ಗೃಹಜ್ಯೋತಿಗೆ ಮನೆಮನೆ ಬಾಗಿಲು ತಟ್ಟಿದ ಬೆಸ್ಕಾಂ:

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಕಾರ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವೇಗ ಪಡೆದುಕೊಂಡಿದ್ದು, ಈಗಾಗಲೇ ಸುಮಾರು ಶೇ.90ರಷ್ಟು ಫಲಾನುಭವಿಗಳ ದಾಖಲೆಗಳ ಪರಿಶೀಲನೆ ಮತ್ತು ಮರುದೃಢೀಕರಣ ಪೂರ್ಣಗೊಂಡಿದೆ. ಬಾಕಿ ಉಳಿದಿರುವ ಫಲಾನುಭವಿಗಳನ್ನು ತಲುಪಲು ಬೆಸ್ಕಾಂ ಸಿಬ್ಬಂದಿ ಇದೀಗ ಮನೆಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿರುವ ಫಲಾನುಭವಿಗಳ ಅರ್ಹತೆ ಹಾಗೂ ದಾಖಲೆಗಳನ್ನು ಮರುಪರಿಶೀಲಿಸುವ ಪ್ರಕ್ರಿಯೆಗೆ ಆರಂಭದಲ್ಲಿ ಸಾರ್ವಜನಿಕರಲ್ಲಿ ಹಲವು ಗೊಂದಲಗಳು ಹಾಗೂ ಅಸಮಾಧಾನ ವ್ಯಕ್ತವಾಗಿದ್ದವು. ಆದರೂ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರಂತರ ಪ್ರಯತ್ನದಿಂದ ಜಿಲ್ಲೆಯಲ್ಲಿ ಮರುಪರಿಶೀಲನೆ ಕಾರ್ಯಕ್ಕೆ ವೇಗ ದೊರೆತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಒಟ್ಟು 4.58 ಲಕ್ಷ ಗೃಹಜ್ಯೋತಿ ಫಲಾನುಭವಿಗಳಿದ್ದು, ಈ ಪೈಕಿ ಸುಮಾರು 4.34 ಲಕ್ಷ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ ಮರುದೃಢೀಕರಿಸಲಾಗಿದೆ. ಉಳಿದ ಸುಮಾರು ಶೇ.10ರಷ್ಟು ಫಲಾನುಭವಿಗಳ ದಾಖಲೆಗಳ ಪರಿಶೀಲನೆಗೆ ಸೆಪ್ಟೆಂಬರ್ ತಿಂಗಳಲ್ಲಿಯೂ ಅವಕಾಶ ಕಲ್ಪಿಸಲಾಗಿದ್ದು, ಅವರನ್ನು ತಲುಪುವ ಕಾರ್ಯ ಮುಂದುವರಿದಿದೆ.

ತಾಲೂಕುವಾರು ಪ್ರಗತಿ

ನೆಲಮಂಗಲ ತಾಲೂಕಿನಲ್ಲಿ ಶೇ.90.85, ದೊಡ್ಡಬಳ್ಳಾಪುರದಲ್ಲಿ ಶೇ.87, ದೇವನಹಳ್ಳಿಯಲ್ಲಿ ಶೇ.90ರಷ್ಟು ಮರುಪರಿಶೀಲನೆ ಪೂರ್ಣಗೊಂಡಿದೆ. ಹೊಸಕೋಟೆ ತಾಲೂಕಿನಲ್ಲಿ ಒಟ್ಟು ಸುಮಾರು 1.04 ಲಕ್ಷ ಫಲಾನುಭವಿಗಳಿದ್ದು, 98,800 ಮಂದಿಯ ಮರುದೃಢೀಕರಣ ಪೂರ್ಣಗೊಂಡಿದೆ. ಇದರಿಂದ ತಾಲೂಕಿನಲ್ಲಿ ಶೇ.88ಕ್ಕೂ ಅಧಿಕ ಪ್ರಗತಿ ಸಾಧಿಸಲಾಗಿದೆ.

ಒಟ್ಟಾರೆ ಜಿಲ್ಲೆಯಲ್ಲಿ ಶೇ.90ರಷ್ಟು ಫಲಾನುಭವಿಗಳನ್ನು ಬೆಸ್ಕಾಂ ಸಿಬ್ಬಂದಿ ಸಂಪರ್ಕಿಸಿ, ಅಗತ್ಯ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಿ ಮರುದೃಢೀಕರಣ ಮಾಡಿದ್ದಾರೆ.

ಕೈಗಾರಿಕಾ ಪ್ರದೇಶಗಳೇ ದೊಡ್ಡ ಸವಾಲು

ಗೃಹಜ್ಯೋತಿ ಮರುಪರಿಶೀಲನೆಯಲ್ಲಿ ಜಿಲ್ಲೆಯ ಕೈಗಾರಿಕಾ ವಲಯಗಳು ಬೆಸ್ಕಾಂ ಸಿಬ್ಬಂದಿಗೆ ಪ್ರಮುಖ ಸವಾಲಾಗಿ ಪರಿಣಮಿಸಿವೆ. ಕೈಗಾರಿಕಾ ಪ್ರದೇಶಗಳಲ್ಲಿ ವಾಸಿಸುವ ಬಹುತೇಕ ಕಾರ್ಮಿಕರು ಮುಂಜಾನೆ 7 ಗಂಟೆಯೊಳಗೆ ಕೆಲಸಕ್ಕೆ ತೆರಳುತ್ತಿದ್ದು, ಸಂಜೆ 7 ಗಂಟೆಯವರೆಗೆ ಮನೆಗೆ ಮರಳುವುದಿಲ್ಲ.

ಹೀಗಾಗಿ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿದರೂ ಫಲಾನುಭವಿಗಳು ಲಭ್ಯವಾಗದೆ ಪರಿಶೀಲನೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಕೆಲ ಮನೆಗಳಿಗೆ ಹಲವು ಬಾರಿ ಭೇಟಿ ನೀಡಿದರೂ ಫಲಾನುಭವಿಗಳು ಸಿಗದಿರುವ ಘಟನೆಗಳೂ ನಡೆದಿವೆ. ಇದರಿಂದಾಗಿ ಅವರ ದಾಖಲೆಗಳನ್ನು ಪಡೆದು ಮರುದೃಢೀಕರಣ ಮಾಡಲು ತೊಂದರೆಯಾಗುತ್ತಿದೆ.

ಕಾರ್ಮಿಕರು ಕೆಲಸಕ್ಕೆ ತೆರಳುವ ಸಮಯ ಹಾಗೂ ಮನೆಗೆ ವಾಪಸಾಗುವ ಸಮಯವನ್ನು ಗಮನದಲ್ಲಿಟ್ಟುಕೊಂಡು, ಬೆಸ್ಕಾಂ ಸಿಬ್ಬಂದಿ ಹೆಚ್ಚುವರಿ ಸಮಯದಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಭಾನುವಾರವೂ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಾಡಿಗೆ ಕರಾರು ಇಲ್ಲದಿದ್ದರೂ ಪರ್ಯಾಯ ವ್ಯವಸ್ಥೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಉದ್ಯೋಗಕ್ಕಾಗಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂತಹ ಫಲಾನುಭವಿಗಳ ಬಳಿ ಬಾಡಿಗೆ ಕರಾರು ಪತ್ರ ಇಲ್ಲದಿರುವುದು ಮರುಪರಿಶೀಲನೆ ಸಂದರ್ಭದಲ್ಲಿ ಸಮಸ್ಯೆಯಾಗಿತ್ತು.

ಬಹುತೇಕರು ಬಾಡಿಗೆ ಒಪ್ಪಂದ ಮಾಡಿಕೊಂಡಿಲ್ಲ. ಕೆಲವರು ಮಾಡಿಕೊಂಡಿದ್ದರೂ ಅದನ್ನು ನವೀಕರಿಸಿಲ್ಲ. ಇದರಿಂದ ದಾಖಲೆ ಸಲ್ಲಿಕೆಯಲ್ಲಿ ತೊಂದರೆ ಉಂಟಾಗಿತ್ತು.

ಈ ಹಿನ್ನೆಲೆಯಲ್ಲಿ ಬೆಸ್ಕಾಂ ಸಿಬ್ಬಂದಿ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ಅಗ್ರಿಮೆಂಟ್ ಮಾದರಿಯ ಕಡತ ಸಿದ್ಧಪಡಿಸಿ, ಅಗತ್ಯ ವಿವರಗಳನ್ನು ಪಡೆದು ಸಹಿ ಮಾಡಿಸಿಕೊಂಡು ಪ್ರಕ್ರಿಯೆ ಪೂರ್ಣಗೊಳಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಇದರಿಂದ ಬಾಡಿಗೆ ಮನೆಗಳಲ್ಲಿ ವಾಸಿಸುವ ಅನೇಕ ಫಲಾನುಭವಿಗಳಿಗೆ ಅನುಕೂಲವಾಗಿದೆ.

ದುರ್ಬಳಕೆ ತಡೆಗೆ ಮರುಪರಿಶೀಲನೆ

ಗೃಹಜ್ಯೋತಿ ಯೋಜನೆಯಡಿ ನೀಡಲಾಗುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಕೆಲವರು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆ ಹಾಗೂ ಅರ್ಹತೆಯಿಲ್ಲದವರೂ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನೆಗೆ ಸರ್ಕಾರ ಮುಂದಾಗಿದೆ.

ಯೋಜನೆಯ ನೈಜ ಫಲಾನುಭವಿಗಳನ್ನು ಗುರುತಿಸುವುದು, ದಾಖಲೆಗಳನ್ನು ಪರಿಶೀಲಿಸುವುದು ಹಾಗೂ ಸೌಲಭ್ಯ ದುರ್ಬಳಕೆಯಾಗದಂತೆ ತಡೆಯುವುದು ಮರುಪರಿಶೀಲನೆಯ ಪ್ರಮುಖ ಉದ್ದೇಶವಾಗಿದೆ.

ಸೆಪ್ಟೆಂಬರ್‌ವರೆಗೆ ಅವಕಾಶ ವಿಸ್ತರಣೆ

ಆಗಸ್ಟ್ 31ರವರೆಗೆ ನಿಗದಿಯಾಗಿದ್ದ ಮರುಪರಿಶೀಲನೆ ಅವಧಿಯನ್ನು ಇನ್ನೂ ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ. ಇದರಿಂದ ಮರುಪರಿಶೀಲನೆ ಬಾಕಿ ಉಳಿದಿರುವ ಫಲಾನುಭವಿಗಳನ್ನು ಮತ್ತೊಮ್ಮೆ ಸಂಪರ್ಕಿಸಲು ಬೆಸ್ಕಾಂಗೆ ಅವಕಾಶ ದೊರೆತಿದೆ.

ಬಾಕಿ ಫಲಾನುಭವಿಗಳ ಮನೆಗಳಿಗೆ ಸಿಬ್ಬಂದಿ ಭೇಟಿ ನೀಡಿ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಫಲಾನುಭವಿಗಳು ಮನೆಯಲ್ಲಿ ಲಭ್ಯವಿಲ್ಲದಿದ್ದರೆ, ಆ ಮಾಹಿತಿಯನ್ನೂ ದಾಖಲಿಸಿ ಮುಂದಿನ ಹಂತದಲ್ಲಿ ಸಂಪರ್ಕಿಸುವ ಪ್ರಯತ್ನ ಮಾಡಲಾಗುತ್ತಿದೆ.

ಫಲಾನುಭವಿಗಳ ಮರುದೃಢೀಕರಣದ ಸ್ಥಿತಿಯನ್ನು ವಿದ್ಯುತ್ ಬಿಲ್‌ಗಳಲ್ಲಿಯೂ ನಮೂದಿಸಲಾಗುತ್ತಿದ್ದು, ಗ್ರಾಹಕರು ತಮ್ಮ ಬಿಲ್ ಪರಿಶೀಲಿಸುವ ಮೂಲಕ ಮರುಪರಿಶೀಲನೆ ಪೂರ್ಣಗೊಂಡಿದೆಯೇ ಅಥವಾ ಬಾಕಿಯಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಅಗತ್ಯ ದಾಖಲೆಗಳೇನು?

ಮರುಪರಿಶೀಲನೆ ವೇಳೆ ಫಲಾನುಭವಿಗಳು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ವಿದ್ಯುತ್ ಬಿಲ್ ನೀಡಬೇಕು. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಬಾಡಿಗೆ ಒಪ್ಪಂದದ ದಾಖಲೆ ಇದ್ದರೆ ಸಲ್ಲಿಸಬಹುದು; ಇದು ಕಡ್ಡಾಯವಲ್ಲ.

ಅಧಿಕಾರಿಗಳ ಮನವಿ

ಕುಮಾರ್ ನಾಯಕ್, ಇಇ, ಬೆಸ್ಕಾಂ ನೆಲಮಂಗಲ ವಿಭಾಗ:
“ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಯಾವುದೇ ಗೊಂದಲಕ್ಕೆ ಒಳಗಾಗದೆ, ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಮರುಪರಿಶೀಲನೆಗೆ ಸಹಕರಿಸಬೇಕು. ಬೆಸ್ಕಾಂ ವತಿಯಿಂದ ಫಲಾನುಭವಿಗಳಿಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡಲಾಗುತ್ತಿದೆ. ಸಾರ್ವಜನಿಕರ ಸಹಕಾರದಿಂದ ಯೋಜನೆಯ ಮರುಪರಿಶೀಲನೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು.”

ಚಂದ್ರಶೇಖರ್, ಇಇ, ಬೆಸ್ಕಾಂ ದೇವನಹಳ್ಳಿ ವಿಭಾಗ:
“ಮರುಪರಿಶೀಲನೆ ಬಾಕಿಯಿರುವ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಕಾರ್ಮಿಕರಿಗೆ ಅನುಕೂಲವಾಗುವಂತೆ ಭಾನುವಾರವೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇವನಹಳ್ಳಿ ವಿಭಾಗದಲ್ಲಿ ಶೇ.90ರಷ್ಟು ಮರುದೃಢೀಕರಣ ಪೂರ್ಣಗೊಂಡಿದೆ ಎಂದು

ವೆಂಕಟೇಶ್, ಇಇ, ಬೆಸ್ಕಾಂ ಹೊಸಕೋಟೆ ವಿಭಾಗ:
“ಹೊಸಕೋಟೆ ತಾಲೂಕಿನಲ್ಲಿ 98,800 ಮಂದಿ ಫಲಾನುಭವಿಗಳ ಮರುಪರಿಶೀಲನೆ ಪೂರ್ಣಗೊಂಡಿದೆ. ಕೆಲವರು ಮಾತ್ರ ಇನ್ನೂ ಸ್ಪಂದಿಸಿಲ್ಲ. ಅವರಿಗೂ ಮಾಹಿತಿ ನೀಡಿ, ಶೇ.100ರಷ್ಟು ಮರುಪರಿಶೀಲನೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ.”

Ramesh Babu

Journalist

Recent Posts

ಜನರನ್ನು ತಾಲೂಕು ಕಚೇರಿಗೆ ಅಲೆದಾಟ ತಪ್ಪಿಸಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಿ- ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಜಾ ಸೇವಾ…

14 hours ago

ಭಾರತಕ್ಕೆ ಕ್ಸಿ ಜಿನ್‌ಪಿಂಗ್ ಭೇಟಿ: ಮೋದಿ–ಕ್ಸಿ ದ್ವಿಪಕ್ಷೀಯ ಮಾತುಕತೆ ಇಂದು

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ನವದೆಹಲಿಗೆ…

18 hours ago

ಮಧುರೆ ದೇವಾಲಯದ ಬಳಿ ಮೇಲ್ಸೇತುವೆ ಅವ್ಯವಸ್ಥೆ: ಮೇಲಕ್ಕೆ ಚಾಚಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…

1 day ago

ನಾಯಿ ಕಡಿತದ ಆತಂಕಕ್ಕೆ ಲಸಿಕೆಯ ಕವಚ: ರೇಬೀಸ್ ನಿಯಂತ್ರಣಕ್ಕೆ 32 ಸಾವಿರ ಲಸಿಕೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…

1 day ago

2028ರ ಚುನಾವಣೆಗೆ ಜಾಲತಾಣವೇ ಅಸ್ತ್ರ- ಸಿಎಂಆರ್ ಶ್ರೀನಾಥ್

ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…

2 days ago

ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತೆ ವಹಿಸಲು ರೈತ ಸಂಘ ಒತ್ತಾಯ: ಕೃಷಿ ಹೊಂಡ, ಕೆರೆ-ಕುಂಟೆಗಳಲ್ಲಿ ವಿಸರ್ಜನೆಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿಗೆ ಮನವಿ

ಕೋಲಾರ : ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳ…

2 days ago