Categories: ಲೇಖನ

ತೆರಿಗೆ ಭಯೋತ್ಪಾದನೆ…… (TAX TERRORISM)

ತೆರಿಗೆ ಭಯೋತ್ಪಾದನೆ……
( TAX TERRORISM )
————————————

ಏನಿದು ?
ಹಾಗೆ ಇದೆಯೇ ?
ಕಲ್ಪನೆಯೇ ?
ಉತ್ಪ್ರೇಕ್ಷೆಯೇ ?
ರಾಜಕೀಯ ಹೇಳಿಕೆಯೇ ?
ತೆರಿಗೆ ಕಳ್ಳರ ಆರೋಪವೇ ?
ವಾಸ್ತವವೇ ?
ಪ್ರತ್ಯಕ್ಷವೇ ಅಥವಾ ಪರೋಕ್ಷವೇ ?

ಮೊದಲಿಗೆ ಒಂದು ಮುಖ್ಯ ಅಂಶವೆಂದರೆ,
ತೆರಿಗೆ ಕಟ್ಟದವರಿಗೆ ಇದು ಯಾವ ರೀತಿಯಲ್ಲೂ ವೈಯಕ್ತಿಕವಾಗಿ ಸಂಬಂಧವಿಲ್ಲ.

ಸರ್ಕಾರಿ ಅಧಿಕಾರಿಗಳಾಗಿದ್ದು ಮೂಲದಲ್ಲಿಯೇ ತೆರಿಗೆ ಪಾವತಿಯಾಗುವ ಮತ್ತು ಲಕ್ಷಗಳಲ್ಲಿ ವ್ಯವಹಾರ ಮಾಡುವ ಸಣ್ಣಪುಟ್ಟ ಉದ್ದಿಮೆ ವ್ಯಾಪಾರಿಗಳಿಗೂ ಇದು ಅಷ್ಟೇನು ಮುಖ್ಯ ವಿಷಯವಲ್ಲ.

ಕೋಟಿಗಟ್ಟಲೆ ವ್ಯವಹಾರ ಮಾಡುವ, ಹಣದ ಹಲವಾರು ಮೂಲಗಳೊಂದಿಗೆ ಸಂಬಂಧಪಟ್ಟಿರುವ, ಬ್ಯಾಂಕಿಂಗ್ ಮತ್ತು ನಗದು ರೂಪದ ಎರಡೂ ಹಣದ ವ್ಯವಹಾರ ಮಾಡುವ, ಲಾಭ ಅಥವಾ ನಷ್ಟದ ಸಂಧರ್ಭದಲ್ಲಿ ಅದನ್ನು ವಿವಿಧ ರೀತಿಯ ಹೊಂದಾಣಿಕೆ ಮಾಡಿಕೊಳ್ಳುವ, ತೆರಿಗೆಯನ್ನು ಅದರ ಮೂಲಸ್ವರೂಪದಲ್ಲಿ ಕಾನೂನಿನಂತೆ ಶೇಕಡಾ 100% ಪಾಲಿಸಿದರೆ ಈ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ, ಭ್ರಷ್ಟ ವ್ಯವಸ್ಥೆಯಲ್ಲಿ, ರಾಜಕೀಯ ಪ್ರಭಾವದ ಸ್ಥಿತಿಯಲ್ಲಿ ಯಾರು ವ್ಯವಹಾರ ಮುಂದುವರಿಸಲು ಸಾಧ್ಯವಿಲ್ಲವೋ ಅವರುಗಳಿಗೆ ಮಾತ್ರ ನೇರವಾಗಿ ಸಂಬಂಧಿಸಿದ ವಿಷಯವಿದು.

ಜನಸಾಮಾನ್ಯರಿಗೆ ಇದು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಇಲ್ಲಿನ ಒಳ ಮರ್ಮಗಳೇ ಬೇರೆ.

ಕೆಲವು ಸ್ನೇಹಿತರು ಹೇಳುತ್ತಾರೆ. ನೀವು ಪಾರದರ್ಶಕವಾಗಿ ಕಾನೂನಿನಂತೆ ವ್ಯವಹಾರ ಮಾಡುವುದೇ ಆದರೆ ತೆರಿಗೆ ಅಧಿಕಾರಿಗಳಿಗೆ ಭಯ ಪಡುವುದು ಏಕೆ ?
ತನಿಖೆ ಮಾಡಲಿ ಬಿಡಿ. ನಿಮ್ಮಲ್ಲಿ ಏನೋ ಹುಳುಕು ಇದೆ. ಅದರಿಂದಾಗಿಯೇ ತೆರಿಗೆ ಅಧಿಕಾರಿಗಳು ನಿಮಗೆ ಭಯೋತ್ಪಾದಕರಂತೆ ಕಾಣುತ್ತಾರೆ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವುದು ಬೇಡವೇ ?

ಮೈ ಡಿಯರ್ ಫ್ರೆಂಡ್ಸ್………

ದಯವಿಟ್ಟು ಒಂದು ವಿಷಯ ಸ್ಪಷ್ಟಪಡಿಸಿಕೊಳ್ಳಿ,
ನಮ್ಮ ಈಗಿನ ಭಾರತದ ಸಾಮಾಜಿಕ ಮತ್ತು ಆರ್ಥಿಕ ಸನ್ನಿವೇಶದಲ್ಲಿ ಖಂಡಿತವಾಗಿಯೂ ಕಾನೂನು ಮತ್ತು ತೆರಿಗೆಯ ನಿಯಮಗಳ ಅಡಿಯಲ್ಲಿ ಶೇಕಡಾ 100% ಪ್ರಾಮಾಣಿಕತೆ ಪಾಲಿಸಿದಲ್ಲಿ ಯಾವುದೇ ಉದ್ಯಮ ವ್ಯವಹಾರವನ್ನು ಲಾಭದಾಯಕವಾಗಿ ಮಾಡಲು ಸಾಧ್ಯವಿಲ್ಲ ಸಾಧ್ಯವಿಲ್ಲ ಸಾಧ್ಯವಿಲ್ಲ ಅದು ಅಸಾಧ್ಯ………

ಹೌದು, ನಿಮ್ಮಲ್ಲಿ ಕೆಲವರು ತಕ್ಷಣ ಇನ್ಫೋಸಿಸ್, ಟಾಟಾ, ಬ್ಯಾಂಕಿಂಗ್, ಮೆಡಿಸಿನ್ ಮುಂತಾದ ಅನೇಕ ಕ್ಷೇತ್ರಗಳ ಕೆಲವು ಹೆಸರುಗಳನ್ನು ಹೇಳಿ ಅವರ ತೆರಿಗೆ ಪ್ರಾಮಾಣಿಕತೆ ಉದಾಹರಣೆ ಕೊಡಬಹುದು.

ನನಗೂ ತುಂಬಾ ಸ್ಪಷ್ಟವಾಗಿ, ತಾಂತ್ರಿಕವಾಗಿ ಮತ್ತು ನಿರ್ಧಿಷ್ಟವಾಗಿ ಈ ಕಂಪನಿಗಳು ಹೇಗೆ ತೆರಿಗೆ ವಂಚಿಸುತ್ತವೆ ಎಂದು ತಿಳಿದಿಲ್ಲ. ಆದರೆ ತೆರಿಗೆ ನಿಯಮಗಳನ್ನು ಅದರ ಮೂಲ ಸ್ವರೂಪ ಮತ್ತು ಉದ್ದೇಶಕ್ಕೆ ವಿರುದ್ಧವಾಗಿ ಅದರಲ್ಲಿರುವ ಲೋಪದೋಷಗಳನ್ನು ಉಪಯೋಗಿಸಿಕೊಂಡು ಮೇಲ್ನೋಟಕ್ಕೆ ಅತ್ಯಂತ ಪ್ರಾಮಾಣಿಕ ಎಂದು ತೋರಿಸಿ ಒಂದಷ್ಟು ವಂಚನೆ ಮಾಡುತ್ತಿರುತ್ತಾರೆ ಎಂಬುದು ಅಪ್ಪಟ ಸತ್ಯ. ಅದು ಯಾವ ಪ್ರಮಾಣ ಮತ್ತು ಯಾವ ರೂಪದಲ್ಲಿ ಎಂಬುದು ನಿಗೂಢ. ವಿದೇಶಿ ಕರೆನ್ಸಿ, ವೀಸಾ ನಿಯಮಗಳು, ಆದಾಯದ ಮಿತಿಗೆ ಒಳಪಡದ ವಹಿವಾಟುಗಳು, ಉದ್ಯೋಗಿಗಳ ಸಂಖ್ಯೆ, ದಾನ ಮುಂತಾದ ವಿಷಯಗಳಲ್ಲಿ ಇವರು ತೆರಿಗೆಯವರ ದಾರಿ ತಪ್ಪಿಸುತ್ತಾರೆ. ಅತಿಹೆಚ್ಚು ತೆರಿಗೆ ಕೊಡುವ ಕಾರಣದಿಂದ, ದೇಶದಲ್ಲಿ ಉದ್ಯೋಗ ಸೃಷ್ಟಿಸುವ ಕಾರಣದಿಂದ, ಅಧಿಕಾರಸ್ಥರ ಒಡನಾಟ ಇರುವುದರಿಂದ ಈ ದೊಡ್ಡ ಕಂಪನಿಗಳು ತೆರಿಗೆ ಅಧಿಕಾರಿಗಳನ್ನು ಮ್ಯಾನೇಜ್ ಮಾಡುತ್ತಾರೆ. ಅದಕ್ಕೆಂದೇ ಒಂದು ಅನಧಿಕೃತ ವಿಭಾಗ ಇರುತ್ತದೆ. ಮೇಲ್ನೋಟಕ್ಕೆ ಮತ್ತು ತಾಂತ್ರಿಕವಾಗಿ ಇವರ ಆದಾಯ ಮತ್ತು ಖರ್ಚಿನ ಲೆಕ್ಕಗಳು ಕಾನೂನಾತ್ಮಕವಾಗಿಯೇ ಇರುತ್ತದೆ.

ನಾನು ತುಂಬಾ ಪ್ರಾಮಾಣಿಕ, ದಕ್ಷ ಎಂದು ಹೆಸರು ಮಾಡಿರುವ ಸಂಸ್ಥೆಗಳ ಬಗ್ಗೆಯೇ ಈ ಅನುಮಾನ ವ್ಯಕ್ತಪಡಿಸುತ್ತಿದ್ದೇನೆ. ಇನ್ನು ಇದನ್ನು ಹೊರತುಪಡಿಸಿ ಶೇಕಡಾ 95% ಕ್ಕೂ ಹೆಚ್ಚು ಉದ್ದಿಮೆ ವ್ಯವಹಾರಗಳು ಪ್ರತ್ಯಕ್ಷ ಅಥವಾ ಪರೋಕ್ಷ ತೆರಿಗೆಯನ್ನು ಒಂದು ಪ್ರಮಾಣದಲ್ಲಿ ಸರ್ಕಾರಕ್ಕೆ ವಂಚಿಸುತ್ತಲೇ ಇರುತ್ತಾರೆ. ಹಾಗೆ ಮಾಡಿದರೆ ಮಾತ್ರ ಅವರು ವ್ಯವಹಾರದಲ್ಲಿ ಉಳಿಯಲು ಸಾಧ್ಯ.

ಗ್ರಾಹಕರೇ ಇರಬಹುದು, ಮಾಲೀಕರೇ ಇರಬಹುದು, ಮಧ್ಯವರ್ತಿಗಳೇ ಇರಬಹುದು, ಅಧಿಕಾರಿ, ರಾಜಕಾರಣಿಗಳೇ ಇರಬಹುದು ಇಡೀ ವ್ಯವಸ್ಥೆ ಮತ್ತು ವೈಯಕ್ತಿಕ ವ್ಯಕ್ತಿತ್ವಗಳು ಮಾನಸಿಕವಾಗಿ ಭ್ರಷ್ಟಗೊಂಡಿವೆ. ತೆರಿಗೆ ಎಂಬುದು ಒಂದು ಸಹಜ ಪಾವತಿ ಎಂಬ ಭಾವನೆ ಮರೆಯಾಗಿ ಅದೊಂದು ಒತ್ತಡ ಅಥವಾ ದೌರ್ಜನ್ಯ ಅಥವಾ ಅನವಶ್ಯಕ ಖರ್ಚು ಎಂದೇ ಎಲ್ಲರೂ ಭಾವಿಸುತ್ತಾರೆ.

ಚಿನ್ನದ ಉದಾಹರಣೆಯೊಂದಿಗೆ ಇದನ್ನು ಹೀಗೆ ವಿವರಿಸಬಹುದು. 24 ಕ್ಯಾರೇಟಿನ ಚಿನ್ನವನ್ನು ಶುಧ್ದ ಚಿನ್ನ ಎಂದು ಪರಿಗಣಿಸಿದರೆ ಈಗ ಈ ರೀತಿಯ ಚಿನ್ನ ಬಹುತೇಕ ಇಡೀ ವ್ಯವಸ್ಥೆಯಿಂದಲೇ ಮಾಯವಾಗಿ 20 ಕ್ಯಾರೇಟಿನ ಚಿನ್ನವನ್ನು ಶುದ್ಧ ಎಂತಲೂ, 18 ಕ್ಯಾರೇಟಿನ ಚಿನ್ನವನ್ನು ಮಧ್ಯಮ ಮತ್ತು ಪರವಾಗಿಲ್ಲ ಎಂತಲೂ, ‌16 ಕ್ಯಾರೇಟಿನ ಚಿನ್ನವನ್ನು ಕಳಪೆ ಎಂತಲೂ ಕರೆಯುವ ಮನಸ್ಥಿತಿಗೆ ಬಂದಿದ್ದೇವೆ.

ಇಲ್ಲಿ ಇನ್ನೂ ಒಂದು ಸೂಕ್ಷ್ಮವಿದೆ. ಕಳಪೆ ಮತ್ತು ಸಾಧಾರಣದವರು ರಾಜಕೀಯ ಪ್ರಭಾವ ಮುಂತಾದ ಅಡ್ಡದಾರಿ ಹಿಡಿದು ಅತ್ಯುತ್ತಮ ಎಂದು ಬಿಂಬಿಸಿಕೊಳ್ಳುತ್ತಾ ಉತ್ತಮರನ್ನು ಕಳಪೆ ಎಂದೂ ಪ್ರಚಾರ ಮಾಡುತ್ತಾರೆ. ಜನ ಅದನ್ನು ಹೆಚ್ಚಾಗಿ ನಂಬುವುದು ಉಂಟು. ಈಗ ಆಗುತ್ತಿರುವುದು ಇದೇ. ಇಂತಹ ಸಂದರ್ಭಗಳಲ್ಲಿ ಕೃತಕ ಮತ್ತು ಜಾಹೀರಾತು ಮೋಡಿಗೆ ಒಳಗಾಗಿ ಅಪ್ರಾಮಾಣಿಕ ಉದ್ಯಮಗಳು ಯಶಸ್ವಿಯಾಗುವುದು ಒಂದು ದುರಂತ.

ಈ ಹಂತದಲ್ಲಿ ತೆರಿಗೆ ಭಯೋತ್ಪಾದನೆ ಎಂಬ ವಿಷಯ ಒಳನುಗ್ಗುತ್ತದೆ.
ಯಾವಾಗ ನಾವು ಸಂಪೂರ್ಣ ಕಾನೂನಿನ ನಿಯಮಗಳನ್ನು ಪಾಲಿಸಲು ಸಾಧ್ಯವಿಲ್ಲ ಮತ್ತು ಈಗಾಗಲೇ ಹಲವರು ಅದನ್ನು ಮುರಿದು ಯಶಸ್ವಿ ಉದ್ಯಮಿಗಳಾಗಿದ್ದಾರೆಯೋ ಅದನ್ನೇ ಎಲ್ಲರು ಅನುಸರಿಸುತ್ತಾರೆ. ಆಗ ಅಧಿಕಾರಶಾಹಿ ಕಾನೂನು ಪುಸ್ತಕ ಹಿಡಿದು ಬರುತ್ತದೆ. ಶೇಕಡಾ 100% ಕಾನೂನು ಪಾಲಿಸಿ ಇಲ್ಲ ದಂಡ ಕಟ್ಟಿ ಎಂದು ಹೇಳುತ್ತಾರೆ.
ಅದಕ್ಕೆ ತಕ್ಕಂತೆ ಆಗಿನ ಸಮಯದಲ್ಲಿ ಇರುವ ಸರ್ಕಾರ ಮತ್ತು ರಾಜಕೀಯ ಇದನ್ನು ಉಪಯೋಗಿಸಿಕೊಳ್ಳುತ್ತದೆ. ಅದೇ ತೆರಿಗೆ ಭಯೋತ್ಪಾದನೆ……

ಇದು‌ ಖಂಡಿತವಾಗಿಯೂ ಅಸ್ತಿತ್ವದಲ್ಲಿದೆ, ಹಿಂದೆ ಇತ್ತು. ಈಗಲೂ ಇದೆ, ಬಹುಶಃ ಮುಂದೆಯೂ ಇರುತ್ತದೆ.

ಕ್ಷಮಿಸಿ, ಇನ್ನೊಂದು ವಿಷಯ ಮರೆತೆ. ಈ ರಾಜಕಾರಣಿಗಳು ಮತ್ತು ಉದ್ದಿಮೆ ಮತ್ತು ವ್ಯಾಪಾರಗಾರರು ಆಯಾ ಕಾಲದ ರಾಜಕೀಯ ಪಕ್ಷಗಳೊಂದಿಗೆ ಅನೈತಿಕ ಸಂಬಂಧ ಹೊಂದಿರುತ್ತಾರೆ. ಅವರ ವ್ಯವಹಾರ ಒಂದಕ್ಕೊಂದು ಸೇರಿಕೊಂಡಿರುತ್ತದೆ. ಎಷ್ಟೇ ಎಚ್ಚರಿಕೆ ವಹಿಸಿದರೂ ಒಂದಷ್ಟು ಸಾಕ್ಷ್ಯ ಇದ್ದೇ ಇರುತ್ತದೆ. ಅದರಲ್ಲೂ ನಷ್ಟವಾಗಿ ಮನಸ್ತಾಪ ಆದಾಗ ಇದು ಇನ್ನೂ ಗಂಭೀರ ಸ್ವರೂಪ ಪಡೆಯುತ್ತದೆ. ಇದು ತೆರಿಗೆ ಭಯೋತ್ಪಾದಕರಿಗೆ ಸ್ವತಃ ಆಹ್ವಾನ ನೀಡಿದಂತಾಗುತ್ತದೆ. ಕೆಲವು ಭಂಡ ಮನಸ್ಥಿತಿಯ ವ್ಯಕ್ತಿಗಳು ಇದನ್ನು ಹೇಗೋ ಮ್ಯಾನೇಜ್ ಮಾಡುತ್ತಾರೆ. ಆದರೆ ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳು ಈ ಕಿರುಕುಳ ಸಹಿಸಲಾರದೆ ಶರಣಾಗಬಹುದು, ಓಡಿ ಹೋಗಬಹುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬಹುದು.

ಇಲ್ಲಿ ನಾನು ತೆರಿಗೆ ವಂಚನೆಯನ್ನು, ದುರ್ಬಲ ಉದ್ದಿಮೆದಾರರನ್ನು ಬೆಂಬಲಿಸುತ್ತಿಲ್ಲ. ಆದರೆ ‌ಇಡೀ ವ್ಯವಸ್ಥೆ ಇದೇ ರೀತಿ ಕಾರ್ಯನಿರ್ವಹಿಸುತ್ತಿರುವಾಗ ಅದರ ಲಾಭವನ್ನು ರಾಜಕಾರಣಿಗಳು ಪಡೆದರೆ ಕೆಲವು ಉದ್ದಿಮೆದಾರರಿಗೆ ಇದು ದುಸ್ವಪ್ನದಂತೆ ಕಾಡುತ್ತದೆ. ಇದನ್ನೇ ತೆರಿಗೆ ಭಯೋತ್ಪಾದನೆ ಎಂದು ಕರೆಯಲಾಗುತ್ತದೆ. ಅಲ್ಲದೆ ಅನೇಕ ವರ್ಷಗಳು ತಪ್ಪು ಮಾಡುವುದನ್ನು ನೋಡಿಯೂ ಕಣ್ಣು ಮುಚ್ಚಿಕೊಳ್ಳುವ ನಾಟಕವಾಡಿ ಎಂದೋ ಒಮ್ಮೆ ಏಕಾಏಕಿ ದಾಳಿ ಮಾಡಿ ಸಂಪೂರ್ಣ ತಪ್ಪುಗಳಿಗೆ ಒಮ್ಮೆಲೆ ಶಿಕ್ಷೆ ನೀಡಿದರೆ ಅದನ್ನು ಸಹಿಸುವುದು ಕಷ್ಟ.

ಹಾಗೆಯೇ ತೆರಿಗೆ ಅಧಿಕಾರಿಗಳು ಸಹ ಈ ಆಧುನಿಕ ಕಾಲದಲ್ಲಿ ತೆರಿಗೆ ವಂಚಕರನ್ನು ಹಿಡಿಯಲು ಪರ್ಯಾಯ ನಾಗರಿಕ ಮಾರ್ಗಗಳನ್ನು, ಉತ್ತಮ ವಿಧಾನಗಳನ್ನು ಕಂಡು ಹಿಡಿಯಬೇಕಿದೆ. ತಾವೇನೋ ಮಹಾ ಸಾಧಕರಂತೆ, ಸರ್ವಾಧಿಕಾರಿಗಳಂತೆ ಏಕಾಏಕಿ ನುಗ್ಗಿ, ಮಾಧ್ಯಮಗಳಲ್ಲಿ ಪ್ರಚಾರ ನೀಡಿ, ಅತೀ ಮಾನವರಂತೆ ವರ್ತಿಸುವುದು ಅಷ್ಟೇನು ಉತ್ತಮ ನಡೆಯಲ್ಲ.

ಸುಧಾರಣೆ ಎರಡೂ ಕಡೆ ಆಗಬೇಕಿದೆ. ಕೆಟ್ಟ ಹಣದ ಪ್ರಭಾವ ಈ ಸಮಾಜದಲ್ಲಿ ಇರುವವರೆಗೂ, ಅತಿಯಾದ ದುರಾಸೆ, ಭ್ರಷ್ಟಾಚಾರ, ಸರ್ವಾಧಿಕಾರ, ಪ್ರಜಾಪ್ರಭುತ್ವ ಮೌಲ್ಯಗಳ ದುರ್ಬಳಕೆ ಈ ವ್ಯವಸ್ಥೆಯ ಎಲ್ಲಾ ದುರಂತ ಗಳಿಗೆ ಕಾರಣವಾಗುತ್ತಿದೆ.

ಇದನ್ನು ಹೋಗಲಾಡಿಸುವುದು ಸದ್ಯದ ಪರಿಸ್ಥಿತಿಯಲ್ಲಿ ತುಂಬಾ ಕಷ್ಟ. ಸಡಿಲಿಸಿದರೆ ತೆರಿಗೆ ವಂಚನೆ, ಟೈಟ್ ಮಾಡಿದರೆ ತುಂಬಾ ಕಿರುಕುಳ. ಆದರೆ ಇದನ್ನು ಸಾಧ್ಯವಾದಷ್ಟು ನಿಯಂತ್ರಿಸಿದರೆ ಉತ್ತಮ.

( ಇಲ್ಲಿ ಹೇಳಲಾಗದ ಇನ್ನೂ ಹಲವಾರು ತೆರಿಗೆ ವಂಚನೆಯ ಘಟನೆಗಳು ಮತ್ತು ತೆರಿಗೆ ಭಯೋತ್ಪಾದನೆ ಸದಾ ನಡೆಯುತ್ತಲೇ ಇರುತ್ತದೆ.)

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಪ್ರಸನ್ನ ಲಕ್ಷ್ಮಿವೆಂಕಟರಮಣ ರಥೋತ್ಸವ: ಸಹ್ಯಾದ್ರಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ

ದೊಡ್ಡಬಳ್ಳಾಪುರದ ತೇರಿನ ಬೀದಿಯಲ್ಲಿ ಪ್ರಸನ್ನ ಲಕ್ಷ್ಮಿವೆಂಕಟರಮಣ ರಥೋತ್ಸವ ಫೆ.3ರ ಮಂಗಳವಾರ ಅದ್ಧೂರಿಯಾಗಿ ನಡೆಯಿತು. ರಥೋತ್ಸವ ಅಂಗವಾಗಿ ಸಹ್ಯಾದ್ರಿ ಆಸ್ಪತ್ರೆ ವತಿಯಿಂದ…

13 hours ago

ರೈತರಿಗೆ ಗುಡ್ ನ್ಯೂಸ್: ‘ಪಿ’ ನಂಬರ್ ಜಮೀನುಗಳಿಗೆ ಪೋಡಿ ಭಾಗ್ಯ

ರೈತರಿಗೆ ಗುಡ್ ನ್ಯೂಸ್: 'ಪಿ' ನಂಬರ್ ಜಮೀನುಗಳಿಗೆ ಪೋಡಿ ಭಾಗ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಲಾಗಿದೆ. ಬೆಂಗಳೂರು…

14 hours ago

ಭಾರತದ ರಿಪೋರ್ಟ್ ಕಾರ್ಡ್……..

ಇಲ್ಲಿದೆ ನೋಡಿ ಕೆಲವು ಕುತೂಹಲಕರ ಅಂಕಿಅಂಶಗಳು ಮತ್ತು ನಮ್ಮ ದೇಶದ ರಿಪೋರ್ಟ್ ಕಾರ್ಡ್..... ಇದು ಪಕ್ಷಾತೀವಾಗಿ ದೇಶದ ವಾಸ್ತವ ಪರಿಸ್ಥಿತಿ......‌.‌‌........…

23 hours ago

ಯುವ ಕಾಂಗ್ರೆಸ್ ತಾ.ಪ್ರ.ಕಾ ಶಿವಕುಮಾರ್ ಆರ್.ವಿ ಅವರ ಜನ್ಮದಿನಾಚರಣೆ: ಹೂಮಾಲೆ ಹಾಕಿ ಹುಟ್ಟುಹಬ್ಬದ ಶುಭಕೋರಿದ ತೂಬಗೆರೆ ಹೋಬಳಿಯ ಯೂತ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಚ್.ಎನ್ ನರಸಿಂಹಮೂರ್ತಿ

ಯುವ ಕಾಂಗ್ರೆಸ್ ಸಮಿತಿಯ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಆರ್.ವಿ ಅವರ ಜನ್ಮದಿನಾಚರಣೆ ಹಿನ್ನೆಲೆ ಕಾಂಗ್ರೆಸ್ ನಾಯಕರು, ಯುವ ಕಾಂಗ್ರೆಸ್,…

1 day ago

ವಕೀಲರು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿರಾಜು ಎಸ್.ಡಿ ಅವರ ಜನ್ಮದಿನಾಚರಣೆ: ಹೂಮಾಲೆ ಹಾಕಿ  ಹುಟ್ಟುಹಬ್ಬದ ಶುಭಕೋರಿದ ತೂಬಗೆರೆ ಹೋಬಳಿಯ ಯೂತ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಚ್.ಎನ್ ನರಸಿಂಹಮೂರ್ತಿ

ವಕೀಲರು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿರಾಜು ಎಸ್.ಡಿ ಅವರ ಜನ್ಮದಿನಾಚರಣೆ ಹಿನ್ನೆಲೆ ಕಾಂಗ್ರೆಸ್ ನಾಯಕರು, ಯುವ ಕಾಂಗ್ರೆಸ್, ಮುಖಂಡರು, ಕಾರ್ಯಕರ್ತರು,…

1 day ago

ಡಯಾಲಿಸಿಸ್ ಅಂತಿಮವಲ್ಲ: ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು

ಬೆಂಗಳೂರು , ವೈಟ್‌ಫೀಲ್ದ್‌ - 48 ವರ್ಷದ ಉನ್ನಿಕೃಷ್ಣನ್ ಅವರ ಜೀವನ ಹಲವು ವರ್ಷಗಳಿಂದ ಡಯಾಲಿಸಿಸ್‌, ಔಷಧ ಮತ್ತುಬದುಕುವ ನಿರೀಕ್ಷೆಯಲ್ಲೇ…

2 days ago