುದು ಸತ್ಯವನ್ನು ಇನ್ನೊಬ್ಬರಿಗೆ ನೋವಾಗದ ಹಾಗೆ,

ಹೇಗೆ ಹೇಳುವುದು ನಿಜವನ್ನು ಮತ್ತೊಬ್ಬರ ಭಾವನೆಗೆ ಧಕ್ಕೆ ಆಗದ ಹಾಗೆ,

ಹೇಗೆ ಹೇಳುವುದು ಸರಿ ಯಾವುದೆಂದು ಜನರಿಗೆ ಬೇಸರವಾಗದ ಹಾಗೆ,

ಹೇಗೆ ಹೇಳುವುದು ವಾಸ್ತವವನ್ನು ಎಲ್ಲರೂ ಮೆಚ್ಚುವ ಹಾಗೆ,……..

ಹಾಗೆ ಹೇಳಿದರೆ ಆ ಜಾತಿಯವರಿಗೆ ಕೋಪ,
ಹೀಗೆ ಹೇಳಿದರೆ ಈ ಜಾತಿಯವರಿಗೆ ಕೋಪ,

ಒಂದು ಹೇಳಿದರೆ ಆ ಧರ್ಮದವರಿಗೆ ಅಸಮಾಧಾನ,
ಇನ್ನೊಂದು ಹೇಳಿದರೆ ಈ ಧರ್ಮದವರಿಗೆ ಅಸಮಾಧಾನ,

ಅದು ಹೇಳಿದರೆ ಆ ಪಕ್ಷದವರಿಗೆ ಆಕ್ರೋಶ,
ಇದು ಹೇಳಿದರೆ ಈ ಪಕ್ಷದವರಿಗೆ ಆಕ್ರೋಶ,

ಸಭ್ಯವಾಗಿ ಹೇಳಿದರೆ ಹೇಡಿ ಎನ್ನುವಿರಿ,
ಅಸಭ್ಯವಾಗಿ ಹೇಳಿದರೆ ಕಚಡಾ ಎನ್ನುವಿರಿ,

ವಿನಯದಿಂದ ಹೇಳಿದರೆ ಕೇಳುವುದಿಲ್ಲ,
ಅಹಂಕಾರದಿಂದ ಹೇಳಿದರೆ ಒಪ್ಪುವುದಿಲ್ಲ,

ನಿಜ ಹೇಳಿದರೆ ಮೆಚ್ಚುವುದಿಲ್ಲ,
ಸುಳ್ಳು ಹೇಳಿದರೆ ಇಷ್ಟಪಡುವುದಿಲ್ಲ,

ಸುಮ್ಮನಿದ್ದರೆ ನಿಷ್ಪ್ರಯೋಜಕನೆನ್ನುವಿರಿ,
ಮಾತನಾಡಿದರೆ ಅಪಾಯಕಾರಿ ಎನ್ನುವಿರಿ,

ಹಾಗೆ ಹೇಳಿದರೆ ಬ್ಲಾಕ್ ಮಾಡುವಿರಿ,
ಹೀಗೆ ಹೇಳಿದರೆ ಸ್ವಾಗತ ಕೋರುವಿರಿ,

ಆದರೂ,
ಎಲ್ಲರನ್ನೂ ಮೆಚ್ಚಿಸುವಂತೆ,
ಎಲ್ಲರೂ ಇಷ್ಟಪಡುವ೦ತೆ ಹೇಳಬಹುದು,
ಯಾರಿಗೂ ನೋವಾಗದಂತೆ, ಬೇಸರವಾಗದಂತೆ, ಕೋಪಬರದಂತೆ ಹೇಳಬಹುದು,

ಹೇಗೆ ಗೊತ್ತೆ,
ಸತ್ಯದ ಸಮಾಧಿಯ ಮೇಲೆ ನಿಂತು,

ಏಕೆಂದರೆ,
ಕೆಲವೊಮ್ಮೆ ನಮ್ಮ ಮೂಗಿನ ನೇರಕ್ಕೆ ನೋಡಿದಾಗ,
ಆಕಾಶ ಕೆಳಗೂ,
ಭೂಮಿ ಮೇಲಕ್ಕೂ ಕಾಣುತ್ತದೆ,

ಹಾಗೆಯೇ,

ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಾ……..

ಸತ್ಯದ ಹುಡುಕಾಟದಲ್ಲಿಯೂ ಮನಸ್ಸು ಮಲಿನವಾಗುತ್ತಾ ಸಾಗುತ್ತದೆ……..

ನಾವೇ ಬುದ್ದಿವಂತರೆಂಬ ಭ್ರಮೆ ಹುಟ್ಟಿಕೊಳ್ಳಲಾರಂಭಿಸುತ್ತದೆ….

ಹೀಗೆ ಮಾತನಾಡಿದರೆ ನಮಗೆ ಮೆಚ್ವುಗೆ ಸಿಗುತ್ತದೆ ಎಂದು ಅರ್ಥವಾಗತೊಡಗುತ್ತದೆ…….

ಹಾಗೆ ಮಾತನಾಡಿದರೆ ನಮಗೆ ವಿರೋಧ ವ್ಯಕ್ತವಾಗುತ್ತದೆ ಎಂದೂ ಅರಿವಾಗತೊಡಗುತ್ತದೆ…….

ಬೇರೆಯವರನ್ನು ಹೇಗೆ ಮೆಚ್ಚಿಸಬೇಕು,
ಬೇರೆಯವರನ್ನು ಹೇಗೆ ಉದ್ರೇಕಿಸಬೇಕು,
ಬೇರೆಯವರನ್ನು ಹೇಗೆ ಘಾಸಿಗೊಳಿಸಬೇಕು,
ಬೇರೆಯವರನ್ನು ಹೇಗೆ ಅವಮಾನಿಸಬೇಕು,
ಬೇರೆಯವರನ್ನು ಹೇಗೆ ನಿರ್ಲಕ್ಷಿಸಬೇಕು,
ಬೇರೆಯವರನ್ನು ಹೇಗೆ ಕೆಟ್ಟವರನ್ನಾಗಿ ಮಾಡಬೇಕು,
ಬೇರೆಯವರನ್ನು ಹೇಗೆ ಟಾರ್ಗೆಟ್ ಮಾಡಬೇಕು,
ಎಂದೂ ಸ್ಪಷ್ಟವಾಗುತ್ತಾ ಹೋಗುತ್ತದೆ……

ಹಾಗೆಯೇ,…

ನಾವು ಹೇಗೆ ಬುದ್ದಿವಂತರೆನಿಸಿಕೊಳ್ಳಬೇಕು,
ನಾವು ಹೇಗೆ ಒಳ್ಳೆಯವರೆನಿಸಿಕೊಳ್ಳಬೇಕು,
ನಾವು ಹೇಗೆ ಜನಪ್ರಿಯರಾಗಬೇಕು,
ನಾವು ಹೇಗೆ ಹಣವಂತರಾಗಬೇಕು,
ನಾವು ಹೇಗೆ ಅಧಿಕಾರಕ್ಕೇರಬೇಕು,
ನಾವು ಹೇಗೆ ಪ್ರಚಾರ ಪಡೆಯಬೇಕು,
ನಾವು ಹೇಗೆ ದೊಡ್ಡವರೆನಿಸಬೇಕು,
ನಾವು ಹೇಗೆ ಪ್ರಶಸ್ತಿ ಪಡೆಯಬೇಕು,
ನಾವು ಹೇಗೆ ಸನ್ಮಾನಿಸಿಕೊಳ್ಳಬೇಕು ,
ಎಂಬುದೂ ಗೊತ್ತಾಗತೊಡಗುತ್ತದೆ…….

ಈ ಮಧ್ಯೆ ಸತ್ಯದ ಹುಡುಕಾಟ ದಾರಿ ತಪ್ಪುತ್ತದೆ……..

ಆದರೆ ಇವೆಲ್ಲವನ್ನೂ ಮೀರಿ,
ಸ್ವಾರ್ಥವನ್ನು ಗೆದ್ದು,
ವಿಶಾಲ ಮನೋಭಾವದಿಂದ ಮನಸ್ಸನ್ನು ನಿಯಂತ್ರಣಕ್ಕೆ ಪಡೆದುಕೊಂಡು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದಾಗ ಮಾತ್ರ ನಾವು ಸತ್ಯದ ಹತ್ತಿರಕ್ಕೆ ಹೋಗಬಹುದು……

ಇದಕ್ಕಾಗಿ ಮತ್ತೊಮ್ಮೆ ಮಗುವಿನ ಮುಗ್ಧತೆ, ಕುತೂಹಲ ಬೆಳೆಸಿಕೊಳ್ಳಬೇಕು……

ಆತ್ಮ ವಂಚನೆ ಮಾಡಿಕೊಂಡು ಅಲ್ಲಿಯೇ ಕಳೆದುಹೋಗಬಾರದು……

ನಾವೆಲ್ಲಾ ಸತ್ಯದ ಹುಡುಕಾಟದ ಒಂದೇ ದೋಣಿಯ ಪಯಣಿಗರಾಗೋಣ.
ಆ ನಿರೀಕ್ಷೆಯಲ್ಲಿ ………………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಅಗಸ್ತ್ಯ ಅಂತರರಾಷ್ಟ್ರೀಯ ಸಂಸ್ಥೆ ವತಿಯಿಂದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ: ವಿಜೇತರಿಗೆ ಬಹುಮಾನ ವಿತರಣೆ

ಫೆ.24ರಂದು ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ಅಗಸ್ತ್ಯ ಅಂತರರಾಷ್ಟ್ರೀಯ ಸಂಸ್ಥೆಯ ವತಿಯಿಂದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ…

36 minutes ago

ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ: ಚಿಕಿ*ತ್ಸೆ ಫಲಕಾರಿಯಾಗದೆ ಸಾವು: ಪ್ರತಿಭಟನೆ ಮತ್ತು ಪ್ರಕರಣ ದಾಖಲು

ಹಾಸನ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯೊಬ್ಬರು ಚಿಕಿ*ತ್ಸೆ ಫಲಕಾರಿಯಾಗದೆ ಮೃ*ಪಟ್ಟ ಘಟನೆ ಹಾಸನ ನಗರದ ಹಿಮ್ಸ್ (HIMS) ಆಸ್ಪತ್ರೆಯಲ್ಲಿ ನಡೆದಿದೆ.…

12 hours ago

ತೂಬಗೆರೆಯ ದೊಡ್ಡಮ್ಮ ದೇವಾಲಯದಲ್ಲಿ ಕಳ್ಳತನ: ಹುಂಡಿ, ತಾಳಿ, ಆಭರಣ ಕಳವು

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮದ ದೊಡ್ಡಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮಂಗಳವಾರ ಬೆಳಿಗ್ಗೆ ದೇವಾಲಯದ ಬಾಗಿಲಿನ ಬೀಗ…

13 hours ago

ಸಂಬಳಕ್ಕಾಗಿ ಕಾರ್ಮಿಕರಿಂದ ಕಾರ್ಖಾನೆ ಮುಂದೆ ಪ್ರತಿಭಟನೆ

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆ(ಶೈಲೇಂದ್ರ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್)ಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ…

14 hours ago

ನೆಲಮಂಗಲ ನಗರಸಭೆಯ ಏಳು ಸದಸ್ಯರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಎಬಿ ಬಸವರಾಜು ಆದೇಶ

ಕರ್ನಾಟಕ ಸ್ಥಳೀಯ ಸಂಸ್ಥೆಗಳ(ಪಕ್ಷಾಂತರ ನಿಷೇಧ) ಅಧಿನಿಯಮ 4(2)(|||) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ನೆಲಮಂಗಲ ನಗರಸಭೆಯ ಏಳು ಸದಸ್ಯರನ್ನು ಅನರ್ಹಗೊಳಿಸಿ…

16 hours ago

ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯ ಹತ್ಯೆ

ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದೆ. ನನ್ನ ಮೊಮ್ಮಗ ಯಾರ ತಂಟೆಗೂ…

23 hours ago