ಮೌಂಟ್ ಎವರೆಸ್ಟ್ ಹಾಗೂ ಪರ್ವತಾರೋಹಣವೆಂದರೆ ಸಾಮಾನ್ಯವಾಗಿ ನಮಗೆಲ್ಲರಿಗೂ ಥಟ್ ಎಂದು ನೆನಪಿಗೆ ಬರೋದು ತೇನ್ ಸಿಂಗ್. ಇಂದು ಮಹಾನ್ ಪರ್ವತರೋಹಿಯ ಹುಟ್ಟಿದ ದಿನ
ತೇನ್ ಸಿಂಗ್ ಹುಟ್ಟಿದ ದಿನಾಂಕ ಗುರುತಿಸಿದ್ದು ಹೀಗೆ…
ಈಶಾನ್ಯ ನೇಪಾಳದ ಖುಂಬು ಪ್ರದೇಶದ ತೆಂಗ್ಬೋಚೆ ಎಂಬಲ್ಲಿ ಶೇರ್ಪ ಪಂಗಡಕ್ಕೆ ಸೇರಿದ ಕುಟುಂಬವೊಂದರಲ್ಲಿ ತೇನ್ಸಿಂಗರು ಜನಿಸಿದರು. ಅವರ ತಂದೆ ತಾಯಂದಿರು ಟಿಬೆಟ್ನಿಂದ ನೇಪಾಳಕ್ಕೆ ವಲಸೆ ಬಂದವರು. ತೇನ್ಸಿಂಗರ ಹುಟ್ಟಿದ ವರ್ಷ 1914 ಎಂಬುದು ಒಂದು ಊಹೆ. ಹುಟ್ಟಿದ ದಿನಾಂಕದ ಬಗ್ಗೆ ನಿಖರತೆ ಇಲ್ಲ. ಈತ ಮಾಡಿದ ಕಾಯಕದಲ್ಲಿ ಕಂಡುಕೊಂಡ ನಿಷ್ಠೆ, ಶ್ರದ್ಧೆ ಮತ್ತು ನೀಡಿದ ಅಮೋಘ ಸೇವೆ, ಒಂದು ದಿನ ಈತನೇ ವಿಶ್ವದ ತುತ್ತ ತುದಿಯನ್ನು ಮುಟ್ಟುವಂತೆ ಮಾಡಿತು. ಹಾಗಾಗಿ ತಾನು ಮೌಂಟ್ ಎವರೆಸ್ಟ್ ತುದಿಯನ್ನು ಮುಟ್ಟಿದ ದಿನವನ್ನೇ ತನ್ನ ಹುಟ್ಟುಹಬ್ಬದ ದಿನ ಎಂದು ಈತ ಪರಿಗಣಿಸಿದ. ಹೀಗಾಗಿ ಎಡ್ಮಂಡ್ ಹಿಲರಿ ಅವರೊಂದಿಗೆ ಎವರೆಸ್ಟ್ ಶಿಖರಾರೋಹಣ ಮಾಡಿದ. ಮೇ 29ರ ದಿನವೇ ತೇನ್ಸಿಂಗರ ಜನ್ಮದಿನಾಚರಣೆಯ ದಿನವೆಂದು ಪ್ರಸಿದ್ಧ.
ಶೆರ್ಪಾಗಳು ಹಾಗೂ ಟಿಬೆಟಿಯನ್ನರ ಪಾರಂಪರಿಕ ಧರ್ಮದಂತೆ ತೇನ್ಸಿಂಗ್ ಬೌದ್ಧ ಧರ್ಮಕ್ಕೆ ಸೇರಿದವರು. ತೇನ್ಸಿಂಗರ ತಂದೆ ಘಾನ್ಗಲ ಮಿಂಗ್ಮ ಮತ್ತು ಅವರ ತಾಯಿ ದೊಕ್ಮೊ ಕಿಮ್ ಜೋಮ್. ಈ ದಂಪತಿಗಳಿಗೆ 13 ಮಕ್ಕಳು ಜನಿಸಿದರಂತೆ ಮತ್ತು ಹೀಗೆ ಜನಿಸಿದ ಬಹುತೇಕ ಮಕ್ಕಳು ಚಿಕ್ಕಂದಿನಲ್ಲೇ ತೀರಿಹೊದವಂತೆ. ತೇನ್ಸಿಂಗ್ ಈ ದಂಪತಿಗಳಿಗೆ ಜನಿಸಿದ ಹನ್ನೊಂದನೆಯ ಮಗು.
1935ರ ವರ್ಷದಲ್ಲಿ ‘ಬ್ರಿಟಿಷ್ ಮೌಂಟ್ ಎವರೆಸ್ಟ್ ರೆಕನಸ್ಸೈನ್ಸ್ ಕಾರ್ಯಾಚರಣೆ’ ತಂಡದ ನಾಯಕರಾಗಿ ನೇಮಕಗೊಂಡ ಎರಿಕ್ ಶಿಪ್ಟನ್ ಅವರು ಮೌಂಟ್ ಎವರೆಸ್ಟ್ ಆರೋಹಣದ ಮೊದಲ ಅವಕಾಶವನ್ನು ತೇನ್ಸಿಂಗ್ ನೋರ್ಗೆ ಅವರಿಗೆ ನೀಡಿದರು. ಆ ವರ್ಷದಲ್ಲಿ ಇದ್ದ ಇಬ್ಬರು ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಹಿನ್ನೆಲೆಯಲ್ಲಿ 19 ವರ್ಷದ ತೇನ್ಸಿಂಗರಿಗೆ ಈ ಅವಕಾಶ ಒದಗಿ ಬಂತು. ಬ್ರಿಟಿಷ್ ಪರ್ವತಾರೋಹಣ ತಂಡದಲ್ಲಿದ್ದ ಅಂಗ್ ಥರ್ಕೆ ಎಂಬ ಸರ್ದಾರ್ ಒಬ್ಬರೊಂದಿಗೆ ಬೆಳೆದ ಆತ್ಮೀಯತೆ ತೇನ್ಸಿಂಗರಿಗೆ ಈ ಅವಕಾಶವನ್ನು ಒದಗಿಸಿತು. ಜೊತೆಗೆ ಎರಿಕ್ ಶಿಪ್ಟನ್ ಅವರಿಗೆ ತೇನ್ಸಿಂಗರ ಮುಗ್ದ ನಗುವೆಂದರೆ ತುಂಬಾ ಆಕರ್ಷಣೆ. ಹೀಗೆ ಪ್ರಾರಂಭವಾದ ಮೌಂಟ್ ಎವರೆಸ್ಟ್ ಯಾನ ಅವರನ್ನು ಅತ್ಯಂತ ಎತ್ತರಕ್ಕೆ ಕರೆದೊಯ್ಯುವಲ್ಲಿ ಪ್ರಥಮ ಪ್ರಮುಖ ಹೆಜ್ಜೆಯಾಯಿತು.
ಆಂಗ್ ನ್ಯಿಮ, ಆಲ್ಫ್ರೆಡ್ ಗ್ರೆಗೊರಿ ಹಾಗೂ ಜಾರ್ಜ ಲೊವೆ ಈ ಮೂವರ ಬೆಂಬಲದೊಂದಿಗೆ ತೇನ್ಸಿಂಗ್ ಮತ್ತು ಹಿಲೆರಿ ಆರೋಹಣ ಸಾಹಸಕ್ಕೆ ಹೊರಟರು. ದಕ್ಷಿಣ ಶೃಂಗದಲ್ಲಿ ಸುರಿಯುತ್ತಿದ್ದ ಹಿಮ ಮತ್ತು ಬರದಿಂದ ಬೀಸುತ್ತಿದ್ದ ಗಾಳಿ ಇವರುಗಳನ್ನು ಎರಡು ದಿನಗಳ ಕಾಲ ಚಲನೆಯಿಲ್ಲದಂತೆ ನಿರ್ಬಂಧಿಸಿತ್ತು. ತೇನ್ಸಿಂಗ್ ಮತ್ತು ಹಿಲೆರಿ ಜೋಡಿ ಮೇ.28ರ ದಿನದಂದು 27,900 ಅಡಿ ಎತ್ತರದಲ್ಲಿ ತಮ್ಮ ಒಂದು ಡೇರೆಯನ್ನು ಸ್ಥಾಪಿಸಿದರು. ಮಾರನೆಯ ದಿನ ಬೆಳಗಾಗುತ್ತಿದ್ದಂತೆ, ಹಿಲೆರಿ ಅವರು ಡೇರೆಯ ಹೊರಗಿಟ್ಟಿದ ಬೂಟುಗಳು ಪೂರ್ಣ ಹೆಪ್ಪುಗೊಂಡುಬಿಟ್ಟಿದ್ದವು. ಪುನಃ ಬೂಟುಗಳನ್ನು ಉಪಯೋಗಿಸುವ ಸ್ಥಿತಿಗೆ ತಂದುಕೊಳ್ಳಲು ಎರಡು ಗಂಟೆಗಳು ಶ್ರಮಿಸಿದ ನಂತರದಲ್ಲಿ ತೇನ್ಸಿಂಗ್ ಮತ್ತು ಹಿಲೆರಿ ತಮ್ಮ ಹದಿನಾಲ್ಕು ಕೆ.ಜಿ ತೂಕದ ಬೆನ್ನು ಮೂಟೆಗಳೊಡನೆ ಅಂತಿಮ ಘಟ್ಟದ ಆರೋಹಣದೆಡೆಗೆ ಕಾರ್ಯಪ್ರವೃತ್ತರಾದರು.
ಈ ಅಂತಿಮ ಆರೋಹಣದಲ್ಲಿ ಅವರಿಗೆ 40 ಅಡಿ ಎತ್ತರದ ಒಂದು ಬಂಡೆ ಇರುವುದು ಅನುಭಾವಕ್ಕೆ ಬಂತು. ಮುಂದೆ ಈ ಬಂಡೆಯನ್ನು ‘ಹಿಲೆರಿ ಸ್ಟೆಪ್’ ಎಂದು ಹೆಸರಿಸಲಾಗಿದೆ. ಹಿಲೆರಿ ಅವರು ದಟ್ಟಣೆಯ ಹಿಮದಿಂದಾವೃತವಾಗಿದ್ದ ಈ ಬಂಡೆಯ ಗೋಡೆಯ ಮೇಲೆ ಹಿಮಗಡ್ಡೆಗಳ ನಡುವಿನಲ್ಲಿ ಪಾದ ಊರುವುದಕ್ಕೆ ಅವಕಾಶಗಳನ್ನು ಅರಸುತ್ತಾ ಸಾಗಿದಂತೆ ತೇನ್ಸಿಂಗ್ ಅವರನ್ನು ಹಿಂಬಾಲಿಸಿದರು. ಈ ಬಂಡೆಯ ಎತ್ತರವನ್ನು ಅತ್ಯಂತ ಸಾಹಸದಿಂದ ಪೂರೈಸಿದ ಈ ಜೋಡಿಗೆ ಮುಂದಿನ ಭಾಗದ ಏರುವಿಕೆ ಕಡಿಮೆ ಕ್ಲಿಷ್ಟಕರ ಅನಿಸಿದ್ದು ಅಚ್ಚರಿಯೇನಲ್ಲ! ಹಿಲೆರಿ ಅವರ ಮಾತುಗಳಲ್ಲೇ ಹೇಳುವುದಾದರೆ “ಮುಂದೆ ಹೆಪ್ಪುಗಟ್ಟಿಕೊಂಡಿದ್ದ ಹಿಮಗಡ್ಡೆಗಳಿಗೆ ಕೆಲವು ಉಳಿಸ್ಪರ್ಶ ನೀಡುವುದರೊಂದಿಗೆ ನಾವು ತುದಿಯನ್ನೇರಿಬಿಟ್ಟಿದ್ದೆವು.
ವಿಶ್ವದೆತ್ತರದ ಈ ಎವರೆಸ್ಟ್ ಪರ್ವತದ ತುದಿಯಲ್ಲಿ ಹಿಲೆರಿ ಮತ್ತು ತೇನ್ಸಿಂಗ್ ಹದಿನೈದು ನಿಮಿಷಗಳನ್ನು ಕಳೆದರು. ತೇನ್ಸಿಂಗರು ತಮ್ಮ ಕೊಡಲಿಯನ್ನು ಹಿಡಿದುಕೊಂಡಿರುವ ಪ್ರಸಿದ್ಧ ಚಿತ್ರವನ್ನು ಹಿಲೆರಿ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದುಕೊಂಡರು.
ತೇನ್ಸಿಂಗ್ ಅವರು ಕ್ರಮಿಸಿದ ಬದುಕಿನ ಹಾದಿಯಲ್ಲಿ ದೊರೆತ ಗೌರವಗಳು ಅನೇಕ. 1938ರ ವರ್ಷದಲ್ಲಿ ಎವರೆಸ್ಟ್ ಏಕ್ಸ್ಪೆಡಿಶನ್ ಕಾರ್ಯದಲ್ಲಿ ಅವರು ನಡೆಸಿದ ಅಮೂಲ್ಯ ಸೇವೆಗಾಗಿ ಅತ್ಯಂತ ಎತ್ತರದ ಪರ್ವತಪ್ರದೇಶಗಳಲ್ಲಿನ ಕಾರ್ಯನಿರ್ವಹಣೆಗಾಗಿನ ‘ಟೈಗರ್ ಮೆಡಲ್’ ಸಂದಿತು. 1953ರಲ್ಲಿ ಎವರೆಸ್ಟ್ ಸಾಧನೆಗಾಗಿ ಜಾರ್ಜ್ ಪದಕಗೌರವ ಸಂದಿತು. ಅದೇ ವರ್ಷದಲ್ಲಿ ನೇಪಾಳದ ‘ಆರ್ಡರ್ ಆಫ್ ದಿ ಸ್ಟಾರ್ ಆಫ್ ನೇಪಾಳ್’ ಗೌರವ. 1959ರ ವರ್ಷದಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಗೌರವವನ್ನರ್ಪಿಸಿತು.
ತೇನ್ಸಿಂಗ ಅವರು ಮೇ.9, 1986ರ ವರ್ಷದಲ್ಲಿ ಈ ಲೋಕವನ್ನಗಲಿದರು. ಸೆಪ್ಟೆಂಬರ್ 2013ರ ವರ್ಷದಲ್ಲಿ ನೇಪಾಳ ಸರ್ಕಾರವು ತನ್ನ 25971 ಅಡಿ ಎತ್ತರದ ಶಿಖರಕ್ಕೆ ತೇನ್ಸಿಂಗ್ ಪೀಕ್ ಎಂದು ಹೆಸರಿಸಲು ತೀರ್ಮಾನಿಸಿತು. ಹಲವಾರು ಕಷ್ಟದ ಕಣಿವೆಗಳು, ಪ್ರದೇಶಗಳಿಗೆ ತೇನ್ಸಿಂಗರ ಹೆಸರು ಆಗಾಗ ನಾಮಕರಣಗೊಳ್ಳುತ್ತಲೇ ಇದೆ. ತೇನ್ಸಿಂಗ್ ಮತ್ತು ಹಿಲೆರಿ ಹೆಸರನ್ನು ಒಂದು ವಿಮಾನ ನಿಲ್ದಾಣಕ್ಕೂ ಇಡಲಾಗಿದೆ. ಇವೆಲ್ಲಕ್ಕೂ ಮಿಗಿಲಾಗಿ ಒಬ್ಬ ಸಾಮಾನ್ಯ ಕೂಲಿ ಆಳು ಕೂಡಾ ತಾನು ಮಾಡಿದ ಕಾಯಕದಲ್ಲಿ ನಿಷ್ಠೆ, ಶ್ರದ್ಧೆ, ಸಾಹಸಗಳಿಂದ ಹೇಗೆ ಉತ್ತುಂಗಕ್ಕೆ ಏರಬಹುದು ಎಂಬುದಕ್ಕೆ ತೇನ್ಸಿಂಗ್ ನಮ್ಮ ನೆನಪಿಗೆ ಬರುವ ಪ್ರಮುಖ ಹೆಸರು. ಈ ಮಹಾನ್ ಚೇತನದ ಹೆಸರು ವಿಶ್ವದಲ್ಲೆಂದೆಂದೂ ಚಿರಶಾಶ್ವತ.
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…