ದೊಡ್ಡಬಳ್ಳಾಪುರ ಸಮಗ್ರ ಅಭಿವೃದ್ಧಿಗೆ ಸಿಎಂ‌ ಸಿದ್ದರಾಮಯ್ಯಗೆ ಮನವಿ ಪತ್ರ ಸಲ್ಲಿಸಿದ ಶಾಸಕ‌ ಧೀರಜ್ ಮುನಿರಾಜ್: ಮನವಿ ಪತ್ರದಲ್ಲೇನಿದೆ….?

ಕಳೆದ ಎರಡು ವರ್ಷಗಳಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಮಂಜೂರು ಮಾಡಬೇಕೆಂದು ಸದನದಲ್ಲಿ ಪ್ರಸ್ತಾಪಿಸಿದ ಹಲವು ದಾಖಲೆಗಳನ್ನು ಹಾಗೂ ಲಿಖಿತ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿ ಆದ್ಯತೆಯ ಮೇರೆಗೆ ಈ ಮನವಿಯನ್ನು ಪರಿಗಣಿಸಿ ಕ್ಷಿಪ್ರವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಸ್ಪಂದಿಸಬೇಕೆಂದು ಶಾಸಕ ಧೀರಜ್‌ ಮುನಿರಾಜ್ ಮನವಿ ಮಾಡಿದರು.

ಭಾನುವಾರ ದೇವನಹಳ್ಳಿ ತಾಲೂಕು ಭೈರದೇನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾಪಂಚಾತ್ ವತಿಯಿಂದ ನಡೆದ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶಕ್ಕೆ ಬಂದಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.

ಕಳೆದ ಎರಡು ವರ್ಷಗಳಲ್ಲಿ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರಕ್ಕೆ 2024-25 ಬಜೆಟ್ ನಲ್ಲಿ ದೊಡ್ಡಬಳ್ಳಾಪುರರವನ್ನು ‘ಸ್ಯಾಟಲೈಟ್ ಟೌನ್’ ಆಗಿ ಪರಿವರ್ತಿಸುವುದಾಗಿ ಘೋಷಣೆಯಾಗಿತ್ತು. 2025-26ರ ಬಜೆಟ್ ನಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣವು ಮಂಜೂರಾಗಿತ್ತು.

ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಕ್ರೀಡಾಂಗಣ ಮಂಜೂರಾಗಿದ್ದರೂ ಸಹ ಇದುವರೆಗೂ ಸರ್ಕಾರದಿಂದ ಅನುದಾನ ನೀಡಿರುವುದಿಲ್ಲ. ದಯವಿಟ್ಟು ಬಜೆಟ್ ನಲ್ಲಿ ಘೋಷಣೆಯಾದಂತ ಸ್ಮಾಟಲೈಟ್ ನಗರ ಹಾಗೂ ಇತರೆ ಯೋಜನೆಗಳನ್ನು ಕಾರ್ಯಗತಗೊಳಿಸಲು ಸೂಕ್ತ ಅನುದಾನವನ್ನು ಮೀಸಲಿಟ್ಟು ಕಾಮಗಾರಿಗಳನ್ನು ಪ್ರಾರಂಭಿಸಬೇಕೆಂದು ಸಿಎಂ ಸಿದ್ದರಾಮಯ್ಯನವರಿಗೆ ಶಾಸಕ ಧೀರಜ್ ಮುನಿರಾಜ್ ಮನವಿ ಮಾಡಿದರು.

ಜಿಲ್ಲಾ ಕ್ರೀಡಾಂಗಣಕ್ಕೆ ಅನುದಾನ ನೀಡುವ ಮೂಲಕ ಅತಿ ಶೀಘ್ರದಲ್ಲಿ ಕಾಮಗಾರಿಯನ್ನು ಪೂರೈಸಿ ಸಾಧನ ಸಮಾವೇಶದಂತಹ ಸರ್ಕಾರಿ ಕಾರ್ಯಕ್ರಮಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲೇ ಮಾಡಬೇಕೆಂದು ಪ್ರಾರ್ಥಿಸಿದರು.

ಮೂಲಭೂತವಾಗಿ ಅತಿ ಜರೂರಾಗಿ ಆಗಬೇಕಾಗಿರುವ ಕಾಮಗಾರಿಗಳು ಈ ಕೆಳಕಂಡಂತಿದೆ.

ಜಿಲ್ಲಾಸ್ಪತ್ರೆ

ಜಿಲ್ಲಾಸ್ಪತ್ರೆಯ ಶಂಕುಸ್ಥಾಪನೆ ಆಗಿದೆ ನಂತರ ಇದುವರೆಗೂ ಕಾಮಗಾರಿ ಪ್ರಾರಂಭಗೊಂಡಿಲ್ಲ. ಜಿಲ್ಲಾಸ್ಪತ್ರೆಯ ಶಂಕುಸ್ಥಾಪನೆ ಮುಖ್ಯ ಮಂತ್ರಿಗಳ ಅಮೃತ ಹಸ್ತದಿಂದ ನೆರವೇರಿದರೂ ಸಹ ಇದುವರೆಗೂ ಕಾಮಗಾರಿ ಪ್ರಾರಂಭಗೊಂಡಿಲ್ಲ. ಸಾಧನಾ ಸಮಾವೇಶದ ರೂವಾರಿಗಳಾದ ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಗೆ ಭೇಟಿ ನೀಡಿ ‘ಗ್ಯಾರಂಟಿ ಸಮಾವೇಶದಲ್ಲಿ’ ದಿನಾಂಕ 11.03.2024 ರಲ್ಲಿ ಪಾಲ್ಗೊಂಡಾಗ ಆರೋಗ್ಯ ಇಲಾಖೆಯ ವತಿಯಿಂದ 167 ಕೋಟಿ ವೆಚ್ಚದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದ್ದಷ್ಟೇ. ಇದುವರೆಗೂ ಈ ಯೋಜನೆ ಶುರುವಾಗಿಲ್ಲ. ಜನರಿಗೆ ಉತ್ತಮ ಆರೋಗ್ಯ ಹಾಗೂ ಸೇವೆ ನೀಡುವ ನಿಟ್ಟಿನಲ್ಲಿ ಈ ಆಸ್ಪತ್ರೆಯು ಪೂರಕವಾಗುವುದರಿಂದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಅನುದಾನ ನೀಡಬೇಕೆಂದು ಮನವಿ ಮಾಡಿದರು.

ಟ್ರಾಮಾ ಕೇರ್ ಸೆಂಟರ್

ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುವ ಕಾರಣ ಅಫಘಾತ ಆದವರಿಗೆ ತುರ್ತಾಗಿ ಚಿಕಿತ್ಸೆ ನೀಡುವ ಸಲುವಾಗ ‘ಟ್ರಾಮಾ ಕೇರ್ ಸೆಂಟರ್’ ಅನ್ನು ಪ್ರಾರಂಭಿಸಲು ಇದ್ದ ಪ್ರಸ್ತಾವನೆಯು ಕಾರ್ಯಗತಗೊಂಡಿಲ್ಲ. ಈ ಕುರಿತು ಸದನದಲ್ಲಿ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಟ್ರಾಮಾ ಕೇರ್ ಸೆಂಟರ್ ಅನ್ನು ಮಂಜೂರು ಮಾಡುವುದರಿಂದ ಅಫಘಾತಕ್ಕೆ ಈಡಾದವರ ಪ್ರಾಣವನ್ನು ರಕ್ಷಿಸಬಹುದು.

ದೊಡ್ಡಬಳ್ಳಾಪುರಕ್ಕೆ ಕಾವೇರಿ ನೀರನ್ನು ನೀಡುವ ಕುರಿತು

ಅತ್ಯಂತ ವೇಗವಾಗಿ ಬೆಳೆಯುತ್ತಿರುವ, ಜನಸಂಖ್ಯೆ ಹೆಚ್ಚಾಗಿರುವ ದೊಡ್ಡಬಳ್ಳಾಪುರಕ್ಕೆ ಅಲ್ಪ ಪ್ರಮಾಣದ ನೀರು ಸಾಲುವುದಿಲ್ಲ. ದೊಡ್ಡಬಳ್ಳಾಪುರ ನಗರಸಭಾ ವ್ಯಾಪ್ತಿಯಲ್ಲಿ ನೀರಿನ ಬವಣೆ ನೀಗಿಸಲು ಕಾವೇರಿ ನೀರನ್ನು ನೀಡುವುದು ಅತ್ಯಗತ್ಯವಾಗಿದೆ. ದೊಡ್ಡಬಳ್ಳಾಪುರ ನಗರಸಭಾ ವ್ಯಾಪ್ತಿಯಲ್ಲಿ ಜನ ಸಂಖ್ಯೆ 150000 ಹೊಂದಿದ್ದು, ಪ್ರಸ್ತುತ ಜಕ್ಕಲಮಡಗು ಜಲಾಶಯದಿಂದ ಕೇವಲ 33 % ರಷ್ಟು ನೀರು ಸಿಗುತ್ತಿದೆ. ಈ ನೀರು ಎಂಟು ದಿನಗಳಿಗೆ ಒಮ್ಮೆ ಸಾರ್ವಜನಿಕರಿಗೆ ಪೂರೈಕೆ ಆಗುತ್ತಿದ್ದು, ಕುಡಿಯುವ ನೀರಿಗೆ ತೀವ್ರ ತತ್ವಾರ ಉಂಟಾಗಿದೆ. ಆದ ಕಾರಣ ನಮ್ಮ ತಾಲೂಕಿನ ನೀರಿನ ಬವಣೆಯನ್ನು ನೀಗಿಸಲು ತುರ್ತಾಗಿ ಕಾವೇರಿ ನೀರನ್ನು ಕೊಡಬೇಕಾಗಿ ಮನವಿ ಮಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ತಾಲೂಕುಗಳಿಗೆ ಕಾವೇರಿ ಆರನೇ ಹಂತದಲ್ಲಿ ಕುಡಿಯುವ ನೀರು ಯೋಜನೆ ಮಂಜೂರಾಗಿದೆ, ಆದರೆ ದೊಡ್ಡಬಳ್ಳಾಪುರಕ್ಕೆ ಕಾವೇರಿ ನೀರು ನೀಡಬೇಕೆಂದು ಸದನದಲ್ಲಿ ಆಗ್ರಹಿಸಿದರೂ ಸಹ ಕಾವೇರಿ ನೀರು ಕೊಡಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಮುಂದುವರಿದು, ಮಜರ ಹೊಸಹಳ್ಳಿ ಹಾಗೂ ದೊಡ್ಡ ತುಮಕೂರು ಪಂಚಾಯತಿಗಳಿಗೆ ಕಾವೇರಿ ನೀರು ಬಾರದ ಕಾರಣ ಈ ಪಂಚಾಯ್ತಿಯ ವ್ಯಾಪ್ತಿಗೆ ಬರುವ ಗ್ರಾಮಸ್ಥರು ಕೊಳವೆ ಬಾವಿಗೆ ಮೊರೆ ಹೋಗಿದ್ದಾರೆ. ಕೈಗಾರಿಕಾ ತ್ಯಾಜ್ಯ ಸೇರಿದಂತೆ ಸಂಸ್ಕರಿಸದ ಒಳಚರಂಡಿ ನೀರಿನಿಂದ ಅಂತರ್ಜಲ ಕಲುಷಿತಗೊಂಡಿರುವ ಕಾರಣ ಕೊಳವೆ ಬಾವಿಯ ನೀರು ಬಳಸಲು ಯೋಗ್ಯವಾಗಿರುವುದಿಲ್ಲ. ಆದ ಕಾರಣ, ಸದರಿ ಪಂಚಾಯ್ತಿಗಳಿಗೆ ಕಾವೇರಿ ನಾಲ್ಕನೇ ಹಂತದ ಯೋಜನೆಯಲ್ಲೇ ತುರ್ತಾಗಿ ಕುಡಿಯುವ ನೀರು ಒದಗಿಸಿಕೊಟ್ಟು ಈ ಭಾಗದ ಜನರ ನೀರಿನ ಬವಣೆಯನ್ನು ನೀಗಿಸಬೇಕೆಂದು ಮನವಿ ಮಾಡಿದರು.

ತಾಲೂಕಿನ ನೀರಿನ ಬವಣೆಯನ್ನು ನೀಗಿಸಲು ಮಂಜೂರಿಸಿದ 10 ಕೋಟಿ 11 ಲಕ್ಷ ಪೈಪ್ ಲೈನ್ ಯೋಜನೆಯು ಪ್ರಾರಂಭಗೊಳ್ಳದೆ ಇರುವುದು ಜನರನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ. ನಿಗದಿ ಮಾಡಿದ ಕಾಲಮಿತಿಯಲ್ಲಿ ಯೋಜನೆಯನ್ನು ಮುಗಿಸಿ ದೊಡ್ಡಬಳ್ಳಾಪುರದ ನಾಗರೀಕರ ನೀರಿನ ಬವಣೆಯನ್ನು ನೀಗಿಸಬೇಕಾಗಿದ್ದ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.

ಅಂತರ್ಜಲ ಕಲುಷಿತ

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೈಗಾರಿಕಾ ತ್ಯಾಜ್ಯ ಹಾಗೂ ಕೊಳಚೆ ನೀರಿನ ಅಸಮರ್ಪಕ ನಿರ್ವಹಣೆಯಿಂದ ಅಂತರ್ಜಲ ಕಲುಷಿತವಾಗಿದೆ. ಅಧಿವೇಶನದಲ್ಲಿ ಈ ಸಮಸ್ಯೆಯನ್ನು ಪ್ರಸ್ತಾಪಿಸಿದರೂ ಸಹ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೆರೆಗಳಿಗೆ ಸಂಸ್ಕರಿಸದ ಒಳಚರಂಡಿ ನೀರು ಹಾಗೂ ಕೈಗಾರಿಕಾ ತ್ಯಾಜ್ಯವನ್ನು ಬಿಟ್ಟು ಕಲುಷಿತಗೊಳಿಸಿದ್ದಕ್ಕೆ ರಾಷ್ಟ್ರೀಯ ಹಸಿರು ಮಂಡಳಿಯು (NGT) ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಛೀಮಾರಿ ಹಾಕಿದ್ದರೂ ಸಹ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ದೊಡ್ಡಬಳ್ಳಾಪುರ ನಗರಕ್ಕೆ STP ಹಾಗೂ UGD ಒದಗಿಸಲು ಈಗಾಗಲೇ ಡಿಎಫ್ ಮಾಡಲಾಗಿದೆ, ಯೋಜನೆ ಅನುಷ್ಠಾನ ಗೊಳಿಸಲು ಕಳೆದ ಎರಡು ವರ್ಷಗಳಲ್ಲಿ ಸರ್ಕಾರ ಬಿಡಿಗಾಸನ್ನು ನೀಡಿಲ್ಲ.

ಒಳಚರಂಡಿ

ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು ಮೂಲಭೂತ ಸೌಕರ್ಯವಾಗಿದ್ದು, ಇದು ಅತ್ಯಾವಶ್ಯಕವಾಗಿರುವುದರಿಂದ, ದೊಡ್ಡಬಳಾಪುರ ನಗರ ಸಭೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಈ ಕೂಡಲೇ ತಾವು ಅನುದಾನ ಮೀಸಲಿಟ್ಟು ಆದೇಶ ಹೊರಡಿಸಬೇಕೆಂದು ಕೋರಿದರು.

ದೊಡ್ಡಬಳ್ಳಾಪುರಕ್ಕೆ ಕಸದ ಕಂಟಕ

ಹಿಂದಿನ ಅವಧಿಯಲ್ಲಿ (2015) ಟೆರ್ರಾ ಫಾರಂ ಎಂಬ ಕಸ ವಿಲೇವಾರಿ ಘಟಕವನ್ನು ಮುಚ್ಚಲಾಗಿತ್ತು. ಆದರೆ, ಸದರಿ ಘಟಕವನ್ನು ಪುನರಾರಂಭಿಸುವ ಕುರಿತಾಗಿ ಪ್ರಸ್ತಾವನೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ ಹಾಗೂ ಘಟಕವನ್ನು ಪುನರಾರಂಭಿಸಲು ಸಂಪುಟದಲ್ಲೂ ಚರ್ಚೆಯಾಗಿದೆ ಎಂದು ತಿಳಿದು ಬಂದಿದೆ. ಉಚ್ಚ ನ್ಯಾಯಾಲಯದ ತೀರ್ಪಿನನ್ವಯ ಹಾಗೂ ಕಳೆದ ಬಾರಿ ತಾವೇ ಮುಚ್ಚಿಸಿದಂತ ಟೆರ್ರಾ ಫಾರಂ ಕಸದ ಘಟಕವನ್ನು ಯಾವುದೇ ಕಾರಣಕ್ಕೂ ಪುನರಾರಂಭ ಮಾಡಬಾರದು ಎಂದು ವಿನಂತಿಸಿದರು. ಒಂದು ವೇಳೆ ಘಟಕವನ್ನು ಪುನರಾರಂಭ ಮಾಡಿದ್ದಲ್ಲಿ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಂ.ಎಸ್.ಜಿ.ಪಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೆಚ್ಚುವರಿ ಕಸ ಹಾಕಬಾರದು ಎಂದು ನೋಟಿಸ್ ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಬಿಎಂಪಿಯ ಎಲ್ಲ 7 ಘಟಕಗಳೂ ಪಾರದರ್ಶಕವಾಗಿ ಟೆಂಡರ್ ಮೂಲಕ ಆಯ್ಕೆಯಾಗಿ ಸರ್ಕಾರದ ಸ್ವಾಮ್ಯದ್ದಾಗಿದ್ದರೆ, ಕೇವಲ ಎಂ.ಎಸ್.ಜಿ.ಪಿ ಮಾತ್ರ ಖಾಸಗಿ ಒಡೆತನದ್ದಾಗಿದೆ. ಈ ಎಂ.ಎಸ್.ಜಿ.ಪಿ ಘಟಕವು ಖಾಸಗಿ ಒಡೆತನದ್ದಾಗಿದ್ದರಿಂದ ಬಹಳಷ್ಟು ಅವ್ಯವಹಾರಗಳು ನಡೆಯುತ್ತಿದೆ ಎಂಬ ಅಪಾದನೆಗಳಿವೆ. ಸದರಿ ಘಟಕವು ಅವೈಜ್ಞಾನಿಕವಾಗಿ ಕಾರ್ಯನಿರ್ವಹಿಸುತ್ತಿದ್ದು ಹಾಗೂ ಪ್ರಮಾಣಿತ ಕಾರ್ಯಾಚರಣಾ ವಿಧಾನದ (ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಉಲ್ಲಂಘನೆಯಿಂದ ವಾಯು ಹಾಗೂ ಜಲ ಮಾಲಿನ್ಯವಾಗುತ್ತಿದೆ. ಸದರಿ ತ್ಯಾಜ್ಯ ವಿಲೇವಾರಿ ಘಟಕವು ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾರ್ಯ ನಿರ್ವಹಿಸುತ್ತಿದೆ.

2004 ರಿಂದ ಸೂರಿಲ್ಲ

2004 ರಿಂದ ಒಂದು ಮನೆಯನ್ನೂ ವಸತಿರಹಿತರಿಗೆ ನೀಡದ ಸರ್ಕಾರ ದೊಡ್ಡಳ್ಳಾಪುರಕ್ಕೆ ಮಲತಾಯಿ ಧೋರಣೆ ತೋರುತ್ತಿದೆ. 2004 ರಿಂದ ಆಗಿರುವ ನ್ಯೂನ್ಯತೆ ಸರಿಪಡಿಸಿ ವಸತಿ ರಹಿತರಿಗೆ ಕೂಡಲೇ ವಸತಿ ಭಾಗ್ಯ ಕಲ್ಪಿಸಿ ಸರ್ಕಾರ ನಿಜಕ್ಕೂ ‘ನುಡಿದಂತೆ ನಡೆದ’ ಸರ್ಕಾರ ಎಂಬುದನ್ನು ಸಾಬೀತು ಪಡಿಸಲಿ. ವಸತಿಗೆ ಅರ್ಜಿ ಹಾಕಿ ಹಣ ಪಾವತಿ ಮಾಡಿದ್ದರೂ ಸಹ ಸರ್ಕಾರ ಇದುವರೆಗೂ ಸ್ಪಂದಿಸಿಲ್ಲ. ಸರ್ಕಾರ ಕೂಡಲೇ ವಸತಿರಹಿತರಿಗೆ ವಸತಿಯನ್ನು ನೀಡಲಿ.

ಗ್ರಾಮೀಣ ರಸ್ತೆಗಳ ಅಭಿವೃದ್ಧಿ

ಉತ್ತಮ ರಸ್ತೆಗಳಿಂದ ಆರ್ಥಿಕತೆ ಬೆಳೆಯುತ್ತದೆ, ರೈತರಿಗೆ ತಮ್ಮ ಬೆಳೆಗಳನ್ನು ಬೇಗ ಸಾಗಿಸಲು ಅನುಕೂಲವಾಗುತ್ತದೆ. ಆದರೆ, ನಮ್ಮ ದೊಡ್ಡಬಳ್ಳಾಪುರದ ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿವೆ. ಕಳೆದ ಎರಡು ವರ್ಷಗಳಿಂದ ಯಾವುದೇ ಅನುದಾನ ದೊರೆತಿಲ್ಲ. ಆದ್ದರಿಂದ, ಸುಗಮ ಸಂಚಾರಕ್ಕೆ, ರೈತರಿಗೆ, ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಲು ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಬೇಕು. ಭೌಗೋಳಿಕವಾಗಿ ಅತಿ ದೊಡ್ಡ ಪ್ರದೇಶವಾಗಿರುವ, ಸುಮಾರು 298ಕ್ಕೂ ಹೆಚ್ಚು ಹಳ್ಳಿಗಳಿರುವ ದೊಡ್ಡಬಳ್ಳಾಪುರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನವನ್ನು ನೀಡಬೇಕು.

ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವನ್ನಾಗಿ ಮಾಡುವ ಕುರಿತು

ಭೌಗೋಳಿಕವಾಗಿ, ಜಿಲ್ಲೆಯ ಕೇಂದ್ರ ಪ್ರದೇಶದಲ್ಲಿರುವ ಹಾಗೂ ಹೆಚ್ಚಿನ ಜನ ಸಂಖ್ಯೆ ಹೊಂದಿರುವ ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ಮುಂದಿನ ಸಂಪುಟದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದು ಕೋರಿದರು.

ಉದ್ಯೋಗವಾಕಾಶ

ನಮ್ಮ ದೊಡ್ಡಬಳ್ಳಾಪುರ ಕೈಗಾರಿಕ ಪ್ರದೇಶದಲ್ಲಿ 1.5 ಲಕ್ಷ ಕಾರ್ಮಿಕರಿದ್ದರೂ ಸಹ ಸ್ಥಳೀಯರಿಗೆ ಸೂಕ್ತ ಉದ್ಯೋಗಾವಕಾಶಗಳು ದೊರಕುತ್ತಿಲ್ಲ. ನೂತನ ಕೈಗಾರಿಕಾ ನಿಯಮದನ್ವಯ ಸ್ಥಳೀಯರಿಗೆ 70% ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ನೀಡಬೇಕೆಂದು ನಿಯಮಾವಳಿಯನ್ನು ಸರ್ಕಾರ ರಚಿಸಿದೆ. ಈ ಆದೇಶದಂತೆ ತಾವು ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಲು ಸುಗ್ರೀವಾಜ್ಞೆ ಹೊರಡಿಸಬೇಕೆಂದು ಕೋರಿದರು.

ಕಳೆದೆರಡು ವರ್ಷಗಳಲ್ಲಿ ಯಾವ ಸಾಧನೆಯಾಗಿದೆಯೋ ತಿಳಿಯದು, ಆದರೆ ಅಗತ್ಯ ವಸ್ತುಗಳ ಹಾಗೂ ಸೇವೆಗಳ ಬೆಲೆ ಏರಿಕೆ, ತೆರಿಗೆ ಹಾಗೂ ಸೆಸ್ ಹೆಚ್ಚಳ, ಹಣದುಬ್ಬರ, ರೈತ ವಿರೋಧಿ ನಿರ್ಧಾರಗಳಿಂದ ಸಾಮಾನ್ಯ ಜನರಿಗೆ ಸಾಕಷ್ಟು ಅನಾನುಕೂಲವಾಗಿ ಜೀವನ ದುಸ್ತರವಾಗಿದೆ. ಅಗತ್ಯ ವಸ್ತುಗಳ ಹಾಗೂ ಸೇವೆಗಳ ದರವನ್ನು ಕಡಿಮೆ ಮಾಡಬೇಕು ಹಾಗೂ ಅನಗತ್ಯ ಸೆಸ್ ಮತ್ತು ತೆರಿಗೆಯನ್ನು ತೆಗೆದುಹಾಕಿ ಬಡವರಿಗೆ, ರೈತರಿಗೆ, ಶ್ರಮಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿಸಿದರು.

Ramesh Babu

Journalist

Recent Posts

ಡಿ.15ರಂದು ಕಾಣೆಯಾಗಿದ್ದ 15 ವರ್ಷದ ಬಾಲಕ ಇಂದು ಶವವಾಗಿ ಪತ್ತೆ

ಡಿ.15ರಂದು ಕಾಣೆಯಾಗಿದ್ದ 15 ವರ್ಷದ ಬಾಲಕ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಚಿಕ್ಕರಾಯಪ್ಪನಹಳ್ಳಿ ಮಾರ್ಗದ…

28 minutes ago

ಬಸ್ಸಿನಲ್ಲಿ 55 ಲಕ್ಷ ಹಣ ಮತ್ತು ಬಿಲ್ಡಿಂಗ್ ಗೆ ಸಂಬಂಧಿಸಿದ ದಾಖಲಾತಿಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರ ಬಂಧನ

ಬಸ್ಸಿನಲ್ಲಿ ಸಾಗಿಸುತ್ತಿದ್ದ 55 ಲಕ್ಷ ರೂ. ನಗದು ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರನ್ನ ಬಂಧಿಸುವಲ್ಲಿ…

1 hour ago

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಒಂದೇ ಗ್ರಾಮದ ನಾಲ್ವರು ಯುವಕರು ದುರ್ಮರಣ: ಮುಗಿಲು ಮುಟ್ಟಿದ ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿಯ ಆಕ್ರಂದನ: ಇಡೀ ಗ್ರಾಮದಲ್ಲಿ ಮನೆ ಮಾಡಿದ ಸೂತಕದ ವಾತಾವರಣ

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟಿರುವಂತಹ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ…

5 hours ago

ಅಭಿಮಾನಿಗಳ ಅತಿರೇಕ….ಯಾಕಪ್ಪಾ, ಏನಾಗಿದೆ ಸಮಸ್ಯೆ…?

ಅಭಿಮಾನಿಗಳ ಅತಿರೇಕ.... ಹುಚ್ಚುತನದ ಪರಮಾವಧಿ..... ದಚ್ಚು - ಕಿಚ್ಚ. (ದರ್ಶನ್ - ಸುದೀಪ್) + (ಡೆವಿಲ್ - ಮಾರ್ಕ್)........ ಅವರ…

6 hours ago

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ

ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…

1 day ago

ಜಗತ್ತಿನ ಬೆಳಕಿನ ಹಬ್ಬ – ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ…..

ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…

1 day ago