ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದ್ದು, ಮೂರು ರಾಜ್ಯಗಳ ರಾಜ್ಯಪಾಲರ ಹುದ್ದೆಗಳಲ್ಲಿ ಬದಲಾವಣೆ ಘೋಷಿಸಿದ್ದಾರೆ. ಈ ನೇಮಕಾತಿಗಳ ಭಾಗವಾಗಿ ಕರ್ನಾಟಕಕ್ಕೂ ನೂತನ ರಾಜ್ಯಪಾಲರ ನೇಮಕವಾಗಿದ್ದು, ಡಾ. ಸುಧಾ ಯಾದವ್ ಅವರು ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಲಿದ್ದಾರೆ.
ಪ್ರಸ್ತುತ ಸಿಕ್ಕಿಂ ರಾಜ್ಯಪಾಲರಾಗಿರುವ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಕೇರಳದ ರಾಜ್ಯಪಾಲರಾಗಿರುವ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ತಮಿಳುನಾಡಿನ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಬ್ರಜ್ ಮೋಹನ್ ರಾಮ್ ಅವರನ್ನು ಒಡಿಶಾದ ರಾಜ್ಯಪಾಲರನ್ನಾಗಿ, ಡಾ. ಧಾಲ್ ಸಿಂಗ್ ಬಿಸೆನ್ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ದುಷ್ಯಂತ್ ಗೌತಮ್ ಅವರು ಓಂ ಪ್ರಕಾಶ್ ಮಾಥುರ್ ಅವರ ಉತ್ತರಾಧಿಕಾರಿಯಾಗಿ ಸಿಕ್ಕಿಂನ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಡಾ. ಸುಧಾ ಯಾದವ್ ಅವರು ಶೈಕ್ಷಣಿಕ ಸಾಧನೆ ಹಾಗೂ ಸಾರ್ವಜನಿಕ ಸೇವೆಯ ಅನುಭವ ಹೊಂದಿದ್ದಾರೆ. ಐಐಟಿ ರೂರ್ಕಿಯಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುವ ಅವರು, 1999 ರಿಂದ 2004 ರವರೆಗೆ ಹರಿಯಾಣದ ಮಹೇಂದ್ರಗಢ ಲೋಕಸಭಾ ಕ್ಷೇತ್ರದಿಂದ 13ನೇ ಲೋಕಸಭೆಯ ಸದಸ್ಯೆಯಾಗಿ ಆಯ್ಕೆಯಾಗಿದ್ದರು.
ಗಡಿಭದ್ರತಾ ಪಡೆಯ ಡೆಪ್ಯುಟಿ ಕಮಾಂಡೆಂಟ್, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿರುವ ಯೋಧ ಸುಖ್‌ಬೀರ್ ಸಿಂಗ್ ಯಾದವ್ ಅವರ ಪತ್ನಿಯಾಗಿರುವ ಸುಧಾ, ಶೈಕ್ಷಣಿಕ ಸಂಶೋಧನೆಯಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.
ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದ ಅವರು ಪ್ರಸ್ತುತ ಅವರು ಬಿಜೆಪಿ ಸಂಸದೀಯ ಮಂಡಳಿ ಸದಸ್ಯೆಯಾಗಿದ್ದಾರೆ.
ರಾಷ್ಟ್ರಪತಿಗಳ ಘೋಷಣೆಯ ಪ್ರಕಾರ, ನೂತನ ರಾಜ್ಯಪಾಲರ ನೇಮಕಾತಿಗಳು ಅವರು ಆಯಾ ರಾಜ್ಯಗಳ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರಲಿವೆ.
