ಎನ್.ಡಿ.ಆರ್.ಎಫ್ ಹಣದ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತೀ ಹೆಕ್ಟೇರ್ ಗೆ 8,500 ರೂ ಪರಿಹಾರ ನೀಡಲಿದೆ- ಸಿಎಂ ಸಿದ್ದರಾಮಯ್ಯ

ಪ್ರವಾಹದಿಂದ ಸಂಕಷ್ಟದಲ್ಲಿರುವ ರೈತರು, ಜನಸಾಮಾನ್ಯರಿಗೆ ನೆರವಾಗುವ ಉದ್ದೇಶದಿಂದ ಎನ್.ಡಿ.ಆರ್.ಎಫ್ ಪರಿಹಾರದ ಜೊತೆಗೆ ಹೆಚ್ಚುವರಿ ಪ್ಯಾಕೇಜ್ ಅನ್ನು ನಮ್ಮ ಸರ್ಕಾರ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ಅಧಿಕಾರಿಗಳ ಜೊತೆ ಚರ್ಚಿಸಿ, ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

* ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಕುಷ್ಕಿ ಜಮೀನಿಗೆ ಹೆಕ್ಟೇರ್ ಗೆ 8,500ರೂ, ನೀರಾವರಿ ಜಮೀನಿಗೆ ಹೆಕ್ಟೇರ್ ಗೆ 17,000, ಬಹು ವಾರ್ಷಿಕ ಬೆಳೆಗೆ 22,500 ರೂ ಇದೆ. ಈ ಹಣವನ್ನು ಸಮೀಕ್ಷೆ ಮುಗಿದ ತಕ್ಷಣ ಬಿಡುಗಡೆ ಆಗಲಿದೆ ಎಂದರು.

* ಎನ್.ಡಿ.ಆರ್.ಎಫ್ ಹಣದ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತೀ ಹೆಕ್ಟೇರ್ ಗೆ 8,500 ರೂ ಪರಿಹಾರ ಕೊಡಲಿದೆ. ಇದರಿಂದಾಗಿ ಕುಷ್ಕಿ ಜಮೀನಿಗೆ ಹೆಕ್ಟೇರ್ ಗೆ ₹8,500 ರ ಜೊತೆಗೆ ₹8,500 ಸೇರಿ ಒಟ್ಟು ₹17,000 ಸಿಗಲಿದೆ. ನೀರಾವರಿ ಜಮೀನಿಗೆ ₹17,000ದ ಜೊತೆ ₹8,500 ಸೇರಿ ಒಟ್ಟು ₹25,500 ಸಿಗಲಿದೆ. ಬಹುವಾರ್ಷಿಕ ಬೆಳೆಗೆ ಹೆಕ್ಟೇರ್ ಗೆ ₹22,500ರ ಜೊತೆ ₹8,500 ಸೇರಿ ಒಟ್ಟು ₹31,000 ಸಿಗುತ್ತದೆ ಎಂದು ತಿಳಿಸಿದರು.

* ಎನ್‌.ಡಿ.ಆರ್.ಎಫ್ ಮತ್ತು ರಾಜ್ಯ ಸರ್ಕಾರದ ಪ್ಯಾಕೇಜ್ ಸೇರಿ ₹2,000 ದಿಂದ ₹2,500ಕ್ಕೂ ಹೆಚ್ಚು ಕೋಟಿ ಹಣ ಪರಿಹಾರ ಕೊಡುತ್ತಿದ್ದೇವೆ. ಪ್ರವಾಹದಿಂದ ಬೆಳೆ ಜೊತೆಗೆ ಮೂಲಭೂತ ಸೌಕರ್ಯಗಳು ಅಪಾರ ಪ್ರಮಾಣದಲ್ಲಿ ಹಾನಿ ಆಗಿರುವುದರಿಂದ ರಾಜ್ಯಕ್ಕೆ ಪರಿಹಾರ ಒದಗಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದರು.

* ವೈಮಾನಿಕ ಸಮೀಕ್ಷೆ ಬಳಿಕ ಶಾಸಕರು, ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿ ನಾಲ್ಕು ಜಿಲ್ಲೆಗಳ ಪರಿಸ್ಥಿತಿ ಅವಲೋಕಿಸಿದ್ದೇನೆ. ನಾಲ್ಕು ಜಿಲ್ಲೆಗಳಲ್ಲಿ 117 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ. 80 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

* ಕೃಷ್ಣಾ ನದಿಯಿಂದ ಅಪಾರ ಪ್ರಮಾಣದ ನೀರು ಬಿಟ್ಟಿರುವುದು ಹಾಗೂ ನಾಲ್ಕೂ ಜಿಲ್ಲೆಗಳಲ್ಲಿ ಆಗಸ್ಟ್-ಸೆಪ್ಟೆಂಬರ್ ನಲ್ಲಿ ವಿಪರೀತ ಮಳೆ ಆಗಿರುವುದೂ ಸೇರಿ ಅನಾಹುತ ಮತ್ತು ಸಂಕಷ್ಟದ ಪ್ರಮಾಣವನ್ನು ಹೆಚ್ಚಾಗಿಸಿದೆ ಎಂದರು.

* ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿರುವ ಅಂದಾಜಿದೆ. ಈ ಪ್ರಮಾಣ ಇನ್ನೂ ಹೆಚ್ಚು ಆಗಬಹುದು. ಜಂಟಿ ಸಮೀಕ್ಷೆ ಪೂರ್ಣ ಆದ ಬಳಿಕ ಸ್ಪಷ್ಟವಾಗಿ ಗೊತ್ತಾಗುತ್ತದೆ. ಸದ್ಯ 5 ಲಕ್ಷ ಹೆಕ್ಟೇರ್ ನಲ್ಲಿ ಮಾತ್ರ ಜಂಟಿ ಸಮೀಕ್ಷೆ ಮುಗಿದಿದೆ. ಸಮೀಕ್ಷೆ ಪೂರ್ಣಗೊಂಡ ತಕ್ಷಣ ಹಣ ಅವರ ಖಾತೆಗಳಿಗೆ ಹಣ ಹೋಗುತ್ತದೆ ಎಂದು ಹೇಳಿದರು.

* ವಿಜಯಪುರ, ಬಾಗಲಕೋಟೆ, ಯಾದಗಿರಿ, ಬೀದರ್, ರಾಯಚೂರು, ಗದಗ, ಕಲಬುರಗಿ, ಧಾರವಾಡ ಸೇರಿ 8 ಜಿಲ್ಲೆಗಳಲ್ಲಿ ಶೇ.95 ರಷ್ಟು ಬೆಳೆ ಹಾನಿ ಆಗಿದೆ. ಕಳೆದ ವರ್ಷ ಶೇ.22 ರಷ್ಟು ಮಳೆ ಹೆಚ್ಚಾಗಿದೆ. ಈ ವರ್ಷ ಶೇ‌.26 ರಷ್ಟು ಹೆಚ್ಚು ಅಂದರೆ ವಾಡಿಕೆಗಿಂತ ವಿಪರೀತ ಹೆಚ್ಚಿನ ಮಳೆ ಬಿದ್ದಿದೆ ಎಂದು ತಿಳಿಸಿದರು.

* ರಾಜ್ಯದಲ್ಲಿ ಜೂನ್ 1 ರಿಂದ ಸೆಪ್ಟೆಂಬರ್ 29ರ ವರೆಗೆ ಸರಾಸರಿಯಂತೆ 845 ಮಿಮೀ ಮಳೆಯಾಗಬೇಕಾಗಿತ್ತು. ಆದರೆ 879 ಮಿಮೀ ಮಳೆಯಾಗಿದೆ. ವಾಡಿಕೆಗಿಂತ ಶೇ.4 ರಷ್ಟು ಹೆಚ್ಚಿನ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯವರೆಗೆ 972 ಮಿಮೀ ಮಳೆಯಾಗಿತ್ತು. ಶೇ. 22 ರಷ್ಟು ಹೆಚ್ಚಿನ ಮಳೆಯಾಗಿತ್ತು. ಆದರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ವರ್ಷ ಹಿಂದೆಂದೂ ಕಾಣದ ಪ್ರಮಾಣದಲ್ಲಿ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಸರಾಸರಿ ಮಳೆಯಾಗಬೇಕಾಗಿದ್ದದ್ದು 472 ಮಿಮೀಗಳು. ಆದರೆ ಈ ವರ್ಷ 576 ಮಿಮೀಗಳಷ್ಟು ಅಂದರೆ ಶೇ. 22 ರಷ್ಟು ಹೆಚ್ಚಿನ ಮಳೆಯಾಗಿದೆ ಎಂದರು.

* ರಾಜ್ಯದಲ್ಲಿ ಪ್ರಾಥಮಿಕ ಅಂದಾಜಿನ ಪ್ರಕಾರ ಇದುವರೆಗೆ ಸುಮಾರು 9,60,578 ಹೆಕ್ಟೇರುಗಳಷ್ಟು ಬೆಳೆ ಹಾನಿಯಾಗಿದೆ. ಇದರಲ್ಲಿ 8,88,953 ಹೆಕ್ಟೇರುಗಳಷ್ಟು ಕೃಷಿ ಬೆಳೆಗಳು ಮತ್ತು 71,624 ಹೆಕ್ಟೇರುಗಳಷ್ಟು ತೋಟಗಾರಿಕಾ ಬೆಳೆಗಳು ನಷ್ಟವಾಗಿದೆಯೆಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ. ಪೂರ್ಣ ಪ್ರಮಾಣದ ಸಮೀಕ್ಷೆಯ ನಂತರ ಈ ಪ್ರಮಾಣ ಹೆಚ್ಚೂ ಆಗಬಹುದು ಎಂದರು.

* ಇದುವರೆಗಿನ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 9,60,578 ಹೆಕ್ಟೇರುಗಳಷ್ಟು ಬೆಳೆ ಹಾನಿಯಾಗಿದ್ದರೆ, ಉತ್ತರ ಕರ್ನಾಟಕದ ಈ 8 ಜಿಲ್ಲೆಗಳಲ್ಲಿಯೇ 9,03,966 ಹೆಕ್ಟೇರುಗಳಷ್ಟು ಬೆಳೆಹಾನಿ ಸಂಭವಿಸಿದೆ. ಶೇ. 95 ರಷ್ಟು ಹಾನಿ ಈ ಜಿಲ್ಲೆಗಳಲ್ಲಿಯೇ ಸಂಭವಿಸಿದೆ. ಕಳೆದ ಎರಡು ತಿಂಗಳಿಂದ ನೆಲ ಒಣಗದಂತೆ ಮಳೆಯಾಗುತ್ತಿದೆ ಎಂದು ಹೇಳಿದರು.

* ಉತ್ತರ ಕರ್ನಾಟಕದ ಈ ಜಿಲ್ಲೆಗಳಲ್ಲಿ ಒಣ ಹವೆಯ ಮೂಲಕ ಬೆಳೆಯುವ ಬೆಳೆಗಳಾದ ತೊಗರಿ, ಹತ್ತಿ, ಈರುಳ್ಳಿ ಮುಂತಾದ ಬೆಳೆಗಳನ್ನು ನಂಬಿ ರೈತರು ಬದುಕುತ್ತಾರೆ. ನಿರಂತರವಾಗಿ ಮಳೆ ಹಿಡಿದರೆ ಬೆಳೆಗಳು ಕೊಳೆಯಲಾರಂಭಿಸುತ್ತವೆ. ಈಗೀಗ ಮುಸುಕಿನ ಜೋಳ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಅವುಗಳೂ ಹಾನಿಯಾಗಿವೆ. ಅಧಿಕಾರಿಗಳು ರೈತರ ಭೂಮಿಗಳಿಗೆ ಹೋಗಿ ಸಮೀಕ್ಷೆ ಮಾಡಲಾಗದಷ್ಟು ತೇವಾಂಶ ಹೊಲಗಳಲ್ಲಿದೆ ಎಂದರು.

* ಪ್ರವಾಹದಿಂದಾಗಿ ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಟ್ಟಾರೆ 117 ಗ್ರಾಮಗಳು ತೊಂದರೆಗೊಳಗಾಗಿವೆ. ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ 80 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಕಲಬುರಗಿಯ 56, ವಿಜಯಪುರದ 17, ಯಾದಗಿರಿಯ 7 ಕಾಳಜಿ ಕೇಂದ್ರಗಳಲ್ಲಿ ಒಟ್ಟು 10,576 ಜನರಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಜೂನ್ ಒಂದರಿಂದ ಈ ವರೆಗೆ ಮಳೆ ಹಾನಿಯಿಂದಾಗಿ 52 ಮಂದಿ ಮರಣ ಹೊಂದಿದ್ದಾರೆ. ಸೆಪ್ಟೆಂಬರ್ 28 ರವರೆಗಿನ‌ ಎಲ್ಲಾ ಸಾವುಗಳಿಗೂ ವಾರಸುದಾರರಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

* ರಾಜ್ಯದಲ್ಲಿ ಒಟ್ಟು 422 ಜಾನುವಾರುಗಳು ಮರಣ ಹೊಂದಿವೆ. ಇದರಲ್ಲಿ ಯಾದಗಿರಿ ಜಿಲ್ಲೆ ಒಂದರಲ್ಲೇ 245 ಜಾನುವಾರುಗಳು ಮರಣ ಹೊಂದಿವೆ. ಕಲಬುರಗಿ ಜಿಲ್ಲೆಯಲ್ಲಿ 27, ವಿಜಯಪುರದಲ್ಲಿ 3, ಬೀದರ್ ಜಿಲ್ಲೆಯಲ್ಲಿ 38 ಜಾನುವಾರುಗಳು ಮರಣ ಹೊಂದಿವೆ. ಈ ಪೈಕಿ 407 ಜಾನುವಾರುಗಳ ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ ಎಂದರು.

* 547 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಇವುಗಳಿಗೆ ತಲಾ 1.20 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅನಧಿಕೃತವಾಗಿ ನಿರ್ಮಿಸಿದ್ದ 62 ಮನೆಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಹೇಳಿದರು.

* ಭಾಗಶಃ ಹಾನಿಯಾದ ಮನೆಗಳು (ಶೇ.50 ರಿಂದ 75) ಇವುಗಳಿಗೆ ತಲಾ 50 ಸಾವಿರ ರೂ.ಗಳ ಪರಿಹಾರ ವಿತರಿಸಲಾಗಿದೆ ಎಂದರು.

* ಶೇ.20ರಿಂದ 50ರಷ್ಟು ಹಾನಿಯಾದ ಮನೆಗಳ ಸಂಖ್ಯೆ 3,166. ಶೇ.15ರಿಂದ 20ರಷ್ಟು ಹಾನಿಯಾಗಿದ್ದ 3,881 ಮನೆಗಳಿಗೆ 6,500 ರೂ. ಪ್ರಕಾರ ಪರಿಹಾರ ನೀಡಲಾಗಿದೆ ಎಂದು ಹೇಳಿದರು.

* ಒಟ್ಟಾರೆ ಇದುವರೆಗೆ 23.12 ಕೋಟಿ ರೂ.ಗಳನ್ನು ಪರಿಹಾರವಾಗಿ ಮನೆಗಳನ್ನು ಕಳೆದುಕೊಂಡವರಿಗೆ ನೀಡಲಾಗಿದೆ. ಬಟ್ಟೆ ಮತ್ತು ಗೃಹ ಬಳಕೆ ವಸ್ತುಗಳನ್ನು ಕಳೆದುಕೊಂಡ 4,858 ಕುಟುಂಬಗಳಿಗೆ ಈ ವರೆಗೆ 2.42 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ ಎಂದರು.

* ರಸ್ತೆ, ಸೇತುವೆ ಮುಂತಾದವುಗಳ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಸಮೀಕ್ಷೆ ಪೂರ್ಣಗೊಂಡು ವರದಿ ಬಂದ ಕೂಡಲೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪ್ರತಿ ಕ್ಷೇತ್ರಕ್ಕೆ ವಿಶೇಷ ಅನುದಾನದ ರೂಪದಲ್ಲಿ 25 ರಿಂದ 50 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದರು.

Ramesh Babu

Journalist

Recent Posts

ಸೆ.6ರಂದು ದೊಡ್ಡಬಳ್ಳಾಪುರದ ಹಲವೆಡೆ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 220/66/11 ಕೆ.ವಿ. ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6ರಂದು ದೊಡ್ಡಬಳ್ಳಾಪುರ…

17 hours ago

ದೌರ್ಬಲ್ಯ – ಶೋಷಣೆ – ಸ್ವಾಭಿಮಾನ……

ಈ ಸಮಾಜ ಯಾವಾಗಲೂ ಬಹುತೇಕ ದುರ್ಬಲರ ಮೇಲೆ ಸವಾರಿ ಮಾಡುತ್ತದೆ. ಅದರಲ್ಲೂ ಈ ಹಣ ಕೇಂದ್ರೀಕೃತ ಆಧುನಿಕ ಸಮಾಜದಲ್ಲಿ ದುರ್ಬಲರೇ…

23 hours ago

ಕನ್ನಡದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ

ದೊಡ್ಡಬಳ್ಳಾಪುರ: ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಮತ್ತು ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು…

3 days ago

ಕ್ಷಯ ಮುಕ್ತ ಭಾರತ ಅಭಿಯಾನ: ಜಾಗೃತಿ ಜಾಥಾ, ಬೀದಿ ನಾಟಕದ ಮೂಲಕ ಅರಿವು

ದೊಡ್ಡಬಳ್ಳಾಪುರ: ಕ್ಷಯರೋಗ ಮುಕ್ತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಟಿಬಿ ಮುಕ್ತ ಭಾರತ್ ಅಭಿಯಾನ’ದ…

3 days ago

ಎಕ್ಸ್‌ಪ್ರೆಸ್ ರೈಲು ಹರಿದು ಇಬ್ಬರು ಮಹಿಳೆಯರು, ಮಗು ಬಲಿ

ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಎಕ್ಸ್‌ಪ್ರೆಸ್ ರೈಲು ಹರಿದ ಪರಿಣಾಮ ಇಬ್ಬರು ಮಹಿಳೆಯರು ಹಾಗೂ ಒಂದು ಮಗು…

3 days ago

ಟಾಕ್ಸಿಕ್

ಕ್ರಿಯಾತ್ಮಕತೆ ಮತ್ತು ಪ್ರಯತ್ನಗಳಿಗೂ ಒಂದಷ್ಟು ಮಿತಿ ಇರುತ್ತದೆ. ಏಕೆಂದರೆ ನಾವು ಸಾಮಾನ್ಯ ಮನುಷ್ಯರು. ಹಣ, ಜನಪ್ರಿಯತೆ, ಅಧಿಕಾರ ಬಂದ ತಕ್ಷಣ…

5 days ago