Categories: ಲೇಖನ

ಇತ್ತೀಚಿನ ಬಹುದೊಡ್ಡ ಬ್ರೇಕಿಂಗ್ ನ್ಯೂಸ್ ರಸ್ತೆ ಅಪಘಾತಗಳದ್ದು….

ಚಾಲನಾ ಕಲೆ ಮತ್ತು ಅಪಘಾತ………

ದಯವಿಟ್ಟು – ಮನಸ್ಸಿಟ್ಟು – ತಾಳ್ಮೆಯಿಂದ ಓದಿ…….

ಜೀವ ಅಮೂಲ್ಯ…….

ಇತ್ತೀಚಿನ ವರ್ಷಗಳ ಬಹುದೊಡ್ಡ ಬ್ರೇಕಿಂಗ್ ನ್ಯೂಸ್ ರಸ್ತೆ ಅಪಘಾತಗಳದ್ದು.
ಮನೆಯಿಂದ ಕೆಲಸಕ್ಕೆ ಹೊರಹೋದ ವ್ಯಕ್ತಿ ಮನೆಗೆ ವಾಪಸ್ಸು ಬಂದಾಗಲೇ ಗ್ಯಾರಂಟಿ ಎನ್ನುವ ಮಾತು ಚಾಲ್ತಿಯಲ್ಲಿದೆ.

ಭಾರತದಲ್ಲಿ ಅಪಘಾತಗಳಿಂದಲೇ ಗಂಟೆಗಳ ಲೆಕ್ಕದಲ್ಲಿ ಜನ ಸಾಯುತ್ತಿದ್ದಾರೆ ಮತ್ತು ಅಂಗವಿಕಲರಾಗುತ್ತಿದ್ದಾರೆ. ಹಿರಿಯರನ್ನು ನೋಡಿದಾಗ ಇಷ್ಟೊಂದು ಅವ್ಯವಸ್ಥೆಯ ವಾಹನಗಳ ಭರಾಟೆಯಲ್ಲಿ ಇವರು ಹೇಗೆ ಇನ್ನೂ ಜೀವಂತವಿದ್ದಾರೆ ಎಂದು ಆಶ್ಚರ್ಯವಾಗುತ್ತದೆ !!.

ಏಕೆ ಹೀಗೆ ?.

ರಸ್ತೆಗಳೇ ಎದ್ದು ಬಂದು ಜನರನ್ನು ಕೊಲ್ಲುತ್ತವೆಯೇ ?
ಅಥವಾ
ವಾಹನಗಳು ಬೇಕಂತಲೇ ಜನರನ್ನು ಬೀಳಿಸುತ್ತವೆಯೇ ?
ಅಥವಾ
ಜನಸಂಖ್ಯೆ ಕಡಿಮೆ ಮಾಡಲು ಪ್ರಕೃತಿಯ ಆಟ ಇರಬಹುದೇ ?
ಯೋಚಿಸಬೇಕಾಗಿದೆ.

ನಮ್ಮಲ್ಲಿ ಹಿಂದೆ ರಸ್ತೆಗಳ ಗುಣಮಟ್ಟ ಸರಿ ಇರಲಿಲ್ಲ ನಿಜ. ಈಗ ಬಹುತೇಕ ಉತ್ತಮವಾಗಿದೆ ಕೆಲವು ಕಡೆ ಹೊರತುಪಡಿಸಿ. ಆದರೆ ಅದರ ಮೇಲೆ ಓಡಾಡುವ ಜನರಿಗೆ ಕಣ್ಣು ಕಿವಿ ಬುದ್ದಿ ಇದೆಯಲ್ಲವೇ !

ನಮ್ಮಲ್ಲಿ ವಾಹನಗಳು ಅತ್ಯಧಿಕ, ನಿಜ.‌ ಆದರೆ ಅದನ್ನು ಚಲಾಯಿಸುವುದು ನಾಗರಿಕ ಮನುಷ್ಯನಲ್ಲವೇ. ವಾಹನಗಳು ಜಾಸ್ತಿಯಾಗಿರುವುದರಿಂದ ಅವೇ ತಮ್ಮ ತಮ್ಮಲ್ಲಿ ಗುದ್ದಾಡುವುದಿಲ್ಲವಲ್ಲವೇ !.

ನಮ್ಮಲ್ಲಿ ಸಂಚಾರಿ ನಿಯಮಗಳು ಸರಿ ಇಲ್ಲ ಹಾಗೂ ಚಾಲನಾ ತರಬೇತಿ ಮತ್ತು ಲೈಸೆನ್ಸ್ ವ್ಯವಸ್ಥೆ ಭ್ರಷ್ಟಗೊಂಡಿದೆ. ನಿಜ. ಅದರಲ್ಲಿ ವಿಶೇಷವೇನಿಲ್ಲ. ಎಲ್ಲಾ ವ್ಯವಸ್ಥೆಗಳಂತೆ ಅದೂ ಇದೆ. ಸದ್ಯಕ್ಕೆ ಬದಲಾಗುವ ಸಾಧ್ಯತೆಯು ಇಲ್ಲ.

ಹಾಗಾದರೆ ವಾಸ್ತವ ಮತ್ತು ಸತ್ಯಕ್ಕೆ ಹತ್ತಿರದ ಕಾರಣ ಏನಿರಬಹುದು ..

ತೀರಾ ಆಳಕ್ಕೆ ಇಳಿಯದೆ ಸಹಜವಾಗಿ ಹೇಳಬೇಕೆಂದರೆ,
ನಾವು ನಮ್ಮ ವಿವೇಚನೆಯನ್ನು ಬಳಸಿ, ಸಂದರ್ಭಕ್ಕೆ ಸರಿಯಾಗಿ ಪರಿಸ್ಥಿತಿ ಅವಲೋಕಿಸಿ, ಒಂದಷ್ಟು ಪ್ರಜ್ಞೆಯಿಂದ, ಭಯ ಭಕ್ತಿ ವಿನಯದಿಂದ ವಾಹನ ಚಲಾಯಿಸಿದ್ದೇ ಆದರೆ ಈ ಕ್ಷಣದಿಂದಲೇ ಶೇಕಡ 80% ರಷ್ಟು ಅಪಘಾತಗಳು ನಿಲ್ಲುತ್ತವೆ. ಇದಕ್ಕೆ ಯಾವ ನೀತಿ ನಿಯಮಗಳು ಗೊಣಗಾಟಗಳು ವ್ಯವಸ್ಥೆಯ ಬದಲಾವಣೆಗಳು ಬೇಕಾಗಿಲ್ಲ.

ಇನ್ನುಳಿದ ಶೇಕಡ 20% ರಷ್ಟು ತಾಂತ್ರಿಕ ತೊಂದರೆ, ನಿಯಂತ್ರಿಸಲಾಗದ ಅನಿರೀಕ್ಷಿತ, ಆಕಸ್ಮಿಕ ಇತ್ಯಾದಿ ಕಾರಣಗಳು ಇರಬಹುದು.

ಬೇಜವಾಬ್ದಾರಿ, ಆತುರ, ಹುಡುಗಾಟಿಕೆ, ಮಾನಸಿಕ ಕ್ಷೋಬೆ ಕಡಿಮೆ ಮಾಡಿಕೊಂಡು, ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ತಂದುಕೊಂಡು ನಮ್ಮ ಪ್ರಾಣಕ್ಕೆ ನಾವೇ ಜವಾಬ್ದಾರರು ಎಂದು ಅರ್ಥಮಾಡಿಕೊಂಡು,
ವಾಸ್ತವವಾಗಿ ವ್ಯವಸ್ಥೆ ಸರಿಯಿಲ್ಲ, ರಸ್ತೆಗಳಲ್ಲಿ ಎಲ್ಲಿ ಬೇಕಾದರೂ ಅಪಾಯಕಾರಿ ಸ್ಥಿತಿ ಇರಬಹುದು, ಜನ ಅನಿರೀಕ್ಷಿತವಾಗಿ ಹುಚ್ಚರಂತೆ ಹೇಗೆ ಬೇಕಾದರೂ ಅಡ್ಡ ಬರಬಹುದು, ಅವರಿಗೆ ರಸ್ತೆಯ ಜ್ಞಾನವೇ ಇಲ್ಲವೇ ಇಲ್ಲ ಎಂದು ಭಾವಿಸಿ ವೇಗವನ್ನು 80/90/100 ರ ಮಿತಿಯಲ್ಲಿ ಓಡಿಸಿದ್ದೇ ಆದರೆ ನಿಮಗೆ ವಾಹನದ ಮೇಲೆ ನಿಯಂತ್ರಣ ಇದ್ದು ಅಪಘಾತದ ಸಾಧ್ಯತೆ ಖಂಡಿತ ಕಡಿಮೆಯಾಗುತ್ತದೆ.

ಇಲ್ಲ ಇದೆಲ್ಲ ಹಳೆಯ ಕಾಲದ ಹೇಳಿಕೆಗಳು. ಈಗೇನಿದ್ದರೂ ವೇಗಕ್ಕೆ ಪ್ರಾಮುಖ್ಯತೆ ಎಂದು ನೀವು ಭಾವಿಸುವುದಾದರೆ ಆ ವೇಗದ ಲಾಭ ನಷ್ಟಗಳು ನಿಮ್ಮವೇ.

ಸತ್ತ ನಂತರದ Police – Hospital – Insurance ಮತ್ತು ಎಲ್ಲಕ್ಕೂ ಮುಖ್ಯವಾಗಿ ನಿಮ್ಮ ನಂಬಿದವರ ಮತ್ತು ಪ್ರೀತಿ ಪಾತ್ರರ ನೋವು, ಕಷ್ಟ, ನರಕಯಾತನೆಗೆ ನಿಮ್ಮದೇ ಕೊಡುಗೆ ಬಹಳಷ್ಟಿರುತ್ತದೆ ನೆನಪಿರಲಿ…..

” SPEED THRILLS BUT IT KILLS ”
” ಪ್ರತಿ ಅಪಘಾತದ ನನ್ನವರ ಸಾವು ಅನಾವಶ್ಯಕ ”

ದಯವಿಟ್ಟು ಒಂದಷ್ಟು ಸ್ಪಂದಿಸಿ. ಕಳೆದುಕೊಳ್ಳುವುದೇನೂ ಇಲ್ಲ.

ಡ್ರೈವಿಂಗ್ ಎಂಬುದು ಒಂದು ಯೋಜನಾ ಬದ್ದ ಮತ್ತು ಯೋಚನಾ ಬದ್ದ ಕಲೆ…….‌‌‌‌‌….‌‌‌‌‌

ಮುಖ್ಯವಾಗಿ ರಸ್ತೆ ಮೇಲಿನ ವಾಹನಗಳ ಚಾಲನೆಗೆ ಸಂಬಂಧಿಸಿದಂತೆ ಈ ಅಭಿಪ್ರಾಯ……….

ಬೆಂಗಳೂರು – ಚೆನ್ನೈ,
ಬೆಂಗಳೂರು – ಮುಂಬಯಿ,
ಬೆಂಗಳೂರು – ಹೈದರಾಬಾದ್,
ಬೆಂಗಳೂರು – ಮೈಸೂರು,
ಬೆಂಗಳೂರು – ಮಂಗಳೂರು,
ಬೆಂಗಳೂರು – ತಿರುಪತಿ
ಸೇರಿ ಯಾವುದೇ ಮುಖ್ಯ ರಸ್ತೆಯಲ್ಲಿ ನೀವು ಪ್ರಯಾಣಿಸಿದರೆ ೮೦/೧೦೦ ಕಿಲೋಮೀಟರ್ ಒಳಗೆ ಕನಿಷ್ಠ ಒಂದಾದರೂ ಸಣ್ಣ ಪ್ರಮಾಣದ ಅಪಘಾತವಾಗಿರುವ ದೃಶ್ಯಗಳನ್ನು ದಿನನಿತ್ಯ ಕಾಣಬಹುದು…‌……‌

ಹಾಗೆಯೇ ನಗರ ಪ್ರದೇಶದಲ್ಲಿ ಓಡಾಡುವ ಎಲ್ಲಾ ವರ್ಗದ ಬಹುತೇಕ ವಾಹನಗಳು ಸ್ವಲ್ಪವಾದರೂ ಏಟು ತಿಂದಿರುವ ಲಕ್ಷಣಗಳನ್ನು ಗಮನಿಸಬಹುದು ಮತ್ತು ಅಲ್ಲಿನ ಜನರ ಅಪಘಾತಗಳ ನೆನಪುಗಳನ್ನು ಕೇಳಬಹುದು.

ಇಷ್ಟೊಂದು ವ್ಯಾಪಕವಾದ ಅಪಘಾತಗಳಿಗೆ ಅಪರೂಪದ ತಾಂತ್ರಿಕ ಮತ್ತು ಆಕಸ್ಮಿಕ ಅಂಶಗಳನ್ನು ಹೊರತುಪಡಿಸಿ ನಮ್ಮ ಜನಗಳ ಒಟ್ಟು ವ್ಯಕ್ತಿತ್ವವೇ ಬಹುಮುಖ್ಯ ಕಾರಣವಾಗಿದೆ……..

ಚಾಲನೆ ಎಂಬುದು ಒಂದು ಕಲಿಕೆಯ ಕ್ರಮ. ಶಿಕ್ಷಣ ಸಂಗೀತ ಸಾಹಿತ್ಯ ಕ್ರೀಡೆ ನಟನೆಯಂತೆ, ವೈದ್ಯಕೀಯ ಇಂಜಿನಿಯರಿಂಗ್ ಕಟ್ಟಡ ನಿರ್ಮಾಣ ಮುಂತಾದ ವೃತ್ತಿಗಳಂತೆ ಚಾಲನೆ ಕೂಡ ಅತ್ಯಂತ ಹೆಚ್ಚಿನ ಕುಶಲತೆ ಮತ್ತು ಏಕಾಗ್ರತೆ ಬಯಸುವ ಒಂದು ಕಲೆ ಮತ್ತು ವೃತ್ತಿ.

ಕೇವಲ ಒಂದಷ್ಟು ಅಭ್ಯಾಸದ ನಂತರ ಸ್ಟೀರಿಂಗ್ ಹಿಡಿದು ಕ್ಲಚ್ ಮುಖಾಂತರ ಗೇರ್ ಬದಲಾಯಿಸಿ ವಾಹನವನ್ನು ಮುಂದಕ್ಕೆ ಓಡಿಸಿದ ಮಾತ್ರಕ್ಕೆ ಯಾರೂ ಚಾಲಕರಾಗುವುದಿಲ್ಲ. ಏಕೆಂದರೆ ರಸ್ತೆಗಳಲ್ಲಿ ನಾವು ಮಾತ್ರ ಓಡಾಡಲು ಇದು ನಮ್ಮಪ್ಪನ ಆಸ್ತಿಯಲ್ಲ. ಅಲ್ಲಿ ವಾಸಿಸುವ ಪ್ರತಿ ಜೀವಿಗೂ ಅದರಲ್ಲಿ ಪಾಲಿದೆ.

ಚಾಲಕನಾದವನು ಆ ಎಲ್ಲಾ ಸಂಕೀರ್ಣ ವ್ಯವಸ್ಥೆಯನ್ನು ಅರಿತು ಯಾರಿಗೂ ಹಾನಿಯಾಗದಂತೆ ಅತ್ಯಂತ ಎಚ್ಚರಿಕೆಯಿಂದ ವಾಹನ ಮುನ್ನಡೆಸಬೇಕು. ಅದೊಂದು ಯೋಜನಾಬದ್ಧ ಕಲೆಗಾರಿಕೆ.

ಆದರೆ ನಮ್ಮಲ್ಲಿ ಈ ಬಗ್ಗೆ ತುಂಬಾ ಕೆಳಮಟ್ಟದ ಭಾವನೆ ಇದೆ. ಯಾರು ಬೇಕಾದರೂ ವಾಹನವನ್ನು ಸುಲಭವಾಗಿ ಚಲಾಯಿಸಬಹುದು ಎಂಬ ಅಭಿಪ್ರಾಯವಿದೆ. ಅದರ ಫಲವೇ ಇಡೀ ದೇಶದಲ್ಲಿ ಪ್ರತಿ ನಿಮಿಷಕ್ಕೆ ಹಲವಾರು ಪ್ರಾಣಗಳ ಮಾರಣ ಹೋಮ. ಮನೆಯಿಂದ ಹೊರಗೆ ಹೋದ ವ್ಯಕ್ತಿ ಮನೆಗೆ ಬರುವವರೆಗೂ ಅಭದ್ರತೆಯಿಂದ ಕಾಯುವ ಆತಂಕದ ನರಕಯಾತನೆ.

ಇದಕ್ಕೆ ಕೆಲವು ಉದಾಹರಣೆ ಗಮನಿಸಿ…….

ಎಷ್ಟೋ ಜನ ವಾಹನ ಖರೀದಿಸಿದ ನಂತರ ಚಾಲನಾ ಪರವಾನಗಿ ಪಡೆದು ಆಮೇಲೆ ರಸ್ತೆಗಳ ಮೇಲೆ ಪ್ರಯೋಗ ಮಾಡುತ್ತಾರೆ.

ವಾಹನವನ್ನು ಮುಂದಕ್ಕೆ ಹಿಂದಕ್ಕೆ ಚಲಿಸುವುದು ಕಲಿತ ಮಾತ್ರಕ್ಕೆ ನಮಗೆ ಚಾಲನೆ ಬರುತ್ತದೆ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ.

ವಾಣಿಜ್ಯ ವಾಹನಗಳನ್ನು ತೀರ್ಥ ಯಾತ್ರೆಯ ಅಥವಾ ಪ್ರೇಕ್ಷಣೀಯ ಅಥವಾ ಸಮಾರಂಭಗಳಿಗೆ ತೆಗೆದುಕೊಂಡು ಹೋಗುವವರು ಅವರ ಸಮಯದ ಅನುಕೂಲಕ್ಕೆ ತಕ್ಕಂತೆ ಚಾಲಕನ ನಿದ್ರೆ ಮತ್ತು ಊಟವನ್ನು ನಿಯಂತ್ರಿಸುತ್ತಾರೆ. ರಾತ್ರಿ ವೇಳೆ ಪ್ರಯಾಣ ಮಾಡಿ ದಿನವಿಡೀ ಓಡಾಡಿಸಿ ಏನೋ ಮಹಾ ಉಪಕಾರ ಮಾಡಿದಂತೆ ಚಾಲಕರಿಗೆ ಒಂದೆರೆಡು ಗಂಟೆಗಳ ನಿದ್ರೆಗೆ ಅವಕಾಶ ನೀಡಿ ಮತ್ತೆ ರಾತ್ರಿಯ ವೇಳೆ ವಾಹನ ಚಲಾಯಿಸುವಂತೆ ಮಾಡುತ್ತಾರೆ. ಚಾಲಕ ಏನು ಸೂಪರ್ ಮ್ಯಾನ್ ಅಲ್ಲವಲ್ಲ. ಸಾಮಾನ್ಯವಾಗಿ ಹಗಲಿನಲ್ಲಿ ಎಷ್ಟೇ ನಿದ್ದೆ ಮಾಡಿದರು ರಾತ್ರಿ ೧೨/೪ ಗಂಟೆಯ ನಡುವೆ ನಿದ್ರೆ ಎಳೆಯುವುದು ದೇಹದ ಸಹಜ ನಡವಳಿಕೆ.

ದಿನಕ್ಕೆ ೮ ಗಂಟೆಗಳು ಮಾತ್ರ ಚಾಲನೆ, ಒಟ್ಟು ಸಮಾಜದ ಮನೋಭಾವ, ವ್ಯಕ್ತಿಗಳ ಸಂಪೂರ್ಣ ಮಾಗಿದ ವ್ಯಕ್ತಿತ್ವ, ಚಾಲನಾ ವೃತ್ತಿಗೆ ಗೌರವ, ಹದ್ದು ಮೀರಿದ ಚಾಲಕನಿಗೆ ತಕ್ಷಣವೇ ಲೈಸೆನ್ಸ್ ಅಮಾನತು, ಖಾಸಗಿ ವಾಹನಗಳ Fitness ಗೆ ತುಂಬಾ ಮಹತ್ವ ಮುಂತಾದ ಅನೇಕ ಕ್ರಮಗಳನ್ನು ಕೈಗೊಂಡರೆ ಮಾತ್ರ ಅಪಘಾತಗಳು ಕಡಿಮೆಯಾಗಬಹುದು.

ಕೇವಲ ಘಟನೆ ನಡೆದಾಗ ಯಾರೋ ಒಬ್ಬ RTO ಅಥವಾ ಡ್ರೈವರ್ ಅಥವಾ ವಾಹನ ಮಾಲೀಕ ಅಥವಾ ‌ರಸ್ತೆ ನಿರ್ಮಿಸಿದವ ಅಥವಾ ವಾಹನ ನಿರ್ಮಿಸಿದವನ ಮೇಲೆ ಕ್ರಮ ಕೈಗೊಂಡರೆ ಅಪಘಾತಗಳು ನಿಲ್ಲುವುದಿಲ್ಲ. ಎಂದಿನಂತೆ ಸಾವು ಗೋಳಾಟ ವಿಧಿಲೀಲೆ ದುರಾದೃಷ್ಟ ಎಂದು ಸಮಾಧಾನ ಮಾಡಿಕೊಳ್ಳಬೇಕಷ್ಟೆ.

ನೀವು ಯಾವುದೇ ರೀತಿಯ ವಾಹನ ಚಾಲಕರಾಗಿದ್ದರೂ ದಯವಿಟ್ಟು ವಾಹನ ಚಾಲನೆ ಒಂದು ಬಹುದೊಡ್ಡ ಕಲೆ ಮತ್ತು ಅದೇ ಸಮಯದಲ್ಲಿ ಒಂದು ದೊಡ್ಡ ಜವಾಬ್ದಾರಿ ಎಂಬ ಮನೋಭಾವದಿಂದ ವಾಹನ ಚಲಾಯಿಸಿ. ಆಗ ಕನಿಷ್ಠ ಇದರಿಂದಾಗುವ ಅನಾಹುತ ತಪ್ಪಿಸಬಹುದು

ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಅಗಸ್ತ್ಯ ಅಂತರರಾಷ್ಟ್ರೀಯ ಸಂಸ್ಥೆ ವತಿಯಿಂದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ: ವಿಜೇತರಿಗೆ ಬಹುಮಾನ ವಿತರಣೆ

ಫೆ.24ರಂದು ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ಅಗಸ್ತ್ಯ ಅಂತರರಾಷ್ಟ್ರೀಯ ಸಂಸ್ಥೆಯ ವತಿಯಿಂದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ…

26 minutes ago

ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ: ಚಿಕಿ*ತ್ಸೆ ಫಲಕಾರಿಯಾಗದೆ ಸಾವು: ಪ್ರತಿಭಟನೆ ಮತ್ತು ಪ್ರಕರಣ ದಾಖಲು

ಹಾಸನ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯೊಬ್ಬರು ಚಿಕಿ*ತ್ಸೆ ಫಲಕಾರಿಯಾಗದೆ ಮೃ*ಪಟ್ಟ ಘಟನೆ ಹಾಸನ ನಗರದ ಹಿಮ್ಸ್ (HIMS) ಆಸ್ಪತ್ರೆಯಲ್ಲಿ ನಡೆದಿದೆ.…

12 hours ago

ತೂಬಗೆರೆಯ ದೊಡ್ಡಮ್ಮ ದೇವಾಲಯದಲ್ಲಿ ಕಳ್ಳತನ: ಹುಂಡಿ, ತಾಳಿ, ಆಭರಣ ಕಳವು

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮದ ದೊಡ್ಡಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮಂಗಳವಾರ ಬೆಳಿಗ್ಗೆ ದೇವಾಲಯದ ಬಾಗಿಲಿನ ಬೀಗ…

13 hours ago

ಸಂಬಳಕ್ಕಾಗಿ ಕಾರ್ಮಿಕರಿಂದ ಕಾರ್ಖಾನೆ ಮುಂದೆ ಪ್ರತಿಭಟನೆ

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆ(ಶೈಲೇಂದ್ರ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್)ಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ…

13 hours ago

ನೆಲಮಂಗಲ ನಗರಸಭೆಯ ಏಳು ಸದಸ್ಯರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಎಬಿ ಬಸವರಾಜು ಆದೇಶ

ಕರ್ನಾಟಕ ಸ್ಥಳೀಯ ಸಂಸ್ಥೆಗಳ(ಪಕ್ಷಾಂತರ ನಿಷೇಧ) ಅಧಿನಿಯಮ 4(2)(|||) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ನೆಲಮಂಗಲ ನಗರಸಭೆಯ ಏಳು ಸದಸ್ಯರನ್ನು ಅನರ್ಹಗೊಳಿಸಿ…

16 hours ago

ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯ ಹತ್ಯೆ

ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದೆ. ನನ್ನ ಮೊಮ್ಮಗ ಯಾರ ತಂಟೆಗೂ…

23 hours ago