ರಾಜ್ಯದ ನೀರಾವರಿ ಜಾಲಕ್ಕೆ ಆಸ್ಟ್ರೇಲಿಯಾ ತಂತ್ರಜ್ಞಾನ ಬಲ; ‘ವಾಟರ್ ಟ್ರೇಡಿಂಗ್’ ಅಧ್ಯಯನಕ್ಕೆ ಸಚಿವ ಚಲುವರಾಯಸ್ವಾಮಿ ಸಮ್ಮತಿ

ರಾಜ್ಯದ ಹಳೆಯ ಕಾಲುವೆಗಳ ಆಧುನೀಕರಣ, ನೀರಿನ ಸೋರಿಕೆ ತಡೆಗಟ್ಟುವಿಕೆ ಹಾಗೂ ಕೃಷಿ ನೀರಾವರಿ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಇಂದು ಆಸ್ಟ್ರೇಲಿಯನ್ ಕಾನ್ಸುಲೇಟ್-ಜನರಲ್ ಮತ್ತು ಆಸ್ಟ್ರೇಡ್ (Austrade) ನಿಯೋಗದೊಂದಿಗೆ ವಿಕಾಸ ಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಸುದೀರ್ಘ ಚರ್ಚೆ ನಡೆಸಿದರು.

ಮುಂದಿನ ಎರಡು ತಿಂಗಳೊಳಗೆ ಮತ್ತೊಂದು ಸಭೆ ನಡೆಸಿ ರಾಜ್ಯದಲ್ಲಿ ಅಳವಡಿಸಿಕೊಳ್ಳಬಹುದಾದ ಯೋಜನೆಗಳ ಕುರಿತು ಅಂತಿಮ ನಿರ್ಣಯ ಕೈಗೊಳ್ಳುವುದಾಗಿ ಹಾಗೂ ಆಸ್ಟ್ರೇಲಿಯಾದ ‘ವಾಟರ್ ಟ್ರೇಡಿಂಗ್’ (ನೀರಿನ ವಹಿವಾಟು) ಮಾದರಿಯ ಅಧ್ಯಯನಕ್ಕಾಗಿ ಅಲ್ಲಿಗೆ ಭೇಟಿ ನೀಡುವುದಾಗಿ ಸಚಿವರು ಭರವಸೆ ನೀಡಿದರು.

ಬೆಂಗಳೂರಿನ ಆಸ್ಟ್ರೇಲಿಯನ್ ಕಾನ್ಸುಲೇಟ್-ಜನರಲ್‌ನ ಹಂಗಾಮಿ ಕಾನ್ಸುಲ್ ಜನರಲ್ ಸ್ಟೀವನ್ ಕಾನೊಲ್ಲಿ (Steven Connolly) ಮತ್ತು ಆಸ್ಟ್ರೇಡ್ ವ್ಯಾಪಾರ ಹಾಗೂ ಹೂಡಿಕೆ ಆಯುಕ್ತ ಮರ್ರೆ ಸ್ಪೆನ್ಸ್ (Murray Spence) ನೇತೃತ್ವದ ನಿಯೋಗವು ಸಚಿವರನ್ನು ಭೇಟಿ ಮಾಡಿತು.

ಆಸ್ಟ್ರೇಲಿಯಾ-ಭಾರತ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದದ (ECTA) ಅಡಿಯಲ್ಲಿ ಕರ್ನಾಟಕ ಮತ್ತು ಆಸ್ಟ್ರೇಲಿಯಾ ನಡುವೆ ಜಲ ನಿರ್ವಹಣಾ ತಂತ್ರಜ್ಞಾನಗಳ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಕುರಿತು ಸಭೆಯಲ್ಲಿ ವಿಸ್ತೃತ ಸಮಾಲೋಚನೆ ನಡೆಯಿತು.

*ಕೃಷಿ ಮತ್ತು ನೀರಾವರಿ ಸಮನ್ವಯಕ್ಕೆ ಒತ್ತು*

ಈ ಹಿಂದೆ ಕೃಷಿ ಸಚಿವರಾಗಿ ಮತ್ತು ಪ್ರಸ್ತುತ ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ನೀರಾವರಿ ಮೂಲಸೌಕರ್ಯ ಹಾಗೂ ಕೃಷಿ ಉತ್ಪಾದಕತೆಯನ್ನು ಒಂದೇ ನಾಣ್ಯದ ಎರಡು ಮುಖಗಳೆಂದು ಪರಿಗಣಿಸಲಾಗಿದೆ. ‘ಪ್ರತಿ ಹನಿಗೂ ಹೆಚ್ಚು ಬೆಳೆ’ (More Crop Per Drop) ಗುರಿ ಸಾಧಿಸಲು ಆಸ್ಟ್ರೇಲಿಯಾದ ವಿಶ್ವದರ್ಜೆಯ ಜಲ ನಿರ್ವಹಣಾ ತಂತ್ರಜ್ಞಾನವನ್ನು ರಾಜ್ಯದ ರೈತರಿಗೆ ನೇರವಾಗಿ ತಲುಪಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಉತ್ತರ ಕರ್ನಾಟಕದ ನಾರಾಯಣಪುರ ಎಡದಂಡೆ ಕಾಲುವೆ (NLBC) ಆಧುನೀಕರಣ ಯೋಜನೆಯಲ್ಲಿ ಆಸ್ಟ್ರೇಲಿಯಾದ ‘ರುಬಿಕಾನ್ ವಾಟರ್’ ಮತ್ತು ಭಾರತೀಯ ಪಾಲುದಾರ ‘ಮೇಧಾ ವೆಂಚರ್ಸ್’ ಸಂಸ್ಥೆಗಳು ಸಾಧಿಸಿರುವ ನೀರಿನ ಉಳಿತಾಯ ಹಾಗೂ ಕೊನೆಯ ಭಾಗದ (Tail-end) ರೈತರಿಗೆ ನೀರು ತಲುಪಿಸಿರುವ ಯಶಸ್ಸನ್ನು ಶ್ಲಾಘಿಸಿದ ಸಚಿವರು, ಈ ಮಾದರಿಯನ್ನು ತುಂಗಭದ್ರಾ, ಕಾವೇರಿ, ಘಟಪ್ರಭಾ ಮತ್ತು ಮಲಪ್ರಭಾ ಕಣಿವೆಗಳಿಗೂ ವಿಸ್ತರಿಸುವ ಕುರಿತು NLBC ಯೋಜನೆಯ ನಿಖರ ದತ್ತಾಂಶಗಳನ್ನು ಪರಿಶೀಲಿಸಲು ಆಸಕ್ತಿ ವ್ಯಕ್ತಪಡಿಸಿದರು.

*ರಾಜ್ಯದ ನೀರಾವರಿ ಸವಾಲುಗಳು ಮತ್ತು ಆಧುನೀಕರಣದ ಗುರಿ*

ರಾಜಸ್ಥಾನದ ನಂತರ ಕರ್ನಾಟಕವು ದೇಶದ ಎರಡನೇ ಅತಿ ದೊಡ್ಡ ಒಣ ಭೂಪ್ರದೇಶವನ್ನು ಹೊಂದಿದೆ. ಹಳೆಯ ಕಾಲುವೆಗಳಲ್ಲಿ ನೀರು ಇಂಗುವುದು, ಆವಿಯಾಗುವುದು ಮತ್ತು ಅನಧಿಕೃತ ಬಳಕೆಯಿಂದಾಗಿ ನೀರಾವರಿ ದಕ್ಷತೆಯು ಶೇ. 35 ರಿಂದ 40ಕ್ಕೆ ಸೀಮಿತವಾಗಿದೆ. ಈ ಸವಾಲುಗಳನ್ನು ಮೆಟ್ಟಿನಿಲ್ಲಲು ರಾಜ್ಯದ ಪ್ರಮುಖ ನೀರಾವರಿ ನಿಗಮಗಳಾದ KBJNL, KNNL, CNNL ಮತ್ತು VJNL ವ್ಯಾಪ್ತಿಯಲ್ಲಿ ಹಸ್ತಚಾಲಿತ ಗೇಟ್‌ಗಳ ಬದಲಿಗೆ SCADA ಆಧಾರಿತ ಸ್ವಯಂಚಾಲಿತ ನಿಯಂತ್ರಣ ವ್ಯವಸ್ಥೆ, ತೆರೆದ ಕಾಲುವೆಗಳ ಬದಲು ಪೈಪ್‌ಲೈನ್ ಮೂಲಕ ಸೂಕ್ಷ್ಮ ನೀರಾವರಿ, ಏತ ನೀರಾವರಿ ಮೂಲಕ ಕೆರೆ ತುಂಬಿಸುವುದು ಹಾಗೂ ನೀರು ಬಳಕೆದಾರರ ಸಹಕಾರ ಸಂಘಗಳ (WUCS) ಸಬಲೀಕರಣಕ್ಕೆ ಸರ್ಕಾರ ಒತ್ತು ನೀಡುತ್ತಿದೆ ಎಂದು ಸಚಿವರು ನಿಯೋಗಕ್ಕೆ ವಿವರಿಸಿದರು.

*ಸ್ಥಳೀಯ ಉತ್ಪಾದನೆ ಮತ್ತು ತರಬೇತಿಗೆ ಸಚಿವರ ಸಲಹೆ*

ರಾಜ್ಯದ ಇತರ ನದಿ ಕಣಿವೆಗಳಿಗೆ ಈ ತಂತ್ರಜ್ಞಾನವನ್ನು ವಿಸ್ತರಿಸುವಾಗ ಬಂಡವಾಳ ಮತ್ತು ನಿರ್ವಹಣಾ ವೆಚ್ಚವನ್ನು ತಗ್ಗಿಸಲು ರುಬಿಕಾನ್ ಸೇರಿದಂತೆ ಆಸ್ಟ್ರೇಲಿಯನ್ ಕಂಪನಿಗಳು ‘ಮೇಕ್-ಇನ್-ಕರ್ನಾಟಕ’ ಅಡಿಯಲ್ಲಿ ಸ್ಥಳೀಯವಾಗಿಯೇ ಉಪಕರಣಗಳ ಉತ್ಪಾದನೆ ಕೈಗೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು. ಜತೆಗೆ, ರಾಜ್ಯದ ಜಲಸಂಪನ್ಮೂಲ ಇಲಾಖೆಯ ಎಂಜಿನಿಯರ್‌ಗಳು ಮತ್ತು ರೈತ ಸಂಘದ ಪ್ರತಿನಿಧಿಗಳಿಗೆ ಆಸ್ಟ್ರೇಲಿಯಾದ ‘ಮರ್ರೆ-ಡಾರ್ಲಿಂಗ್ ಬೇಸಿನ್ ಅಥಾರಿಟಿ’ಯಂತಹ ಸಂಸ್ಥೆಗಳಿಂದ ತಾಂತ್ರಿಕ ತರಬೇತಿ ಕೊಡಿಸುವುದು ಹಾಗೂ ಉಪಗ್ರಹ ಆಧಾರಿತ ಆವಿಯಾಗುವಿಕೆ ಮೇಲ್ವಿಚಾರಣೆ, ಮಣ್ಣಿನ ತೇವಾಂಶ ವಿಶ್ಲೇಷಣೆಯಂತಹ ಹೊಸ ತಂತ್ರಜ್ಞಾನಗಳ ಅಳವಡಿಕೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

*ಹೂಡಿಕೆದಾರರಿಗೆ ರಾಜ್ಯ ಸರ್ಕಾರದ ಪ್ರೋತ್ಸಾಹ*

ಕರ್ನಾಟಕದಲ್ಲಿ ಹೂಡಿಕೆ ಮಾಡುವ ಆಸ್ಟ್ರೇಲಿಯನ್ ಕಂಪನಿಗಳಿಗೆ ‘ಕರ್ನಾಟಕ ಉದ್ಯೋಗ ಮಿತ್ರ’ದ ಏಕಗವಾಕ್ಷಿ ವ್ಯವಸ್ಥೆಯಡಿ ಭೂಮಿ ಹಂಚಿಕೆ ಮತ್ತು ಅನುಮತಿಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಸ್ಥಳೀಯ ಕಂಪನಿಗಳೊಂದಿಗೆ ಜಂಟಿ ಉದ್ಯಮ (JV) ಸ್ಥಾಪಿಸಿದರೆ ಟೆಂಡರ್‌ಗಳಲ್ಲಿ ಆದ್ಯತೆ, ಸ್ಮಾರ್ಟ್ ಮೀಟರ್ ಮತ್ತು IoT ಸೆನ್ಸಾರ್ ತಯಾರಿಕೆಗೆ ಬಂಡವಾಳ ಸಬ್ಸಿಡಿ, ಮುದ್ರಾಂಕ ಶುಲ್ಕ ವಿನಾಯಿತಿ ಹಾಗೂ ಆಯ್ದ ಕಾಲುವೆಗಳಲ್ಲಿ ಪ್ರಾಯೋಗಿಕ ಯೋಜನೆಗಳನ್ನು (PoC) ನಡೆಸಲು ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಈ ವೇಳೆ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಥೋಡ್ ಬಿ.ಆರ್., ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಮೇಂದ್ರ, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾಮೂರ್ತಿ ಕುಲಕರ್ಣಿ ಉಪಸ್ಥಿತರಿದ್ದರು.

ಕೋಟ್:

ರಾಜಧಾನಿ ಬೆಂಗಳೂರು ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದಿದೆ. ಆದರೆ, ನೀರಿನ ಸದ್ಬಳಕೆ ಮಾಡಿಕೊಳ್ಳಲು ಇನ್ನಷ್ಟು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಿದೆ. ಹೀಗಾಗಿ, ನೀರಿನ ಸದ್ಬಳಕೆ ಸಂಬಂಧ ಯಾವುದೇ ದೇಶದಿಂದಾದರೂ ಸರಿ, ಅದನ್ನು ಅಳವಡಿಸಿಕೊಳ್ಳಲು, ಅಲ್ಲಿನ ಪದ್ಧತಿ, ತಂತ್ರಜ್ಞಾನಗಳನ್ನು ಕಲಿಯಲು ಸಿದ್ಧರಿದ್ದೇವೆ. ಈ ನಿಟ್ಟಿನಲ್ಲಿ ಇಂದಿನ ಆಸ್ಟ್ರೇಲಿಯಾ ನಿಯೋಗದ ಸಭೆ ನಮಗೆ ಅವಕಾಶ ನೀಡಿದೆ.
-ಎನ್.ಚಲುವರಾಯಸ್ವಾಮಿ, ಜಲಸಂಪನ್ಮೂಲ ಸಚಿವರು

Ramesh Babu

Journalist

Recent Posts

ಕಾಣೆಯಾಗುವ ಬಾಲ್ಯದ ಆದರ್ಶಗಳು……

ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಗುಣಮಟ್ಟದ ಪರೀಕ್ಷೆ ಮಾಡುವ ತನಿಖಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುತ್ತಾರೆ........ ನೀವು ದೊಡ್ಡವರಾದ ಮೇಲೆ ಏನಾಗಲು ಇಷ್ಟ…

8 hours ago

ಹಿಂಬದಿಯಿಂದ ಬೈಕ್ ಡಿಕ್ಕಿ: ಪಾದಚಾರಿ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: ತಾಲ್ಲೂಕಿನ ಕಾಡನೂರು ಕೈಮರ ಸಮೀಪದ ಆಂಜನಮೂರ್ತಿ ನಗರ ಬಳಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ…

1 day ago

ಕುಮಾರಸ್ವಾಮಿ ಕೇಂದ್ರ ಸಚಿವರಲ್ಲ; ಕೇಂದ್ರದ ವಕ್ತಾರ, ಟೀಕಾ ಸಚಿವ – ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ‌ ವ್ಯಂಗ್ಯ

ವಿರಾಜಪೇಟೆ(ಕೊಡಗು): ಎಚ್.ಡಿ.ಕುಮಾರಸ್ವಾಮಿ ಅವರು ಒಬ್ಬ ಜವಾಬ್ದಾರಿಯುತ ಕೇಂದ್ರ ಸಚಿವರಂತೆ ವರ್ತಿಸುತ್ತಿಲ್ಲ, ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ‌ ಎಂದು…

2 days ago

ಕೆಮ್ಮಣ್ಣುಗುಂಡಿ ಸ್ಮಶಾನ ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ನ.25ರಿಂದ ಅನಿರ್ದಿಷ್ಟಾವಧಿ ಧರಣಿ

  ದೊಡ್ಡಬಳ್ಳಾಪುರ: ನಗರದ ವಿವಾದಿತ ಕೆಮ್ಮಣ್ಣುಗುಂಡಿ ಸಾರ್ವಜನಿಕ ಸ್ಮಶಾನದ ರಸ್ತೆಯನ್ನು ಪ್ರಭಾವಿಯೊಬ್ಬರು ಅತಿಕ್ರಮಿಸಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಹಲವು ವರ್ಷಗಳಿಂದ…

2 days ago

ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಲು ನ.30 ಕೊನೆ ದಿನ

ನವೆಂಬರ್ 30 ರೊಳಗೆ ಪಡಿತರ ಚೀಟಿದಾರರು ತಮ್ಮ ಹತ್ತಿರದ ಯಾವುದೇ ನ್ಯಾಯಬೆಲೆ ಅಂಗಡಿ ಅಥವಾ "ಅನ್ನ ಸೇವೆ" ಮೊಬೈಲ್ ಅಪ್ಲಿಕೇಶನ್…

2 days ago

ಜ.20ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 8.04 ಲಕ್ಷ ಮತದಾರರು: ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚು; ಕರಡು ಪಟ್ಟಿ ಡಿ.1ರಂದು ಪ್ರಕಟ

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂಬಂಧಿಸಿದಂತೆ ವಿವಿಧ ಹಂತಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ವೇಳಾಪಟ್ಟಿಯ ಪ್ರಕಾರ, ನವೆಂಬರ್ 23, 2026 ರೊಳಗೆ…

2 days ago