
ಬೆಂಗಳೂರು ಗ್ರಾಮಾಂತರ: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ತೀವ್ರವಾಗಿರುವ ನಡುವೆಯೇ, ಶಾಸಕ ಬೇಳೂರು ಗೋಪಾಲಕೃಷ್ಣ ಮಹತ್ವದ ಹೇಳಿಕೆ ನೀಡಿದ್ದಾರೆ.
ದೇವನಹಳ್ಳಿ ಏರ್‌ಪೋರ್ಟ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ಬಳಿಕವೇ ಮುಖ್ಯಮಂತ್ರಿ ಕುರಿತ ಅಂತಿಮ ತೀರ್ಮಾನ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.
“ಭಾನುವಾರ ಸಿಎಲ್‌ಪಿ ಸಭೆ ನಡೆಯಲಿದ್ದು, ಹೈಕಮಾಂಡ್ ಸೂಚನೆಯಂತೆ ಮುಂದಿನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸೋಮವಾರ ಅಥವಾ ಬುಧವಾರ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ,” ಎಂದು ಹೇಳಿದರು.
ಇದೇ ವೇಳೆ ಸಚಿವ ಸಂಪುಟ ರಚನೆ ಕುರಿತೂ ಪ್ರತಿಕ್ರಿಯೆ ನೀಡಿದ ಅವರು, “ಮುಖ್ಯಮಂತ್ರಿ ಆಯ್ಕೆಯಾದ ನಂತರ ಸಚಿವ ಸಂಪುಟದ ಕುರಿತು ತೀರ್ಮಾನವಾಗುತ್ತದೆ. ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಯಾರಿಗೆ ಯಾವ ಖಾತೆ ಅಥವಾ ಸಚಿವ ಸ್ಥಾನ ಸಿಗಲಿದೆ ಎಂಬುದನ್ನು ಕಾದು ನೋಡಬೇಕು,” ಎಂದು ತಿಳಿಸಿದ್ದಾರೆ.
ರಾಜ್ಯ ರಾಜಕೀಯ ಬೆಳವಣಿಗೆಗಳ ನಡುವೆಯೇ ಬೇಳೂರು ಗೋಪಾಲಕೃಷ್ಣ ಅವರ ಈ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.