Categories: ಲೇಖನ

ಜಾತಿ ಎಂಬ ಹುಚ್ಚು ಪರಿಕಲ್ಪನೆ ಮತ್ತು ಶ್ರೇಷ್ಠತೆಯ ವ್ಯಸನ…..

” ನನ್ನ ಜಾತಿ”

ಮರುಜಾತಿ ಜನಗಣತಿ ಪ್ರಾರಂಭವಾಗಿದ್ದೇ ತಡ ಎಲ್ಲಾ ಜಾತಿ ನಾಯಕರ ಮುಖವಾಡಗಳು ಬಯಲಾಗುತ್ತಿದೆ. ತನ್ನ ಜಾತಿ ಜನರ ಸಂಖ್ಯೆ ಹೆಚ್ಚಾಗಿ ದಾಖಲಾಗಬೇಕು, ಆ ಮೂಲಕ ತಮಗೆ ರಾಜಕೀಯವಾಗಿ ಹೆಚ್ಚು ಲಾಭ ಸಿಗಬೇಕು, ತಾವು ಪ್ರಬಲ ಜಾತಿ ಎಂದು, ಅಂದರೆ ಹೆಚ್ಚು ಜನಸಂಖ್ಯೆಯ ಪ್ರಬಲ ಜಾತಿ, ಆರ್ಥಿಕವಾಗಿ ಬಡ ಜಾತಿ ಎಂದು ಅಂಕಿಸಂಖ್ಯೆಗಳ ಮೂಲಕ ತೋರಿಸಿಕೊಳ್ಳಬೇಕು, ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಬೇಕು ಎಂದು ಪ್ರತಿಯೊಬ್ಬ ಜಾತಿ ನಾಯಕರು ಅದಕ್ಕಾಗಿ ತುಂಬಾ ತುಂಬಾ ಶ್ರಮ ಪಡುತ್ತಿದ್ದಾರೆ. ಎಲ್ಲಾ ಕಡೆ ಜಾತಿ ಜನಗಣತಿಯ ಸಮಯದಲ್ಲಿ ಯಾವ ರೀತಿ ತಮ್ಮ ಜಾತಿಯ ಹೆಸರನ್ನು ದಾಖಲು ಮಾಡಬೇಕು ಎಂಬ ತರಬೇತಿ ಅಥವಾ ಜಾಗೃತ ಶಿಬಿರಗಳನ್ನು ಮತ್ತು ಪತ್ರಿಕಾ ಗೋಷ್ಠಿಗಳನ್ನು ನಡೆಸುತ್ತಿದ್ದಾರೆ. ತಮ್ಮ ಅಸ್ತಿತ್ವ ಈ ಜಾತಿ ಗಣತಿಯಿಂದಲೇ ನಿರ್ಧಾರವಾಗುತ್ತದೆ ಎಂದು ಗಂಭೀರವಾಗಿ ಪರಿಗಣಿಸಿದ್ದಾರೆ.

ಮದುವೆ, ಚುನಾವಣೆ ಮುಂತಾದ ಸಂಬಂಧಗಳಲ್ಲಿ ಜಾತಿ, ಉಪಜಾತಿ, ಕುಲಗೋತ್ರಗಳನ್ನು ನೋಡುವ ಈ ಜನ ಇದೀಗ ಉಪಜಾತಿಗಳನ್ನೆಲ್ಲಾ ಸೇರಿಸಿ ಒಂದೇ ಜಾತಿ ಅಡಿಯಲ್ಲಿ ದಾಖಲಿಸಲು ಸಾಮಾನ್ಯ ಜನರಿಗೆ ದಂಬಾಲು ಬೀಳುತ್ತಿದ್ದಾರೆ. ಜಾತಿ ಜಾತಿಗಳ ನಡುವಿನ ಸ್ಪರ್ಧೆ ಏರ್ಪಟ್ಟಿದೆ.

ವೀರಶೈವರೇ, ಲಿಂಗಾಯಿತರೇ ಇದನ್ನೇ ಏನು ಬಸವಣ್ಣ ಮತ್ತು ವಚನ ಸಂಸ್ಕೃತಿ ನಿಮಗೆ ಕಲಿಸಿದ್ದು, ಇವನಾರವ, ಇವನಾರವ ಎಂದೆಣಿಸಿದೆ, ಇಂವ ನಮ್ಮವ, ಇಂವ ನಮ್ಮವ ಎಂದೆಣಿಸಯ್ಯ ಎಂದು ಹೇಳಿದ್ದು ಯಾರಿಗಾಗಿ,

ಒಕ್ಕಲಿಗರೇ ಇದನ್ನೇ ಏನು ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದು, ಇದನ್ನೇ ಏನು ನಿಮಗೆ ಶೋಷಿತ ಸಮುದಾಯಗಳೇ, ಬುದ್ಧ, ಬಾಬ ಸಾಹೇಬರು ಹೇಳಿಕೊಟ್ಟಿದ್ದು, ಮೇಲ್ಜಾತಿಯವರೇ ಇದನ್ನೇ ಏನು ನಿಮಗೆ ಸ್ವಾಮಿ ವಿವೇಕಾನಂದರಂತ ಭಾರತೀಯ ಸಾಂಸ್ಕೃತಿಕ ನಾಯಕರು, ಈ ದೇಶದ ಮೌಲ್ಯಗಳನ್ನು ಪ್ರತಿಪಾದಿಸಿದ್ದು, ಇದನ್ನೇ ಏನು ನಿಮಗೆ ಕನಕ, ಪುರಂದರರು ಹೇಳಿಕೊಟ್ಟಿದ್ದು, ಇದನ್ನೇ ಏನು ನಿಮಗೆ ಆಚಾರ್ಯತ್ರಯರು ಕಲಿಸಿದ್ದು.

ಜಾತಿ ಭಾರತೀಯ ಸಮಾಜದ ಒಂದು ಶಾಪ ಎಂದು ಪದೇ ಪದೇ ಹೇಳುವ ಎಲ್ಲರೂ ಈಗ ಜಾತಿ ಗಣತಿಯ ಸಂದರ್ಭದಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಯುದ್ಧದ ಸಮಯದಲ್ಲಿ ನಾವೆಲ್ಲರೂ ಭಾರತೀಯರು ಎನ್ನುವುದು, ಧಾರ್ಮಿಕ ಆಚರಣೆ ಸಂದರ್ಭದಲ್ಲಿ ನಾವೆಲ್ಲರೂ ಹಿಂದುಗಳು ಎನ್ನುವುದು, ಸಾಮಾಜಿಕ ನ್ಯಾಯದ ಸಂದರ್ಭದಲ್ಲಿ ನಾವೆಲ್ಲ ಶೋಷಿತರು ಎನ್ನುವುದು. ಇದೇ ಏನು ಈ ದೇಶದ ನಿಜವಾದ ಬಣ್ಣ, ಮೂಲ ಸ್ವರೂಪ.

ಮನುಷ್ಯರನ್ನು ಮನುಷ್ಯರನ್ನಾಗಿ ನೋಡದೆ, ಜಾತಿಗಳ ಆಧಾರದ ಮೇಲೆ, ಹುಟ್ಟಿನಿಂದ ಗಳಿಸಿಕೊಂಡ ನಿಮ್ಮ ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ನೀವುಗಳು ಇನ್ನೂ ಕೂಡ ಬದುಕಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡು ಅನಿಸುವುದಿಲ್ಲವೇ.

ಈ ವ್ಯವಸ್ಥೆಯಲ್ಲಿ ನಿಜ ಮನುಷ್ಯರನ್ನು ಹುಡುಕುವುದಾದರೂ ಎಲ್ಲಿ. ಮಾಧ್ಯಮಗಳು, ಧಾರ್ಮಿಕ ಮುಖಂಡರು, ಪ್ರಗತಿಪರ ಚಿಂತಕರು ಎಲ್ಲರೂ ತಮ್ಮ ಜಾತಿಗಳ ಪರವಾಗಿ ಯಾವುದೇ ಸಂಕೋಚವಿಲ್ಲದೆ ಬ್ಯಾಟು ಬೀಸುತ್ತಿದ್ದಾರೆ.

ಜಾತಿ ಎಂಬ ಹುಚ್ಚು ಪರಿಕಲ್ಪನೆ ಮತ್ತು ಶ್ರೇಷ್ಠತೆಯ ವ್ಯಸನ…..

ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ, ಬಲ್ಲಿರಾ ಕನಕದಾಸರು…….

ಮಾನವ ಕುಲ ತಾನೊಂದು ವಲಂ
ಮಹಾಕವಿ ಪಂಪ…..,

ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು
ಬಸವಣ್ಣ,……

ವಿಶ್ವ ಮಾನವ ಪ್ರಜ್ಞೆ
ಕುವೆಂಪು,……

ವಸುದೈವ ಕುಟುಂಬ
ಭಗವದ್ಗೀತೆ,…..

ಸರ್ವೋದಯ
ಮಹಾತ್ಮ ಗಾಂಧಿ, …..

“ಭಾರತೀಯರಾದ ನಾವು ”
ಸಂವಿಧಾನದ ಪೀಠಿಕೆ
ಬಾಬಾ ಸಾಹೇಬ್ ಅಂಬೇಡ್ಕರ್,…..

ಹೀಗೆ ಈ ನೆಲದ ದಾರ್ಶನಿಕರು, ಚಿಂತಕರು, ಹೋರಾಟಗಾರರು, ಮಹಾತ್ಮರು ಹೇಳಿದ್ದಾರೆ. ಆದರೆ ಈಗ ಕರ್ನಾಟಕದಲ್ಲಿ ಮರು ಜಾತಿ ಜನಗಣತಿಯ ವಿವಾದ ಭುಗಿಲೆದ್ದಿರುವಾಗ ನನಗೆ ಅನಿಸುತ್ತಿದೆ ” ಹುಚ್ಚರ ಸಂತೆ ಕಣಣ್ಣ ಇದು ಹುಚ್ಚರ ಸಂತೆ, ಹೇಳುವುದು ಒಂದು ಮಾಡುವುದು ಇನ್ನೊಂದು, ಬಾಯಲ್ಲಿ ಬೆಣ್ಣೆ ಕೈಯಲ್ಲಿ ದೊಣ್ಣೆ ”

ಬ್ರಾಹ್ಮಣನೊಬ್ಬನೆಂದ,
ನಾವೇ ಶ್ರೇಷ್ಠರು, ದೇವರಿಗೆ ನಾವೇ ಹತ್ತಿರ, ನಾವು ದೇವರ ಪ್ರತಿನಿಧಿಗಳು,

ವೈಶ್ಯನೊಬ್ಬನೆಂದ,
ನಾವೇ ಶ್ರೇಷ್ಠರು, ನಾವು ವ್ಯಾಪಾರ ಮಾಡದಿದ್ದರೆ ಸಮಾಜ ಅಸ್ತಿತ್ವದಲ್ಲೇ ಇರುವುದಿಲ್ಲ, ದೇವರಿಗೆ ನಾವೇ ಅತಿಮುಖ್ಯ,

ಕ್ಷತ್ರಿಯನೊಬ್ಬನೆಂದ,
ನಾವೇ ಶ್ರೇಷ್ಠರು, ಸಮಾಜವನ್ನು ರಕ್ಷಿಸುವವರು ನಾವೇ, ನಾವಿಲ್ಲದಿದ್ದರೆ ಅರಾಜಕತೆ ಸೃಷ್ಟಿಯಾಗುತ್ತದೆ, ದೇವರಿಗೆ ನಾವೇ ಹತ್ತಿರ,

ಒಕ್ಕಲಿಗನೊಬ್ಬನೆಂದ,
ನಾವೇ ಶ್ರೇಷ್ಠರು, ನಾವು ವ್ಯವಸಾಯ ಮಾಡದಿದ್ದರೆ ತಿನ್ನಲು ಆಹಾರವೇ ಇರುವುದಿಲ್ಲ, ನಾವು ದೇವರ ಮಕ್ಕಳು,

ಅಗಸನೊಬ್ಬನೆಂದ,
ನಾವೇ ಶ್ರೇಷ್ಠರು, ನಾವು ಜನರ ಕೊಳೆ ಬಟ್ಟೆ ಶುಭ್ರ ಮಾಡಿಕೊಡುತ್ತೇವೆ. ನಾವಿಲ್ಲದಿದ್ದರೆ ಜನ ಕೊಳಕರಾಗುತ್ತಾರೆ,
ದೇವರಿಗೆ ನಾವೇ ಹತ್ತಿರ,

ಕ್ಷೌರಿಕನೊಬ್ಬನೆಂದ,
ನಾವೇ ಶ್ರೇಷ್ಠರು, ಜನರು ಚೆಂದ ಕಾಣಲು, ಮಂಗಳ ಕಾರ್ಯ ಮಾಡಲು ನಾವೇ ಬೇಕು, ದೇವರಿಗೆ ವಾಧ್ಯ ನುಡಿಸಿ ಖುಷಿಪಡಿಸುವವರೇ ನಾವು,

ಕುಂಬಾರನೊಬ್ಬನೆಂದ,
ನಾವೇ ಶ್ರೇಷ್ಠರು, ಜನ ಅಡುಗೆ ಮಾಡಿ ಊಟ ಮಾಡಲು ನಾವು ಮಾಡುವ ಮಡಿಕೆಗಳೇ ಬೇಕು, ನಾವಿಲ್ಲದೆ ಊಟವಿಲ್ಲ, ದೇವರಿಗೆ ನಾವೇ ಹತ್ತಿರ,

ಕುರುಬನೊಬ್ಬನೆಂದ,
ನಾವೇ ಶ್ರೇಷ್ಠರು, ಹಸು ಆಡು ಕುರಿಗಳನ್ನು ಸಾಕಿ ಬೆಳೆಸಿ ಜನರಿಗೂ, ದೇವರಿಗೂ ಹಾಲು ತುಪ್ಪ ಎಲ್ಲಾ ನಮ್ಮಿಂದಲೇ, ನಾವೇ ದೇವರಿಗೆ ಹತ್ತಿರ,

ಚಮ್ಮಾರನೊಬ್ಬನೆಂದ,
ನಾವೂ ಶ್ರೇಷ್ಠರೇ, ನೀವು ಕಾಲಿನ ರಕ್ಷಣೆಗೆ ಹಾಕುವ ಚಪ್ಪಲಿ, ವ್ಯವಸಾಯಕ್ಕೆ ಬಳಸುವ ಸಲಕರಣೆಗಳು, ದೇವರ ರಕ್ಷಣೆಗೆ ಕಟ್ಟುವ ಕಟ್ಟಡ, ಯುಧ್ಧಕ್ಕೆ ಉಪಯೋಗಿಸುವ ಆಯುಧ, ಎಲ್ಲಾ ನಾವೇ ತಯಾರಿಸುವುದು,
ನಾವೇ ದೇವರ ನಿಜವಾದ ಮಕ್ಕಳು……

ಅಯ್ಯೋ ಹುಚ್ಚರ, ಇದು 2025, ನಿಮ್ಮ ಶ್ರೇಷ್ಠತೆ ನಾಶವಾಗಿ ಬಹಳ ಕಾಲವಾಗಿದೆ. ಇಂದು ನಿಮ್ಮ ಕೆಲಸಗಳು ಯಾರಿಗೂ ಅನಿವಾರ್ಯವಲ್ಲ. ಅವು ಜಾತಿ ಮೀರಿ ಹೊಟ್ಟೆ ಪಾಡಿನ ಕಾಯಕಗಳಾಗಿ ಯಾರು ಬೇಕಾದರೂ ಮಾಡಬಹುದಾದ ನಾನಾ ರೂಪ ಪಡೆದುಕೊಂಡಿದೆ.
ಬ್ರಾಹ್ಮಣನೊಬ್ಬ ಶೌಚಾಲಯಗಳ Cleaning Contract ಪಡೆದರೆ, ಗೌಡನೊಬ್ಬ ಚಪ್ಪಲಿ ಅಂಗಡಿ ಇಟ್ಟರೆ, ದಲಿತನೊಬ್ಬ ಹೋಟೆಲ್ ನಡೆಸಿದರೆ, ಲಿಂಗಾಯಿತನೊಬ್ಬ ಕ್ಷೌರದ ಅಂಗಡಿ ಇಟ್ಟರೆ, ತಿಗಳರವನೊಬ್ಬ ಪೂಜಾರಿಯಾದರೆ, ಉಪ್ಪಾರನೊಬ್ಬ ಜ್ಯೋತಿಷಿಯಾಗುತ್ತಾನೆ,

ಇನ್ನು ಸರ್ಕಾರಿ ಅಧಿಕಾರಿಗಳು, ನಗರದಲ್ಲಿ ವ್ಯಾಪಾರ ಮಾಡುವವರು, ಖಾಸಗಿ ಕಂಪನಿ ಅಧಿಕಾರಿಗಳು ಯಾರು ಯಾರೋ ತಿಳಿದವರಿಲ್ಲ, ಎಲ್ಲರೂ ಕೇವಲ ಹೊಟ್ಟೆ ಪಾಡಿನ ನರಮಾನವರು,

ಕಳ್ಳರು, ಖೈದಿಗಳು, ರೋಗಿಗಳು, ಭ್ರಷ್ಠರು, ಕೊಲೆಗಡುಕರು, ಅತ್ಯಾಚಾರಿಗಳು ಎಲ್ಲಾ ಜಾತಿಗಳಲ್ಲೂ ಇದ್ದಾರೆ,

ಹಾಗೆಯೇ ದಕ್ಷರು, ಪ್ರಾಮಾಣಿಕರು, ಪುಣ್ಯಾತ್ಮರು, ಜ್ಞಾನಿಗಳು ಎಲ್ಲಾ ಕಡೆ ಇದ್ದಾರೆ. ಇವರಿಗೆ ಜಾತಿಯ ಹಂಗಿಲ್ಲ,

ಇನ್ನೂ ನಿದ್ರಾವಸ್ಥೆಯಲ್ಲಿರುವ ಮೂರ್ಖರೆ, ಕಿತ್ತೊಗೆಯಿರಿ ನಿಮ್ಮ ಜಾತಿಗಳ ಟೈಟಲ್ ಗಳನ್ನು,
ಮದುವೆಯಾಗಿ ನಿಮಗಿಷ್ಟದ ಹುಡುಗ/ಹುಡುಗಿಯನ್ನು ,
ಹುಟ್ಟಿಸಿ ನಿಜವಾದ ಭಾರತೀಯರನ್ನು,
ಕಟ್ಟೋಣ ಸಮಾನತೆಯ ಸಮೃಧ್ಧ ಭಾರತವನ್ನು,….

ನಮ್ಮ ಜ್ಞಾನ – ನಮ್ಮ ನಡವಳಿಕೆ – ನಮ್ಮ ಪ್ರತಿಭೆ – ನಮ್ಮ ಪ್ರತಿಕ್ರಿಯೆಯ ಸಾಮರ್ಥ್ಯ ನಮ್ಮ ವ್ಯಕ್ತಿತ್ವ ಮತ್ತು ಜೀವನವನ್ನು ರೂಪಿಸಬೇಕಾಗಿದ್ದ ಸ್ಥಿತಿಯಲ್ಲಿ ಅಕ್ಷರವೋ, ನಾಮವೋ, ಕುಂಕುಮವೋ, ವಿಭೂತಿಯೋ, ಬಟ್ಟೆಯೋ, ಟೋಪಿಯೋ, ನಮ್ಮ ವ್ಯಕ್ತಿತ್ವವನ್ನು ನಿರ್ದೇಶಿಸಿದರೆ ಹೇಗೆ.?,

ಜಾತಿ ಬಿಡುವುದು ಕೆಲವರಿಗೆ ಕಷ್ಟವಾಗಬಹುದೇನೋ ?
ಆದರೆ ಮುಂದಿನ ದಿನಗಳಲ್ಲಿ ಮನುಷ್ಯತ್ವ ಇರುವ – ಬುದ್ದಿ ಇರುವ – ಜಾಗೃತರಾಗಿರುವ ಕೆಲವರಾದರೂ ಒಂದಷ್ಟು ನಾಗರಿಕವಾಗಿ ನಡೆದುಕೊಳ್ಳೋಣ ಎಂದು ಆಶಿಸುತ್ತಾ…

ಈ ರಾಜ್ಯವನ್ನು ಲಿಂಗಾಯಿತರೂ ಮುನ್ನಡೆಸಬಾರದು,
ಈ ರಾಜ್ಯವನ್ನು ಒಕ್ಕಲಿಗರೂ ಮುನ್ನಡೆಸಬಾರದು,
ಈ ರಾಜ್ಯವನ್ನು ದಲಿತರೂ ಮುನ್ನಡೆಸಬಾರದು,
ಈ ರಾಜ್ಯವನ್ನು ಬ್ರಾಹ್ಮಣರೂ ಮುನ್ನಡೆಸಬಾರದು,
ಈ ರಾಜ್ಯವನ್ನು ಕುರುಬರೂ ಮುನ್ನಡೆಸಬಾರದು,
ಈ ರಾಜ್ಯವನ್ನು ಇತರೆ ಯಾವ ಜಾತಿಯವರೂ ಮುನ್ನಡೆಸಬಾರದು,

ಈ ರಾಜ್ಯವನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್, ಜೈನ ಮುಂತಾದ ಯಾವ ಧರ್ಮದವರೂ ಮುನ್ನಡೆಸಬಾರದು,
ಈ ರಾಜ್ಯವನ್ನು ರೈತರು, ಕಾರ್ಮಿಕರು, ವಿಜ್ಞಾನಿಗಳು, ಸಮಾಜ ಸೇವಕರು, ಧಾರ್ಮಿಕ ಮುಖಂಡ ಮುಂತಾದ ಯಾರೂ ಮುನ್ನಡೆಸಬಾರದು.

ಏಕೆಂದರೆ,
ಇವರು ಯಾರೂ ಪರಿಪೂರ್ಣರಲ್ಲ. ಎಲ್ಲರೂ ತಮ್ಮ ಹಿತದ ಪಕ್ಷಪಾತಿಗಳಾಗುತ್ತಾರೆ. ಅದು ಅವರವರದೇ ಆಡಳಿತವಾಗುತ್ತದೆ.

ಸುಮಾರು ಏಳೂವರೆ ಕೋಟಿ ಜನಸಂಖ್ಯೆಯ, ಹೆಚ್ಚು ಕಡಿಮೆ ಜಪಾನ್ ದೇಶದಷ್ಟು ವಿಸ್ತೀರ್ಣದ ವಿಶ್ವದ ಅತ್ಯಂತ ಸುರಕ್ಷಿತ ಪ್ರದೇಶಗಳಲ್ಲಿ ಒಂದಾದ, ಅಂಧಾಭಿಮಾನಿಗಳಲ್ಲದ, ಉದಾರ ಮನಸ್ಸಿನ ಈ ನಮ್ಮ ಕರ್ನಾಟಕ ರಾಜ್ಯವನ್ನು ಆಳುವವರು, ಮುನ್ನಡೆಸುವವರು ಮನುಷ್ಯನಾಗಿರಬೇಕು.

ಹೌದು,
ಇದನ್ನು ಕಲ್ಪಿಸಿಕೊಳ್ಳಲು ಬಹಳ ಜನರಿಗೆ ಸಾಧ್ಯವಾಗುವುದಿಲ್ಲ.
ಏಕೆಂದರೆ ಅವರಿಗೆ ಮನುಷ್ಯರೇ ಕಾಣುತ್ತಿಲ್ಲ. ಎಲ್ಲರೂ ಹುಟ್ಟಿನಿಂದಲೇ ಬಂದ ಜಾತಿ ಟೈಟಲ್ ಗಳಿಂದಲೇ ಗುರುತಿಸಲ್ಪಡುತ್ತಾರೆ. ತಾವು ಸೃಷ್ಠಿಯ ಸ್ವತಂತ್ರ ಜೀವಿಗಳು ಎಂದು ಮರೆತೇ ಬಿಟ್ಟಿದ್ದಾರೆ. ಹುಟ್ಟಿದ ಕ್ಷಣವೇ ಅನೇಕ ಬಂಧನಗಳಿಂದ ಬಂಧಿಗಳಾಗುತ್ತಾರೆ.

ಅದರೆ ಈಗಲೂ ಕೆಲವು ಮನುಷ್ಯರಿದ್ದಾರೆ. ಈ ಎಲ್ಲವನ್ನೂ ಮೀರಿದವರಿದ್ದಾರೆ. ಅವರನ್ನು ಗುರುತಿಸಬೇಕಿದೆ. ಅವರಿಗೆ ಈ ಸುಂದರ ಪ್ರದೇಶವನ್ನು ಮುನ್ನಡೆಸುವ ಅವಕಾಶ ಕೊಡಬೇಕಾಗಿದೆ. ಮತಭಿಕ್ಷೆಬೇಡಿ, ಜನರ ಭಾವನೆಗಳನ್ನು ಕೆರಳಿಸಿ, ಸುಳ್ಳುಭರವಸೆ ನೀಡುವವರಿಗಿಂತ ನಾವೇ ಖುದ್ದಾಗಿ ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ತರಬೇಕಿದೆ.

ಆಗ ರಾಮರಾಜ್ಯ, ಭೀಮರಾಜ್ಯ, ಕಲ್ಯಾಣ ರಾಜ್ಯ ಖಂಡಿತ ಸಾಧ್ಯವಿದೆ. ಕಳ್ಳರಿಲ್ಲದ, ವಂಚಕರಿಲ್ಲದ, ಭ್ರಷ್ಟರಿಲ್ಲದ, ದುರಹಂಕಾರಿಗಳಿಲ್ಲದ ನೆಮ್ಮದಿಯ ಕ್ರಿಯಾತ್ಮಕ ಚಟುವಟಿಕೆಗಳ ಸಾಧಕರ ನಾಡು ಇದಾಗುತ್ತದೆ.

ಅಹಹಹಹಾ………

ನಿಮ್ಮ ಮನಸ್ಸಿನಾಳದ ಮುಸು ನಗೆ ನಿಮ್ಮ ಮುಖದಲ್ಲಿ ನನಗೆ ಕಾಣುತ್ತಿದೆ. ಇದೊಂದು ಹಗಲುಗನಸು ಎಂಬುದು ನಿಮ್ಮ ಅನಿಸಿಕೆ.

ಏಕೆ…….ಕೋಟ್ಯಂತರ ಮೈಲಿಗಳ ಮಂಗಳನಲ್ಲಿಗೆ ಮುನ್ನುಗ್ಗುತ್ತಿಲ್ಲವೇ –
ಸಾಗರದ ತಳವನ್ನು ಸ್ಪರ್ಶಿಸಿಲ್ಲವೇ – ಸಾವಿರಾರು ಕಿಲೋಮೀಟರ್ ವೇಗದಲ್ಲಿ, ಶಬ್ದದ ವೇಗವನ್ನು ಮೀರಿ ಹಾರಾಡುವ ವಿಮಾನವನ್ನು ಕಂಡುಹಿಡಿದಿಲ್ಲವೇ,
ವಿಶ್ವವನ್ನೇ ಏಕಕಾಲದಲ್ಲಿ ಸಂಪರ್ಕಿಸುವ ಸಾಧನ ಸಂಶೋಧಿಸಿಲ್ಲವೇ ,
ಇಡೀ ಭೂಮಂಡಲವನ್ನೇ ಕ್ಷಣಾರ್ಧದಲ್ಲಿ ನಾಶ ಮಾಡುವ ಬಾಂಬ್ ಗಳನ್ನು ಸೃಷ್ಟಿಸಿಲ್ಲವೇ.

ಇದೆಲ್ಲಾ ಸಾಧ್ಯವಾಗಿರಬೇಕಾದರೆ ಕೇವಲ ನಮ್ಮದೇ ಮನಸ್ಸುಗಳನ್ನು ನಿಯಂತ್ರಿಸಿ ಸಾಧಿಸಬಹುದಾದ ಆಡಳಿತ ರೂಪಿಸಲು ಸಾಧ್ಯವಿಲ್ಲವೇ.
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಯಾದರೆ ಇದು ಸಾಧ್ಯ.
ಆ ನಿರೀಕ್ಷೆಯಲ್ಲಿ ……..

ಏಕೆಂದರೆ,
ಯಾರ ವಿರುದ್ಧ ಹೋರಾಟ, ಯಾರ ಪರ ಹೋರಾಟ,
ಶೋಷಿತರು ಯಾರು, ಶೋಷಕರು ಯಾರು.
ನ್ಯಾಯವಾಗಿರುವವರು ಯಾರು, ಅನ್ಯಾಯವಾಗಿರುವುದು ಯಾರಿಗೆ,
ಸಂಸದೀಯ ಪ್ರಜಾಪ್ರಭುತ್ವ, ಸಂವಿಧಾನ ಏನು ಮಾಡುತ್ತಿದೆ,

ಇಡೀ ದೇಶ ಈ ರೀತಿಯ ಅತೃಪ್ತ ಆತ್ಮವೇ ? ಅಥವಾ ಇದೇ ವಾಸ್ತವ ಇದನ್ನೇ ಒಪ್ಪಿಕೊಂಡು ಬದುಕುವುದು ಜಾಣತನವೇ ಅಥವಾ ಅನಿವಾರ್ಯವೇ,

” ನಾನು ಈ ಮಣ್ಣಿನ, ಈ ಗಾಳಿಯ, ಈ ನೀರಿನ ವಾರಸುದಾರ. ನನ್ನ ಮೂಲ ಯಾವುದೇ ಇರಲಿ, ಈ ಕ್ಷಣದಿಂದ ನಾನೊಬ್ಬ ಭಾರತೀಯ, ನನ್ನ ನಿಷ್ಠೆ ಭಾರತೀಯತೆಗೆ. ”

ಭಾರತೀಯತೆ ಎಂದರೆ,…
” ಸರ್ವತಂತ್ರ, ಸ್ವತಂತ್ರ, ಸಾರ್ವಭೌಮ, ಸಮಾನತೆಯ, ಧರ್ಮಾತೀತ, ಜಾತ್ಯಾತೀತ, ಪ್ರಜ್ಞೆ, ಉಳಿದದ್ದೆಲ್ಲಾ ನಂತರ “.

ಆ ಕನಸಿನ ದಿನಗಳ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ.
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಕೆ.ಸಿ.ವ್ಯಾಲಿಯಿಂದ ಜಿಲ್ಲೆಯ ರೈತರ ಬದುಕು ಹಸನು- ಕಾಂಗ್ರೆಸ್‌ ಮುಖಂಡ ಜನಪಹಳ್ಳಿ ನವೀನ್‌

ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್‌ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…

34 minutes ago

ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು  ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…

50 minutes ago

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆ: ಮಕ್ಕಳು, ಶಿಕ್ಷಕ ಭಾವುಕ

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…

3 hours ago

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…

11 hours ago

ಚುನಾವಣಾ ಫಲಿತಾಂಶದ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…

14 hours ago

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್: ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸಲು ಸಭೆ

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…

24 hours ago