ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ- ಆರ್.ವಿ. ಮಹೇಶ್

ದೊಡ್ಡಬಳ್ಳಾಪುರ: ಬರಗಾಲದ ಸಂದರ್ಭದಲ್ಲಿ ಜಲಮೂಲಗಳ ಸಂರಕ್ಷಣೆ ಹಾಗೂ ಕೆರೆಗಳ ಪುನಶ್ಚೇತನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಳ್ಳುತ್ತಿರುವ ಕೆರೆ ಹೂಳೆತ್ತುವ ಕಾರ್ಯ ಶ್ಲಾಘನೀಯ ಎಂದು ಘಾಟಿ ಪ್ರಾಧಿಕಾರದ ಸದಸ್ಯ ಆರ್.ವಿ. ಮಹೇಶ್ ಹೇಳಿದರು.

ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇಗುಲದ ಎರಡು ಕಲ್ಯಾಣಿಗಳ ಸ್ವಚ್ಛತೆ ಹಾಗೂ ಪಾಲ್‌ಪಾಲ್‌ದಿನ್ನೆ ಕೆರೆಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಆರ್.ವಿ. ಮಹೇಶ್, ಬರಗಾಲದ ಸಂದರ್ಭದಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ಪುನಶ್ಚೇತನದ ಮೂಲಕ ಜಲಮೂಲಗಳನ್ನು ಸಂರಕ್ಷಿಸುವ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವುದು ಸಮಾಜಕ್ಕೆ ಉತ್ತಮ ಕೊಡುಗೆಯಾಗಿದೆ ಎಂದರು.

ಕೆರೆಗಳ ಹೂಳೆತ್ತುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗಲಿದೆ. ಬೋರ್‌ವೆಲ್‌ಗಳಿಗೆ ನೀರು ಮರುಪೂರಣಗೊಂಡು ನೀರಾವರಿ ಸಮಸ್ಯೆ ಕಡಿಮೆಯಾಗಲಿದೆ. ಧರ್ಮಸ್ಥಳ ಸಂಸ್ಥೆಯು ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಜಿಲ್ಲಾ ನಿರ್ದೇಶಕ ಉಮಾರಬ್ಬ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯದಲ್ಲಿ ಈವರೆಗೆ 961 ಕೆರೆಗಳ ಹೂಳೆತ್ತುವ ಕಾಮಗಾರಿ ಪೂರ್ಣಗೊಳಿಸಲಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಪ್ರತಿ ವರ್ಷ 2ರಿಂದ 3 ಕೆರೆಗಳನ್ನು ಆಯ್ಕೆ ಮಾಡಿಕೊಂಡು ಹೂಳೆತ್ತುವ ಮೂಲಕ ಪುನಶ್ಚೇತನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಘಾಟಿ ಪ್ರಾಧಿಕಾರದ ಸದಸ್ಯ ಡಾ. ರಂಗಪ್ಪ ಅಧ್ಯಕ್ಷತೆಯಲ್ಲಿ ಕೆರೆ ಆವರಣದಲ್ಲಿ ನಾಮಫಲಕ ಅನಾವರಣಗೊಳಿಸಲಾಯಿತು. ಬಳಿಕ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕಲ್ಯಾಣಿಯಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಕೆ.ಎಸ್. ರವಿ, ಲಕ್ಷ್ಮಿ ನಾಯ್ಕ್, ಹೇಮಲತಾ ರಮೇಶ್, ಲೋಟಸ್ ಅರೇನಾ ರೆಸಾರ್ಟ್ ಮಾಲೀಕ ಶ್ರೀನಿವಾಸ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹಾಲಿಂಗಯ್ಯ, ಒಕ್ಕೂಟದ ಅಧ್ಯಕ್ಷೆ ಸವಿತಾ ಆನಂದ್, ಧನಂಜಯ್, ತಾಲೂಕು ಯೋಜನಾಧಿಕಾರಿ ದಿನೇಶ್, ಜಿಲ್ಲಾ ಜನಜಾಗೃತಿ ಸದಸ್ಯ ಧರ್ಮೇಂದ್ರ, ಮಮತಾ, ರಮೇಶ್, ತಾಲೂಕು ಕೃಷಿ ಮೇಲ್ವಿಚಾರಕ ಲೋಹಿತ್ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಶೌರ್ಯ ತಂಡದ ಸದಸ್ಯರು, ರೈತ ಸಂಘದ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ವಿಎಲ್‌ಇಗಳು, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!