Categories: ಲೇಖನ

ಒಂದು ಅಭಿನಂದನೆ ಹೇಳಬಹುದಿತ್ತೇನೋ….

ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಬೂಕರ್ ಪ್ರಶಸ್ತಿ ವಿಷಯದಲ್ಲಿ ಒಂದಷ್ಟು ದೊಡ್ಡತನ ತೋರಿಸಬಹುದಿತ್ತೇನೋ..

ಬೂಕರ್ ಪ್ರಶಸ್ತಿ ಖಂಡಿತವಾಗಲೂ ಒಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ. ಈ ಬಾರಿ ಭಾರತದ ಅತ್ಯಂತ ಪ್ರಮುಖ ರಾಜ್ಯ, ಸಾಹಿತ್ಯ, ಸಂಗೀತ, ಸಿನಿಮಾ, ರಂಗಭೂಮಿ, ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರೆದ, ಆರ್ಥಿಕವಾಗಿ ತೆರಿಗೆಯಲ್ಲಿ ಎರಡನೇ ಅತೀ ಹೆಚ್ಚು ಸಂಪನ್ಮೂಲ ಒದಗಿಸುವ, ದೇಶದಲ್ಲೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ, ಪ್ರಾದೇಶಿಕ ಭಾಷೆ ಕನ್ನಡದ ಕರ್ನಾಟಕಕ್ಕೆ ಒಲಿದು ಬಂದಿರುವಾಗ
ಶ್ರೀ ನರೇಂದ್ರ ಮೋದಿಯವರು ಒಂದು ಅಧಿಕೃತ ಅಭಿನಂದನೆಗಳನ್ನು ಶ್ರೀಮತಿ ಬಾನು ಮುಸ್ತಾಕ್ ಮತ್ತು ಅನುವಾದಕಿ ಶ್ರೀಮತಿ ದೀಪಾ ಭಾಸ್ತಿ ಅವರಿಗೆ ಹೇಳಬಹುದಿತ್ತೇನೋ…

ಕ್ರೀಡೆಗಳಲ್ಲಿ ಅಂತರಾಷ್ಟ್ರೀಯ ಸಾಧನೆ ಮಾಡಿದಾಗ, ಸಿನಿಮಾದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಾಗ, ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದಾಗ, ಮತ್ತಷ್ಟು ಬೇರೆ ಬೇರೆ ಸಂದರ್ಭದಲ್ಲಿ ಪ್ರಧಾನಿಯವರು ಮೊದಲ ಸಾಲಿನಲ್ಲಿಯೇ ಅಭಿನಂದನೆಗಳನ್ನು ಸಲ್ಲಿಸುತ್ತಾರೆ. ಜೊತೆಗೆ ಅವರನ್ನು ತಮ್ಮ ಕಚೇರಿಗೆ ಆಹ್ವಾನಿಸಿ ಮಾತುಕತೆ ನಡೆಸಿ ಸನ್ಮಾನಿಸುತ್ತಾರೆ. ಆದರೆ ಈ ಬಾರಿ ಏಕೋ ಏನೋ ಅವರು ಮನಸ್ಸು ಮಾಡಲಿಲ್ಲವೆನಿಸುತ್ತದೆ…

ನಿಜ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ವಿಷಯದಲ್ಲಿ ಶ್ರೀಮತಿ ಬಾನು ಮುಷ್ತಾಕ್ ಅವರಿಗೆ ಅಭಿನಂದನೆ ಹೇಳುವುದು ಅಷ್ಟು ಸುಲಭವಲ್ಲ, ಸ್ವಲ್ಪ ಕಷ್ಟವೇ. ಅದಕ್ಕೆ ಹಲವಾರು ಕಾರಣಗಳಿವೆ.

ಮೊದಲನೆಯದಾಗಿ,
ಮಾನ್ಯ ಪ್ರಧಾನಮಂತ್ರಿಯವರೇ ಆಗಾಗ ತಮ್ಮ ಭಾಷಣದಲ್ಲಿ ಉಚ್ಚರಿಸುವ ಅರ್ಬನ್ ನಕ್ಸಲ್ ಎಂಬ ತೀವ್ರ ಎಡಪಂಥೀಯ ಧೋರಣೆಯವರು ಶ್ರೀಮತಿ ಬಾನು ಮುಷ್ತಾಕ್. ನರೇಂದ್ರ ಮೋದಿಯವರ ಸೈದ್ಧಾಂತಿಕ ವಿರೋಧಿಗಳು ಸಹ. ಹಾಗೆ ಪ್ರಧಾನಿಯವರು ಹೇಳುವುದು ತಪ್ಪು ಕೂಡ. ಏಕೆಂದರೆ ವ್ಯವಸ್ಥೆಯ ವಿರುದ್ಧದ ಪ್ರಜಾಪ್ರಭುತ್ವೀಯ, ಅಹಿಂಸಾತ್ಮಕ ಬಂಡಾಯ ಎಲ್ಲಾ ಪ್ರಬುದ್ಧ ಮನಸ್ಸುಗಳ ಕರ್ತವ್ಯ ಮತ್ತು ಜವಾಬ್ದಾರಿ, ಅದು ಎಲ್ಲಾ ಕಾಲಕ್ಕೂ, ಎಲ್ಲಾ ಸರ್ಕಾರಗಳ ವಿರುದ್ಧವೂ.

ಎರಡನೆಯದಾಗಿ,
ಮಾನ್ಯ ಪ್ರಧಾನಿಗಳು ಬಹುತೇಕ ಸಂಪ್ರದಾಯವಾದಿಗಳು. ಆದರೆ ಬಾನು ಮುಷ್ತಾಕ್ ಅವರು ವೈಚಾರಿಕ ಮನೋಭಾವದ, ಪ್ರಗತಿಪರ ಚಿಂತನೆಯವರು. ಅದನ್ನು ಪ್ರಧಾನಿಯವರು ಇಷ್ಟಪಡುವುದಿಲ್ಲ. ಅವರ ಬಗ್ಗೆ ಅಸಹನೆ ಇದೆ.

ಮೂರನೇಯದಾಗಿ,
ಪಕ್ಕಾ ಹಿಂದುತ್ವ ಸಿದ್ಧಾಂತದ ಹಿನ್ನೆಲೆಯ, ಬಲಪಂಥೀಯ ಚಿಂತನೆಯಲ್ಲಿ ಅಧಿಕಾರಕ್ಕೇರಿರುವ
ಶ್ರೀ ನರೇಂದ್ರ ಮೋದಿಯವರಿಗೆ ಮುಸ್ಲಿಮರನ್ನು ಬಹಿರಂಗವಾಗಿ ಓಲೈಸುವುದು ಅಷ್ಟು ಸುಲಭವೂ ಅಲ್ಲ, ಮನಸ್ಸೂ ಇರುವುದಿಲ್ಲ. ಅವರ ಈ ಎಲ್ಲಾ ಕಷ್ಟಗಳು ಖಂಡಿತವಾಗಿ ನಮಗೂ ಅರ್ಥವಾಗುತ್ತದೆ.

ಆದರೂ ಪ್ರಧಾನಿಯಾಗಿರುವುದರಿಂದ ಅವರ ಸೈದ್ಧಾಂತಿಕ ಚಿಂತನೆಗೆ ವಿರುದ್ಧ ಮನಸ್ಥಿತಿಯ, ಅವರ ವಿರುದ್ಧದ ಅನೇಕ ಹೋರಾಟಗಳು, ಚಳುವಳಿಗಳಲ್ಲಿ ಭಾಗವಹಿಸಿರುವ ಶ್ರೀಮತಿ ಬಾನು ಮುಷ್ತಾಕ್ ಅವರು ಈ ದೇಶದ ಪ್ರಜೆಯಾಗಿರುವುದರಿಂದ ಪ್ರಧಾನಿಯಾಗಿ ಕನಿಷ್ಠ ಸೌಜನ್ಯಕ್ಕೆ ಅವರು ಒಂದು ಅಭಿನಂದನೆಗಳನ್ನು ಸಲ್ಲಿಸುವ ದೊಡ್ಡತನ, ಪ್ರಬುದ್ಧತೆ ತೋರಿಸಬೇಕಿತ್ತೇನೋ…

ಏನೇ ಸೈದ್ಧಾಂತಿಕ ಭಿನ್ನತೆಗಳು ಇದ್ದರೂ ಭಾರತದ ನೆಲದ ಪ್ರಜೆಗಳು ಸಾಧನೆ ಮಾಡಿದಾಗ ರಾಜ ಒಂದಷ್ಟು ವಿಶಾಲ ಮನೋಭಾವದಿಂದ ಪ್ರಜೆಗಳಿಗೆ ಅಭಿನಂದನೆಗಳು ಹೇಳಬೇಕಿತ್ತೇನೋ ಅನಿಸುತ್ತದೆ. ಇದು ಕೇವಲ ಪ್ರಧಾನಮಂತ್ರಿಗಳಿಗೆ ಮಾತ್ರ ಅಲ್ಲ ಅವರನ್ನು ವಿರೋಧಿಸುವ ಎಡಪಂಥೀಯ ಪ್ರಗತಿಪರ ಚಿಂತಕರು ಕೂಡ ಕೆಲವು ಬಲಪಂಥೀಯರ ದೊಡ್ಡ ಸಾಧನೆಯನ್ನು ಗೌರವಿಸಬೇಕಾದದ್ದು ಅವರ ಕರ್ತವ್ಯವಾಗಿರುತ್ತದೆ.

ಇದೇ ರೀತಿಯ ಆದರೆ ಬೇರೆ ರೂಪದ ಒಂದು ಘಟನೆ ಕರ್ನಾಟಕದಲ್ಲಿಯೂ ನಡೆದಿದೆ. ಬಲಪಂಥೀಯ ಚಿಂತನೆಯ ಪತ್ರಕರ್ತರಾದ ಶ್ರೀ ವಿಶ್ವೇಶ್ವರ ಭಟ್ ಅವರ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಹ್ವಾನವನ್ನು ಒಪ್ಪಿಕೊಂಡಿದ್ದರು. ಇದು ಪ್ರಗತಿಪರ ಮತ್ತು ಎಡಪಂಥೀಯ ಚಿಂತಕರ ಕಣ್ಣಿಗೆ ಬಿದ್ದು ಅವರು ಇದನ್ನು ತೀವ್ರವಾಗಿ ವಿರೋಧಿಸಿದ್ದರಿಂದ ಸಿದ್ದರಾಮಯ್ಯನವರು ಆ ಕಾರ್ಯಕ್ರಮಕ್ಕೆ ಹೋಗುವುದನ್ನೇ ತಪ್ಪಿಸಿದರು.

ಎಡ ಬಲ ಚಿಂತನೆಯವರು, ಹಿಂದೂ ಮುಸ್ಲಿಂ ಧರ್ಮದವರು ಇಷ್ಟೊಂದು ತೀವ್ರ ದ್ವೇಷ ಅಸೂಯೆಗಳನ್ನು ತಮ್ಮ ನಡುವೆ ಬೆಳೆಸಿಕೊಂಡರೆ ದೇಶದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಹಾಗೆಯೇ ಮಾನವೀಯ ಮೌಲ್ಯಗಳಿಗೆ ದ್ರೋಹ ಎಸಗಿದಂತಾಗುತ್ತದೆ. ಒಂದಷ್ಟು ಸಹಕಾರ ಮನೋಭಾವದ ಅವಶ್ಯಕತೆ ಖಂಡಿತಾ ಇರುತ್ತದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬುದು ಕೇವಲ ಘೋಷಣೆಯಾದರೆ ಫಲವೇನು.

ಸಂಯಮ, ಸಭ್ಯತೆ, ಸಹಕಾರ, ಸಮನ್ವಯ, ಸೌಹಾರ್ದತೆ, ಭಾವೈಕ್ಯತೆ, ಪ್ರೀತಿ, ಕರುಣೆ, ತ್ಯಾಗ, ಕ್ಷಮೆ ಮುಂತಾದ ಮಾನವೀಯ ಮೌಲ್ಯಗಳು, ನಾಗರಿಕ ಲಕ್ಷಣಗಳು, ಸಂವಿಧಾನಾತ್ಮಕ ಕರ್ತವ್ಯಗಳು, ಭಾರತೀಯ ನೆಲದ ಗುಣಗಳು ನಮ್ಮೊಳಗೆ ಸದಾ ಜಾಗೃತವಾಗಿರಬೇಕು. ಅದನ್ನು ಪ್ರಜ್ಞಾಪೂರ್ವಕವಾಗಿ ಸಾರ್ವಜನಿಕ ಜೀವನದಲ್ಲಿ, ವೈಯಕ್ತಿಕ ಬದುಕಿನಲ್ಲಿ, ಸಾಧ್ಯವಾದಷ್ಟು ಅನುಸರಿಸಲು, ಅಳವಡಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಲೇ ಇರಬೇಕು.

ಹಾಗೆಯೇ ದ್ವೇಷ, ಅಸೂಯೆ, ಕೋಪ, ಸೇಡು, ಪ್ರತಿಕಾರ, ವಂಚನೆ, ಕುತಂತ್ರ ಮುಂತಾದ ಅನಾಗರಿಕ ವರ್ತನೆಯನ್ನು, ರಾಕ್ಷಸಿ ಗುಣಗಳನ್ನು, ಅಮಾನವೀಯ ನಡವಳಿಕೆಗಳನ್ನು ಪ್ರಜ್ಞಾಪೂರ್ವಕವಾಗಿಯೇ ನಿಯಂತ್ರಿಸಿಕೊಳ್ಳಬೇಕು. ಆಗ ಮಾತ್ರ ಒಂದು ಮೌಲ್ಯಯುತ ಸಮಾಜ, ದೇಶ ಕಟ್ಟಲು ಸಾಧ್ಯ.

ಒಳ್ಳೆಯ ಬದುಕು ರೂಪಿಸಿಕೊಳ್ಳಲು ಸೈದ್ಧಾಂತಿಕ ಚಿಂತನೆಗಳೇ ಅಡ್ಡಿಯಾಗಬಾರದು. ಸಮಾಜದ, ದೇಶದ, ಮನುಷ್ಯರ ಒಳಿತಿಗಾಗಿ ಒಂದಷ್ಟು ಸಿದ್ಧಾಂತ, ತತ್ವ, ವಿಚಾರಗಳ ಅವಶ್ಯಕತೆ ಇದೆ ನಿಜ, ಆದರೆ ಹಠಮಾರಿ ಧೋರಣೆಯ ಎಡಬಲ ಅತಿರೇಕಿಗಳು ಅದನ್ನೇ ಆಯುಧವಾಗಿ ಬಳಸಿ ಮನುಷ್ಯತ್ವವನ್ನೇ ನಾಶ ಮಾಡುತ್ತಿದ್ದಾರೆ. ಮಾನವೀಯತೆಯನ್ನು ಮೀರಿದ ಎಲ್ಲಾ ಸೈದ್ಧಾಂತಿಕ ನಿಲುವುಗಳು ಅಪಾಯಕಾರಿಯೇ.
ಸಹಜವಾಗಿ ಬದುಕಲು ಇಷ್ಟೊಂದು ಸರ್ಕಸ್ ಮಾಡಬೇಕಾದ ಅವಶ್ಯಕತೆ ಇಲ್ಲ.

ದಯವಿಟ್ಟು ರಾಜ್ಯದ ಸ್ಥಳೀಯ ರಾಜಕೀಯ ನಾಯಕರು ಅಥವಾ ಸಂಘ ಪರಿವಾರದ ಹಿರಿಯರು ಮಾನ್ಯ ನರೇಂದ್ರ ಮೋದಿಯವರ ಗಮನಕ್ಕೆ ಈ ವಿಷಯ ತಂದು ಶ್ರೀಮತಿ ಬಾನು ಮುಷ್ತಾಕ್ ಮತ್ತು ಶ್ರೀಮತಿ ದೀಪಾ ಭಾಸ್ತಿವರನ್ನು ಎಂದಿನಂತೆ ಪ್ರಧಾನಿಯವರ ಕಚೇರಿಗೆ ಆಹ್ವಾನಿಸಿ ಅವರನ್ನು ಅಭಿನಂದಿಸಲು ಮನವಿ ಮಾಡಿಕೊಂಡು ಅದು ಯಶಸ್ವಿಯಾದರೆ ಒಂದು ನಿಜಕ್ಕೂ ಉತ್ತಮ ಬೆಳವಣಿಗೆಯಾಗುತ್ತದೆ.

ದೇಶದಲ್ಲಿ ಜಾತಿ, ಧರ್ಮ, ಪ್ರದೇಶ, ಪಕ್ಷ, ಸೈದ್ಧಾಂತಿಕ ಆಧಾರದಲ್ಲಿ ಮನಸ್ಸುಗಳು ಒಡೆದು ಹೋಗಿವೆ. ಕನಿಷ್ಠ ಇಂತಹ ಸಂದರ್ಭದಲ್ಲಿ ಆ ಒಡೆದು ಮನಸ್ಸುಗಳಿಗೆ ಕನಿಷ್ಠ ತೇಪೆ ಹಚ್ಚುವ ಕೆಲಸವಾದರೂ ಮಾಡಬೇಕಾಗಿದೆ. ಇಲ್ಲದಿದ್ದರೆ ಹೀಗೆ ಗುಂಪು ಗುಂಪುಗಳಾಗಿ, ವಿಭಜನಾತ್ಮಕ ಮನಸ್ಥಿತಿ ಭಾರತದಲ್ಲಿ ಶಾಶ್ವತವಾಗಿ ನೆಲೆಸುತ್ತದೆ. ಸುಮ್ಮನೆ ಕಾಟಾಚಾರಕ್ಕೆ ಯುದ್ಧದ ಸಮಯದಲ್ಲಿ ಭಾರತೀಯರೆಲ್ಲಾ ಒಂದು ಎನ್ನುವ ಬೂಟಾಟಿಕೆ ಏಕೆ. ಶಾಂತಿಯ ಸಮಯದಲ್ಲೂ, ಅಭಿವೃದ್ಧಿಯ ಪಥದಲ್ಲೂ ನಾವೆಲ್ಲರೂ ಒಂದೇ ಎನ್ನುವ ಮನೋಭಾವ ಬೆಳೆಯಬೇಕಿದೆ, ಬೆಳೆದರೆ ಒಳ್ಳೆಯದೇನೋ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಬಿಎಲ್‌ಒ ಕೆಲಸ ಬೇಡ: ಅಂಗನವಾಡಿಗಳಲ್ಲೇ ಎಲ್‌ಕೆಜಿ–ಯುಕೆಜಿ ಆರಂಭಕ್ಕೆ ಅಂಗನವಾಡಿ ನೌಕರರ ಸಂಘ ಒತ್ತಾಯ

ಬೆಂಗಳೂರು ಗ್ರಾಮಾಂತರ: ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಕೆಲಸವನ್ನು ಅಂಗನವಾಡಿ ನೌಕರರಿಗೆ ನೀಡುವುದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಅಂಗನವಾಡಿ…

12 hours ago

ಟ್ರಂಪ್ ಕಾರ್ಡ್…….

ಟ್ರಂಪ್ ಕಾರ್ಡ್....... ವಿಶ್ವದ ಕ್ರೀಡಾ ಸಂಸ್ಕೃತಿಯ ಘನತೆಗೆ ಚ್ಯುತಿ ತಂದ ಡೊನಾಲ್ಡ್ ಟ್ರಂಪ್... ವಿಶ್ವದ ಕ್ರೀಡಾ ಸಂಸ್ಕೃತಿಗೆ ಅವಮಾನ ಮಾಡಿದ,…

21 hours ago

ಚಿಕ್ಕಮಧುರೆ ಶನಿಮಹಾತ್ಮ ದೇವಾಲಯ ಬಳಿ ಕ್ಯಾಂಟರ್ ಪಲ್ಟಿ: ರಸ್ತೆಬದಿಯ ಅಂಗಡಿಗಳು ಜಖಂ

ದೊಡ್ಡಬಳ್ಳಾಪುರ: ತಾಲೂಕಿನ ಚಿಕ್ಕಮಧುರೆ ಗ್ರಾಮದ ಶನಿಮಹಾತ್ಮ ದೇವಾಲಯದ ಬಳಿ ಕಳೆದ ರಾತ್ರಿ ಸಂಭವಿಸಿದ ಕ್ಯಾಂಟರ್ ಅಪಘಾತದಲ್ಲಿ ರಸ್ತೆಬದಿಯ ಮೂರು-ನಾಲ್ಕು ಅಂಗಡಿಗಳು…

22 hours ago

ಹಾಲಿನ ಖರೀದಿ ದರ ಹೆಚ್ಚಳಕ್ಕೆ ರೈತರ ಬೃಹತ್ ಪ್ರತಿಭಟನೆ

ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ ರೂ. 10 ಹೆಚ್ಚಿಸಬೇಕು ಹಾಗೂ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು ಎಂದು…

1 day ago

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರ ಉನ್ನತೀಕರಣಕ್ಕೆ ಗುದ್ದಲಿ ಪೂಜೆ

ದೊಡ್ಡಬಳ್ಳಾಪುರ: ತಾಲೂಕಿನ ಅನಿಬೆಸೆಂಟ್ ಪಾರ್ಕ್‌ನಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರವನ್ನು ಉನ್ನತೀಕರಿಸುವ ಕಾಮಗಾರಿಗೆ ಶಾಸಕ ಧೀರಜ್ ಮುನಿರಾಜ್…

1 day ago

ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್ ವಿಲ್ಲಾಸ್‌ನಲ್ಲಿ ಕರಡಿಗಳ ಪ್ರತ್ಯಕ್ಷ: ನಂದಿಬೆಟ್ಟ ಸಮೀಪ ವನ್ಯಜೀವಿಗಳ ಓಡಾಟದಿಂದ ಆತಂಕ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಸಮೀಪದ ಪ್ರಖ್ಯಾತ ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್ ವಿಲ್ಲಾಸ್ ಆವರಣದಲ್ಲಿ…

1 day ago