ಜಾತಿ ಗಣತಿಗೆ ಕೂಡಲೇ ದಿನಾಂಕ ನಿಗದಿಗೊಳಿಸಬೇಕು- ಕೇಂದ್ರಕ್ಕೆ ಒತ್ತಾಯಿಸಿದ ಸಿಎಂ ಸಿದ್ದರಾಮಯ್ಯ

ಜನಗಣತಿಯೊಂದಿಗೆ ಜಾತಿಗಣತಿ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಅದರೊಂದಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯೂ ನಡೆಯಬೇಕು ಎಂದು ಆಗ್ರಹಿಸುತ್ತೇನೆ ಎಂದು‌ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ದೇಶದ ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾತಿ ಗಣತಿಯೊಂದಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯೂ ನಡೆಸಬೇಕು. ಮೀಸಲಾತಿಯಲ್ಲಿ ಶೇ.50% ಗರಿಷ್ಠ ಪರಿಮಿತಿಯನ್ನು ಸಡಿಲಗೊಳಿಸಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು.‌ ಜಾತಿ ಗಣತಿಗೆ ಕೂಡಲೇ ದಿನಾಂಕ ನಿಗದಿಗೊಳಿಸಬೇಕು ಎನ್ನುವುದು ನನ್ನ ಒತ್ತಾಯ ಎಂದು ತಿಳಿಸಿದ್ದಾರೆ.

ಲೋಕಸಭೆಯ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಅವರು ಕೂಡಾ ಇದನ್ನೇ ಆಗ್ರಹಿಸಿದ್ದು, ಜಾತಿ ಗಣತಿ ವೇಳೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸುವಂತೆ ಅವರು ಹಿಂದಿನಿಂದಲೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂದರು.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಸಂವಿಧಾನ ಹೇಳುತ್ತದೆ. ಜಾತಿ ಗಣತಿಯೊಂದಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಮಾಡಿದರೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ ನೀಡಲು ಅನುಕೂಲವಾಗುತ್ತದೆ ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ ಎಂದರು.

ಈ ರೀತಿ 2015 ರಲ್ಲಿಯೇ ನಮ್ಮ ಸರ್ಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮೂಲಕ 192 ಕೋಟಿ ವೆಚ್ಚ ಮಾಡಿ 1. 33 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಿದೆ. ಇದರಿಂದ ಪ್ರೇರಿತವಾಗಿ ಮತ್ತು ಬಿಹಾರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಈಗ ಸಮೀಕ್ಷೆಗೆ ಮುಂದಾಗಿದೆ ಎಂದು ಹೇಳಿದರು.

ಪ್ರಸಕ್ತ ಸಚಿವ ಸಂಪುಟದಲ್ಲಿ ಮಂಡಿಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ವರದಿಯನ್ನು ಮೇ 9 ರಂದು ನಡೆಯುವ ಸಚಿವ ಸಂಪುಟದಲ್ಲಿ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಏರಿಕೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಮೀಸಲಾತಿ ಏರಿಕೆಯಾಗಬೇಕಾದರೆ ಸಂವಿಧಾನಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕು. ರಾಜ್ಯ ಸರ್ಕಾರ ಕೇಂದ್ರಕ್ಕೆ ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡಬೇಕೆಂದು ತಿಳಿಸಬಹುದು. ಆಗ ಸಂವಿಧಾನ ತಿದ್ದುಪಡಿ ಮಾಡಿ ಏರಿಕೆ ಮಾಡಬಹುದು ಎಂದರು.

ಮುಂದಿನ ಸಚಿವ ಸಂಪುಟದಲ್ಲಿ ಅಭಿಪ್ರಾಯ ಪಡೆದು ಚರ್ಚೆ ಮಾಡಿ, ನಮ್ಮ ತೀರ್ಮಾನವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಬಜೆಟ್ ರೂಪಿಸುವಾಗ ಇದನ್ನು ಆಧಾರವಾಗಿಟ್ಟುಕೊಂಡು ಅನುದಾನ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.

50% ಮೀಸಲಾತಿಯನ್ನು ಬದಲಾಯಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಂವಿಧಾನದ 15 ವಿಧಿ, ಕಲಂ (5) ರಂತೆ ಮೀಸಲಾತಿಯನ್ನು ಕೊಡಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಇದನ್ನು ಪರಿಗಣಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಕೇವಲ ಜಾತಿಗಣತಿಯ ಘೋಷಣೆ ಮಾಡಿದರೆ ಸಾಲದು, ಅದನ್ನು ಜಾರಿಗೆ ತರಬೇಕು. 73-74 ರ ತಿದ್ದುಪಡಿಗಳನ್ನು ಬಿಜೆಪಿ ವಿರೋಧಿಸಿತ್ತು. ಇತಿಹಾಸ ನೋಡಿದರೆ ಬಿಜೆಪಿ ಸಾಮಾಜಿಕ ನ್ಯಾಯದ ಪರ ಎಂದಿಗೂ ಇಲ್ಲ ಎಂಬುದರ ಅರಿವಾಗುತ್ತದೆ. ಕೂಡಲೇ ಯಾವ ದಿನಾಂಕದಿಂದ ಜನಗಣತಿ, ಜಾತಿ ಗಣತಿ ಮಾಡುತ್ತಾರೆ ಎಂದು ತಿಳಿಸಬೇಕು. ಜಾತಿ ಗಣತಿ ಮಾಡುವಾಗ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕೂಡ ಆಗಬೇಕು. ಇಲ್ಲಿಯವರೆಗೂ ಇದನ್ನು ವಿರೋಧಿಸುತ್ತಿದ್ದವರು ಈಗ ಸಮೀಕ್ಷೆ ನಡೆಸುವ ಘೋಷಣೆ ಮಾಡಿದ್ದಾರೆ ಎಂದರು.

ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದಾಗ ಕೇಂದ್ರ ಸರ್ಕಾರ ಅದನ್ನು ವಿರೋಧಿಸಿ, ಟೀಕಿಸಿತ್ತು. ಈಗ ಬೇರೆ ರಾಜ್ಯಗಳಲ್ಲಿ ಅದನ್ನೇ ಅವರೂ ಅಳವಡಿಸಿಕೊಳ್ಳುತ್ತಿದ್ದಾರೆ. ಜಾತಿ ಗಣತಿ ವಿಚಾರದಲ್ಲಿ ಕೂಡ ಹಾಗೆಯೇ ಮಾಡಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ 5.90 ಕೋಟಿ ಜನರನ್ನು ಒಳಪಡಿಸಲಾಗಿದೆ. ಶೇ 93% ಜನಸಂಖ್ಯೆ ಸಮೀಕ್ಷೆಗೆ ಒಳಪಟ್ಟಿದ್ದು, 100% ಸಮೀಕ್ಷೆ ನಡೆಸಲು ಯಾವ ಸರ್ಕಾರಗಳಿಂದಲೂ ಸಾಧ್ಯವಿಲ್ಲ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಪುಟ್ಟರಂಗಶೆಟ್ಟಿ ಅವರು ಹಿಂದುಳಿದ ವರ್ಗಗಳ ಸಚಿವರಾಗಿದ್ದಾಗ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ವರದಿ ಪಡೆಯಲು ದಿನಾಂಕ ನಿಗದಿ ಮಾಡಿದಾಗ ಅವರನ್ನು ಅಮಾನತು ಮಾಡುವುದಾಗಿ ಹೆದರಿಸಿದ್ದ ಕುಮಾರಸ್ವಾಮಿ ಅವರು, ಕೊನೆಗೂ ವರದಿಯನ್ನು ಪಡೆಯಲಿಲ್ಲ. ಈಗ ನೋಡಿದರೆ ಕೇಂದ್ರದ ನಿರ್ಧಾರವನ್ನು ಹೊಗಳುತ್ತಿದ್ದಾರೆ. ಇದೆಂಥಾ ಇಬ್ಬದಿತನ? ಎಂದು ಪ್ರಶ್ನೆ ಮಾಡಿದರು.

ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ಸಮೀಕ್ಷೆಯ ವರದಿಯನ್ನು ಪಡೆಯಲಿಲ್ಲ. ಸಾಮಾಜಿಕ ನ್ಯಾಯವನ್ನು ಎಲ್ಲರಿಗೂ ದೊರಕಿಸಲು, ಸಮಾನತೆ ತರಲು ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ, ಸಾಮಾಜಿಕವಾಗಿ ಪಾಲಿರಬೇಕು ಎಂಬ ಉದ್ದೇಶದಿಂದ ಸಮೀಕ್ಷೆ ನಡೆಸಲಾಗಿತ್ತು ಎಂದು ಹೇಳಿದರು.

Ramesh Babu

Journalist

Recent Posts

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ

ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…

12 hours ago

ಜಗತ್ತಿನ ಬೆಳಕಿನ ಹಬ್ಬ – ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ…..

ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…

15 hours ago

ಖಾಸಗಿ ಬಸ್ ಲಾರಿಗೆ ಡಿಕ್ಕಿ: ಹೊತ್ತಿ ಉರಿದ ಬಸ್: 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಸ್ ಒಳಗಡೆಯೇ ಸಜೀವ ದಹನ

ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್…

15 hours ago

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು ಇಲ್ಲಿವೆ ನೋಡಿ…

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…

1 day ago

ನಾಳೆ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ: ಬ್ರಹ್ಮ ರಥೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಇಂದು ಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಭೇಟಿ, ಪರಿಶೀಲನೆ

ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…

1 day ago