ಸುಮಾರು ವರ್ಷಗಳಿಂದ ಕರ್ನಾಟಕದಲ್ಲಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ಅವರು ಎದುರಿಸುವ ಬಹುದೊಡ್ಡ ಸಮಸ್ಯೆ ಜನರಿಗೆ ಹೇಗೆ ಅತ್ಯುತ್ತಮ ಸೇವೆ ಒದಗಿಸಬೇಕು ಎಂಬುದಲ್ಲ, ಬದಲಾಗಿ ಸಚಿವ ಸಂಪುಟದ ವಿಸ್ತರಣೆ ಮತ್ತು ಖಾತೆಗಳ ಹಂಚಿಕೆ……..
ಮುಖ್ಯಮಂತ್ರಿಯಾದವರು ತಮ್ಮ ಆಡಳಿತದ ಬಹುತೇಕ ಸಮಯವನ್ನು ಇದರ ಬಗ್ಗೆ ಯೋಚಿಸುವುದರಲ್ಲಿ ಮತ್ತು ಶಾಸಕರನ್ನು ಸಮಾಧಾನ ಮಾಡಿ ಹಿಡಿದಿಟ್ಟುಕೊಳ್ಳುವಲ್ಲಿಯೇ ಕಳೆದು ಬಿಡುತ್ತಾರೆ. ಜನರ ಬಗ್ಗೆ ಚಿಂತಿಸಲು ಅವರ ಬಳಿ ತುಂಬಾ ಕಡಿಮೆ ಸಮಯವಿರುತ್ತದೆ.
ನಿಮಗೆ ತಿಳಿದಿರಬಹುದು,
ಸರ್ಕಾರದ ಬಳಿ 34 ಮಂತ್ರಿಗಳ ಸ್ಥಾನ ಮತ್ತು ಮುಖ್ಯವಾಗಿ ಸುಮಾರು 75 ಇಲಾಖೆಗಳನ್ನು ಆಡಳಿತದ ಅನುಕೂಲಕ್ಕಾಗಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಪಕ್ಷದ ಶಾಸಕರು ಅವರ ದೃಷ್ಟಿಯಲ್ಲಿ ಅತಿ ಮಹತ್ವದ ಇಲಾಖೆ ಎಂದು ಪರಿಗಣಿಸುವುದು ಯಾವುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.
ಗೃಹ ಖಾತೆ…..
ಪೋಲಿಸರು – ಕಳ್ಳರು – ವಂಚಕರು – ದಗಾಕೋರರು – ಕೊಲೆಗಡುಕರಿಗೆ ಸಂಬಂಧಿಸಿದ ಮತ್ತು ಜನರಿಗೆ ಮುಖ್ಯವಾಗಿ ಶ್ರೀಮಂತರು – ರಾಜಕಾರಣಿಗಳು – ವಿಐಪಿಗಳಿಗೆ ರಕ್ಷಣೆ ಕೊಡುವುದಕ್ಕೆ ಸಂಬಂಧಪಟ್ಟ ಈ ಇಲಾಖೆ ಅತ್ಯಂತ ಬೇಡಿಕೆಯ ಇಲಾಖೆ. ಅನಧಿಕೃತವಾಗಿ ಬಹುತೇಕ ಸಂಪುಟದ ಎರಡನೇ ಸ್ಥಾನ ಇದಕ್ಕಿದೆ. ಸಾಮಾನ್ಯ ಜನರಿಗೆ ಇದರಿಂದ ಅಂತಹ ನೇರ ಉಪಯೋಗವಿಲ್ಲ, ಅಂದರೆ ಭಾಗವಹಿಸುವಿಕೆ ಕಡಿಮೆ. ಆದರೆ ಭ್ರಷ್ಟ ಹಣ ಇಲ್ಲಿ ತಾನೇ ತಾನಾಗಿ ಹರಿದು ಬರುತ್ತದೆ. ಕೇವಲ ವರ್ಗಾವಣೆಯೇ ನೂರಾರು ಕೋಟಿಗಳ ವ್ಯವಹಾರ.
ಹಣಕಾಸು ಖಾತೆ….
ಮೇಲ್ನೋಟಕ್ಕೆ ಅತ್ಯಂತ ಮಹತ್ವದ ಖಾತೆ ಎನಿಸಿದರೂ ಇಂದಿನ ಸಂದರ್ಭಗಳಲ್ಲಿ ಎಲ್ಲಾ ಸೂಕ್ಷ್ಮತೆಯನ್ನು ಕಳೆದುಕೊಂಡು ಸಾಮಾನ್ಯ ಜನರಿಗೆ ಕೇವಲ ಇದೊಂದು ಅಂಕಿಅಂಶಗಳ ಆಟ ಮಾತ್ರ. ಆದರೆ ರಾಜಕಾರಣಿಗಳಿಗೆ ಹಣದ ಹಂಚಿಕೆಯ ಮೇಲೆ ನಿಯಂತ್ರಣ ಇರುವುದರಿಂದ ಕುಳಿತಲ್ಲೇ ಸಾವಿರಾರು ಕೋಟಿಗಳನ್ನು ನುಂಗಬಹುದು ಎಂಬ ಕಾರಣಕ್ಕಾಗಿ ಇದು ಬಹು ಮಹತ್ವ ಹೊಂದಿದೆ.
ಕಂದಾಯ, ಲೋಕೋಪಯೋಗಿ ಮತ್ತು ಇಂಧನ ಖಾತೆಗಳು…….
ಇಡೀ ರಾಜ್ಯದ ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ನೇರ ಹಿಡಿತ ಸಾಧಿಸುವ ಮತ್ತು ಅಪಾರ ಹಣದ ಹರಿವನ್ನು ಹೊಂದಿರುವ ಖಾತೆಗಳಿವು. ರಸ್ತೆಗಳ ನಿರ್ಮಾಣ, ತೆರಿಗೆ, ವಿದ್ಯುತ್, ಬೃಹತ್ ಕಟ್ಟಡಗಳ ನಿರ್ವಹಣೆ, ಬರ ಪರಿಹಾರ ಎಲ್ಲವೂ ಇದಕ್ಕೆ ಒಳಪಡುತ್ತದೆ. ಹಣ ನೀರಿನಂತೆ ಹರಿದು ಬರುವ ಕಾರಣ ಇದಕ್ಕಾಗಿ ಬಹಳ ಪೈಪೋಟಿ ನಡೆಸುತ್ತದೆ.
ಜಲ ಸಂಪನ್ಮೂಲ ಖಾತೆ….
ವಾಸ್ತವವಾಗಿ ಅತ್ಯಂತ ಸೂಕ್ಷ್ಮ ಮತ್ತು ಅತಿ ಬುದ್ದಿವಂತಿಕೆ, ಚಾಕಚಕ್ಯತೆ, ದೂರದೃಷ್ಟಿ ಬಯಸುವ ಇಲಾಖೆಯಿದು. ಆದರೆ ಬಹುದೊಡ್ಡ ಹಣಕಾಸಿನ ಮೂಲ ಇಲ್ಲಿರುವುದರಿಂದ, ಕಂಟ್ರಾಕ್ಟರುಗಳ ಪಾಲಿನ ಸ್ವರ್ಗ ಇದಾಗಿರುವುದರಿಂದ ಇದಕ್ಕೂ ಶಾಸಕರಲ್ಲಿ ಹೆಚ್ಚಿನ ಮಹತ್ವ ಪಡೆದಿದೆ.
ಬೃಹತ್ ಕೈಗಾರಿಕಾ ಖಾತೆ…..
ಇತ್ತೀಚಿನ ದಿನಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿರುವುದರಿಂದ, ಭೂಮಿಯ ಬೆಲೆ ಗಗನಕ್ಕೇರಿರುವುದರಿಂದ, ಅಲ್ಲದೆ ಕೆಲವೇ ಶ್ರೀಮಂತ ಉದ್ಯಮಿಗಳು ಇಲ್ಲಿನ ಅತಿಯಾದ ಮಾರುಕಟ್ಟೆ ಮೋಹಿ ಜನಸಂಖ್ಯೆಯನ್ನು ಸುಲಭವಾಗಿ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಕೇವಲ ಕೈಗಾರಿಕೆಗಳಿಗೆ ಅನುಮತಿ ನೀಡುವುದರಲ್ಲಿಯೇ ಅಪಾರ ಪ್ರಮಾಣದ ಹಣ ಸಂಪಾದನೆ ಮಾಡಬಹುದು.
ಅಬಕಾರಿ……
ಕುಳಿತಲ್ಲೇ ಕಾರ್ಯನಿರ್ವಹಿಸಿ ಅಪಾರ ಹಣ ತನ್ನಿಂದ ತಾನೇ ಹರಿದು ಬರುವಂತೆ ಮಾಡುವ ಬಹುತೇಕ ಕುಡುಕರಿಗೆ ಮಾತ್ರ ಸಂಬಂಧಿಸಿದ ಈ ಇಲಾಖೆ ಕೂಡ ನಮ್ಮ ಶಾಸಕರುಗಳಿಗೆ ಮಹತ್ವ ಎಂಬುದು ನಮ್ಮ ಸಮಾಜದ ದುರಂತ…..
ಗಣಿ ಖಾತೆ…..
ಅಭಿವೃದ್ಧಿಯ ಹೆಸರಿನಲ್ಲಿ ಭೂಮಿಯನ್ನೇ ಬಗೆಯುವ ಅದರ ಮೂಲಕ ಹಣದ ಹೊಳೆಯನ್ನೇ ಹರಿಸುವ ಗಣಿ ಖಾತೆಯೂ ಮಹತ್ವ ಪಡೆದಿರುವುದು ಶಾಸಕರ ದುರಾಸೆಯ ಪರಮಾವಧಿ.
ಸಹಕಾರ, ಸಾರಿಗೆ, ವೈದ್ಯಕೀಯ, ಸಮಾಜ ಕಲ್ಯಾಣ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಪ್ರವಾಸೋದ್ಯಮ ಖಾತೆಗಳು………
ಇವು ಜನರಿಗೆ ನೇರವಾಗಿ ಸಂಬಂಧ ಪಟ್ಟ ಖಾತೆಗಳು.
ಆದರೆ ಇವುಗಳು ಶಾಸಕರ ದೃಷ್ಟಿಯಲ್ಲಿ ಮಧ್ಯಮ ಗಾತ್ರದ ಸಮಾಧಾನಕರ ಖಾತೆಗಳು. ಏಕೆಂದರೆ ಇಲ್ಲಿ ಕೆಲಸ ಹೆಚ್ಚು. ಜನರ ನಿರೀಕ್ಷೆಗಳು ಆಕಾಂಕ್ಷೆಗಳು ತುಂಬಾ ಇರುತ್ತವೆ. ಮೇಲಿನ ಇಲಾಖೆಗಳಂತೆ ಕುಳಿತಲ್ಲೇ ಹಣ ಹರಿದು ಬರುವುದು ಸ್ವಲ್ಪ ಕಡಿಮೆ. ತಂತ್ರ ಕುತಂತ್ರ, ಟೆಂಡರು, ವಿವಿಧ ಅನವಶ್ಯಕ ಯೋಜನೆಗಳನ್ನು ರೂಪಿಸಿ ಹಣ ಮಾಡಿಕೊಳ್ಳಬೇಕು. ಇಲ್ಲಿ ದಂಧೆಗಳನ್ನು ನಿರ್ವಹಿಸುವ ಏಜೆಂಟರು ಸಹ ಬಹಳಷ್ಟು ಸಕ್ರಿಯವಾಗಿರುತ್ತಾರೆ. ಪಕ್ಷಗಳ ಸ್ಥಳೀಯ ಹಿಂಬಾಲಕರು ಆ ಕೆಲಸವನ್ನು ನಿರ್ವಹಿಸುತ್ತಾರೆ.
ಇದನ್ನು ಹೊರತುಪಡಿಸಿ ಇನ್ನೂ ಕೆಲವು ಇಲಾಖೆಗಳು ಶಾಸಕರ ದೃಷ್ಟಿಯಲ್ಲಿ ನಿಷ್ಪ್ರಯೋಜಕ ಎಂದು ಪರಿಗಣಿಸಲ್ಪಟ್ಟಿದೆ. ವಿಚಿತ್ರ ನೋಡಿ…..
ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು, ಸಕ್ಕರೆ, ಕಾರ್ಮಿಕ ಇಲಾಖೆ, ದೇವಸ್ಥಾನಗಳ ನಿರ್ವಹಣೆಯ ಮುಜರಾಯಿ ಇಲಾಖೆ, ಮಾನವ ಕೌಶಲ ಅಭಿವೃದ್ಧಿ ಖಾತೆ, ಅರಣ್ಯ ಖಾತೆ…….
ಇವುಗಳನ್ನು ನಿರ್ವಹಿಸಲು ಅತ್ಯಂತ ಜಾಣ್ಮೆ, ಕ್ರಿಯಾಶೀಲತೆ ಮತ್ತು ಸೇವಾ ಮನೋಭಾವದ ಅವಶ್ಯಕತೆ ಇದೆ. ಹಣಕಾಸಿನ ಹಂಚಿಕೆಯೂ ಇದರಲ್ಲಿ ಕಡಿಮೆ ಇದೆ. ಅದಕ್ಕಾಗಿ ಈ ಖಾತೆಗಳಿಗೆ ಅಂತಹ ಬೇಡಿಕೆ ಇಲ್ಲ. ಮಂತ್ರಿಯಾದರೆ ಸಾಕು ಎನ್ನುವವರಿಗೆ ಅಥವಾ ಸ್ವಲ್ಪ ಸಾಧು ಸ್ವಭಾವದವರಿಗೆ ಇವುಗಳನ್ನು ಕೊಡಲಾಗುತ್ತದೆ.
ಸಂಸದೀಯ ಕಾನೂನು ಮುಂತಾದ ಕೆಲವು ಇಲಾಖೆಗಳು ರಾಜಕೀಯ ಮಹತ್ವ ಪಡೆದಿದೆ. ಅಲ್ಲಿ ಹಣಕ್ಕಿಂತ ರಾಜಕೀಯ ನಿರ್ವಹಣೆ ಮುಖ್ಯವಾಗುತ್ತದೆ.
ಹೀಗೆ ಶಾಸಕರ ದೃಷ್ಟಿಯಲ್ಲಿ ಯಾವ ಯಾವ ಖಾತೆಗಳು ಹೆಚ್ಚು ಹೆಚ್ಚು ಮಹತ್ವ ಪಡೆದಿವೆ ಎಂಬುದನ್ನು ಗಮನಿಸಿದಾಗ ನಮ್ಮ ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ಗಮನಿಸಬಹುದು.
ಬದಲಾವಣೆ ಎಲ್ಲಿಂದ ಪ್ರಾರಂಭಿಸಬೇಕು.
ಜನರಿಂದಲೋ, ಜನರ ಪ್ರತಿನಿಧಿಗಳಿಂದಲೋ,
ಕಾನೂನುಗಳಿಂದಲೋ, ದೇವರಿಂದಲೋ, ಭೂತದಿಂದಲೋ ಅಥವಾ ಕೊನೆಗೆ ಪ್ರಕೃತಿಯೇ ನಮಗೆ ಪಾಠ ಕಲಿಸಬಹುದೇ, ಏಕೆಂದರೆ……….
ಬಾನಿಗೊಂದು ಎಲ್ಲೆ ಎಲ್ಲಿದೇ…
ನಿನ್ನಾಸೆಗೆಲ್ಲಿ ಕೊನೆಯಿದೇ ಎಂಬ
ಕನ್ನಡ ಸಿನಿಮಾ ಹಾಡು ನೆನಪಾಗುತ್ತಿದೆ…….
ಸ್ವಾತಂತ್ರ್ಯ ನಂತರ ಕರ್ನಾಟಕದ ಮುಖ್ಯಮಂತ್ರಿಗಳಾದವರು ಸುಮಾರು ಒಟ್ಟು 23 ಜನ. ಕರ್ನಾಟಕದ ಜನಸಂಖ್ಯೆ ಈಗ 7 ಕೋಟಿಯಾದರು ಪ್ರಜಾಪ್ರಭುತ್ವ ಸ್ಥಾಪನೆಯಾಗಿ ಸುಮಾರು 76 ವರ್ಷಗಳಲ್ಲಿ ಕೋಟ್ಯಂತರ ಜನ ಹುಟ್ಟು ಸಾವುಗಳನ್ನು ಕಂಡಿದ್ದಾರೆ. ಅವರಲ್ಲಿ ಕೇವಲ 23 ಜನರಿಗೆ ಮಾತ್ರ ಮುಖ್ಯಮಂತ್ರಿಯಾಗುವ ಅವಕಾಶ ದೊರೆತಿದೆ. ಅದೊಂದು ರಾಜ್ಯದ ಅತ್ಯುನ್ನತ ಅಧಿಕಾರ ಸ್ಥಾನ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ 24 ನೆಯ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ.
ಒಂದು ಆಸಕ್ತಿದಾಯಕ ವಿಷಯವೆಂದರೆ ಈಗ ಮುಖ್ಯಮಂತ್ರಿ ಮತ್ತು 34 ಮಂತ್ರಿಗಳ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಬಹಳಷ್ಟು ವ್ಯಕ್ತಿಗಳ/ಶಾಸಕರ ವಯಸ್ಸು ಸುಮಾರು 60 ರಿಂದ 80 ರ ವರೆಗೂ ಇದೆ. ಜೊತೆಗೆ ಬಹಳಷ್ಟು ಜನ 4/5/6/7/8 ಬಾರಿ ಶಾಸಕರು, ಮಂತ್ರಿಗಳು ಆಗಿ ಅಧಿಕಾರ ಅನುಭವಿಸಿದ್ದಾರೆ. ಮಕ್ಕಳು – ಮೊಮ್ಮಕ್ಕಳಿಗೆ ಆಗುವಷ್ಟು ಹಣ ಆಸ್ತಿ ಹೆಸರು ಮಾಡಿದ್ದಾರೆ. ಆದರೂ…….
ಕರ್ನಾಟಕದ ಸುಮಾರು 7 ಕೋಟಿ ಜನರಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಜನ 60 ವರ್ಷ ದಾಟುವ ಮುನ್ನವೇ ಹೃದಯಾಘಾತ, ಕ್ಯಾನ್ಸರ್, ಅಪಘಾತ ಮುಂತಾದ ಕಾರಣಗಳಿಂದ ಇಹಲೋಕ ತ್ಯಜಿಸಿತ್ತಾರೆ. ಪ್ರಾಕೃತಿಕ ವಿಕೋಪಗಳಿಂದ ಇನ್ನೊಂದಿಷ್ಟು ಜನ ಸಾಯುತ್ತಾರೆ.
ಬದುಕಿರುವವರಲ್ಲಿ ಅನೇಕ ಜನ ಇನ್ನೂ ವಿಮಾನ ಯಾನ ಮಾಡಿಲ್ಲ, ವಿದೇಶ ನೋಡಿಲ್ಲ, ಫೈವ್ ಸ್ಟಾರ್ ಹೋಟೆಲ್ ಪ್ರವೇಶ ಪಡೆದಿಲ್ಲ, ಸ್ವಂತ ಕಾರು ಹೊಂದಿಲ್ಲ, ಸ್ವಂತ ಮನೆ ಹೊಂದಿಲ್ಲ, ಕೆಲವರು ಬೆಂಗಳೂರನ್ನೂ ನೋಡಿಲ್ಲ.
ಈ ಎಲ್ಲಾ ಜನರು ಹುಟ್ಟಿರುವುದು ಇದೇ ಕರುನಾಡಿನಲ್ಲಿ. ಎಲ್ಲರಿಗೂ ತಿಳಿದಿರುವ ಈ ವಿಷಯವನ್ನು ಈಗ ಏಕೆ ನೆನಪಿಸಬೇಕಾಯಿತೆಂದರೆ….
ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಎಂಬ ಇಬ್ಬರು ವ್ಯಕ್ತಿಗಳ ನಡುವಿನ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಸುತ್ತಿರುವ ಅಧಿಕಾರ ಹಂಚಿಕೆಯ ಹೋರಾಟ. ಇದು ಅಷ್ಟು ಸುಲಭವಾಗಿ ನಿಲ್ಲುವುದಿಲ್ಲ. ಅವಕಾಶ ಸಿಗದ ಮತ್ತೊಬ್ಬರು ಒಳಗೊಳಗೆ ಕಾರ್ಯತಂತ್ರ ರೂಪಿಸುತ್ತಾರೆ. ಅವರಿಗೆ ಜೊತೆಯಾಗಲು ಮಂತ್ರಿ ಸ್ಥಾನ ದೊರಕದ ಮತ್ತಷ್ಟು ಹಿರಿ ಕಿರಿ ತಲೆಗಳು ಜೊತೆಯಾಗುತ್ತವೆ. ಏಕೆಂದರೆ ಈ ಬಾರಿ 136 ರಷ್ಟು ದೊಡ್ಡ ಸಂಖ್ಯೆಯ ಶಾಸಕರು ಮತ್ತು ಅತ್ಯಂತ ಹಿರಿಯರು ಆಯ್ಕೆಯಾಗಿದ್ದಾರೆ. ಬಹುತೇಕ ಅವರೆಲ್ಲರೂ ಹಕ್ಕು ಮಂಡಿಸುತ್ತಾರೆ. ಮಂತ್ರಿಗಳಾದವರು ಒಳ್ಳೆಯ ಖಾತೆಗೆ ಕ್ಯಾತೆ ತೆಗೆಯುತ್ತಾರೆ. ಮತ್ತೆ ಅಲ್ಲಿ ವಂಚಿತರು ಸ್ಪೋಟಗೊಳ್ಳುತ್ತಾರೆ.
ಇದು ಇಷ್ಟಕ್ಕೆ ಮುಗಿಯುವುದಿಲ್ಲ. ಬಂಡಾಯವನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುವುದರಲ್ಲಿ ಯಾವುದೇ ನೈತಿಕತೆ ಉಳಿಸಿಕೊಳ್ಳದ ಭಾರತೀಯ ಜನತಾ ಪಕ್ಷ ಬಕ ಪಕ್ಷಿಯಂತೆ ಕಾಯುತ್ತಿರುತ್ತದೆ. ಸ್ವಲ್ಪ ಅವಕಾಶ ಸಿಕ್ಕಿದರೂ ಅನೈತಿಕ ವ್ಯವಹಾರ ಕುದುರಿಸುತ್ತದೆ.
ಬಹುತೇಕ ರಾಜಕಾರಣಿಗಳ ಮನಸ್ಥಿತಿಯೇ ಹೀಗಿರುತ್ತದೆ. 5 ವರ್ಷದ ನಂತರ ಹಿಂದಿನ ಭ್ರಷ್ಟರು ದುಷ್ಟರು ಇಂದಿನ ದೇವ ಮಾನವರಂತೆ ಕಾಣುತ್ತಾರೆ.
ಇದು ಕೇವಲ ಒಂದು ಪಕ್ಷದ ರೋಗವಲ್ಲ. ಕರ್ನಾಟಕದ ಮೂರೂ ಪ್ರಮುಖ ಪಕ್ಷಗಳ ಸಾಂಕ್ರಾಮಿಕ ರೋಗ. ಬಹಳ ಹಿಂದಿನಿಂದಲೂ ನಡೆಯುತ್ತಾ ಬಂದಿದೆ.
ನಾವು ಮಾತ್ರ ಮತದಾನ ಪವಿತ್ರ ದಾನ, ನಿಮ್ಮ ಮತ ಮಾರಾಟ ಮಾಡಬೇಡಿ ಎಂದು ಕೇವಲ 1/2//3 ಸಾವಿರ ತೆಗೆದುಕೊಳ್ಳುವ ಅನಿವಾರ್ಯ ಅಮಾಯಕ ಮುಗ್ಧ ಮೂರ್ಖ ಜನರಿಗೆ ತಿಳಿವಳಿಕೆ ನೀಡುತ್ತೇವೆ. ದೊಡ್ಡ ಭ್ರಷ್ಟ ಕುಳಗಳನ್ನು ಆರಾಧಿಸುತ್ತೇವೆ.
ಎಲ್ಲವೂ ಸರಿ, ಆದರೆ ಸರಿ ಮಾಡುವುದು ಹೇಗೆ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವ ಪ್ರಶ್ನೆಗಳೊಂದಿಗೆ ಚರ್ಚೆಗಳು ಮುಕ್ತಾಯವಾಗುತ್ತದೆ.
ನಿಜವಾಗಲೂ ರಾಜಕೀಯ ಎಂಬುದು ಒಂದು ಸೇವೆ. ಈ ಕ್ಷೇತ್ರ ಕೇವಲ ಪ್ರಾಮಾಣಿಕತೆ ಮತ್ತು ದಕ್ಷತೆಯನ್ನು ಮಾತ್ರ ಬಯಸುವುದಿಲ್ಲ. ತ್ಯಾಗ ಮನೋಭಾವ ಸಹ ಇರಬೇಕಾಗುತ್ತದೆ. ಆ ರೀತಿಯ ಜನ ಚಳವಳಿಯೊಂದು ಪರ್ಯಾಯವಾಗಿ ರೂಪಗೊಳ್ಳಲು ಪ್ರಯತ್ನಗಳು ನಡೆಯಬೇಕು. ಇಲ್ಲದಿದ್ದರೆ ಈ ಪಕ್ಷಗಳೇ 5 ವರ್ಷಗಳ ಸರದಿಯಲ್ಲಿ ಮತ್ತೆ ಮತ್ತೆ ಆಯ್ಕೆಯಾಗಿ ಜನರನ್ನು ವಂಚಿಸುತ್ತವೆ.
ಯಾರು ಎಷ್ಟೇ ಜಗಳವಾಡಿದರೂ ಇರುವುದು ಒಂದೇ ಸ್ಥಾನ. ಒಬ್ಬರಿಗೆ ಮಾತ್ರ ಸಿಗುತ್ತದೆ. ಕಿತ್ತಾಡಿ ರಾಜ್ಯದ ಜನರ ಮುಂದೆ ಬೆತ್ತಲಾಗದೇ ಹೇಗೋ ಹಂಚಿಕೊಂಡು ರಾಜ್ಯದ ಜನರ ಜೀವನಮಟ್ಟ ಸುಧಾರಿಸಲು ಪ್ರಯತ್ನಿಸಿ. ಇದು ಎಲ್ಲಾ ಶಾಸಕರಿಗೂ ಅನ್ವಯ.
ಎಚ್ಚರಿಕೆ : ಇತ್ತೀಚಿನ ವರ್ಷಗಳಲ್ಲಿ ಸಾವು ಎಲ್ಲರ ಬೆನ್ನ ಹಿಂದೆ ಹೊಂಚು ಹಾಕಿ ಕುಳಿತಿದೆ. ಅದು ನಮಗೆಲ್ಲ ಸ್ಪಷ್ಟವಾಗಿ ಕಾಣುತ್ತಿದೆ. ಆದ್ದರಿಂದ….
” ಒಳಿತು ಮಾಡು ಮನುಷ್ಯ,
ನೀನು ಇರುವುದು ಮೂರು ದಿವಸ ”
ಎಂಬ ಸಿನಿಮಾ ಹಾಡನ್ನು ಮತ್ತೆ ನೆನಪಿಸುತ್ತಾ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ ಎಚ್.ಕೆ
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…