ಕರ್ನಾಟಕದಲ್ಲಿ ಮಂಜಿನ ಮುಸುಕು; ಎಲ್ ನೀನೋ ಪ್ರಭಾವದಿಂದ ಚಳಿ ಕಡಿಮೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಚಳಿಗಾಲದ ಆರಂಭದ ಸೂಚನೆಗಳು ಕಾಣಿಸತೊಡಗಿದ್ದು, ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಮಂಜಿನ ವಾತಾವರಣ ಆವರಿಸುತ್ತಿದೆ. ವಿಜಯಪುರ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಗಣನೀಯವಾಗಿ ಕುಸಿದಿದೆ. ಆದರೆ, ಎಲ್ ನೀನೋ ಪರಿಣಾಮದಿಂದ ಈ ಬಾರಿ ಚಳಿಯ ತೀವ್ರತೆ ಕಡಿಮೆ ಇರಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

15 ಜಿಲ್ಲೆಗಳಲ್ಲಿ ತಾಪಮಾನ ಕುಸಿತ

ಸೋಮವಾರ ರಾಜ್ಯದ 15 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ವಾಡಿಕೆಗಿಂತ ಕಡಿಮೆಯಾಗಿದೆ. ಉತ್ತರ ಒಳನಾಡಿನ ವಿಜಯಪುರದಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ವಾಡಿಕೆಗಿಂತ 4.7 ಡಿಗ್ರಿ ಕಡಿಮೆಯಾಗಿದೆ. ಗದಗದಲ್ಲಿ 15.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ವಾಡಿಕೆಗಿಂತ 4.1 ಡಿಗ್ರಿ ಕಡಿಮೆಯಾಗಿದೆ.

ಧಾರವಾಡದಲ್ಲಿ 15.4 ಡಿಗ್ರಿ, ಬೆಳಗಾವಿಯಲ್ಲಿ 15.6 ಡಿಗ್ರಿ, ಬಾಗಲಕೋಟೆಯಲ್ಲಿ 16.5 ಡಿಗ್ರಿ ಹಾಗೂ ರಾಯಚೂರಿನಲ್ಲಿ 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ಮುಂದಿನ ಏಳು ದಿನ ಮಂಜಿನ ವಾತಾವರಣ

ಮುಂದಿನ ಏಳು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಬೆಳಗಿನ ಸಮಯದಲ್ಲಿ ಚಳಿ ಹಾಗೂ ಮಂಜಿನ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಹಗಲಿನಲ್ಲಿ ಸಾಮಾನ್ಯವಾಗಿ ಬಿಸಿಲಿನ ವಾತಾವರಣ ಇರಲಿದ್ದು, ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಈ ಬಾರಿ ಚಳಿಯ ತೀವ್ರತೆ ಕಡಿಮೆ?

ಪ್ರಸಕ್ತ ಸಾಲಿನಲ್ಲಿ ಎಲ್ ನೀನೋ ಪರಿಣಾಮದಿಂದ ಮುಂಗಾರು ಮತ್ತು ಹಿಂಗಾರು ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಚಳಿಗಾಲದಲ್ಲಿಯೂ ಚಳಿಯ ತೀವ್ರತೆ ಕಡಿಮೆ ಇರುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಹಿಂಗಾರು ಮಳೆಯ ಅವಧಿ ಅಂತ್ಯಗೊಂಡಿದ್ದು, ನವೆಂಬರ್ ಎರಡನೇ ವಾರದವರೆಗೆ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ. ಬೆಳಗಿನ ಜಾವ ಚಳಿ ಹೆಚ್ಚಾಗಿ ಅನುಭವಕ್ಕೆ ಬಂದರೂ, ಹಗಲಿನ ತಾಪಮಾನ ಸಾಮಾನ್ಯ ಮಟ್ಟದಲ್ಲಿಯೇ ಇರುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *

error: Content is protected !!