
ದೊಡ್ಡಬಳ್ಳಾಪುರ: ಜೂ.13ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೊಗರಿಘಟ್ಟ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಮಕ್ಕಳು ಮೃತಪಟ್ಟ ದುರ್ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ಡಿವೈಎಸ್ ಪಿ ಪಾಂಡುರಂಗ ನೇತೃತ್ವದಲ್ಲಿ ಕೃಷಿ ಹೊಂಡಗಳ ಸುರಕ್ಷತೆ ಕುರಿತು ಜಾಗೃತಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಕೃಷಿ ಹೊಂಡಗಳಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ತಡೆಯಲು ಹಲವು ಮಹತ್ವದ ಸೂಚನೆಗಳನ್ನು ನೀಡಲಾಯಿತು. ಗ್ರಾಮಾಂತರ ಠಾಣೆ ವ್ಯಾಪ್ತಿಯ ಎಲ್ಲಾ ಬೀಟ್ ಸಿಬ್ಬಂದಿಗೆ ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಇರುವ ಕೃಷಿ ಹೊಂಡಗಳ ಕುರಿತು ಮಾಹಿತಿ ಸಂಗ್ರಹಿಸುವಂತೆ ಸೂಚಿಸಲಾಗಿದೆ.

ಅಲ್ಲದೆ, ಕೃಷಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಭದ್ರತಾ ಕ್ರಮಗಳ ಅನುಷ್ಠಾನಕ್ಕೆ ಮುಂದಾಗುವಂತೆ ತಿಳಿಸಲಾಗಿದೆ.
ಫೆನ್ಸಿಂಗ್ ಅಥವಾ ಅಗತ್ಯ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಅಸುರಕ್ಷಿತ ಸ್ಥಿತಿಯಲ್ಲಿರುವ ಕೃಷಿ ಹೊಂಡಗಳ ಮಾಲೀಕರು ತಕ್ಷಣವೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
ಯಾವುದೇ ಕೃಷಿ ಹೊಂಡದಲ್ಲಿ ಅಜಾಗರೂಕತೆಯಿಂದ ಅಪಘಾತ ಸಂಭವಿಸಿ ಪ್ರಾಣಹಾನಿ ಉಂಟಾದಲ್ಲಿ, ಸಂಬಂಧಪಟ್ಟ ಕೃಷಿ ಹೊಂಡದ ಮಾಲೀಕರನ್ನೇ ಹೊಣೆಗಾರರನ್ನಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಇದರ ಜೊತೆಗೆ, ಬೀಟ್ ಸಿಬ್ಬಂದಿ ಗ್ರಾಮಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸಿ, ಮಕ್ಕಳ ಹಾಗೂ ಪೋಷಕರಲ್ಲಿ ಕೃಷಿ ಹೊಂಡಗಳ ಅಪಾಯದ ಬಗ್ಗೆ ಅರಿವು ಮೂಡಿಸುವಂತೆ ಸೂಚಿಸಲಾಗಿದೆ.
ಗ್ರಾಮ ಪಂಚಾಯಿತಿ ಪಿಡಿಒಗಳು ಹಾಗೂ ಕೃಷಿ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೃಷಿ ಹೊಂಡಗಳ ಸುತ್ತಮುತ್ತ ಮಕ್ಕಳ ಸಂಚಾರದ ಬಗ್ಗೆ ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಈ ವೇಳೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ, ಹೊಸಹಳ್ಳಿ ಠಾಣಾ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಸೇರಿದಂತೆ ಡಿವೈಎಸ್ ಪಿ ಉಪವಿಭಾಗದ ಇನ್ಸ್ ಪೆಕ್ಟರ್ ಗಳು ಇದ್ದರು.