Categories: ಲೇಖನ

ಆಧುನಿಕ ವೈದ್ಯಕೀಯ ಕ್ಷೇತ್ರದ ದುಸ್ಥಿತಿ……

” ಕೆಲ ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಭಯಪಡುವಂತೆ ಆಗಿದೆ. ಹಲವಾರು ಅನಗತ್ಯ ತಪಾಸಣೆಗಳನ್ನು ಮಾಡಿಸಲಾಗುತ್ತದೆ. ಸುಮಾರು 10 ಲಕ್ಷದಿಂದ 20 ಲಕ್ಷಕ್ಕೂ ಹೆಚ್ಚು ಬಿಲ್ ಮಾಡಲಾಗುತ್ತದೆ. ವೈದ್ಯಕೀಯ ಸೇವೆ ವ್ಯಾಪಾರ ಆಗಿದೆ….”

ದಿನೇಶ್ ಗುಂಡೂರಾವ್, ಆರೋಗ್ಯ ಸಚಿವರು ಕರ್ನಾಟಕ ಸರ್ಕಾರ……

” ಭಾರತದಲ್ಲಿ ಮಧ್ಯಮ ವರ್ಗದ ಪರಿಸ್ಥಿತಿ ಕೇವಲ ಒಂದು ಆಸ್ಪತ್ರೆಯ ಬಿಲ್ ನ ಅಂತರದಲ್ಲಿ ನಿರ್ಧಾರವಾಗುತ್ತದೆ. ಒಂದೇ ಒಂದು ಖಾಯಿಲೆ ಅವರನ್ನು ಬಡತನಕ್ಕೆ ದೂಡಬಹುದು….”
ವಿಶ್ವ ಆರೋಗ್ಯ ಸಂಸ್ಥೆ

” ಕರ್ನಾಟಕದಲ್ಲಿ ನಾಲ್ಕು ವರ್ಷದಲ್ಲಿ 3,00,000 ಮಂದಿಗೆ ಕ್ಯಾನ್ಸರ್ ಎಂಬ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಪತ್ರಿಕಾ ವರದಿ….”

ಹಳೆ ಖಾಯಿಲೆಗಳ ಜೊತೆ ಹೊಸ ಖಾಯಿಲೆಗಳು ಸೃಷ್ಟಿಯಾಗುತ್ತಿವೆ.
” ವೈದ್ಯಕೀಯ ಕ್ಷೇತ್ರ ಹೆಚ್ಚು ಮುಂದುವರಿದಷ್ಟು ಆರೋಗ್ಯವಂತರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ…..”
( Medical science is so advanced that only few healthy people is living in this earth.)

ಎತ್ತ ಸಾಗುತ್ತಿದ್ದೇವೆ ನಾವು ?…….

ವೈದ್ಯರನ್ನು ಕಾರ್ಪೊರೇಟ್ ದಗಾಕೋರರ ಮಡಿಲಿಗೆ – ಹಿಡಿತಕ್ಕೆ ದೂಡದಿರೋಣ….

ಈ ರೀತಿಯ ಒಂದು ಕಮೀಷನ್ ದಂಧೆಯೂ ನಡೆಯುತ್ತಿದೆ………

ಒಮ್ಮೆ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬನ ಜೊತೆ ಮಾತನಾಡುತ್ತಿದ್ದೆ‌. ಆ ಸಮಯದಲ್ಲಿ ಆತನಿಗೆ ಒಂದು ಮೊಬೈಲ್ ಕರೆ ಬಂದಿತು. ಆಗ ಆತ, ” ನನಗೆ ಅರ್ಜೆಂಟ್ ಕೆಲಸ ಬಂದಿದೆ. ಬೇಗ ಹೋಗಬೇಕು ” ಎಂದ.

ನಾನು ಕುತೂಹಲಕ್ಕಾಗಿ,
” ಅದೇನು ಇದ್ದಕ್ಕಿದ್ದಂತೆ ಅಷ್ಟೊಂದು ಇಂಪಾರ್ಟೆಂಟ್ ಕೆಲಸ ನಿನಗೆ ” ಎಂದು ಕೇಳಿದೆ.

ಅದಕ್ಕೆ ಆತ,
” ತುಮಕೂರು ರಸ್ತೆಯಲ್ಲಿ ಒಂದು ಅಪಘಾತವಾಗಿದೆ. ಆಂಬುಲೆನ್ಸ್ ಡ್ರೈವರ್ ಕಾಲ್ ಮಾಡಿದ್ದ. ನಾನು ಹೋಗಬೇಕು ”

ನಾನು ಬಹುಶಃ ಅವನ ಹತ್ತಿರದವರು ಅಥವಾ ಪರಿಚಯದವರಿಗೆ ಅಪಘಾತ ಆಗಿರಬೇಕೆಂದು ಭಾವಿಸಿ
” ಅಪಘಾತ ಯಾರಿಗೆ ಆಗಿರುವುದು ಮತ್ತು ಎಷ್ಟು ತೀವ್ರವಾಗಿದೆ ” ಎಂದು ವಿಚಾರಿಸಿದೆ.

ಆತ ಕೊಟ್ಟ ಉತ್ತರ ಕೇಳಿ ದಂಗಾಗಿ ಹೋದೆ. ನನಗೆ ಮೊದಲ ಬಾರಿಗೆ ಆ ರೀತಿಯ ವೃತ್ತಿ ಇರುವುದು ತಿಳಿಯಿತು.

ಆತ ಹೇಳಿದ ವಿಷಯ ಮತ್ತು ನನ್ನ ಪ್ರಶ್ನೆ ಉಪಪ್ರಶ್ನೆಗಳ ಸಾರಾಂಶ….
* ಆತನಿಗೆ ಕೆಲವು ವೈದ್ಯಕೀಯ ಆಂಬುಲೆನ್ಸ್ ಚಾಲಕರ ನಿರಂತರ ಸಂಪರ್ಕವಿದೆ. ಯಾವುದೇ ರೀತಿಯ ಅಪಘಾತ ಅಥವಾ ಅನಾರೋಗ್ಯದ ಕರೆ ಆಂಬುಲೆನ್ಸ್ ಚಾಲಕರಿಗೆ ಬಂದಾಗ ಅವರು ಆ ರೋಗಿಯ ಬಳಿಗೆ ಹೋಗುವ ಮೊದಲು ಇವನಿಗೆ ಕಾಲ್ ಮಾಡುತ್ತಾರೆ. ಈತನಿಗೆ ಸುತ್ತಮುತ್ತಲ ಕೆಲವು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಗಳ ಕಾಂಟ್ಯಾಕ್ಟ್ ಇದೆ. ಈತ ಆ ಚಾಲಕರಿಗೆ ಯಾವ ಆಸ್ಪತ್ರೆಗೆ ರೋಗಿಯನ್ನು ಕರೆತರಬೇಕು ಎಂದು ಸೂಚಿಸುತ್ತಾನೆ. ( ರೋಗಿ ಅಥವಾ ಆತನ ಕಡೆಯವರು ಮೊದಲೇ ಇಂತಹ ಆಸ್ಪತ್ರೆಗೆ ಎಂದು ನಿರ್ಧರಿಸಿದ್ದರೆ ಆಗ ಇದು ಸಾಧ್ಯವಿಲ್ಲ. ) ಚಾಲಕ ಆ ಆಸ್ಪತ್ರೆಗೆ ರೋಗಿಯನ್ನು ದಾಖಲಿಸಿದರೆ ಸಾಕು. ಆ ಆಸ್ಪತ್ರೆಯವರು ಈ ಏಜೆಂಟ್ ಗೆ ಒಂದಷ್ಟು ಕಮೀಷನ್ ಕೊಡುತ್ತಾರೆ. ಅದರಲ್ಲಿ ಸ್ವಲ್ಪ ಭಾಗವನ್ನು ಈತ ಆಂಬುಲೆನ್ಸ್ ಚಾಲಕರಿಗೆ ಕೊಡುತ್ತಾನೆ. ಪ್ರತಿನಿತ್ಯ ಐದಾರು ಈ ರೀತಿಯ ಕೇಸುಗಳು ಸಿಗುತ್ತವೆ. ಮುಖ್ಯವಾಗಿ ಅಪಘಾತಗಳ ಸಂದರ್ಭದಲ್ಲಿ ಈತನ ಕಮೀಷನ್ ವ್ಯಾಪಾರ ಜೋರಾಗಿರುತ್ತದಂತೆ *

ಅಪಘಾತದ ತೀವ್ರತೆ ಆಧರಿಸಿ ಅಥವಾ ಆ ಕ್ಷಣದ ವೈದ್ಯಕೀಯ ಅವಶ್ಯಕತೆಯ ಚಿಕಿತ್ಸೆಗಿಂತ ಈತ ಹೆಚ್ಚು ಕಮೀಷನ್ ಕೊಡುವ ಆಸ್ಪತ್ರೆಗೆ ರೋಗಿಯನ್ನು ಸೇರಿಸುತ್ತಾನೆ. ಆ ಆಸ್ಪತ್ರೆಯ ಸುಲಿಗೆ ಈತನ ಕಮೀಷನ್ ಹಣದಿಂದ ಪ್ರಾರಂಭವಾಗುತ್ತದೆ. ಅವಶ್ಯಕತೆ ಇರಲಿ ಬಿಡಲಿ ಅವರು ಕಡ್ಡಾಯವಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಿ ದೊಡ್ಡ ಮೊತ್ತದ ಹಣ ಕೀಳುತ್ತಾರೆ.

ಎಲ್ಲಿಗೆ ಬಂದಿದೆ ನೋಡಿ ನಮ್ಮ ವ್ಯವಸ್ಥೆ. ಈ ರೀತಿಯ ಕೆಲವರು ಇದೇ ವೃತ್ತಿ ಮಾಡುತ್ತಿದ್ದಾರೆ ಎಂದು ಅನಂತರ ತಿಳಿಯಿತು. ನಮ್ಮ ‌ದೇಶದಲ್ಲಿ ಬದುಕಲು ಅನೇಕ ವೃತ್ತಿಗಳಿವೆ ನಿಜ. ಸಾವಿನ, ನೋವಿನ, ಅಸಹಾಯಕತೆಯ, ಅನಿವಾರ್ಯತೆಯ ಮತ್ತು ಅಜ್ಞಾನದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಹಣ ಮಾಡುವುದನ್ನು ಒಂದು ವೃತ್ತಿಯಾಗಿ ಸ್ವೀಕರಿಸುವುದು ಅತ್ಯಂತ ಅಮಾನವೀಯ ಎಂದೇ ಹೇಳಬೇಕಾಗುತ್ತದೆ. ಭವಿಷ್ಯದಲ್ಲಿ ಅದು ಸಮಾಜಕ್ಕೆ ಮಾರಕವಾಗುತ್ತದೆ.

ಇನ್ನು ವೈದ್ಯಕೀಯ ಕ್ಷೇತ್ರವೂ ಸಹ ಲಾಡ್ಜ್ ಗಳು, ಹೋಟೆಲ್ ಗಳು, ಶಾಲೆಗಳ ರೀತಿ ಗಿರಾಕಿಗಳನ್ನು ಕರೆ ತಂದವರಿಗೆ ಕಮೀಷನ್ ನೀಡುವ, ಆ ಮುಖಾಂತರ ತಮ್ಮ ವ್ಯಾಪಾರ ವ್ಯವಹಾರ ಅಭಿವೃದ್ಧಿ ಪಡಿಸಿಕೊಳ್ಳುವ ವಿಧಾನ ತುಂಬಾ ಹೇಯವಾದದ್ದು. ಇದು ಜನರ ವಿಶ್ವಾಸವನ್ನು ಬಹುಬೇಗ ಕಳೆದುಕೊಳ್ಳುತ್ತದೆ.

ಆಸ್ಪತ್ರೆಗಳ ಸುಲಿಗೆ ಕೊರೋನಾ ವೈರಸ್ ನ ಈ ಸಂದರ್ಭದಲ್ಲಿ ಪ್ರಾರಂಭವಾಗಿಲ್ಲ. ಅದು ಹಿಂದಿನಿಂದಲೂ ಇದೆ. ಕಾರ್ಪೊರೇಟ್ ಸಂಸ್ಥೆಗಳು ಜನರ ಅನಾರೋಗ್ಯ, ಅಪಘಾತಗಳನ್ನು ಹಣ ಮಾಡುವ ದಂಧೆಯಾಗಿ ಮಾಡಿಕೊಂಡು ರೋಗಿಗಳೇ ಗ್ರಾಹಕರಾಗುವ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಾರೆ.

ಜೊತೆಗೆ ಸರ್ಕಾರಗಳು ಸಹ ವೈದ್ಯಕೀಯ ಶಿಕ್ಷಣವನ್ನು ಅತ್ಯಂತ ದುಬಾರಿ ವೆಚ್ಚದ ಪದವಿಯನ್ನಾಗಿ ಮಾಡಿ ಆಸ್ಪತ್ರೆಗಳಿಗೂ ಕಮರ್ಷಿಯಲ್ ಟ್ಯಾಕ್ಸ್, ವಿದ್ಯುತ್, ನೀರು, ಬಾಡಿಗೆ ಎಲ್ಲವನ್ನೂ ವಿಧಿಸಿರುವಾಗ ಅವರೂ ಸಹ ಅದಕ್ಕೆ ತಕ್ಕಂತೆ ಹಣವನ್ನೇ ಗುರಿ ಮಾಡಿಕೊಂಡು ರೋಗವೇ ಒಂದು ವ್ಯಾಪಾರ ಆಗಿ ಬದಲಾಗಿದೆ.

ಒಂದು ಸಣ್ಣ ಅಂಶವನ್ನು ಜನರು ಮತ್ತು ಸರ್ಕಾರ ಗುರುತಿಸದೇ ಮರೆತಂತಿದೆ. ಆಸ್ಪತ್ರೆಗಳು ಸರಳವಾಗಿ, ಸ್ವಚ್ಚವಾಗಿ, ಉತ್ತಮ ವೈದ್ಯಕೀಯ ಯಂತ್ರಗಳು ಮತ್ತು ಸಿಬ್ಬಂದಿಯನ್ನು ಹೊಂದಿದ್ದರೆ ಸಾಕು. ಆದರೆ ಅದು ಏನು ಹುಚ್ಚು ಹಿಡಿದಿದೆಯೋ ಅರ್ಥವಾಗುತ್ತಿಲ್ಲ. ಆಸ್ಪತ್ರೆಯ ಕಟ್ಟಡಗಳನ್ನೇ ಫೈವ್ ಸ್ಟಾರ್ ಹೋಟೆಲಿನಂತೆ ಭವ್ಯವಾಗಿ ನಿರ್ಮಿಸಿ, ಅತ್ಯಂತ ದುಬಾರಿ ವೆಚ್ಚದ ನಿರ್ಮಾಣ ಸಾಮಗ್ರಿಗಳನ್ನು ಉಪಯೋಗಿಸಿ, ಅನಾವಶ್ಯಕ ಸಿಬ್ಬಂದಿಯನ್ನು ನೇಮಿಸಿಕೊಂಡು ಆ ಎಲ್ಲಾ ವೆಚ್ಚವನ್ನು ರೋಗಿಗಳ ಮೇಲೆ ಹೇರಲಾಗುತ್ತದೆ. ಆಸ್ಪತ್ರೆಗಳ ಪ್ರಾರಂಭಿಕ ಚಿಕಿತ್ಸೆಯೇ ಸಾವಿರಾರು ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.

ಆಸ್ಪತ್ರೆಗಳಿಗೆ ಮನುಷ್ಯ ಮಜಾ ಮಾಡಲು ಹೋಗುತ್ತಾನೆಯೇ ? ಆ ರೀತಿಯ ಭವ್ಯ ಕಟ್ಟಡದ ಅವಶ್ಯಕತೆ ಏನಿದೆ ? ಸೌಕರ್ಯ ಮತ್ತು ‌ಸೇವೆ ಮಾತ್ರ ಮುಖ್ಯವಾಗಬೇಕಲ್ಲವೇ ?
ಅದರಿಂದಾಗಿಯೇ ಇಂದು ನಾವು ಆಸ್ಪತ್ರೆಗಳ ರಾಕ್ಷಸೀ ವರ್ತನೆಯನ್ನು ನೋಡುತ್ತಿದ್ದೇವೆ.

ಇನ್ನು ಜೀವ ವಿಮೆ ( Insurance )
ಎಂಬ ಬೃಹತ್ ಮಾಯಾಜಾಲವೂ ಜೀವ ರಕ್ಷಣೆಯನ್ನೂ, ಆರ್ಥಿಕ ಸುರಕ್ಷತೆಯನ್ನೂ ಮೀರಿ ಹೊಸ ದಂಧೆಯಾಗಿ ಮಾರ್ಪಾಡಾಗಿದೆ. ಅದನ್ನು ಮುಂದೊಮ್ಮೆ ಚರ್ಚಿಸೋಣ.

ಬದುಕು ಅನಿವಾರ್ಯ ನಿಜ. ಆದರೆ ಬದುಕಲು ಇಷ್ಟೊಂದು ಕೆಳ ಹಂತಕ್ಕೆ ನಾವು ಇಳಿಯಬೇಕೆ ?
ನಾಗರಿಕ ಸಮಾಜ ಚಲಿಸುತ್ತಿರುವುದು,
ಮುಂದಕ್ಕೋ ?
ಹಿಂದಕ್ಕೋ ?

ಒಂದು ಸರ್ಕಾರದ ಜವಾಬ್ದಾರಿಯುತ ಮಂತ್ರಿಗಳು ಹಾಗೂ ವಿಶ್ವಸಂಸ್ಥೆಯೇ ವೈದ್ಯಕೀಯ ಮಾಫಿಯಾ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿರುವಾಗ ಅದು ಉಂಟು ಮಾಡಿರಬಹುದಾದ ದುಷ್ಪರಿಣಾಮಗಳನ್ನು ಊಹಿಸುವುದೂ ಕಷ್ಟ. ವೈದ್ಯಕೀಯ ಕ್ಷೇತ್ರ ವೈದ್ಯರ ಬಳಿಯೇ ಇರಲಿ ಅದು ಕಾರ್ಪೊರೇಟ್ ದಗಾಕೋರರ ಹಿಡಿತಕ್ಕೆ ಸಿಲುಕುವುದು ಬೇಡ.

ನಮ್ಮ ಎಷ್ಟೋ ಪರಿಚಿತರು ಆರೋಗ್ಯದ ಸಮಸ್ಯೆಗೆ ಸಿಲುಕಿ ಹಣಕಾಸಿನ ಪರಿಸ್ಥಿತಿ ನಿರ್ವಹಿಸಲಾಗದೆ ವಿಲವಿಲ ಒದ್ದಾಡುತ್ತಿರುವ ಅನೇಕ ಅನುಭವಗಳು ದಿನನಿತ್ಯದ ಸಾಮಾನ್ಯ ಘಟನೆಗಳಾಗಿವೆ. ಎಷ್ಟೋ ಜನ ಸತ್ತ ತಮ್ಮ ಕುಟುಂಬದವರ ದೇಹವನ್ನು ಆಸ್ಪತ್ರೆಯಿಂದ ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿರುವ ದೃಶ್ಯಗಳು ಕಣ್ಣ ಮುಂದಿವೆ. ಅನೇಕ ಆಸ್ಪತ್ರೆಗಳಲ್ಲಿ ಜನಜಂಗುಳಿ, ಆ ಸಾವು ನೋವಿನ ಹೃದಯವಿದ್ರಾವಕ ದೃಶ್ಯಗಳನ್ನು ನೋಡುವುದೇ ನರಕಯಾತನೆಯಾಗಿದೆ.

ಆದ್ದರಿಂದ ದಯವಿಟ್ಟು ಏನನ್ನಾದರೂ ಈ ನಿಟ್ಟಿನಲ್ಲಿ ಪರಿಹಾರಾತ್ಮಕ ಕ್ರಮಗಳನ್ನು ಸರ್ಕಾರ ಮಾಡುವ ನಿಟ್ಟಿನಲ್ಲಿ ಯೋಚಿಸುವಂಥಾಗಲಿ ಎಂದು ಆಸೆಗಣ್ಣಿನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಭಾರತದ ಬಹುತೇಕ ಎದುರು ಜನ ನೋಡುತ್ತಿದ್ದಾರೆ…..

ಆದ್ದರಿಂದ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಕ್ಕೆ ಸಾಗುವ ಮಾರ್ಗಗಳನ್ನು ಹುಡುಕೋಣ. ವೈದ್ಯಕೀಯ ನಮ್ಮ ಬದುಕಿನ ಅವಿಭಾಜ್ಯ ಅಂಗ. ವೈದ್ಯರು ನಮ್ಮ ಜೀವರಕ್ಷಕರು. ಈಗ ನಿರ್ಮಾಣವಾಗಿರುವ ವಾತಾವರಣ ವೈದ್ಯಕೀಯ ಕ್ಷೇತ್ರದ ಹೊಸ ಪರಿಕಲ್ಪನೆಗೆ ನಾಂದಿಯಾಗಲಿ ಎಂದು ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು ಮತ್ತು ಶಾಸಕರುಗಳ ಜೊತೆ ಸಿಎಂ ಸಭೆ: ಸಭೆಯ ಪ್ರಮುಖಾಂಶಗಳು ಇಲ್ಲಿವೆ ಓದಿ…

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು ಮತ್ತು ಶಾಸಕರುಗಳ ಜೊತೆ ನಡೆಸಿದ ಸಭೆಯಲ್ಲಿ…

2 hours ago

ರಾಜ್ಯ ಮಟ್ಟದ ಜಾಗೃತಿ ಸಮಿತಿ ಸದಸ್ಯರಾಗಿ ಪುಷ್ಪಲತಾ ಆಯ್ಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಗ್ರಾಮದ ಪುಷ್ಪಲತಾ ಸೋಮಶೇಖರ್ ರವರನ್ನು ರಾಜ್ಯ ಮಟ್ಟದ ಜಾಗೃತಿ ಸಮಿತಿ ಸದಸ್ಯರನ್ನಾಗಿ…

12 hours ago

ಮೆಡಿಕವರ್ ಆಸ್ಪತ್ರೆಯಿಂದ ಸೃಷ್ಟಿ ಗ್ಲೋಬಲ್ ಶಾಲೆಯಲ್ಲಿ ಜೀವ ರಕ್ಷಣೆ (BLS) ತರಬೇತಿ ಕಾರ್ಯಕ್ರಮ

ಬೆಂಗಳೂರು ಕೊಡಿಗೆಹಳ್ಳಿ, : ಮೆಡಿಕವರ್ ಆಸ್ಪತ್ರೆಯು ಕೊಡಿಗೆಹಳ್ಳಿಯ ಸೃಷ್ಟಿ ಗ್ಲೋಬಲ್ ಶಾಲೆಯಲ್ಲಿ 9ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು, ಶಾಲಾ…

12 hours ago

ನಟ ಪ್ರಥಮ್ ವಿರುದ್ದ ಹಲ್ಲೆ ಆರೋಪ: ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು: ಪ್ರಥಮ್ ನೀಡಿದ ದೂರಿನಲ್ಲೇನಿದೆ…? ಯಾರ ಮೇಲೆ ದೂರು ನೀಡಿದ್ದಾರೆ….?

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

13 hours ago

ನಾನು ಕೆಲವರು ವಿರುದ್ಧ ದೂರು ಕೊಡಬೇಕಿದೆ. ಯಾರಿಗೆ ಕೊಡಲಿ, ಎಲ್ಲಿ ಕೊಡಲಿ, ತಿಳಿದವರು ದಯವಿಟ್ಟು ಸ್ವಲ್ಪ ಮಾಹಿತಿ ನೀಡಿ…..

ಮಾಡಿದ್ದುಣ್ಣೋ ಮಹಾರಾಯ....... ಬೇವು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದರೆಂತಯ್ಯ....... ನಾನು ಕೆಲವರು ವಿರುದ್ಧ ದೂರು ಕೊಡಬೇಕಿದೆ. ಯಾರಿಗೆ ಕೊಡಲಿ, ಎಲ್ಲಿ…

14 hours ago

ರಸ್ತೆಯಲ್ಲಿ ಅಡ್ಡಾದಿಡ್ಡಿ ಲಾರಿ ಚಾಲನೆ: ವಾಹನ ಸವಾರರಿಗೆ ಕಿರಿಕಿರಿ: ಲಾರಿ ತಡೆದು ಚಾಲಕನಿಗೆ ತರಾಟಗೆ ತೆಗೆದುಕೊಂಡ ಸಾರ್ವಜನಿಕರು

ಲಾರಿಯನ್ನು ಅಡ್ಡಾದಿಡ್ಡಿಯಾಗಿ ಚಾಲಾಯಿಸಿಕೊಂಡು ಬಂದ ಚಾಲಕನು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದು ಕಿರಿಕಿರಿ ಉಂಟು ಮಾಡಿರುವ ಘಟನೆ…

1 day ago