ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಉಜ್ಜಿನಿ ಗ್ರಾಮದ ವ್ಯಾಪ್ತಿಯಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೋಮವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ಗ್ರಾಮಕ್ಕೆ ಎರಡು ಚಿರತೆಗಳು ಲಗ್ಗೆ ಇಟ್ಟಿದ್ದು, ಜನರು ಜೀವಭಯದಲ್ಲಿ ಕಾಲ ಕಳೆಯುವಂತಾಗಿದೆ.
ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಗಳು ಕಾಣಿಸಿಕೊಂಡಿರುವುದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ವಿಶೇಷವಾಗಿ ಗ್ರಾಮದ ಹೊರವಲಯದಲ್ಲಿ ಒಂಟಿ ಮನೆಗಳಲ್ಲಿ ಹಾಗೂ ತೋಟದ ಮನೆಗಳಲ್ಲಿ ವಾಸಿಸುವ ರೈತರು ಆತಂಕದಲ್ಲಿದ್ದಾರೆ. ರಾತ್ರಿ ವೇಳೆ ಜಮೀನುಗಳಿಗೆ ತೆರಳಲು, ಜಾನುವಾರುಗಳನ್ನು ನೋಡಿಕೊಳ್ಳಲು ಹಾಗೂ ಮನೆಗಳಿಂದ ಹೊರಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿರತೆಗಳ ಓಡಾಟದಿಂದ ಗ್ರಾಮಸ್ಥರು ಮತ್ತು ರೈತರಲ್ಲಿ ಆತಂಕ ಹೆಚ್ಚಾಗಿದ್ದು, ಮಕ್ಕಳು ಹಾಗೂ ವೃದ್ಧರ ಸುರಕ್ಷತೆಯ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. ಚಿರತೆಗಳು ಜಾನುವಾರುಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ರೈತರು ತಮ್ಮ ಜಾನುವಾರುಗಳ ರಕ್ಷಣೆಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಚಿರತೆಗಳು ಪ್ರತ್ಯಕ್ಷ ಕುರಿತು ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಗ್ರಾಮದಲ್ಲಿ ಚಿರತೆಗಳ ಚಲನವಲನದ ಬಗ್ಗೆ ನಿಗಾ ವಹಿಸುವುದರ ಜತೆಗೆ, ಅವುಗಳನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಸೆರೆಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ದಾಳಿ ನಡೆಯುವ ಮುನ್ನವೇ ಕ್ರಮ ಕೈಗೊಳ್ಳಿ
ಚಿರತೆಗಳು ಜನರು ಅಥವಾ ಜಾನುವಾರುಗಳ ಮೇಲೆ ದಾಳಿ ನಡೆಸಿದ ಬಳಿಕ ಕ್ರಮ ಕೈಗೊಳ್ಳುವ ಬದಲು, ಮುನ್ನೆಚ್ಚರಿಕೆ ವಹಿಸಿ ಕೂಡಲೇ ಅವುಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ರಾತ್ರಿ ವೇಳೆ ಗಸ್ತು ಹೆಚ್ಚಿಸುವುದು, ಚಿರತೆಗಳ ಚಲನವಲನ ಪತ್ತೆಹಚ್ಚುವುದು ಹಾಗೂ ಸಾರ್ವಜನಿಕರಿಗೆ ಅಗತ್ಯ ಮುನ್ನೆಚ್ಚರಿಕೆ ಸೂಚನೆಗಳನ್ನು ನೀಡುವ ಮೂಲಕ ಸಂಭವನೀಯ ಅಪಾಯವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚಿರತೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಎದುರಾಗಿದ್ದು, ಅರಣ್ಯ ಇಲಾಖೆ ತ್ವರಿತವಾಗಿ ಸೂಕ್ತ ಕ್ರಮ ಕೈಗೊಂಡು ಜನರ ಆತಂಕ ದೂರ ಮಾಡಬೇಕಿದೆ.
