ರಾಜಕಾರಣಿ, ಅಧಿಕಾರಿ, ಧಾರ್ಮಿಕ ಮುಖಂಡರಲ್ಲಿ ನೆಲದ ಅಸ್ಮಿತೆ ಮತ್ತು ಮನುಷ್ಯ ಪ್ರಜ್ಞೆ ಜಾಗೃತವಾಗಿರಬೇಕು. ಕನ್ನಡ ಸಾಹಿತ್ಯ ಸಮ್ಮೇಳನಗಳು ಭಾವೈಕ್ಯತೆಯನ್ನು ಮೂಡಿಸುವ ಜಾತ್ರೆಗಳಾಗಿವೆ ಎಂದು ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಕನಸವಾಡಿಯಲ್ಲಿ ಶನಿವಾರ ಜಿ.ಗೋಪಿನಾಥ್ ವೇದಿಕೆಯಲ್ಲಿ ಆರಂಭಗೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಅಕ್ಷರ ಬಲ್ಲಿದ ಎಂಬ ಅಹಂಕಾರ ಸಾಹಿತಿಗೆ ಎಂದೂ ಸಲ್ಲದು. ಒಳ್ಳೆಯ ಓದುಗ ಮಾತ್ರ ಉತ್ತಮ ಸಾಹಿತಿಯಾಗಬಲ್ಲ. ಓದಿನ ಅಭಿರುಚಿಯನ್ನು ಹೆಚ್ಚಿಸುವ ಸವಾಲು ನಮ್ಮ ಮುಂದಿದೆ. ದ್ವೇಷ ಮತ್ತು ಸೇಡು ಎಲ್ಲ ವಲಯಗಳನ್ನು ಆವರಿಸಿಕೊಂಡಿದೆ. ಅವುಗಳನ್ನು ನಿಗ್ರಹಿಸಿ ಸ್ನೇಹ ಮತ್ತು ವಿಶ್ವಾಸ ಮೂಡಿಸುವುದು ಸಾಹಿತ್ಯದ ಪರಮೋಚ್ಛ ನಿಲುವಾಗಬೇಕು. ದ್ವೇಷಿಸುವ ಕಲೆಯನ್ನು ಮೈಗೂಡಿಸಿಕೊಂಡು ನಾವೆಲ್ಲಾ ಮೂರ್ಖರಾಗುತ್ತಿದ್ದೇವೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಆರಂಭದ 70 ವರ್ಷ ಬೆಂಗಳೂರಿನ ವ್ಯಾಪ್ತಿಗೇ ಸೀಮಿತವಾಗಿತ್ತು. ನಂತರದ ದಿನಗಳಲ್ಲಿ ಹಳ್ಳಿಯವರೆಗೂ ವಿಸ್ತರಿಸಿದೆ ಎಂದ ಅವರು, 5 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಸಾಂಸ್ಕೃತಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಎಂಬುದು ಗಮನೀಯ. ಸಾಹಿತ್ಯ, ಸಂಸ್ಕೃತಿಯ ರಕ್ಷಣೆ ಕಸಾಪ ಆಶಯವಾಗಿದ್ದು, ಕರ್ನಾಟಕದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಬೆಸೆದ ಸೂಯೇಜ್ ಕಾಲುವೆ ಇದಾಗಿದೆ. ಆಶಯ ತಪ್ಪಿದರೆ ಅದು ಸೀವೇಜ್ ಕಾಲುವೆಯೂ ಆಗಬಹುದು ಎಂಬ ಎಚ್ಚರ ಇರಬೇಕು ಎಂದು ಮಾರ್ಮಿಕವಾಗಿ ನುಡಿದರು.
ಆರಂಭದ ದಿನಗಳಿಂದಲೂ ಸರ್ಕಾರದ ಅನುದಾನದಲ್ಲೇ ನಡೆದರೂ ಇಲ್ಲಿಯವರೆಗೆ ಯಾವುದೇ ಸರ್ಕಾರಗಳು ಕನ್ನಡ ಸಾಹಿತ್ಯ ಪರಿಷತ್ತಿನ ವ್ಯವಹಾರಗಳಲ್ಲಿ ತಲೆಹಾಕಿಲ್ಲ. ಮುಂದೊಂದು ದಿನ ಅಂತಹ ಪರಿಸ್ಥಿತಿ ಬಂದರೆ ಅದಕ್ಕೆ ಪರಿಷತ್ತಿನವರೇ ಕಾರಣರಾಗಿರುತ್ತಾರೆ ಎಂಬುದು ಪ್ರಜ್ಞಾಪೂರ್ವಕವಾಗಿ ಯೋಚಿಸಬೇಕಾದ ಸಂಗತಿ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕನ್ನಡದ ಅಸ್ಮಿತೆ ರಕ್ಷಣೆಗೆ ಸರ್ಕಾರ ತನ್ನ ಬದ್ದತೆಯನ್ನು ಹೊಂದಿದೆ. ಕನ್ನಡದ ಕವಿ ಪರಂಪರೆ ಭಾಷೆಯ ಅನನ್ಯತೆಯನ್ನು ಹೆಚ್ಚಿಸಿದೆ. ಕನ್ನಡ ನೆಲ-ಜಲ, ಭಾಷೆಯ ಸಂರಕ್ಷಣೆ ನಮ್ಮೆಲ್ಲರ ಆದ್ಯತೆ ಆಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಕಾರ್ಯ ಚಟುವಟಿಕೆಗಳಿಗೆ ಸಹಕಾರ ಮತ್ತು ಪ್ರೋತ್ಸಾಹ ನೀಡಲಾಗುವುದು. ಪ್ರತಿಯೊಬ್ಬರಲ್ಲೂ ಕನ್ನಡದ ಪ್ರೀತಿ ಹೆಚ್ಚಬೇಕು. ಭಾಷೆ ಬಳಕೆಯಿಂದ ಮಾತ್ರ ಸದೃಢವಾಗುತ್ತದೆ. ಅಂತಹ ಕೈಂಕರ್ಯಗಳಿಗೆ ಸಮ್ಮೇಳನಗಳು ವೇದಿಕೆಯಾಗಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡುವ ಪ್ರಸ್ತಾವನೆ ಸಮರ್ಥನೀಯವಾಗಿದೆ. ಪುರಭವನ ಶಿಥಿಲಗೊಂಡಿದ್ದು, ಪುನಶ್ಚೇತನ ಅಗತ್ಯವಾಗಿದೆ. ತಾಲ್ಲೂಕಿನ ಸರ್ಕಾರಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳ ಕಟ್ಟಡ, ಮೈದಾನ ಅಭಿವೃದ್ದಿಗೆ ಸರ್ಕಾರ ಅಗತ್ಯ ನೆರವು ನೀಡಬೇಕು. ಕನ್ನಡ ಸಾಹಿತ್ಯದ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಸಮ್ಮೇಳನನಾಧ್ಯಕ್ಷರಾದ ಟಿ.ಕೆಂಪಣ್ಣ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಅಂತರ್ಜಾಲದಲ್ಲಿ ಕನ್ನಡದ ಹೆಜ್ಜೆ ಗುರುತುಗಳನ್ನು ಮೂಡಿಸಲು ಹೆಚ್ಚು ಹೆಚ್ಚು ಕನ್ನಡದ ಕಂಟೆಂಟ್ ಸೃಷ್ಟಿಯಾಗಬೇಕು. ನಾವು ಅಂತರ್ಜಾಲದಲ್ಲಿ ಕನ್ನಡದಲ್ಲಿ ಮಾಹಿತಿಯನ್ನು ಹುಡುಕಿದರೆ ಕೆಲವೊಮ್ಮೆ ದೊರೆಯುವುದಿಲ್ಲ, ದೊರೆತರೂ ಅದು ಪೂರ್ಣರೂಪದಲ್ಲಿ ಇರುವುದಿಲ್ಲ. ಕಾರಣ ಸಾಮಾನ್ಯವಾಗಿ ನಾವೆಲ್ಲರೂ ಆಂಗ್ಲ ಭಾಷೆಯಲ್ಲಿಯೇ ಮಾಹಿತಿಯನ್ನ ಹುಡುಕುವ ಪ್ರಯತ್ನ ಮಾಡುತ್ತೇವೆ. ಕನ್ನಡಿಗರು ಅಂತರ್ಜಾಲ ಸೇರಿದಂತೆ ಸಾಮಾಜಿಕ ಜಾಲತಾಲಗಳಲ್ಲಿ ಕನ್ನಡದ ಬಳಕೆ ಮಾಡಿದರೆ ಭಾಷೆಗೆ ಹೆಚ್ಚು ಮಹತ್ವ ದೊರೆಯಲಿದೆ. ಆಗ ಕನ್ನಡವು ಅಂತರ್ಜಾಲದಲ್ಲಿ ಪ್ರಧಾನವಾಗಿ ಮಿಂಚುತ್ತದೆ ಎಂದರು.
ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಸಮಾಜ ಸೇವಕ ಎಸ್.ಎಂ.ಹರೀಶ್‌ಗೌಡ, ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ರಾಜಣ್ಣ, ಜಿಲ್ಲಾ ಪರಿಷತ್ ಮಾಜಿ ಸದಸ್ಯೆ ಜಯಲಕ್ಷ್ಮಮ್ಮ ಸಿ.ಡಿ.ಸತ್ಯನಾರಾಯಣಗೌಡ, ತಹಶೀಲ್ದಾರ್ ವಿಭಾವಿದ್ಯಾ ರಾಥೋಡ್, ತಾಪಂ ಕಾರ್ಯನಿರ್ವಹಣಾಧಿಕಾರಿ ಮುನಿರಾಜು, ನಗರಸಭೆ ಆಯುಕ್ತ ಕಾರ್ತಿಕೇಶ್ವರ್, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ, ಕಾರ್ಯದರ್ಶಿ ಪ್ರೊ.ರವಿಕಿರಣ್ ಕೆ.ಆರ್, ಕೋಶಾಧ್ಯಕ್ಷ ಡಾ.ಮುನಿರಾಜು, ತಾಲೂಕು ಅಧ್ಯಕ್ಷ ಪಿ.ಗೋವಿಂದರಾಜು, ಹೋಬಳಿ ಅಧ್ಯಕ್ಷ ಜಿ.ಸುರೇಶ್, ಮಾಜಿ ಜಿಲ್ಲಾಧ್ಯಕ್ಷ ಚಿ.ಮಾ.ಸುಧಾಕರ್, ಕನಸವಾಡಿ ಗ್ರಾಪಂ ಅಧ್ಯಕ್ಷೆ ಶೋಭಾ ಹನುಮಂತರಾಜು, ಚನ್ನಾದೇವಿ ಅಗ್ರಹಾರ ಗ್ರಾಪಂ ಅಧ್ಯಕ್ಷೆ ಪ್ರೇಮಕುಮಾರಿ, ತಾಪಂ ಮಾಜಿ ಅಧ್ಯಕ್ಷರಾದ ಎಂ.ಲಕ್ಷ್ಮೀಪತಯ್ಯ, ಪ್ರಸನ್ನಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಕಸಾಪ ದತ್ತಿದಾನಿ ಚಿಕ್ಕರಾಮಕೃಷ್ಣಪ್ಪ, ವೈದ್ಯ ಡಾ.ಟಿ.ಎಚ್.ಆಂಜನಪ್ಪ, ಶನಿಮಹಾತ್ಮ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಕೆ.ವಿ.ಪ್ರಕಾಶ್ ಸೇರಿದಂತೆ ಹಲವು ಮುಖಂಡರು, ಮಧುರೆ ಹೋಬಳಿಯ ವಿವಿಧ ಸಂಘಟನೆಗಳ ಪ್ರಮುಖರು, ಸಮನ್ವಯ ಸಮಿತಿ ಸದಸ್ಯರು ಹಾಜರಿದ್ದರು.
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…