Categories: ಲೇಖನ

ಉಪಚುನಾವಣೆ…..ಇದರಿಂದ ಯಾರಿಗೆ ಲಾಭ..? ಮತ ಹಾಕುವವನಿಗೋ…? ಮತ ಪಡೆದವನಿಗೋ…?

ಉಪಚುನಾವಣೆ…..

ಶಿಗ್ಗಾವಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ಅವರ ಪುತ್ರ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪುತ್ರ ದೊಡ್ಡ ಉದ್ಯಮಿ ಭರತ್ ಬೊಮ್ಮಾಯಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ,
ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪುತ್ರ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಕೇಂದ್ರ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಜನತಾದಳದ ಅಭ್ಯರ್ಥಿ, ಸಂಡೂರು ಕ್ಷೇತ್ರದಲ್ಲಿ ಮಾಜಿ ಶಾಸಕ, ಮಾಜಿ ಮಂತ್ರಿ, ಹಾಲಿ ಸಂಸದ ತುಕಾರಾಂ ಅವರ ಪತ್ನಿ ಅನ್ನಪೂರ್ಣ ತುಕಾರಾಂ ಕಾಂಗ್ರೆಸ್ ಅಭ್ಯರ್ಥಿ…..

ಈಗ ನಾವು ಈ ಕುಟುಂಬಗಳ ನಿರ್ವಹಣೆಗಾಗಿ, ಅವರ ಪ್ರತಿಷ್ಠೆಗಾಗಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಮತದಾನ ಮಾಡಬೇಕು. ಅವರನ್ನು
ನಮ್ಮ ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಬೇಕು. ಇವರುಗಳನ್ನು ಹೊರತುಪಡಿಸಿ ನಮ್ಮಲ್ಲಿ ಮತ್ಯಾರಿಗೂ ಸ್ಪರ್ಧಿಸುವ ಸಾಮರ್ಥ್ಯವೂ ಇಲ್ಲ, ಅವಕಾಶ ಇಲ್ಲ. ಏಕೆಂದರೆ ಇದು ಪ್ರಜಾಪ್ರಭುತ್ವ !!!!!!

ಇಡೀ ಆಡಳಿತ ವ್ಯವಸ್ಥೆ, ಬಹುತೇಕ ಎಲ್ಲಾ ಮಂತ್ರಿಗಳು, ಶಾಸಕರು, ವಿರೋಧ ಪಕ್ಷದವರು, ಎಲ್ಲಾ ಜಾತಿಯ ನಾಯಕರು, ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಸಾಮಾನ್ಯ ಜನರು ಈ ಉಪಚುನಾವಣೆಯ ಜ್ವರದಿಂದ ಬಳಲುತ್ತಿದ್ದಾರೆ. ಇವರಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಚರ್ಚೆ ಇನ್ನೂ ಸುಮಾರು 3 ವಾರಗಳು ನಡೆಯುತ್ತಿರುತ್ತದೆ. ಮೂರು ವಾರದ ನಂತರ ಯಾರೋ ಮೂವರು ಆಯ್ಕೆಯಾಗುತ್ತಾರೆ ಅಷ್ಟೇ. ಅದಕ್ಕಾಗಿ ಇಷ್ಟೊಂದು ಸರ್ಕಸ್…..

ಒಂದು ಸಣ್ಣ ಸಂವಿಧಾನಾತ್ಮಕ ಹುದ್ದೆಗಾಗಿ ಈ ನವರಂಗಿ ಆಟ. ಅದರಲ್ಲಿ ವಂಶಪಾರಂಪರ್ಯ ರಾಜಕೀಯ…..

ಈ ವಿಷಯದಲ್ಲಿ ರಾಜಕಾರಣಿಗಳ ಏಕಾಗ್ರತೆ……

ಈಗ ನೋಡಿ ನಮ್ಮ ರಾಜಕೀಯ ಪಕ್ಷಗಳ ಶ್ರದ್ಧೆ, ಶ್ರಮ, ಶಿಸ್ತು, ಯೋಜನೆ, ತಂತ್ರಗಾರಿಕೆ, ಮನೆ ಮನೆ ಭೇಟಿ, ಜಾತಿ ಧರ್ಮದ ಪ್ರೀತಿ, ಕ್ರಿಯಾಶೀಲತೆ ಎಲ್ಲವೂ ಎಷ್ಟೊಂದು ನೈಜವಾಗಿ ಜಾರಿಯಾಗುತ್ತದೆ. ಗುರಿ ತಲುಪುವುದಷ್ಟೇ ಅವರ ಏಕೈಕ ಉದ್ದೇಶ…..

ಅವರ ಏಕಾಗ್ರತೆ ಎಷ್ಟಿರುತ್ತದೆಯೆಂದರೆ…..

ಮಹಾಭಾರತದಲ್ಲಿ ಗುರು ದ್ರೋಣಾಚಾರ್ಯರು, ಪಾಂಡವರು ಮತ್ತು ಕೌರವರಿಗೆ ಬಾಲ್ಯದಲ್ಲಿ ಬಿಲ್ವಿದ್ಯೆ ಕಲಿಸುವಾಗ ಒಮ್ಮೆ ಆ ಹುಡುಗರ ಏಕಾಗ್ರತೆ ಪರೀಕ್ಷಿಸಲು ಒಂದು ಪ್ರಶ್ನೆ ಕೇಳುತ್ತಾರೆ. ದೂರದಲ್ಲಿ ಒಂದು ಮರ ಮತ್ತು ಆ ಮರದ ಮೇಲೆ ಒಂದು ಪಕ್ಷಿ ಕುಳಿತಿರುತ್ತದೆ. ಆ ಪಕ್ಷಿಯನ್ನು ಬಿಲ್ಲಿನಿಂದ ಗುರಿ ಇಟ್ಟು ಹೊಡೆಯಬೇಕು. ಅದನ್ನು ವಿವರಿಸಿ ಒಬ್ಬೊಬ್ಬರಾಗಿ ಅಲ್ಲಿ ಏನು ಕಾಣುತ್ತಿದೆ ಎಂದು ಪ್ರಶ್ನಿಸುತ್ತಾರೆ. ಭೀಮಾ, ದುರ್ಯೋಧನ, ನಕುಲ, ದುಶ್ಯಾಸನ ಮುಂತಾದವರು ಮರ ಕಾಣುತ್ತಿದೆ, ಕೊಂಬೆ ಕಾಣುತ್ತಿದೆ, ಎಲೆ ಕಾಣುತ್ತಿದೆ, ಪಕ್ಷಿ ಕಾಣುತ್ತಿದೆ ಎನ್ನುತ್ತಾರೆ. ಆದರೆ ಅರ್ಜುನ ಮಾತ್ರ ಪಕ್ಷಿಯ ಅಕ್ಷಿಯಲ್ಲದೆ ಬೇರೇನೂ ಕಾಣುತ್ತಿಲ್ಲ ಎನ್ನುತ್ತಾನೆ. ಆತನ ಏಕಾಗ್ರತೆ ಗುರಿಯೆಡೆಗೆ ಅಷ್ಟು ತೀಕ್ಷ್ಣವಾಗಿರುತ್ತದೆ….

ಹಾಗೆಯೇ ಈ ಉಪಚುನಾವಣೆ ಗೆಲ್ಲಲು ಮೂರು ಪಕ್ಷಗಳು ಒಂದೇ ಏಕಾಗ್ರತೆಯಿಂದ ಕೆಲಸ ಮಾಡುತ್ತದೆ. ಏನು ದೇಶ ಭಕ್ತಿ, ಧರ್ಮ, ಭಾಷೆ, ಜಾತಿ ಎಲ್ಲ ರಸಗಳು ಉಕ್ಕಿ ಹರಿಯುತ್ತದೆ. ಸಂಬಂಧಗಳು ನೆನಪಾಗುತ್ತದೆ. ದುಡ್ಡು ಕಾಸು ಹೆಂಡ ಒಳಗೊಳಗೆ ಹರಿದಾಡುತ್ತದೆ…..

ಅಯ್ಯೋ ಪಾಪಿಗಳ….

ಇದೇ ಆಸಕ್ತಿ, ಏಕಾಗ್ರತೆ ಅತಿವೃಷ್ಠಿ, ಅನಾವೃಷ್ಟಿ ಮತ್ತು ಅದರಿಂದ ಉಂಟಾಗುವ ಆರ್ಥಿಕ ನಷ್ಟ ತಡೆಯಲು ನಿಮ್ಮಿಂದ ಆಗುತ್ತಿಲ್ಲ. ಈಗಲೂ ಜನ ಪರದಾಡುತ್ತಿದ್ದಾರೆ. ಕೆಲವು ಜನ ಸಾಯುತ್ತಿರುವುದು ನೆಡದೇ ಇದೆ. ಸಮಸ್ಯೆಯನ್ನು ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಆಗುತ್ತದೆ……

ಅಲ್ರೀ ಅಭ್ಯರ್ಥಿಗಳು ಕೇವಲ ನಾಮಪತ್ರ ಸಲ್ಲಿಸುವಾಗಲೂ ಪಟಾಕಿ ಸುಟ್ಟು ಸಂಭ್ರಮಿಸುತ್ತಾರಲ್ರೀ ಇವರೇನು ಮನುಷ್ಯರಾ ಕೋತಿಗಳಾ….. ಸ್ವಲ್ಪವೂ ಸ್ವಾಭಿಮಾನ, ಹೋಗಲಿ ಸಾಮಾನ್ಯ ಜ್ಞಾನವೂ ಬೇಡವೇ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಒಂದು ಸಾಮಾನ್ಯ ಉಪ ಚುನಾವಣೆಗೆ ಹಿಂಬಾಲಕರು ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದೇ. ಮಾಡಲು ಎಷ್ಟೊಂದು ಕೆಲಸಗಳಿರುವಾಗ ಅಷ್ಟೊಂದು ಜನ ಅಲ್ಲಿ ಗುಂಪು ಸೇರಿ ಮಾಡುವುದಾದರೂ ಏನು ?…..

ಈ ಉಪಚುನಾವಣೆಯಿಂದ ರಾಜ್ಯ ಉದ್ದಾರವಾಗುತ್ತದೆಯೇ,
ದೇಶ ಉದ್ಧಾರವಾಗುತ್ತದೆಯೇ ಅಥವಾ ಆ ಕ್ಷೇತ್ರ ಉದ್ಧಾರವಾಗುತ್ತದೆಯೇ..
ಹೊಟ್ಟೆ ಪಾಡಿಗಾಗಿ ಸಾಮಾನ್ಯ ಜನ ಈ ಹಂತಕ್ಕೆ ತಲುಪಿರುವಾಗ ಪ್ರಜಾಪ್ರಭುತ್ವ ನೈಜ ಅರ್ಥ ಪಡೆಯುವುದು ಹೇಗೆ, ಅದು ಯಶಸ್ವಿಯಾಗುವುದು ಹೇಗೆ…

ಅಲ್ಲಿ ನೋಡಿದರೆ ಪ್ರವಾಹ ಜನರ ಬದುಕನ್ನೇ ಅಲುಗಾಡಿಸಿದೆ,
ನಿರುದ್ಯೋಗ ತಾಂಡವವಾಡುತ್ತಿದೆ, ಜನಜೀವನ ಸಾಮಾನ್ಯ ಸ್ಥಿತಿಯನ್ನು ತಲುಪಲು ಇನ್ನೂ ಸಾಕಷ್ಟು ಕೆಲಸ ಮಾಡಬೇಕಾಗಿದೆ. ಇಂತಹ ಸಂದರ್ಭಗಳಲ್ಲಿ ಆಡಳಿತ ಮತ್ತು ರಾಜಕೀಯ ವ್ಯವಸ್ಥೆ ಚುನಾವಣಾ ಕಾರ್ಯಗಳಲ್ಲಿ ತೊಡಗಿಕೊಂಡರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ…..

ಮಾಧ್ಯಮಗಳು ಈ ಉಪ ಚುನಾವಣೆಯನ್ನು ವೈಭವೀಕರಿಸಿ ಮಹಾನ್ ಹೋರಾಟ ಎಂದು ಜನರಲ್ಲಿ ಕುತೂಹಲ ಕೆರಳಿಸಿದಷ್ಟು ಇತರ ಅತ್ಯವಶ್ಯಕ ವಿಷಯಗಳು ಮಹತ್ವ ಕಳೆದುಕೊಳ್ಳುತ್ತದೆ. ಆಡಳಿತಗಾರರಿಗು ಅದೇ ಬೇಕಾಗಿರುತ್ತದೆ. ಸಾಲ ಮಾಡಿರುವ ದೊಡ್ಡ ಮೊತ್ತದ ಹಣವನ್ನು ವಿವಿಧ ಯೋಜನೆಗಳ ನೆಪದಲ್ಲಿ ನುಂಗಲಾಗುತ್ತದೆ. ರೈತ – ಕಾರ್ಮಿಕರ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗುತ್ತದೆ. ಜನರ ಬದುಕು ಬವಣೆ ಎಂದಿನಂತೆ ಅರಣ್ಯ ರೋಧನ…..

ಎಲ್ಲಾ ಹಂತಗಳಲ್ಲಿ, ಎಲ್ಲಾ ರೀತಿಯಲ್ಲಿ ಬದಲಾವಣೆ ಆದರೆ ಮಾತ್ರ ಏನಾದರೂ ಸುಧಾರಣೆ ಸಾಧ್ಯವಾಗಬಹುದು. ಜನ ಈ ರೀತಿ ಹುಚ್ಚು ಹುಚ್ಚಾಗಿ ರಾಜಕೀಯ ಪಕ್ಷಗಳ ಹಿಂಬಾಲಕರಾಗಿ ಕುಣಿದು ಕುಪ್ಪಳಿಸಿ ಅದರಿಂದ ಬರುವ ಸಣ್ಣ ಕಾಸಿನಲ್ಲಿ ಬದುಕು ಕಟ್ಟಿಕೊಳ್ಳುವ ಮನಸ್ಥಿತಿಯಿಂದ ಹೊರಗೆ ಬರದಿದ್ದರೆ, ಸ್ವಾಭಿಮಾನ ಬೆಳೆಸಿಕೊಳ್ಳದಿದ್ದರೆ, ಆತ್ಮಸಾಕ್ಷಿಯನ್ನು ಜಾಗೃತಗೊಳಿಸಿಕೊಳ್ಳದಿದ್ದರೆ, ವಿವೇಚನೆಯಿಂದ ವರ್ತಿಸದಿದ್ದರೆ ಜೀವನ ಇನ್ನಷ್ಟು ಅಧೋಗತಿಗೆ ಇಳಿಯುತ್ತದೆ…..

ಇನ್ನೂ ದುರಂತವೆಂದರೆ, ಪುರುಷರಂತೆ ಮಹಿಳೆಯರು ಸಹ ಈ ಹಿಂಬಾಲಕರೆಂಬ ಕೆಟ್ಟ ರಾಜಕೀಯ ವ್ಯವಸ್ಥೆಯ ಸುಳಿಗೆ ಸಿಲುಕುತ್ತಿದ್ದಾರೆ. ಗುತ್ತಿಗೆ ಅಥವಾ ದಿನಗೂಲಿ ಒಪ್ಪಂದದ ರೀತಿಯಲ್ಲಿ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜೈಕಾರ ಹಾಕುವ ಅರೆ ಉದ್ಯೋಗದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ…..

ಹೌದು, ಹೊಟ್ಟೆ ಪಾಡಿನ ಅನಿವಾರ್ಯತೆಯ ಬಗ್ಗೆಯೂ ಮರುಕವಿದೆ. ಆದರೆ ವ್ಯವಸ್ಥೆಯ ಸುಧಾರಣೆ ಹೇಗೆ ಎಂಬುದೇ ಬಹುದೊಡ್ಡ ಚಿಂತೆ. ಭ್ರಷ್ಟಾಚಾರ, ಬಡತನ, ಅಜ್ಞಾನ, ಅನಿವಾರ್ಯತೆ, ಗುಲಾಮಿತನ, ಶೋಷಣೆ ಎಲ್ಲವೂ ಒಂದಕ್ಕೊಂದು ಪೂರಕವಾಗಿರುತ್ತದೆ.
ಅದನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಇದಕ್ಕೆ ಪರಿಹಾರ ಏನು ಮತ್ತು ಹೇಗೆ ?……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

2 hours ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

7 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

7 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

12 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

23 hours ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

24 hours ago