
ದೊಡ್ಡಬಳ್ಳಾಪುರ: ಅಲ್ಯೂಮಿನಿಯಂ ವಿದ್ಯುತ್ ಕೇಬಲ್ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು, ಅಂತರರಾಜ್ಯ ಕೇಬಲ್ ಕಳ್ಳರ ಜಾಲವನ್ನು ಭೇದಿಸಿ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
ಜುಲೈ 11 ಹಾಗೂ ಜುಲೈ 14ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣಗಳ ತನಿಖೆ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣ ಸಂಬಂಧ ದಾಖಲಾಗಿದ್ದ ಎರಡು ಎಫ್‌ಐಆರ್‌ಗಳ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಬಂಧಿತರಿಂದ ಸುಮಾರು 15 ಲಕ್ಷ ರೂ. ಮೌಲ್ಯದ ಅಲ್ಯೂಮಿನಿಯಂ ಕೇಬಲ್, ಕಳ್ಳತನಕ್ಕೆ ಬಳಸಿದ್ದ ವಾಹನಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಆರೋಪಿಗಳು ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ತನಿಖೆ ಮುಂದುವರಿದಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಚಂದ್ರಕಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ಪ್ರಸನ್ನ, ಲಕ್ಷ್ಮಿ ನಾರಾಯಣ ಹಾಗೂ ಡಿವೈಎಸ್ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ ನೇತೃತ್ವದ ತಂಡವು ಈ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತ ಆರೋಪಿಗಳು ಅಂತರರಾಜ್ಯ ಮಟ್ಟದಲ್ಲಿ ಕೇಬಲ್ ಕಳ್ಳತನ ನಡೆಸುತ್ತಿದ್ದ ಜಾಲದ ಆರೋಪಿಗಳಾಗಿದ್ದು, ಇವರ ವಿರುದ್ಧ ಇನ್ನಷ್ಟು ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಆರೋಪಿಗಳ ವಿವರ:
ಎ1, ಮಿಜಾನೂರ್ ರೆಹಮಾನ್ (31), ಅಸ್ಸಾಂ
ಎ2, ಸುಮನ್ (21), ಪಶ್ಚಿಮ ಬಂಗಾಳ
ಎ3, ಕಾಮರೂಲ್ ಮಂಡಲ್(29) ಪಶ್ಚಿಮ ಬಂಗಾಳ
ಎ4, ಅಮಿತ್ ಹಾಲದಾರ್(23) ಛತ್ತೀಸ್ಗಢ
ಎ5, ಸುಮಾನ್ ಶೇಕ್(30) ಪಶ್ಚಿಮ ಬಂಗಾಳ
ಎ6, ರೋಹಿತ್ ಹಾಲ್ದಾರ್(23) ಛತ್ತೀಸ್ಗಢ
ಎ7, ಮಜೀದ್ ಶೇಕ್(44) ಪಶ್ಚಿಮ ಬಂಗಾಳ
ಎ8, ಸಾಯಿದುಲ್ ಶೇಕ್(31) ಪಶ್ಚಿಮ ಬಂಗಾಳ
ಈ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ನಾರಾಯಣಸ್ವಾಮಿ, ವಿನಾಯಕ ಪಾಟೀಲ್, ನಾಗರಾಜು, ರಾಧಾಕೃಷ್ಣ, ರಂಗನಾಥ, ಸುನೀಲ್ ಭಾಸಗಿ, ಮಂಜುನಾಥ್, ಚಂದ್ರಶೇಖರ, ನಟರಾಜ್, ಸಚಿನ್ ಉಪ್ಪಾರ್, ಪ್ರವೀಣ್ ಸೇರಿದಂತೆ ಇತರರು ಇದ್ದರು.
ಪೊಲೀಸರ ಈ ಕಾರ್ಯಾಚರಣೆಯಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.